ಹರೀಶ್ ಕೇರ
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹವಾಲಾ ಹಣದ ವಹಿವಾಟಿನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ತನಿಖೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಜರಾಗಿದ್ದಾರೆ. ಅವರ ವಿಚಾರಣೆ ನಡೆಯುತ್ತಿದೆ. ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ವಿಚಾರಣೆಗೆ ಸಮನ್ಸ್ ನೀಡಲಾಗಿದೆ. ಆದರೆ ಸೋನಿಯಾ ಅವರು ಕೋವಿಡ್ ಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಸದ್ಯಕ್ಕೆ ಇ.ಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮುಂತಾದವರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡಲಾಗ್ತಾ ಇದೆ ಅಂತ ಆರೋಪಿಸಿ ಕಾಂಗ್ರೆಸ್ ಅಭಿಯಾನ ನಡೆಸಲು ಆರಂಭಿಸಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹಾಗಿದ್ದರೆ ಈ ತನಿಖೆಯಲ್ಲಿ ಹುರುಳಿಲ್ವಾ? ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ ಗಾಂಧಿ ಪಾತ್ರ ಎಷ್ಟಿದೆ? ಕಾಂಗ್ರೆಸ್‌ನ ಬೇರೆ ಮುಖಂಡರ ಪಾತ್ರ ಎಷ್ಟಿದೆ? ಒಂದೊಂದಾಗಿ ನೋಡೋಣ.
ಏನಿದು ನ್ಯಾಷನಲ್ ಹೆರಾಲ್ಡ್?
ನ್ಯಾಷನಲ್ ಹೆರಾಲ್ಡ್ ಎಂಬುದೊಂದು ದಿನಪತ್ರಿಕೆ. ಇದನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಲ್) ಪ್ರಕಟಣೆ ಮಾಡುತ್ತಿದೆ. ಇದರ ಮಾಲೀಕತ್ವ ಇರುವುದು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಬಳಿ. ಈ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹಿನ್ನೆಲೆಯಲ್ಲಿ ರಾಷ್ಟ್ರ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಇದೆ.
ಸ್ವಾತಂತ್ರ್ಯಪೂರ್ವದಲ್ಲಿಯೇ ಈ ಪತ್ರಿಕೆ ಹುಟ್ಟಿಕೊಂಡಿತ್ತು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಉತ್ತೇಜನ ನೀಡುವುದು ಇದರ ಮೂಲ ಉದ್ದೇಶವಾಗಿತ್ತು. 1938ನೇ ಇಸವಿಯಲ್ಲಿ ಜವಾಹರಲಾಲ್ ನೆಹರೂ ಅವರು ಇದನ್ನು ಹುಟ್ಟುಹಾಕಿದರು. ಪ್ರಧಾನಿಯಾಗುವರೆಗೂ ಅವರೇ ಪತ್ರಿಕೆಯ ಸಂಪಾದಕ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ಅಸೋಷಿಯೇಟೆಡ್ ಜರ್ನಲ್ಸ್ ಲಿ. (ಎಜೆಎಲ್) ಈ ಪತ್ರಿಕೆಯನ್ನು ಮುದ್ರಿಸುತ್ತಿತ್ತು. ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಈ ಎಜೆಎಲ್‌ನ ಪಾಲುದಾರರಾಗಿದ್ದರು. ಇಂಗ್ಲೀಷ್‌ನಲ್ಲಿ ನ್ಯಾಷನಲ್ ಹೆರಾಲ್ಡ್, ಹಿಂದಿಯಲ್ಲಿ ನವಜೀವನ್ ಮತ್ತು ಉರ್ದು ಭಾಷೆಯಲ್ಲಿ ಖ್ವಾಮಿ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿತ್ತು.
