ಬೆಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Suicide) ಪ್ರಕರಣದ ಸಂಬಂಧ ಉಡುಪಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಮೊದಲ ಆರೋಪಿ (A1) ಎಂದು ಹೆಸರಿಸಲಾಗಿದೆ.
ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಪಾಟೀಲ್, ತಮ್ಮ ಆತ್ಮಹತ್ಯೆಗೆ ಕೆ.ಎಸ್. ಈಶ್ವರಪ್ಪ ಅವರು ಕಾರಣ ಎಂದು ಅನೇಕರಿಗೆ ಸಂದೇಶ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಗೌಡಪ್ಪ ಪಾಟೀಲ್ ಎಂಬವರು ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಎರಡನೇ ಹಾಗೂ ಮೂರನೇ ಆರೋಪಿಗಳಾಗಿ ಕ್ರಮವಾಗಿ ಈಶ್ವರಪ್ಪ ಅವರ ಆಪ್ತರಾದ ಬಸವರಾಜ್(A2), ರಮೇಶ್ (A3) ಅವರನ್ನು ಹೆಸರಿಸಲಾಗಿದೆ. ಸುದ್ದಿಗೋಷ್ಠಿಗಳಲ್ಲಿ ಹಾಗೂ ಯಾವುದೇ ವಿವಾದಗಳ ಸಂದರ್ಭದಲ್ಲಿ ತಮ್ಮದೇ ವಿಶಿಷ್ಠ ಶೈಲಿಯಲ್ಲಿ ಮಾತಿನ ಚಟಾಕಿ ಹಾರಿಸುವಲ್ಲಿ ಈಶ್ವರಪ್ಪ ಸಿದ್ಧಹಸ್ತ. ಇದೇ ವಿಚಾರಕ್ಕೆ ಅನೇಕ ಬಾರಿ ವಿವಾದಕ್ಕೂ ಈಡಾಗಿದ್ದ ಹಿರಿಯ ಸಚಿವ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಎಫ್ಐಆರ್ ಸಾಂರಾಂಶ ಹೀಗಿದೆ
- 2020-21 ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಜರುಗುವ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿಕೊಂಡು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದರು.
- ಜಾತ್ರೆಯ ವಿಷಯ ತಿಳಿಸಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ ಕಾಮಗಾರಿಗಳನ್ನು ಮಾಡಿಕೊಡಬೇಕೆಂದು ಸಚಿವರಲ್ಲಿ ವಿನಂತಿಸಿಕೊಂಡರು.
- ನೀವು ನಮ್ಮ ಕಾರ್ಯಕರ್ತರು, ನೀವು ಕೆಲಸ ಶುರು ಮಾಡಿ, ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲ ಎಂದು ಈಶ್ವರಪ್ಪನವರು ತಿಳಿಸಿದ್ದರು.
- ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾಮಗಾರಿ ಆರಂಭಿಸಲು ಸಂತೋಷ ಕೆ ಪಾಟೀಲ್ ಅವರಿಗೆ ತಿಳಿಸಿದರು.
- ಸಂತೋಷ ಮತ್ತು ಉಳಿದ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ₹4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿದರು.
- ಕಾಮಗಾರಿಗಳ ಬಿಲ್ ಪಾವತಿಗಾಗಿ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅವರನ್ನು ಹಲವು ಸಾರಿ ಭೇಟಿಯಾದರು.
- ಆದರೆ ಹಾಗೆ ಕೆಲಸ ಆಗುವುದಿಲ್ಲ, 40% ಪರ್ಸೆಂಟ್ ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಹೇಳಿದ್ದರು. ಈ ಕಮೀಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರಕಾರಕ್ಕೆ ದೂರು ಸಲ್ಲಿಸಿದರು.
- ಗುತ್ತಿಗೆದಾರರಾದ ಸಂತೋಷ ಅವರು ಮಾದ್ಯಮಗಳ ಮುಖೇನ ಮಾರ್ಚ್ನಲ್ಲಿ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಆರೋಪಿಸಿದ್ದರು.
