Site icon Vistara News

Dog Politics : ದಿನೇಶ್ ಗುಂಡೂರಾವ್‌ ನಾಯಿ ಸಖತ್‌ ಸೌಂಡ್‌ ; 2018ರಲ್ಲಿ ನಮ್ಮನೆಗೆ ಬಂದ ನಾಯಿ ಯಾವುದು ಎಂದು ಕೇಳಿದ HDK

Dog Politics

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (State politics) ಶನಿವಾರ ಚರ್ಚೆಗೊಳಗಾದ ಹಲವು ವಿಷಯಗಳಲ್ಲಿ ಒಂದು ದಿನೇಶ್‌ ಗುಂಡೂರಾವ್‌ (Dinesh Gundurao) ಅವರ ನಾಯಿ (Dog politics). ಈ ನಾಯಿ ದಿನವಿಡೀ ಸದ್ದು ಮಾಡಿತು. ಕೆಲವರು ಸೀರಿಯಸ್‌ ಆಗಿ ಪ್ರತಿಕ್ರಿಯಿಸಿದರು. ಕೆಲವರು ಗೇಲಿ ಮಾಡಿದರು. ಅಂತೂ ನಾಯಿ ಹೇಳಿಕೆ ಜಬರ್ದಸ್ತ್‌ ಹಿಟ್‌ ಆಯಿತು.

ಬಿಜೆಪಿ ಮತ್ತು ಜೆಡಿಎಸ್‌ (BJP-JDS Alliance) ಲೋಕಸಭಾ ಚುನಾವಣೆಯಲ್ಲಿ (parliament Election 2024) ಮೈತ್ರಿ ಮಾಡಿಕೊಳ್ಳಲಿವೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ದಿನೇಶ್‌ ಗುಂಡೂರಾವ್‌ ಒಂದು ಟ್ವೀಟ್‌ ಮಾಡಿದ್ದರು. ಅದರಲ್ಲಿ: ರಾಜ್ಯದಲ್ಲಿ BJP-JDS ಮೈತ್ರಿ, ಎರಡೂ ಪಕ್ಷದವರಿಗೂ ಅನ್ನ ಹಳಸಿತ್ತು.,ನಾಯಿ ಹಸಿದಿತ್ತು ಎಂಬಂತಾಗಿದೆ ಎಂದು ಅವರು ಬರೆದಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ ನಾಯಕ ಎಚ್.‌ಡಿ ಕುಮಾರಸ್ವಾಮಿ ಅವರು, ಆವತ್ತು 2018ರಲ್ಲಿ ನಮ್ಮ ಮನೆಗೆ ಒಂದು ನಾಯಿ ಬಂದಿತ್ತಲ್ಲಾ, ಅದು ಯಾವ ನಾಯಿ? ಹಸಿದ ನಾಯಿಯೋ ಎಂದು ಕೇಳಿದ್ದಾರೆ.

ಹಾಗಿದ್ದರೆ ದಿನೇಶ್‌ ಗುಂಡೂರಾವ್‌ ಹೇಳಿದ್ದೇನು? ಉಳಿದ ನಾಯಕರು ಹೇಗೆ ಪ್ರತಿಕ್ರಿಯಿಸಿದರು ಇಲ್ಲಿ ನೋಡಿ..

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಟ್ವೀಟ್‌

  1. ಕೋಮುವಾದಿ BJPಯೊಂದಿಗೆ ಜಾತ್ಯಾತೀತ ಲೇಬಲ್ ಅಂಟಿಸಿಕೊಂಡಿರುವ JDS ಮೈತ್ರಿಗೆ ಮುಂದಾಗಿದೆ.
  2. ಜಾತ್ಯಾತೀತ ತತ್ವ ಎಂಬುದು JDS ಪಕ್ಷದ ಬೂಟಾಟಿಕೆಯಷ್ಟೆ. ಯಾವುದೇ ಸೈದಾಂತಿಕ ಬದ್ಧತೆಯಿಲ್ಲದ ಪಕ್ಷವೆಂದರೆ ಅದು JDS ಮಾತ್ರ.
  3. ಜಾತ್ಯಾತೀತ ಸಿದ್ದಾಂತಕ್ಕೆ ತಿಲಾಂಜಲಿ ಇಟ್ಟು ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸುತ್ತಿರುವ JDSಗೆ ಯಾವ ಸಿದ್ಧಾಂತವಿದೆ?
  4. ರಾಜ್ಯದಲ್ಲಿ BJP-JDS ಮೈತ್ರಿ, ಎರಡೂ ಪಕ್ಷದವರಿಗೂ ಅನ್ನ ಹಳಸಿತ್ತು.,ನಾಯಿ ಹಸಿದಿತ್ತು ಎಂಬಂತಾಗಿದೆ.
  5. ರಾಜ್ಯದಲ್ಲಿ BJP ದಿಕ್ಕಿಲ್ಲದ ದೋಣಿ ಹಾಗೂ JDS ಹಳಿಯಿಲ್ಲದ ರೈಲಿನಂತಾಗಿದೆ.
  6. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿರುವ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿವೆ.