ನೆಹರೂ ಅವರ ಬಳಿಕ ಕೆ. ರಾಮ್ ರಾವ್ ಅವರು ಪತ್ರಿಕೆಯ ಮೊದಲ ಸಂಪಾದಕರಾದರು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಎಲ್ಲ ಪತ್ರಿಕೆಗಳ ಮೇಲೆ ನಿರ್ಬಂಧ ಹೇರಿತು. 1942ರಿಂದ 1945ರವರೆಗೆ ಪತ್ರಿಕೆ ಪ್ರಕಟವಾಗಲಿಲ್ಲ. ಫಿರೋಜ್ ಗಾಂಧಿ ಅವರು ಈ ಪತ್ರಿಕೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ನಂತರ, 1946ರಿಂದ 78ರವರೆಗೆ ಮಣಿಕೊಂಡ ಚಲಪತಿ ರಾಜು ಅವರು ಸಂಪಾದಕರಾಗಿದ್ದರು. ರಾಜು ಅವರ ಕಾಲದಲ್ಲಿ ನ್ಯಾಷನಲ್ ಹೆರಾಲ್ಡ್ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ನೆಹರೂ ತಮ್ಮ ಅಭಿಪ್ರಾಯಗಳನ್ನು ಪಸರಿಸಲು ಈ ಪತ್ರಿಕೆಯನ್ನು ಬಳಸಿಕೊಳ್ಳುತ್ತಿದ್ದರು. ಲಖನೌ ಮತ್ತು ನವದೆಹಲಿಯಿಂದ ಪತ್ರಿಕೆ ಪ್ರಕಟವಾಗುತ್ತಿತ್ತು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪತ್ರಿಕೆ ಚೆನ್ನಾಗಿ ಬರುತ್ತಿತ್ತು. ಕಾಂಗ್ರೆಸ್‌ಗೆ ಕಷ್ಟ ಒದಗಿದಾಗ ಅದೂ ಕಷ್ಟದಲ್ಲಿರುತ್ತಿತ್ತು. ಇಂದಿರಾ ಗಾಂಧಿ 1977ರಲ್ಲಿ ಚುನಾವಣೆಯಲ್ಲಿ ಸೋತ ನಂತರ ಎರಡು ವರ್ಷ ಪತ್ರಿಕೆ ಪ್ರಕಟವಾಗಿರಲಿಲ್ಲ. ರಾಜೀವ್ ಗಾಂಧಿ ಮತ್ತೆ ಪತ್ರಿಕೆ ಪ್ರಕಟವಾಗುವಂತೆ ನೋಡಿಕೊಂಡರು. 1998ರಲ್ಲಿ ಲಖನೌನಲ್ಲಿದ್ದ ಕಚೇರಿಯನ್ನು ಸಾಲದಿಂದಾಗಿ ಮುಚ್ಚಲಾಯಿತು. 2008ರ ಹೊತ್ತಿಗೆ ಆದಾಯ ಇಲ್ಲದುದರಿಂದಾಗಿ ಪತ್ರಿಕೆ ಸಂಪೂರ್ಣ ಸ್ಥಗಿತವಾಯಿತು.
2010ರಲ್ಲಿ ಯಂಗ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು. ಇದರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪಾಲು ಶೇ. 7.6ರಷ್ಟಿದೆ. ಉಳಿದ ಪಾಲು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಬಳಿ ಇತ್ತು. ಎಜೆಎಲ್ ಸಂಸ್ಥೆಯನ್ನು ಯಂಗ್ ಇಂಡಿಯಾ 2010ರಲ್ಲಿ ಖರೀದಿಸಿತು. ಆಗ ಎಜೆಎಲ್‌ನಲ್ಲಿ 1057 ಷೇರುದಾರರು ಇದ್ದರು. ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಮತ್ತು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಮೊದಲಾದವರು ಷೇರುದಾರರಾಗಿದ್ದರು. 2010ರಲ್ಲಿ ಎಜೆಎಲ್‌ನ ಎಲ್ಲಾ ಷೇರುಗಳನ್ನು ಯಂಗ್ ಇಂಡಿಯಾಗೆ ವರ್ಗಾವಣೆ ಮಾಡಲಾಯಿತು. ಈ ಬಗ್ಗೆ ಎಜೆಎಲ್ ಷೇರುದಾರರ ಅನುಮತಿಯನ್ನು ಪಡೆದಿರಲಿಲ್ಲ. ಈಗಲೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲಿಕತ್ವ ಯಂಗ್ ಇಂಡಿಯಾ ಕಂಪನಿಗೆ ಸೇರಿದೆ.