- ಇದಕ್ಕೆ ಮುಂಚಿತವಾಗಿ ಸಂತೋಷ ಅವರು ತಮ್ಮ ಪತ್ನಿ ಜಯಾ ಅವರೊಂದಿಗೆ ಈ ವಿಷಯ ತಿಳಿಸಿದ್ದರು. ಪದೇ ಪದೇ ಏಕೆ ಬೆಂಗಳೂರಿಗೆ ಹೋಗುವುದು ಎಂದು ಪ್ರಶ್ನಿಸಿದಾಗ ಅವರು ಈ ಕಾಮಗಾರಿಗಳ ಬಿಲ್ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತಿಳಿಸುತ್ತಿದ್ದರು.
- ಇದೇ ಬಿಲ್ ಪಾಸ್ ಆಗದ ಕಾರಣ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ರವರ ವಿರುದ್ಧ ವಿಡಿಯೋ ಫೂಟೇಜ್ ಮುಖೇನ ₹4 ಕೋಟಿ ಕಾಮಗಾರಿ ಬಿಲ್ ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾದ್ಯಮಗಳ ಮುಖೇನ ವಿಷಯ ಪ್ರಸ್ತಾಪಿಸಿದರು.
- ಸಂತೋಷ ಅವರು ಅನೇಕ ರೀತಿಯ ರಸ್ತೆ ಕಾಮಗಾರಿಗಳಿಗೆ ಹಣ ಹಾಕಿದ್ದರಿಂದ ಅಡಚಣೆಯಾಗಿ ₹40 ಪರ್ಸೆಂಟ್ ಕಮಿಷನ್ ವಿಷಯದ ಕುರಿತು ರಾಜ್ಯ ಬಿ.ಜೆ.ಪಿ ಉಸ್ತುವಾರಿಯಾದ ಶ್ರೀ ಅರುಣ ಸಿಂಗ್ ಅವರಿಗೆ ಹಾಗೂ ದೆಹಲಿ ಮಟ್ಟದ ಬಿ.ಜೆ.ಪಿ ವರಿಷ್ಟರಿಗೆ, ಪ್ರಧಾನ ಮಂತ್ರಿಗಳ ಕಛೇರಿಗೆ ಭೇಟಿ ನೀಡಿ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ತಿಳಿಸಿದ್ದರು.
- ಆದರೂ ಬಿಲ್ ಪಾಸ್ ಆಗಿರುವುದಿಲ್ಲ. ಅದೇ ವಿಷಯದಲ್ಲಿ ಸಂತೋಷ ಅವರು ಆರೋಪಿಗಳಾದ ಕೆ.ಎಸ್ ಈಶ್ವರಪ್ಪ ಹಾಗೂ ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ಹಾಗೂ ಇತರರಿಂದ ಮನನೊಂದು ತನ್ನ ಮೊಬೈಲಿನಿಂದ ವಾಟ್ಸ್ ಅಫ್ ಮುಖೇನ ಡೆತ್ ನೋಟ್ ಸಂದೇಶ್ ಮಾದ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿದ್ದರು
- ದಿನಾಂಕ: 11/04/2022ರ ರಾತ್ರಿ ಸುಮಾರು 11-00 ಗಂಟೆಯಿಂದ ದಿನಾಂಕ: 12/04/2022 ರ ಬೆಳಿಗ್ಗೆ 10 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿಯ ಶಾಂಭವಿ ಲಾಡ್ಜ್ ನ ರೂಂ ನಂಬರ್ 207ರಲ್ಲಿ ಅನುಮಾನಾಸ್ಪದ ಸಾವು ಆಗಿದೆ
- ಈ ಸಾವಿಗೆ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿ ಆಗಿರುತ್ತದೆ.
ಹೆಚ್ಚಿನ ಓದಿಗಾಗಿ: ಕೊಲೆ ಕೇಸ್ ಹಿಂಪಡೆದಾಗ ಕರ್ತವ್ಯಪ್ರಜ್ಞೆ ಎಲ್ಲಿತ್ತು?: HDK, ಸಿದ್ದುಗೆ ಬೊಮ್ಮಾಯಿ ತಿರುಗೇಟು