ಚಿಕ್ಕಮಗಳೂರು: ಮಂಡ್ಯದ ಕೆರಗೋಡಿನಲ್ಲಿ ಆ ಧ್ವಜಸ್ತಂಭವನ್ನು ನಿರ್ಮಿಸಿದ್ದೇ ಹನುಮಾನ್ ಧ್ವಜ (Hanuman Flag), ರಾಮಧ್ವಜವನ್ನು ಹಾರಿಸಬೇಕೆಂದಾಗಿದೆ. ಅವರ ಭಾವನೆ ವಿರುದ್ಧ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.
ಮೂಡಿಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಂಡ್ಯ ಪ್ರಕರಣವನ್ನು ಬಿಜೆಪಿ ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜನವರಿ 26ರಂದು ಕೆರಗೋಡು ಜನರು ಅಲ್ಲಿ ರಾಷ್ಟ್ರಧ್ವಜ ಹಾರಿಸಿ, ಗೌರವ ಕೊಟ್ಟಿದ್ದಾರೆ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ. ಈ ಸರ್ಕಾರಕ್ಕೆ ರಾಷ್ಟ್ರಧ್ವಜವನ್ನು ಹೇಗೆ ಹಾರಿಸಬೇಕು ಎಂಬುದೇ ಗೊತ್ತಿಲ್ಲ. ಧ್ವಜಕ್ಕೆ ಯಾವ ಅಳತೆ ಇರಬೇಕು? ಯಾವುದನ್ನೂ ಲೆಕ್ಕಿಸದೆ ಸರ್ಕಾರ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ. ಕಾಂಗ್ರೆಸ್ ಮೊದಲು ದೇಶ-ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದರು.
ಅಲ್ಲದೆ, ಅಲ್ಲಿ ಧ್ವಜ ಹಾರಿಸುವ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು ಸಹ ತೀರ್ಮಾನ ಮಾಡಿದ್ದಾರೆ. ಆದರೆ, ಈಗ ರಾಜ್ಯ ಸರ್ಕಾರ ಮಾಡಿದ್ದೇನು? ಕಾಂಗ್ರೆಸ್ ಮುಖಂಡರ, ಸಿಎಂ ಸಿದ್ದರಾಮಯ್ಯ ಅವರ ದ್ವಂದ್ವ ನಿಲುವು ಏಕೆ? ಈ ಸರ್ಕಾರದಲ್ಲಿ ಯಾವುದೇ ತೀರ್ಮಾನ ಮಾಡಲಾಗುತ್ತಿಲ್ಲ. ಪ್ರತಿಯೊಬ್ಬ ರಾಮ ಭಕ್ತನು ದುಷ್ಟ ರಾಜ್ಯ ಸರ್ಕಾರದ ನಡವಳಿಕೆಯನ್ನು ಗಮನಿಸುತ್ತಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಹನುಮ ಧ್ವಜಕ್ಕೆ ಕಾಂಗ್ರೆಸ್ ವಿರೋಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು.
ಇವರು ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ?
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ಷತೆ ಬೇಕಾ? ಗ್ಯಾರಂಟಿ ಬೇಕಾ ಎಂಬ ಶಾಸಕ ಬಾಲಕೃಷ್ಣ ಹೇಳಿಕೆಗೆ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದು, ಇದು ಬ್ಲ್ಯಾಕ್‌ಮೇಲ್ ಅಲ್ಲದೆ ಮತ್ತೇನು? ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು. ಸರ್ಕಾರ ಬಂದು 8 ತಿಂಗಳಾಗಿದೆ ಒಂದೂ ಹೊಸ ಯೋಜನೆ ಜಾರಿಗೆ ತಂದಿಲ್ಲ. ಇವರ ಗ್ಯಾರಂಟಿಯಿಂದ ರಾಜ್ಯದ ಜನ ಬೀದಿಗೆ ಬರುವ ಸ್ಥಿತಿ ಬಂದಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್‌ಸೆಟ್‌ಗೆ ಕರೆಂಟ್ ಇಲ್ಲ. ಇವರು ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ? ಗ್ಯಾರಂಟಿ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ದೇಶದ ವಾತಾವರಣ ಬದಲಾಗಿದೆ
ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ 28 ಸ್ಥಾನ ಗೆಲ್ಲೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರಲ್ಲೂ ಈ ಅನುಮಾನ ಕಾಡುತ್ತಿದೆ. 3 ರಾಜ್ಯದಲ್ಲಿ ಬಿಜೆಪಿ ಗೆಲುವು ಕಾಣಲಿದೆ. ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ಬಳಿಕ ದೇಶದ ವಾತಾವರಣ ಬದಲಾಗಿದೆ. ಹೊಸ ವಾತಾವರಣದಿಂದ ಕಾಂಗ್ರೆಸ್‌ನವರು ಭಯಭೀತರಾಗಿದ್ದಾರೆ. ಹಾಗಾಗಿ, ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: Murder Case: ತಲೆ ಮೇಲೆ ಕಲ್ಲು ಹಾಕಿ, ಬೆಂಕಿ ಹಚ್ಚಿ ಕೊಲೆ! ಅನೈತಿಕ ಸಂಬಂಧ ಕಾರಣವೇ?
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೋಗಸ್ ಗ್ಯಾರಂಟಿಯಿಂದ ಅಧಿಕಾರಕ್ಕೆ ಬಂದಿದ್ದಾರೆ. ಇನ್ನು ಜನಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಲು ನಾವು ಬಿಡಲ್ಲ. ಕಾಂಗ್ರೆಸ್ಸಿಗರ ಕಿವಿ ಹಿಂಡಿ ಹೇಗೆ ಕೆಲಸ ಮಾಡಿಸಬೇಕು ಎಂಬುದು ಗೊತ್ತಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.