ಮಾರಾಟ ಹಾಗೂ ಸುಬ್ರಮಣಿಯನ್ ಸ್ವಾಮಿ ದೂರು
2010ರ ಡಿಸೆಂಬರ್ 16ರಂದು ಎಜೆಎಲ್ ಸುಮಾರು 90.1 ಕೋಟಿ ರೂ. ಸಾಲ ಹೊಂದಿತ್ತು. ಆಗ ಕಾಂಗ್ರೆಸ್ ಪಕ್ಷ 90.25 ಕೋಟಿ ರೂ. ಸಾಲವನ್ನು ಎಜೆಎಲ್‌ಗೆ ನೀಡಿತು. ಆದರೆ, ಈ ಹಣ ವಸೂಲಿ ಮಾಡುವ ಅಧಿಕಾರವನ್ನು ಯಂಗ್ ಇಂಡಿಯಾಗೆ ನೀಡಲಾಗಿತ್ತು. ಯಂಗ್ ಇಂಡಿಯಾದ ಮಾಲೀಕತ್ವಕ್ಕೆ ಎಜೆಎಲ್ ಒಳಪಡಬೇಕಾಯಿತು. ಎಜೆಎಲ್‌ನ ಶೇ. 99.99ರಷ್ಟು ಷೇರುಗಳು ಯಂಗ್ ಇಂಡಿಯಾಗೆ ವರ್ಗಾವಣೆ ಆದವು. 2010ರ ಡಿಸೆಂಬರ್ 13ರಂದು ಯಂಗ್ ಇಂಡಿಯಾದ ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲಾಯಿತು. ಎಜೆಎಲ್‌ನ ಎಲ್ಲಾ ಷೇರುಗಳನ್ನು ಖರೀದಿಸುವ ಉದ್ದೇಶದಿಂದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ರತನ್ ದೀಪ್ ಟ್ರಸ್ಟ್ ಮತ್ತು ಜನಹಿತ್ ನಿಧಿ ಟ್ರಸ್ಟ್ ಮೂಲಕ ಹೆಚ್ಚುವರಿ ಷೇರುಗಳನ್ನು ಖರೀದಿ ಮಾಡಿದ್ದರು.
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2012ರಲ್ಲಿ ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಕ್ರಿಮಿನಲ್ ದೂರು ದಾಖಲಿಸಿದರು. ಅಕ್ರಮ ರೀತಿಯಲ್ಲಿ ಎಜೆಎಲ್ ಅನ್ನು ಖರೀದಿ ಮಾಡಲಾಗಿದ್ದು, ಅಕ್ರಮವಾಗಿ ಷೇರುಗಳನ್ನು ವರ್ಗಾಯಿಸಲಾಗಿದೆ ಎಂದು ಸ್ವಾಮಿ ಆರೋಪಿಸಿದರು. ಈ ಕುರಿತು ಸಿಬಿಐ ತನಿಖೆ ಕೈಗೆತ್ತಿಕೊಂಡಿತು. ಇದರಲ್ಲಿ ಹವಾಲಾ ಹಣದ ವಹಿವಾಟು ನಡೆದಿದೆ ಎಂಬ ಅನುಮಾನ ವ್ಯಕ್ತವಾದದ್ದರಿಂದ, ಜಾರಿ ನಿರ್ದೇಶನಾಲಯ ಇದರ ತನಿಖೆಗೆ ಮುಂದಾಯಿತು. 2015ರಲ್ಲಿ ಪ್ರಕರಣ ಮುಂದುವರಿಸುವಂತೆ ಸುಬ್ರಮಣಿಯನ್ ಸ್ವಾಮಿಗೆ ಸುಪ್ರೀಂ ಕೋರ್ಟ್ ತಿಳಿಸಿತು. ಸುಬ್ರಮಣಿಯನ್ ಸ್ವಾಮಿ ನೀಡಿದ ದೂರಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತ್ರವಲ್ಲದೆ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡ ಹಾಗೂ ಪತ್ರಕರ್ತ ಸುಮನ್ ದುಬೆ ಹೆಸರುಗಳೂ ಇವೆ.
