ಮೈಸೂರು: ಈಶ್ವರಪ್ಪ ಒಂದು ಸವಕಲು ನಾಣ್ಯ. ಅವರು ಸವಕಲು ಆಗಿರುವ ಕಾರಣಕ್ಕೆ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ. ಕಾಂತರಾಜು ವರದಿ (Kantharaju Report) ಪರ ವಿಧಾನಸಭೆಯಲ್ಲಿ ಕೆ.ಎಸ್. ಈಶ್ವರಪ್ಪ (KS Eshwarappa) ಮಾತನಾಡಿಲ್ಲವಾ? ಈಗ ಅದನ್ನು ಸುಟ್ಟು ಹಾಕುತ್ತೇವೆ ಎಂದರೆ ಅದರ ಅರ್ಥ ಏನು? ಈಶ್ವರಪ್ಪ ಮಾತುಗಳಿಗೆ ಜಾಸ್ತಿ ಬೆಲೆ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂತರಾಜು ವರದಿಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಈ ಪ್ರತಿಕ್ರಿಯೆಯನ್ನು ನೀಡಿದರು. ಅಲ್ಲದೆ, ಅವರ ಮಾತಿಗೆ ಬೆಲೆ ಕೊಡುವುದು ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Politics : ಜೆಡಿಎಸ್ ಬರ ಅಧ್ಯಯನಕ್ಕೆ ಸಿಎಂ ಸ್ವಾಗತ; ಕೇಂದ್ರಕ್ಕೂ ಅನುಭವ ಹೇಳುವಂತೆ ವ್ಯಂಗ್ಯ
ಕಾಂತರಾಜು ಜಾತಿ ಗಣತಿ ವರದಿ ಇನ್ನೂ ನನ್ನ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ನಾನು ಏನು ಮಾಡಲಿ? ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ ಅಂಶವೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡುವುದು ಹೇಗೆ? ನವೆಂಬರ್ ಒಳಗೆ ವರದಿ ಕೊಡಬಹುದೆನೋ? ವರದಿ ಕೊಡಲಿ ಆಮೇಲೆ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲಬುರಗಿಯಲ್ಲಿ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳ ತಾಳಿ ತೆಗೆಸಿ ಪರೀಕ್ಷೆ ಮಾಡಿರುವ ಬಗ್ಗೆ ಮಾಧ್ಯಮದವರು ಮಾಡಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅದರ ಬಗ್ಗೆ ಪರಿಶೀಲಿಸಿ ಹೇಳುತ್ತೇನೆ ಎಂದು ಹೇಳಿದರು.
ಕೇಂದ್ರದಿಂದ ತಾರತಮ್ಯ ನೀತಿ
ಕೇಂದ್ರ ಬರ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಸಚಿವರ ಭೇಟಿಗೂ ಕೇಂದ್ರ ಸಚಿವರು ಸಮಯ ಕೊಡುತ್ತಿಲ್ಲ. ನಮ್ಮ ಸಚಿವರು ಮೂರು ಮೂರು ದಿನ ದೆಹಲಿಗೆ ಹೋಗಿ ಕಾದಿದ್ದಾರೆ. ಒಬ್ಬನೇ ಒಬ್ಬ ಕೇಂದ್ರ ಸಚಿವರು ಸಹ ಭೇಟಿಗೆ ಸಮಯ ಕೊಟ್ಟಿಲ್ಲ. ಪ್ರಧಾನಿಯೂ ಕೂಡ ಯಾರಿಗೂ ಸಮಯ ಕೊಡುತ್ತಿಲ್ಲ.
ಕೇವಲ ಸಚಿವರ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬರುವ ಸ್ಥಿತಿ ಬಂದಿದೆ. ಇದು ಕೇಂದ್ರ ಸರ್ಕಾರದ ನಿರ್ಲಕ್ಷತನ. ಮಾತ್ರವಲ್ಲ ಕೇಂದ್ರ ರಾಜ್ಯದ ಮೇಲೆ ತೋರುತ್ತಿರುವ ಮಲತಾಯಿ ಧೋರಣೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕಾರಣ ಕೇಂದ್ರಕ್ಕೆ ಇದನ್ನ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಪರಿಹಾರದ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಿದರು.
ನಾನು ಕೇಂದ್ರ ಸರ್ಕಾರಕ್ಕೆ ಬರದ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರ ಬರೆಯುತ್ತೇನೆ. ರಾಜ್ಯ ಬಿಜೆಪಿ ನಾಯಕರು ಇಲ್ಲಿ ಓಡಾಡುವುದನ್ನು ಬಿಟ್ಟು ಕೇಂದ್ರಕ್ಕೆ ಹೋಗಿ ಪರಿಹಾರ ತರಲಿ. ಕೇಂದ್ರದ ಪರಿಹಾರಕ್ಕಾಗಿ ನಾವು ಕಾದು ಕುಳಿತಿಲ್ಲ.
ನಾವು 900 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಾವು ಗ್ಯಾರಂಟಿ ಕೊಟ್ಟರೆ ದಿವಾಳಿ, ಅವರು ಕೊಟ್ಟರೆ ಅಭಿವೃದ್ಧಿಯಾ?
ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಛತ್ತಿಸ್‌ಗಢದಲ್ಲಿ ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಭೂರಹಿತ ಕೃಷಿಕರಿಗೆ ₹10,000, ಮಹಿಳೆಯರಿಗೆ ₹12,000 ಘೋಷಣೆ ಮಾಡಲಾಗಿದೆ. ಹಾಗಾದರೆ, ನಾವು ಕೊಟ್ಟರೆ ದಿವಾಳಿ, ಅವರು ಕೊಟ್ಟರೆ ಅಭಿವೃದ್ಧಿಯೇ? ಇದು ಹೇಗೆ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರಿಗೆ ನಾವು ಗ್ಯಾರಂಟಿ ಅನುಷ್ಠಾನ ಮಾಡಲ್ಲ ಅಂದುಕೊಂಡಿದ್ದರು. ನಾವು ಎಲ್ಲವನ್ನೂ ಜಾರಿ ಮಾಡಿದ್ದೇವೆ. ಇದನ್ನು ಕೂಡ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿಯೇ ಸರ್ಕಾರದ ಮೇಲೆ ಬಿಜೆಪಿ ಆರೋಪಗಳನ್ನು ಮಾಡುತ್ತಿದೆ. ಚುನಾವಣಾ ಮುನ್ನ ಜೆಡಿಎಸ್ – ಬಿಜೆಪಿ ಜತೆ ಸೇರಿ ತಾವು ಸರ್ಕಾರ ಮಾಡುತ್ತೇವೆ ಅಂದು ಕೊಂಡಿದ್ದರು. ಇದೇ ತರಹದ ವರದಿಯನ್ನು ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಬಿಜೆಪಿಯವರು ತಲುಪಿಸಿದ್ದರು. ಹೀಗಾಗಿ ಪ್ರಧಾನಮಂತ್ರಿ ಹತ್ತಾರು ಬಾರಿ ಬಂದು ಪ್ರಚಾರ ಮಾಡಿದರು. ಆದರೆ, ಜನ ಕಾಂಗ್ರೆಸ್ ಕೈ ಹಿಡಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಮ್ಮ ಶಾಸಕರಿಗೆ ಸುಮ್ಮನಿರಲು ಹೇಳಿದ್ದೇನೆ
ಸಿಎಂ ಗಾದಿ ವಿಚಾರದಲ್ಲಿ ಇನ್ನು ಮುಂದೆ ಯಾರೂ ಹೇಳಿಕೆ ನೀಡಬೇಡಿ ಎಂದು ನಮ್ಮ ಶಾಸಕರು ಮತ್ತು ಸಚಿವರಿಗೆ ಹೇಳಿದ್ದೇನೆ. ನಿನ್ನೆ ಉಪಾಹಾರ ಸಭೆಯಲ್ಲಿ ಈ ಬಗ್ಗೆ ನಾನೇ ಪ್ರಸ್ತಾಪ ಮಾಡಿದ್ದೇನೆ. ಇನ್ನು ಮುಂದೆ ಯಾರೂ ಮಾತನಾಡಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಮುಂದಿನ ಚುನಾವಣೆಗೆ ಬಗ್ಗೆಯೂ ಕೆಲವು ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯದ್ದು ಹತಾಶೆಯ ಮಾತು
ಇನ್ನು ಸಿಎಂ ಬದಲಾವಣೆ ಬಗ್ಗೆ ಬಿಜೆಪಿ- ಜೆಡಿಎಸ್ ಹೇಳುತ್ತಿರುವುದು ಅವರ ಹತಾಶೆಯ ಮಾತಾಗಿದೆ. ಬಿಜೆಪಿ- ಜೆಡಿಎಸ್‌ನವರು ಸೋತು ಹತಾಶರಾಗಿದ್ದಾರೆ. ಸೋಲಿನ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ.
ಸರ್ಕಾರ ಸುಭದ್ರವಾಗಿದೆ. ನಮ್ಮವರೂ ಏನೇನೋ ಹೇಳಿಕೆ ನೀಡುತ್ತಿದ್ದರು. ಈಗ ಅವರಿಗೆ ಸುಮ್ಮನೆ ಹೇಳಿಕೆ ಕೊಡಬೇಡಿ, ನಿಮ್ಮ ಇಲಾಖೆ ಕಡೆ ಗಮನ ಕೊಡಿ ಅಂತ ಹೇಳಿದ್ದೇನೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಸಿಎಂ ಆಗುವುದಾದರೆ ಜೆಡಿಎಸ್ ಶಾಸಕರೆಲ್ಲರೂ ಬೆಂಬಲ ಕೊಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಆ ಹೇಳಿಕೆಯನ್ನು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ. ನೀವು ಬೆಂಬಲ ಕೊಡುವುದಾದರೆ ಎನ್‌ಡಿಎ ಬಿಟ್ಟು ಬನ್ನಿ ಅಂತ ಡಿ.ಕೆ. ಶಿವಕುಮಾರ್ ಈಗಾಗಲೇ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: BY Vijayendra : ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಡಿದ ಡಿಕೆ ಶಿವಕುಮಾರ್ ನಿಜ ಬಣ್ಣ ಬಯಲು; ಬಿವೈ ವಿಜಯೇಂದ್ರ ಕಿಡಿ
ಸಿದ್ದು ಮಹಾರಾಜ್ ಕಿ ಜೈ
ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಸ್ವಾಗತ ಕೋರಿದರು. ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕ ಪುಟ್ಟರಂಗಶೆಟ್ಟಿ, ಎಂಎಲ್‌ಸಿ ಡಾ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಜತೆಗಿದ್ದರ.ು
ಈ ವೇಳೆ ಸಿದ್ದು ಮಹಾರಾಜ್ ಕಿ ಜೈ ಎಂದು ಕೂಗಿದ ಕಾರ್ಯಕರ್ತರು.
ನೂರು ದಿನ ಪೂರೈಸಿದ ಸಿಎಂ ಸಿದ್ದರಾಮಯ್ಯಗೆ ಜೈ ಎಂದ ಕೈ ಕಾರ್ಯಕರ್ತರು.