ಮಂಡ್ಯ, (ಮಳವಳ್ಳಿ): ಕರ್ನಾಟಕಕ್ಕೆ ತೆರಿಗೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು (BJP Karnataka) ಹೇಳುತ್ತಾರೆ. ಈ ದ್ರೋಹದ ವಿರುದ್ಧ ಅವರಿಗೆ ಪಾಠ ಕಲಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಗೆ ಒಂದೇ ಒಂದು ಮತವನ್ನೂ ನೀಡಬೇಡಿ. ಕಾಂಗ್ರೆಸ್‌ಗೆ ಬೆಂಬಲ ನೀಡಿ. ಬಿಜೆಪಿಯ ಅನ್ವರ್ಥ ನಾಮವೆಂದರೆ ಸುಳ್ಳಿನ ಪಕ್ಷ. ಸ್ವತಂತ್ರ ಭಾರತದಲ್ಲಿ ಪ್ರಧಾನಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಮತ್ತೊಬ್ಬರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಭಾನುವಾರ ಮಳವಳ್ಳಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನವರು ಏನೇ ಆಮಿಷಗಳನ್ನು ತೋರಿಸಿದರೂ ಕೂಡ ಅದಕ್ಕೆ ಮಣಿಯದೇ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಮಳವಳ್ಳಿಯಲ್ಲಿ ನೀಡಿದ್ದ ಭರವಸೆಯಂತೆ 470 ಕೋಟಿ ರೂ.ಗಳ ಅಂದಾಜು ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ನೈತಿಕ ಹಕ್ಕಿಲ್ಲ
ಕಳೆದ ಚುನಾವಣೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಎಂಟು ತಿಂಗಳಲ್ಲಿ ಜಾರಿ ಮಾಡಿ ಭರವಸೆ ಈಡೇರಿಸಿದ್ದೇವೆ. ಬಿಜೆಪಿ, ಜೆಡಿಎಸ್ ನಂತೆ ನಾವು ಮಾತಿಗೆ ತಪ್ಪುವವರಲ್ಲ. ಬಿಜೆಪಿ, ಜೆಡಿಎಸ್ ಈಗ ಒಂದಾಗಿದ್ದಾರೆ. ಆದರೆ, ಹಿಂದೊಮ್ಮೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದರು. ಈಗ ಕೋಮುವಾದಿ ಬಿಜೆಪಿ ಯವರ ಜತೆಗೆ ಸೇರಿದ್ದಾರೆ. ಈಗ ನಾನೇ ಮಗನನ್ನು ಬಿಜೆಪಿಗೆ ಕಳುಹಿಸಿದೆ ಎನ್ನುತ್ತಾರೆ. ನಿಮ್ಮ ಜನತಾದಳ ಜಾತ್ಯತೀತದಲ್ಲಿ ಜಾತ್ಯತೀತ ಎನ್ನುವ ಪದ ತೆಗೆಯಿರಿ. ಹಾಗೆ ಇಟ್ಟುಕೊಳ್ಳಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
20 ಸ್ಥಾನಗಳನ್ನು ಗೆಲ್ಲಲಿದೆ
ಬಿಜೆಪಿಯವರು ಡೋಂಗಿತನದ ಮಾತುಗಳನ್ನು ಆಡುತ್ತಾರೆ. 28 ಕ್ಕೆ 28 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ. ನೀವು ಆಶೀರ್ವಾದ ಮಾಡುತ್ತೀರಿ ಎಂದು ನಂಬಿಕೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶಕ್ತಿ ಯೋಜನೆ: 155 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ
ಜೂನ್ 11 ರಿಂದ ಈವರೆಗೆ ಶಕ್ತಿ ಯೋಜನೆಯಡಿ 155 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರತಿದಿನ 60 ಲಕ್ಷ ಮಹಿಳೆಯರು ಓಡಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಬಡವರಿಗೆ ಕೇಂದ್ರ ಅಕ್ಕಿ ನೀಡಲಿಲ್ಲ
ಜನರು ಹಸಿದು ಮಲಗಬಾರದು, ರಾಜ್ಯ ಹಸಿವುಮುಕ್ತವಾಗಬೇಕೆಂದು ಅನ್ನಭಾಗ್ಯ ಜಾರಿ ಮಾಡಲಾಯಿತು. ಬಡವರಿಗೆ ಅಕ್ಕಿ ನೀಡದ ಕೇಂದ್ರದ ಬಿಜೆಪಿ ಪಕ್ಷಕ್ಕೆ ಜನರು ಮತ ಹಾಕಬಾರದು.ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟೀಕಿಸಿದ್ದರು. ನಾನು ಮಂಡಿಸಿದ ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇನೆ. 8 ತಿಂಗಳ ಅವಧಿಯಲ್ಲಿ ಎಲ್ಲ 5 ಗ್ಯಾರಂಟಿಗಳನ್ನು ಸರ್ಕಾರ ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜಾತ್ಯತೀತ ಜೆಡಿಎಸ್‌ನಿಂದ ಜಾತಿವಾದಿಗಳ ಜತೆ ಮೈತ್ರಿ
ಜೆಡಿಎಸ್ ಪಕ್ಷದವರು ತಮ್ಮ ಪಕ್ಷ ಸೋಲುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಜಾತ್ಯತೀತ ಪಕ್ಷ ಎಂದು ಹೇಳಿಕೊಂಡ ಜೆಡಿಎಸ್ ಅವರು ಜಾತಿವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಎಂಬ ವಿಶ್ವಾಸವಿದೆ. 2013-18 ರವರೆಗಿನ ನಮ್ಮ ಅವಧಿಯಲ್ಲಿ ಹೆಚ್ಚಿನ ಭರವಸೆಗಳನ್ನು ಈಡೇರಿಸಿದ್ದೆವು. ಬಿಜೆಪಿ ಹಾಗೂ ಜೆಡಿಎಸ್ ನಂತೆ ಸುಳ್ಳು ಹೇಳದೆ, ಕಾಂಗ್ರೆಸ್ ಪಕ್ಷ ಜನರಿಗಾಗಿ ಕೈಗೊಂಡಿರುವ ಕಾರ್ಯಕ್ರಮದ ಸತ್ಯದ ಆಧಾರದ ಮೇಲೆ ಮತ ಕೇಳಿ ಎಂದು ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಟಾಸ್ಕ್; ಕಾಂಗ್ರೆಸ್ ಹೈಕಮಾಂಡ್‌ಗೆ ಶಾಕ್!
ಬಿಜೆಪಿ ಅನ್ವರ್ಥನಾಮ ‘ಸುಳ್ಳಿನ ಪಕ್ಷ’
ರಾಜ್ಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕೊಡುಗೆ ಏನು? ಆದರೆ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ಜನರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಬಿಜೆಪಿಯ ಅನ್ವರ್ಥ ನಾಮವೆಂದರೆ ಸುಳ್ಳಿನ ಪಕ್ಷ. ಸ್ವತಂತ್ರ ಭಾರತದಲ್ಲಿ ಪ್ರಧಾನಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಮತ್ತೊಬ್ಬರಿಲ್ಲ. 15 ಲಕ್ಷ ದೇಶದ ಜನರ ಖಾತೆಗೆ ಹಾಕುವ, ರೈತರ ಆದಾಯ ದುಪ್ಪಟ್ಟು, 7 ಕೋಟಿ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆಯನ್ನು ನೀಡಿ, ಈಡೇರಿಸಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.