ಗಾಂಧಿಗಳಿಗೆ ಜಾಮೀನು…
ಈ ಪ್ರಕರಣಕ್ಕೆ ಸಂಬಂಧಿಸಿದ ತಮ್ಮ ಬಂಧನವಾಗದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜಾಮೀನು ಪಡೆದಿದ್ದಾರೆ. 2015ರಲ್ಲಿ ಇವರಿಬ್ಬರಿಗೂ ಪಟಿಯಾಲ ಹೌಸ್ ನ್ಯಾಯಾಲಯ ಜಾಮೀನು ನೀಡಿತು. 2016ರಲ್ಲಿ ಪ್ರಕರಣ ರದ್ದು ಮಾಡುವಂತೆ ಕೋರಿ ಇವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದರು. ಆದರೆ ಇದನ್ನು ಸುಪ್ರೀಂ ತಿರಸ್ಕರಿಸಿತು. ಕೋರ್ಟ್ ಕಲಾಪದಲ್ಲಿ ವ್ಯಕ್ತಿಗತವಾಗಿ ಹಾಜರಾಗುವುದರಿಂದ ಈ ಆರೋಪಿಗೆಳಿಗೆಲ್ಲ ವಿನಾಯಿತಿ ನೀಡಲಾಯಿತು.
ಇದನ್ನೂ ಓದಿ | ರಾಹುಲ್ ಗಾಂಧಿ ʼಪಪ್ಪುʼ ಎಂದ ಯುವ ಕಾಂಗ್ರೆಸ್!
2000 ಕೋಟಿ ರೂಪಾಯಿ ಹಗರಣ ಹೇಗೆ?
ವಿವಿಧ ಭಾಷೆಗಳಲ್ಲಿ ಪತ್ರಿಕೆ ನಡೆಸುವ ಷರತ್ತಿನ ಮೇರೆಗೆ 1962ರಲ್ಲಿ ಎಜೆಎಲ್‌ಗೆ ಬೆಲೆಬಾಳುವ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿತ್ತು. ಹೆರಾಲ್ಡ್ ಹೌಸ್ ಕಟ್ಟಡ ಇಲ್ಲಿದೆ. ಆದರೆ ಮೂರು ಪತ್ರಿಕೆಗಳು ನಿಂತುಹೋಗಿ ಬಹು ಕಾಲವೇ ಆಗಿದೆ. ಪತ್ರಿಕೆ ನಿಂತಿದ್ದರೂ ಎಜೆಎಲ್ ಸುಪರ್ದಿಯಲ್ಲಿ ಜಮೀನು ಇರುವುದು ಅಕ್ರಮ ಎಂಬುದು ಸುಬ್ರಮಣಿಯನ್ ಸ್ವಾಮಿ ಆರೋಪ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇರುವ ಜಾಗದ ಮೌಲ್ಯ ಈಗ ಎರಡು ಸಾವಿರ ಕೋಟಿ ರೂ ಇದೆ. 