Site icon Vistara News

CM Siddaramaiah: ಸಾಮೂಹಿಕ ಅತ್ಯಾಚಾರ ಪ್ರಕರಣ; ಯಾರನ್ನೂ ರಕ್ಷಿಸಲ್ಲ: ಸಿಎಂ ಸಿದ್ದರಾಮಯ್ಯ

CM Siddaramaiah in Haveri

ಹಾವೇರಿ: ಸಾಮೂಹಿಕ ಅತ್ಯಾಚಾರ (Gang rape) ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಸೋಮವಾರ ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಈ ಮೊದಲು ಅರ್ಜಿ ಕೊಟ್ಟರೆ ಪರಿಗಣಿಸಲಾಗುತ್ತಿತ್ತು. ಈಗ ತಾನೇ ಅರ್ಜಿ ಕೊಟ್ಟಿದ್ದಾರೆ. ಅದನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ಘಟನೆ ನಡೆದು ಒಂದು ತಿಂಗಳು ಕಳೆದರೂ ಸರ್ಕಾರದ ಪರವಾಗಿ ಯಾರೂ ಸಾಂತ್ವನ ಹೇಳಿಲ್ಲ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದರು.

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಯಾರನ್ನೂ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ಜರುಗಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಉಳಿದಂತೆ ನೈತಿಕ ಪೊಲೀಸ್‌ಗಿರಿ ಬಗ್ಗೆ ಮಾತನಾಡುತ್ತಾರೆ. ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮಾತನಾಡಿದರೆ ಮಾತ್ರ ಕ್ರಮ ಇಲ್ಲದಿದ್ದರೆ ಇಲ್ಲವೇ ಎಂದು ಮರು ಪ್ರಶ್ನೆ ಮಾಡಿದರು. ಮಾತನಾಡದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂದು ಸಹ ಪ್ರಶ್ನೆ ಮಾಡಿದರು.

ಪ್ರಾಥಮಿಕ ವರದಿ ಬಂದ ನಂತರ ತೀರ್ಮಾನ

ಪ್ರಕರಣವನ್ನು ಎಸ್.ಐ.ಟಿಗೆ ವಹಿಸಲು ಬಿಜೆಪಿ ಆಗ್ರಹ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಎಸ್.ಐ.ಟಿ ಯಲ್ಲಿರುವವರೂ ಪೊಲೀಸರೇ ಆಗಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿ ಬಂದ ನಂತರ ತೀರ್ಮಾನಿಸಲಾಗುವುದು ಎಂದರು.

ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಪ್ರಕರಣ ಮುಚ್ಚಿಹಾಕವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ವಹಿಸಲಾಗುವುದು. ಅರ್ಜಿಯನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಪ್ರಕರಣದಲ್ಲಿ ಮಾತ್ರ ತಕ್ಷಣ ಭೇಟಿ ನೀಡಿ ಪರಿಹಾರ ನೀಡಲಾಗಿದೆ. ಆದರೆ, ಇಲ್ಲಿ ಯಾಕೆ ಹಾಗೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಅಲ್ಲಿಗೆ ಗೃಹ ಸಚಿವರು ಭೇಟಿ ನೀಡಿದ್ದರು. ಭೇಟಿ ನೀಡುವಂತೆ ನಾನೇ ಸೂಚನೆ ನೀಡಿದ್ದೆ. ಇಲ್ಲಿ ಗೃಹ ಸಚಿವರು ಇರಲಿಲ್ಲ. ಕೇಂದ್ರದ ಮಾಜಿ ಸಚಿವ ಶಿವಣ್ಣ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. .

ಸಂತ್ರಸ್ತೆಯನ್ನು ಭೇಟಿ ಮಾಡಿ ಬರುವುದು, ಸಾಂತ್ವನ ಹೇಳುವುದು ಒಂದು ಭಾಗವಾದರೆ ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುವುದು ಮತ್ತೊಂದು ಭಾಗ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಸರಿಪಡಿಸಲಾಗುವುದು

ಸಂತ್ರಸ್ತೆಗೆ ಚಿಕಿತ್ಸೆ ನೀಡದೇ ಆರೋಪಿಗೆ ಪೊಲೀಸರು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಶಿವಣ್ಣ ಅವರೊಂದಿಗೆ ಮಾತನಾಡಿ ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡನೆ

ಮಾರ್ಚ್ ಮೊದಲ ವಾರದೊಳಗೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರದಿಂದ ಪರಿಹಾರ ಬಂದ ನಂತರ ರೈತರಿಗೆ ಮತ್ತೆ ಪರಿಹಾರ

ರೈತರಿಗೆ ಪರಿಹಾರ ನೀಡಿಲ್ಲವೆಂದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ರೈತರಿಗೆ 2000 ರೂ.ಗಳ ತಾತ್ಕಾಲಿಕ ಪರಿಹಾರವನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರದಿಂದ ಪರಿಹಾರ ಬಂದ ನಂತರ ಪುನಃ ಎನ್.ಡಿ.ಆರ್.ಎಫ್ ನಿಯಮಾವಳಿಗಳ ಪ್ರಕಾರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: BJP Karnataka: ಬೆಂಗಳೂರಿನ ನೂತನ ಜಿಲ್ಲಾಧ್ಯಕ್ಷರಿಂದ ಬಿ.ವೈ. ವಿಜಯೇಂದ್ರಗೆ ಅಭಿನಂದನೆ

ಮನುಷ್ಯತ್ವ ಇರಬೇಕು

ಅನಂತಕುಮಾರ್ ಹೆಗಡೆಯವರು ಏಕವಚನದಲ್ಲಿ ಮಾತನಾಡುವುದನ್ನು ಕಲಿಸಿದ್ದೇ ಸಿದ್ದರಾಮಯ್ಯ ಅವರು ಎಂದು ಸಮರ್ಥಿಸಿಕೊಂಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರು ರಾಜಕೀಯವಾಗಿ ಆರೋಪ ಮಾಡುತ್ತಾರೆ. ಅನಂತ ಕುಮಾರ್ ಹೆಗಡೆ ಅವರು ಇವತ್ತಿನವರೆಗೆ ನಾಪತ್ತೆಯಾಗಿದ್ದರು. ಚುನಾವಣೆ ಹತ್ತಿರ ಬಂದಂತೆ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ. ಸಂಸದರಾಗಿ ಮಾಜಿ ಮಂತ್ರಿಯಾಗಿ ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಂದಿನವರೆಗೆ ಬಡವರ ಸಮಸ್ಯೆ ಕೇಳಿದ್ದಾರೆಯೇ? ಸಂಸ್ಕೃತಿ ಎಂದರೆ ಮನುಷ್ಯತ್ವ. ಮೊದಲು ಮನುಷ್ಯತ್ವ ಇರಬೇಕು ಎಂದು ಹೇಳಿದರು.

Exit mobile version