Site icon Vistara News

Chaitra Kundapura : ಗೋವಿಂದ ಪೂಜಾರಿಗೆ ಇದೆ ಹೈಲೆವೆಲ್‌ ಸಂಪರ್ಕ; ಆದರೂ ಚೈತ್ರಾ ಹಿಂದೆ ಬಿದ್ದಿದ್ದೇಕೆ? TRAP ಮಾಡಿದ್ರಾ?

govinda poojari with amit shah

ಬೆಂಗಳೂರು: ಬೈಂದೂರಿನ ಬಿಜೆಪಿ ಟಿಕೆಟ್‌ಗಾಗಿ (Bynduru BJP ticket) ಐದು ಕೋಟಿ ರೂ. ಕಳೆದುಕೊಂಡಿರುವ (Five crore Fraud case) ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಸಂಪರ್ಕಗಳಿವೆ. ಆದರೂ ಅವರು ಅದೆಲ್ಲವನ್ನೂ ಬಿಟ್ಟು ಭಾಷಣ ಮಾಡುತ್ತಾ ಬೆಂಕಿಯುಗುಳುತ್ತಾ ಕಾಲ ಕಳೆಯುತ್ತಿದ್ದ ಚೈತ್ರಾ ಕುಂದಾಪುರ (Chaitra Kundapura) ಬೆನ್ನು ಬಿದ್ದಿದ್ದೇಕೆ? ಇವರೆಲ್ಲರನ್ನೂ ಮೀರಿಸಿ ಆಕೆಯೇ ತನಗೆ ಟಿಕೆಟ್‌ ಕೊಡಿಸಬಲ್ಲಳು ಎಂದು ಅವರಿಗೆ ಅನಿಸಿದ್ದು ಯಾಕೆ? ಎನ್ನುವ ದೊಡ್ಡ ಪ್ರಶ್ನೆಯೊಂದು ಈಗ ಎದ್ದು ನಿಂತಿದೆ. ಸಿಸಿಬಿ ಕೂಡಾ ಈ ಪ್ರಶ್ನೆಯನ್ನು ಇಟ್ಟುಕೊಂಡು ಗೋವಿಂದ ಪೂಜಾರಿಯನ್ನು ಜಾಲಾಡಲು ಸಿದ್ಧವಾಗುತ್ತಿದೆ.

ನಾನೊಬ್ಬ ಉದ್ಯಮಿ, ನನಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ ಎನ್ನುತ್ತಿದ್ದ ಗೋವಿಂದ ಪೂಜಾರಿ ಅವರಿಗೆ ಯಾವ್ಯಾವ ರಾಜಕಾರಣಿಗಳ ಜತೆ ಆತ್ಮೀಯ ಒಡನಾಟ ಇತ್ತು ಎನ್ನುವುದನ್ನು ಈಗ ಸಿಸಿಬಿ ಮಾಹಿತಿ ಕಲೆ ಹಾಕಿದೆ. ಟಿಕೆಟ್‌ ಬೇಕೇ ಬೇಕು ಎಂದರೆ ಬಿಜೆಪಿಯ ಉನ್ನತ ನಾಯಕರ ಜತೆ ಸಂಪರ್ಕ ಸಾಧಿಸುವಷ್ಟು ಶಕ್ತಿ ಇದ್ದ ಗೋವಿಂದ ಪೂಜಾರಿ ಚೈತ್ರಾ ಕುಂದಾಪುರಳ ಬಳಿ ಟಿಕೆಟ್‌ ಭಿಕ್ಷೆ ಕೇಳಿದ್ದೇಕೆ? ಆಕೆ ಕೇಳಿದಂತೆ ಕೇಳಿದಂತೆ ಹಣ ಕೊಟ್ಟಿದ್ದು ಯಾಕೆ ಎನ್ನುವುದನ್ನು ಬೆನ್ನಟ್ಟಿ ಹೋದಾಗ ಗೋವಿಂದ ಪೂಜಾರಿ ಅವರ ನಡೆಗಳ ಮೇಲೆಯೇ ಸಿಸಿಬಿಗೆ ಅನುಮಾನ ಮೂಡಲು ಶುರುವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಸಿ.ಟಿ ರವಿ ಜತೆ