2018ರಲ್ಲಿ ಈ ಜಾಗಕ್ಕೆ 56 ವರ್ಷಗಳಿಂದ ನೀಡಲಾಗಿದ್ದ ಲೀಸ್ ಅನ್ನು ಕೇಂದ್ರ ಸರಕಾರ ರದ್ದುಪಡಿಸಿತು. ಘೋಷಿತ ಉದ್ದೇಶದಂತೆ ಪತ್ರಿಕೆ ಮುದ್ರಣ ಆಗುತ್ತಿಲ್ಲದಿರುವುದರಿಂದ ಲೀಸ್ ಅಂತ್ಯಗೊಳಿಸಿದೆ ಎನ್ನಲಾಯಿತು. ನವದೆಹಲಿಯ ಲ್ಯಾಂಡ್ ಆಂಡ್ ಡೆವಲಪ್ಮೆಂಟ್ ಪ್ರಾಧಿಕಾರ ಈ ಜಮೀನನ್ನು ಹಿಡಿತಕ್ಕೆ ಪಡೆಯಲು ಪ್ರಯತ್ನಿಸಿತು. ಸ್ಥಳ ತೆರವು ಮಾಡಿ ಜಮೀನು ಹಸ್ತಾಂತರ ಮಾಡುವಂತೆ ಎಜೆಎಲ್‌ಗೆ ಆದೇಶ ನೀಡಲಾಯಿತು. ಆದರೆ 2019ರಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ, ಎಜೆಎಲ್ ವಿರುದ್ಧ ಮುಂದಿನ ಸೂಚನೆ ಬರುವವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ತಡೆ ನೀಡಿತು.
ಹಲವು ಹಂತಗಳಲ್ಲಿ ಅಕ್ರಮ
ಎಜೆಎಲ್ ಸಂಸ್ಥೆಗೆ ಕಾಂಗ್ರೆಸ್ ಈ ಹಿಂದೆ ನೀಡಿದ್ದ ಸಾಲವೇ ಅಕ್ರಮ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷ. ಅದು ದೇಣಿಗೆ ಸ್ವೀಕರಿಸಬಹುದೇ ಹೊರತು, ಅದು ಬೇರೊಂದು ಸಂಸ್ಥೆಗೆ ಹಣ ಸಾಲ ನೀಡುವುದು ಹೇಗೆ ಸಾಧ್ಯ ಎಂಬುದು ಸುಬ್ರಮಣಿಯನ್ ಸ್ವಾಮಿ ಅವರ ಪ್ರಶ್ನೆ. ಸ್ವಾಮಿ ಅವರ ಪ್ರಕಾರ ಇಲ್ಲಿ ಅಕ್ರಮ ಹಲವು ಹಂತಗಳಲ್ಲಿ ನಡೆದಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿದ್ದ ಎಜೆಎಲ್ ಹಣದ ಸಂಕಷ್ಟದಲ್ಲಿದ್ದಾಗ ಹಣಸಹಾಯ ಮಾಡಿದಂತೆ ಕಾಂಗ್ರೆಸ್ ತೋರಿಸಿಕೊಂಡಿದೆ. ಬಳಿಕ, ಈ ಸಾಲವನ್ನು ಮರುಪಾವತಿ ಮಾಡಿಸಿಕೊಳ್ಳುವುದಕ್ಕಾಗಿ, ಎಜೆಎಲ್ ಸಂಸ್ಥೆಯನ್ನೇ ಖರೀದಿಸಿದೆ. ಈ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಷೇರುದಾರರಿಗೆಲ್ಲ ಈ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಎಷ್ಟು ಸಾಲವಿದೆ, ಎಷ್ಟು ಪಾವತಿ ಮಾಡಬೇಕಿದೆ, ಎಂಬುದರ ಬಗ್ಗೆ ಪಾರದರ್ಶಕತೆ ಇಲ್ಲ.