ಆವತ್ತು ನಮ್ಮ ಮನೆಗೆ ಬಂದ ನಾಯಿ ಯಾವುದು ಎಂದು ಕೇಳಿದ ಎಚ್‌ಡಿಕೆ

ಕಾಂಗ್ರೆಸ್ ಪಕ್ಷದ ಯಾರೋ ಒಬ್ಬರು ನಾಯಕರು, ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಅಂತ ಹೇಳಿದ್ದಾರೆ. 2018ರಲ್ಲಿ ಆವತ್ತು ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ಅವತ್ತು ನಮ್ಮ ಮನೆಗೆ ಬಂದಿದ್ದವರು ಯಾರು? ಎಂದು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ತಿರುಗೇಟು ಕೊಟ್ಟರು ಕುಮಾರಸ್ವಾಮಿ ಅವರು. ʻ2018ರಲ್ಲಿ ಆವತ್ತು ಯಾವ ಅನ್ನ ಹಳಸಿತ್ತು? ಯಾವ ನಾಯಿ ಬಂದಿತ್ತು, ಇಲ್ಲೇ ಬಂದಿದ್ರಿ ಅಲ್ವ?ʼʼ ಎಂದು ಕೇಳಿದರು.

ರಾಜ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದೇನೆ. ಅಮಲಿನಲ್ಲಿ ನಾವು ಏನೋ ಮಾಡಿಬಿಟ್ಟಿದ್ದೇವೆ, ಜೆಡಿಎಸ್ ಪಕ್ಷವನ್ನು ಮುಗಿಸಿಬಿಟ್ಟಿದ್ದೇವೆ, ಅಲ್ಲಿಂದ ಇಲ್ಲಿಂದ ಕರೆದುಕೊಂಡು ಬರುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.

ಬಿಜೆಪಿಯವರ ಅನ್ನ ಹಳಸಿಲ್ಲ, ಗಟ್ಟಿ ಇದೆ ಎಂದ ಯತ್ನಾಳ್

‌ಹೊಸಪೇಟೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರು, 2018ರಲ್ಲಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಇತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಗಿತ್ತು. ಆಗ BJP 105, ಕಾಂಗ್ರೆಸ್‌ಗೆ 75, JDS 37 ಸೀಟ್ ಬಂದಿತ್ತು. ಆಗ ಮೈತ್ರಿ ಮಾಡಿಕೊಂಡಾಗ ಕಾಂಗ್ರೆಸ್‌ನವರ ಅನ್ನ ಹಳಸಿತ್ತಾ ಅಥವಾ ನಾಯಿ ಹಸಿದಿತ್ತಾ…? ಎಂದು ದಿನೇಶ್‌ ಗುಂಡೂರಾವ್ ಹೇಳಬೇಕು ಎಂದರು.

ʻʻಬಿಜೆಪಿಯವರ ಅನ್ನ ಏನೂ ಹಳಸಿಲ್ಲ, ತಾಜಾ ಅನ್ನ ಇದೆ. ನಮ್ಮ ಅನ್ನ ಗಟ್ಟಿನೇ ಇದೆ, ವರ್ಜಿನಲ್ ಇದೆʼʼ ಎಂದರು.

ಇದನ್ನೂ ಓದಿ: Dinesh Gundurao : ಅನ್ನ ಹಳಸಿತ್ತು, ನಾಯಿ ಹಸಿದಿತ್ತು; JDS-BJP ಮೈತ್ರಿ ಗೇಲಿ ಮಾಡಿದ ದಿನೇಶ್‌ ಗುಂಡೂರಾವ್‌ಗೆ ಸಖತ್‌ ಕ್ಲಾಸ್

ನಾಯಿ ಪರಿಸ್ಥಿತಿ ಬಂದಿರೋದು ಕಾಂಗ್ರೆಸ್‌ಗೆ ಎಂದ ಅಶ್ವತ್ಥ ನಾರಾಯಣ

ʻʻರೊಟ್ಟಿ‌ ಹಳಸಿತ್ತು, ನಾಯಿ ಹಸಿದಿತ್ತು ಎಂಬ ಮಾತು ಅದೇನೆ ಇದ್ರೂ ಕಾಂಗ್ರೆಸ್‌ನವರಿಗೆ ಅನ್ವಯಿಸುತ್ತದೆ. ಆ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಬಿಜೆಪಿ ಶಕ್ತಿಯುತವಾಗಿದೆ. ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಶಿವಸೇನೆ, ಆಮ್ ಆದ್ಮಿ ಪಕ್ಷವನ್ನು ಕಾಂಗ್ರೆಸ್ ಬಿಡಲ್ಲ. ಕಾಂಗ್ರೆಸ್ ಎಲ್ಲಿ ಬೇಕಾದ್ರೂ ಹೋಗಿ ಕಾಡಿ ಬೇಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪರಿಸ್ಥಿತಿಯಿದೆʼʼ ಎಂದು ಮಾಜಿ ಡಿಸಿಎಂ ಅಶ್ವತ್ಥ್‌ ನಾರಾಯಣ ಹೇಳಿದರು.

ನಾರುತ್ತಿದೆ ಕಾಂಗ್ರೆಸ್‌ ಬಟ್ಟಲು ಎಂದ ಎನ್‌. ರವಿಕುಮಾರ್‌

ಮೈತ್ರಿ ಪಾಲಿಟಿಕ್ಸ್ ವಿಚಾರದಲ್ಲಿ ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಅವರು, ಕಾಂಗ್ರೆಸ್ ತಟ್ಟೆ ಗಬ್ಬೆದ್ದು ನಾರುತ್ತಿದೆ. ಅದರ ಬಗ್ಗೆ ನೋಡಿಕೊಳ್ಳಲಿ ಎಂದರು.

Exit mobile version