ಒಂದು ಕಡೆ ಗೋವಿಂದ ಪೂಜಾರಿ ಅವರು ಎಲ್ಲಾ ಹಣವನ್ನು ನಗದು ರೂಪದಲ್ಲೇ ನೀಡಿದ್ದಾರೆ. ಈ ಬಗ್ಗೆ ಫೋನ್‌ ಕಾಲ್‌ಗಳು, ಕೆಲವೊಂದು ಚಿತ್ರಗಳು ಬಿಟ್ಟರೆ ಬೇರೆ ಯಾವ ದಾಖಲೆಗಳೂ ಇಲ್ಲ. ಇನ್ನೊಂದು ಕಡೆಯಲ್ಲಿ ಚೈತ್ರಾ ಆಡಿಸಿದ ಬೊಂಬೆಯಂತೆ ಆಕೆ ಹೇಳಿದ್ದೆಲ್ಲವನ್ನು ನಂಬಿದ್ದಾರೆ. ಹಾಗಿದ್ದರೆ ಆಕೆ ನಂಬುವಂತೆ ಮಾಡಿದ್ದು ಯಾವುದು ಎನ್ನುವ ಪ್ರಶ್ನೆಯೊಂದಿಗೆ ಸಿಸಿಬಿ ವಿಚಾರಣೆಗೆ ರೆಡಿಯಾಗಿದೆ.

ಆರೆಸ್ಸೆಸ್‌ನ ಹಿರಿಯ ನಾಯಕ ಕಲ್ಲಡ್ಕ ಪ್ರಭಾಕರ ಭಟ್‌ ಜತೆ

ಗೋವಿಂದ ಪೂಜಾರಿ ಅವರು ಬಿಜೆಪಿಯ ಸ್ಥಳೀಯ ನಾಯಕರಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೆ ಉತ್ತಮ ಒಡನಾಟ ಹೊಂದಿದ್ದರು. ಈಗಾಗಲೇ ಪಕ್ಷದಲ್ಲಿ ಕೆಲಸ ಮಾಡಿದ್ದ ಅವರಿಗೆ ಮನಸು ಮಾಡಿದ್ದರೆ ದೊಡ್ಡ ನಾಯಕರನ್ನೇ ನೇರವಾಗಿ ಸಂಪರ್ಕಿಸುವ ವ್ಯವಸ್ಥೆಗಳು ಇದ್ದವು. ಯಾಕೆಂದರೆ ಅವರು ಸಂಘ ಪರಿವಾರ ಮತ್ತು ಬಿಜೆಪಿಯಲ್ಲಿ ದಾನಿಯಾಗಿ ಆಗಲೇ ಗುರುತಿಸಿಕೊಂಡಿದ್ದರು.

ಈಶ್ವರಪ್ಪ ಮತ್ತು ಪ್ರಲ್ಹಾದ್‌ ಜೋಶಿ ಜತೆ

ಇದನ್ನೂ ಓದಿ: Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ

ನನಗೆ ರಾಜಕೀಯ ಗೊತ್ತಿಲ್ಲ ಎನ್ನುವ ಗೋವಿಂದ ಪೂಜಾರಿ ಅವರಿಗೆ ಯಾರೊಂದಿಗೆಲ್ಲಾ ಸಂಪರ್ಕ ಇತ್ತು ಎನ್ನುವ ಪಟ್ಟಿ ನೋಡಿದರೆ ನೀವೇ ಬೆಚ್ಚಿಬೀಳುತ್ತೀರಿ.

ಹಿಂದೂ ಜಾಗರಣ ವೇದಿಕೆ ಹಿರಯ ನಾಯಕ ಜಗದೀಶ್‌ ಕಾರಂತ್‌ ಜತೆ

ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರಿಂದ ಹಿಡಿದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಮಾಜಿ ಸಚಿವ ಸುನೀಲ್ ಕುಮಾರ್, ಕೆ.ಎಸ್‌ ಈಶ್ವರಪ್ಪ ಅವರ ಪರಿಚಯ ಅವರಿಗಿತ್ತು.