ಮಾತ್ರವಲ್ಲ ಈ ಮರುಪಾವತಿ ಪಡೆಯಬೇಕಾದ ಹೊಣೆಯನ್ನು ಇದ್ದಕ್ಕಿದ್ದಂತೆ (2015) ಯಂಗ್ ಇಂಡಿಯಾ ಎಂಬ ಸಂಸ್ಥೆಯನ್ನು ಸೃಷ್ಟಿ ಮಾಡಿ, ಅದಕ್ಕೆ ವಹಿಸಲಾಗುತ್ತದೆ. ಈ ಸಂಸ್ಥೆಯ ಸಂಪೂರ್ಣ ಮಾಲಿಕತ್ವ ಇದ್ದುದು ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಬಳಿ, ಇವರ ಬಳಿಯೇ ಈ ಸಂಸ್ಥೆಯ ಒಟ್ಟಾರೆ 76% ಷೇರುಗಳು ಇದ್ದವು. ಈ ಸಂಸ್ಥೆ ಎಜೆಎಲ್ ಅನ್ನು ಖರೀದಿಸುತ್ತದೆ. ಇದ್ದಕ್ಕಿದ್ದಂತೆ ಸೃಷ್ಟಿಯಾದ ಈ ಸಂಸ್ಥೆ ಯಾವುದೇ ಹಕ್ಕುಬಾಧ್ಯತೆಯೂ ಇಲ್ಲದೇ ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿರುವ ಸಂಸ್ಥೆಯೊಂದನ್ನು ಖರೀದಿಸಲು ಹೇಗೆ ಸಾಧ್ಯ? ಕಾಂಗ್ರೆಸ್ ನೀಡಿದ ಸಾಲದ ಮೊತ್ತ 100 ಕೋಟಿ ರೂ.ಗಳಿಗಿಂತಲೂ ಕಡಿಮೆ. ಆದರೆ ಎಜೆಎಲ್ ಮಾಲೀಕತ್ವದಲ್ಲಿ ಹೆರಾಲ್ಡ್ ಕಟ್ಟಡ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಜಮೀನು ಮತ್ತಿತರ ಆಸ್ತಿಪಾಸ್ತಿಗಳಿದ್ದವು. ದೆಹಲಿ ಸೇರಿದಂತೆ ನಾನಾ ಕಡೆ ಆಸ್ತಿಗಳನ್ನು ಹೊಂದಲಾಗಿತ್ತು. ಈ ಆಸ್ತಿಗಳ ಒಟ್ಟಾರೆ ಮೌಲ್ಯ 5000 ಕೋಟಿ ರೂ.ಗಳನ್ನೂ ಮೀರಬಹುದು. ಈ ಆಸ್ತಿಗಳಲ್ಲಿ ಯಂಗ್ ಇಂಡಿಯಾ ವಾಣಿಜ್ಯ ವಹಿವಾಟು ನಡೆಸುತ್ತಿದೆ. ಆದ್ದರಿಂದ ಇದರಲ್ಲಿ ದೊಡ್ಡದೊಂದು ಅವ್ಯವಹಾರವೇ ನಡೆದಿದೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಸೇರಿದಂತೆ ದೇಶದ ಸಾವಿರಾರು ಮಂದಿಯ ಷೇರುಗಳಿವೆ. ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದರಿಂದ ದೇಶದ ಬೊಕ್ಕಸಕ್ಕೆ ಭಾರಿ ಪ್ರಮಾಣದ ತೆರಿಗೆ ವಂಚನೆಯೂ ಆಗಿದೆ- ಇದು ಸುಬ್ರಮಣಿಯನ್ ಸ್ವಾಮಿ ಅವರ ವಾದದ ತಿರುಳು.
