ಚಿಕ್ಕಬಳ್ಳಾಪುರ: ಸುಖಾಸುಮ್ಮನೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದರೆ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಹಳೆಯ ವಿಚಾರಗಳೆಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿದ್ದರಾಮಯ್ಯ, ಸುಧಾಕರ್ ಈ ಹಿಂದೆ ಯಾವ ಪಕ್ಷದಲ್ಲಿ ಇದ್ದವರು? ಮೊದಲು ಕಾಂಗ್ರೆಸ್ ನಲ್ಲಿದ್ದವರು. ಸುಧಾಕರಿಗೆ ಟಿಕೆಟ್ ಕೊಡಿಸಿದ್ದು ನಾನೇ. ಟಿಕೆಟ್ ಕೊಡಿಸಿ ತಪ್ಪು ಮಾಡಿದ್ದೇನೆ. ಬಾಯಿ ಮುಚ್ಚಿಕೊಂಡು ಇರು ಎಂದು ಅವರಿಗೆ ಹೇಳಬೇಕು. ಇಲ್ಲ ಅಂದರೆ ಹಳೆ ಕಥೆ ಹೇಳಬೇಕಾಗುತ್ತದೆ.
ಬಾಯಿಮುಚ್ಚಿಕೊಂಡರೇ ನಾನು ಏನನ್ನೂ ಹೇಳುವುದಿಲ್ಲ. ಟಿಕೆಟ್ ಏಕೆ, ಹೇಗೆ ಸಿಕ್ಕಿತು ಎಂದು ಎಲ್ಲವನ್ನೂ ಹೇಳಬೇಕಾಗುತ್ತದೆ ಎಂದು ಚಾಟಿ ಬೀಸಿದ್ದಾರೆ.ʼ
ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಮುನಿಸಿನ ಕುರಿತು ಪ್ರತಿಕ್ರಿಯಿಸಿ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಒಂದೇ ಅಭಿಪ್ರಾಯ ಸರ್ವಾಧಿಕಾರದಲ್ಲಿ ಮಾತ್ರ ಇರುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಮೈದಾನದ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಇಲ್ಲದೆ ಮಾತಾಡಬಾರದು. ಹಿಂದಿನಿಂದ ಏನು ನಡೆಕೊಂಡು ಬಂದಿದೆಯೋ ಅದನ್ನು ಮುಂದುವರಿಸಬೇಕು. ಹಿಂದುಗಳು-ಮುಸ್ಲಿಮರು ಅನ್ಯೋನ್ಯತೆಯಿಂದ ಜೀವನ ನಡೆಸುವ ವಾತಾವರಣ ಸೃಷ್ಟಿ ಮಾಡಬೇಕು. ಬಿಜೆಪಿಯವರು ವಿವಾದ ಹುಟ್ಟುಹಾಕಲು ಇರೋದು. ಏಕೆಂದರೆ ಮತಗಳನ್ನು ವಿಂಗಡಣೆ ಮಾಡಬೇಕಲ್ಲ? ಎಂದು ಬಿಜೆಪಿ ಮೇಲೆ ಆರೋಪ ಹೊರಿಸಿದರು.
ಇದನ್ನೂ ಓದಿ | Monkeypox | ಆತಂಕ ಬೇಕಿಲ್ಲ, ಕಟ್ಟೆಚ್ಚರ ವಹಿಸಿ; ಸಚಿವ ಸುಧಾಕರ್ ಸೂಚನೆ