ಬಿಜೆಪಿ ನಾಯಕರಾದ ಸುನಿಲ್‌ ಕುಮಾರ್‌, ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವೇದವ್ಯಾಸ ಕಾಮತ್‌, ಅರವಿಂದ ಲಿಂಬಾವಳಿ, ಬಿ.ವೈ ರಾಘವೇಂದ್ರ ಮತ್ತು ವಿನಯ್‌ ಗುರೂಜಿ ಜತೆ ಗೋವಿಂದ ಪೂಜಾರಿ

ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ಸಿ.ಟಿ.‌ರವಿ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಕಲ್ಲಡ್ಕ ಪ್ರಭಾಕರ್ ಭಟ್, ಶಾಸಕರಾದ ವೇದವ್ಯಾಸ್ ಕಾಮತ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ ಅವರ ಜತೆಗೆ ಸಂಪರ್ಕವಿತ್ತು. ವಿನಯ್ ಗುರೂಜಿ ಜೊತೆ ಗೋವಿಂದ ಬಾಬು ಪೂಜಾರಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ಗೋವಿಂದ ಪೂಜಾರಿ ಅವರು ತಮ್ಮ ಪರಮಾಪ್ತರು ಎಂದು ಹೇಳಿಕೊಂಡಿದ್ದಾರೆ. ಗೋವಿಂದ ಪೂಜಾರಿ ಅವರು ತಮ್ಮ ದೂರಿನ ಪ್ರತಿಯನ್ನು ಮೊದಲು ಓದಲು ಕೊಟ್ಟಿದ್ದೇ ಚಕ್ರವರ್ತಿ ಸೂಲಿಬೆಲೆಯವರಿಗೆ. ಹಾಗಿದ್ದರೂ ಅವರನ್ನೆಲ್ಲ ಬಿಟ್ಟು ಚೈತ್ರಾಳ ಮೇಲೆ ನಂಬಿಕೆ ಇಟ್ಟಿದ್ದು ಯಾಕೆ ಎನ್ನುವುದು ಸಿಸಿಬಿಯ ತನಿಖೆಯ ಮೂಲ.

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಜತೆ ಆತ್ಮೀಯತೆ

ಇದನ್ನೂ ಓದಿ : Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

ಇಷ್ಟೆಲ್ಲ ಹೈಲೆವೆಲ್ ಕಾಂಟ್ಯಾಕ್ಟ್ ಇದ್ರೂ ಗೋವಿಂದ ಬಾಬು ಪೂಜಾರಿ ಹಿಂದೆ ಬೀಳುವ ಅವಶ್ಯಕತೆ ಏನಿತ್ತು? ಸದ್ಯ ತನಿಖೆ ವೇಳೆ ಗೋವಿಂದ ಬಾಬು ಪೂಜಾರಿ ಅವರು ಚೈತ್ರಾ ತನಗೆ ಮೋಸ ಮಾಡಿದ್ದಾಳೆ ಎಂದು ಎಲ್ಲಾ ದಾಖಲೆ ಒದಗಿಸಿದ್ದಾರೆ. ಸಲ್ಲಿಸಿರುವ ಎಲ್ಲಾ ದಾಖಲೆಗಳು ಚೈತ್ರ ಅಂಡ್ ಗ್ಯಾಂಗ್ ವಿರುದ್ಧವೇ ಇದೆ. ಆದರೆ, ಈಗ ಮೂಡುವ ಇನ್ನೊಂದು ಅನುಮಾನ ಎಂದರೆ ಚೈತ್ರ ಕುಂದಾಪುರ ಪಾಪ್ಯುಲರಿಟಿಗೆ ಬ್ರೇಕ್ ಹಾಕಲು ಯಾರದೋ ಪ್ಲ್ಯಾನ್‌ ಮೂಲಕ ಟ್ರ್ಯಾಪ್‌ ಮಾಡಿದರೇ ಎನ್ನುವ ಅನುಮಾನವೂ ಸಹ ಇದೆ.

Exit mobile version