ಕಾಂಗ್ರೆಸ್ ಏನು ಹೇಳುತ್ತದೆ?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಾಸ್ತವವಾಗಿ ಯಾವುದೇ ಹಣದ ಅವ್ಯವಹಾರ ನಡೆದಿಲ್ಲ. ಎಜೆಎಲ್ ಎಂಬುದು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಸಂಸ್ಥೆಯಲ್ಲ. ಬದಲಾಗಿ ಅದು ಸಮಾಜ ಸೇವಾ ಕಾರ್ಯಗಳಿಗಾಗಿ ನಡೆಸುತ್ತಿದ್ದ ಸಂಸ್ಥೆ. ಹೀಗಾಗಿ ಅದೊಂದು ಲಾಭರಹಿತ ಸಂಸ್ಥೆಯಾಗಿತ್ತು. ಅದರ ಹೆಸರಿನಲ್ಲಿರುವ ಜಮೀನುಗಳು ಗುತ್ತಿಗೆ ಆಧಾರದಲ್ಲಿವೆ ಹೊರತು ಸ್ವಂತ ಆಸ್ತಿಗಳಲ್ಲ. ಅವೆಲ್ಲವೂ ಕಾಂಗ್ರೆಸ್‌ಗೆ ಸೇರಿವೆ. ಸುಬ್ರಮಣಿಯನ್ ಸ್ವಾಮಿ ಅವರು ರಾಜಕೀಯ ದ್ವೇಷದ, ಸೇಡಿನ ಕ್ರಮವಾಗಿ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ, ಕಾಂಗ್ರೆಸ್ ಮುಖಂಡರನ್ನು ಮಣಿಸಬೇಕು ಎಂಬ ಸನ್ನಿವೇಶ ಸೃಷ್ಟಿಯಾದಾಗಲೆಲ್ಲ ಈ ಪ್ರಕರಣವನ್ನು ಬಳಸಿಕೊಳ್ಳುತ್ತದೆ. ಈಗ 2024ರ ಲೋಕಸಭೆ ಚುನಾವಣೆ ತಯಾರಿಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಓಡಾಡುತ್ತಿದ್ದಾರೆ. ಅವರನ್ನು ಮಣಿಸಲು, ಅವರ ಗಣನೀಯ ಸಮಯವೆಲ್ಲ ಈ ಪ್ರಕರಣದಲ್ಲಿ ವ್ಯರ್ಥವಾಗುವಂತೆ ನೋಡಿಕೊಳ್ಳಲು ಸುಬ್ರಮಣಿಯನ್ ಸ್ವಾಮಿಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಾದಿಸಿದೆ.
ಇನ್ನೊಂದು ಪ್ರಕರಣ ನಿಮಗೆ ಗೊತ್ತಿದೆಯಾ?
ನ್ಯಾಷನಲ್ ಹೆರಾಲ್ಡ್ ಕೇಸ್ ಮಾತ್ರವಲ್ಲ, ಗಾಂಧಿ ಕುಟುಂಬದ ಮೇಲೆ ಇನ್ನೂ ಒಂದು ಪ್ರಕರಣ ಕೂಡ ಇದೆ. ಗಾಂಧಿ ಅಥವಾ ನೆಹರೂ ಕುಟುಂಬದ ಒಡೆತನದಲ್ಲಿರುವ ಮೂರು ಟ್ರಸ್ಟ್‌ಗಳ ಹಣಕಾಸಿನ ವಹಿವಾಟಿನಲ್ಲಿ ನಡೆದಿರಬಹುದಾದ ಅಕ್ರಮವನ್ನು ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿತ್ತು.
ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್), ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ (ಆರ್‌ಜಿಸಿಟಿ) ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ (ಐಜಿಎಂಟಿ)ಗಳು ಈ ಮೂರು ಟ್ರಸ್ಟ್‌ಗಳಾಗಿವೆ. ಇವುಗಳಲ್ಲಿ ಎರಡು ಸಂಸ್ಥೆಗಳಿಗೆ ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿದ್ದಾರೆ ಹಾಗೂ ರಾಹುಲ್ ಗಾಂಧಿ ಅವರು ಟ್ರಸ್ಟಿಯಾಗಿದ್ದಾರೆ. ಹವಾಲಾ ವ್ಯವಹಾರ ತಡೆ ಕಾಯಿದೆ, ಆದಾಯ ತೆರಿಗೆ ಕಾಯಿದೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಗಳ ಅಡಿಯಲ್ಲಿ ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಇವುಗಳ ತನಿಖೆ ನಡೆಸಲು ಅಂತರ್ ಸಚಿವಾಲಯ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯ ರಚಿಸಿದೆ. ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ತನಿಖೆಯ ನೇತೃತ್ವ ವಹಿಸಿದ್ದಾರೆ.
ಹಾಗಿದ್ದರೆ ಇವುಗಳ ಮೇಲಿರುವ ಆರೋಪಗಳೇನು?
ಯುಪಿಎ ಅಧಿಕಾರಾವಧಿಯಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಹಣಕಾಸು ನಿಧಿಗೆ ಬಂದ ಹಣವನ್ನು ಆರ್‌ಜಿಎಫ್‌ಗೆ ವರ್ಗಾಯಿಸಲಾಗಿದೆ. ನಿರಾಶ್ರಿತರಿಗೆ ನೀಡಬೇಕಾದ ಹಣವನ್ನು ಕುಟುಂಬದ ನಿಧಿಗೆ ನೀಡಿರುವುದು ವಂಚನೆ. 2005-06ರಲ್ಲಿ ಚೀನಾದ ರಾಯಭಾರ ಕಚೇರಿ ರಾಜೀವ್ ಗಾಂಧಿ ಫೌಂಡೇಶನ್‌ಗೆ ಹಣ ಬಂದಿತ್ತು. ಇದು ಯಾಕೆ ಬಂದಿದೆ ಎಂಬುದು ಪತ್ತೆಯಾಗಬೇಕು. ಇದಲ್ಲದೆ, ಸೋನಿಯಾ ಗಾಂಧಿ ಅಳಿಯ ಪ್ರಿಯಾಂಕ ಅವರ ಪತಿ ರಾಬರ್ಟ್ ವಾದ್ರಾ ಅವರ ಬಹುಕೋಟಿ ತೆರಿಗೆ ವಂಚನೆ ಹಾಗೂ ಕಿಕ್‌ಬ್ಯಾಕ್ ಪ್ರಕರಣಗಳು ಕೂಡ ಜಾರಿ ನಿರ್ದೇಶನಾಲಯದಡಿ ತನಿಖೆಯಲ್ಲಿವೆ. ರಾಬರ್ಟ್ ವಾದ್ರಾ ಈಗ ಜಾಮೀನಿನಲ್ಲಿದ್ದಾರೆ.
ಕಾಂಗ್ರೆಸ್‌ನ ನೇತೃತ್ವ ವಹಿಸಿರುವ ಕುಟುಂಬವನ್ನು ಯಾಕೆ ಮತ್ತೆ ಮತ್ತೆ ಹಣದ ಅವ್ಯವಹಾರದ ಪ್ರಕರಣಗಳು ಕಂಗೆಡಿಸುತ್ತಾ ಇವೆ? ಇವುಗಳಲ್ಲಿರುವ ಪಾರದರ್ಶಕತೆಯ ಕೊರತೆ ಹಾಗೂ ದೇಶದ ಅತಿ ದೊಡ್ಡ ರಾಜಕೀಯ ಫ್ಯಾಮಿಲಿಯ ಇನ್‌ವಾಲ್ವ್‌ಮೆಂಟ್‌ಗಳು ಇದಕ್ಕೆ ಕಾರಣ. ರಾಜಕೀಯ ದ್ವೇಷವೋ ಅಲ್ಲವೋ, ದೇಶಕ್ಕೆ ಸತ್ಯ ಗೊತ್ತಾಗಬೇಕಿದೆ, ಏನಂತೀರಿ?
ಇದನ್ನೂ ಓದಿ | ನ್ಯಾಷನಲ್ ಹೆರಾಲ್ಡ್: ಜೂ.23ರಂದು ಹಾಜರಾಗಲು ಸೋನಿಯಾ ಗಾಂಧಿಗೆ ED ಸಮನ್ಸ್