ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ತಮ್ಮ ಮೇಲೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ನಿರಾಕರಣೆ ಮಾಡಿದ್ದಾರೆ. ಪೆನ್‌ಡ್ರೈವ್ ಹೊರಬಿಡುವಂತಹ ಚಿಲ್ಲರೆ ಕೆಲಸವನ್ನು ನಾನಂತೂ ಮಾಡಲ್ಲ. ಚುನಾವಣೆಯಲ್ಲಿ ಫೇಸ್ ಮಾಡುತ್ತೇನೆ. ನಾನು ಪೆನ್ ಡ್ರೈವ್ ಇದೆ ಎಂದು ಹೆಸರಿಸುವುದಿಲ್ಲ. ಅಸೆಂಬ್ಲಿಗೆ ಬನ್ನಿ ಎಂದು ಕರೆದಿದ್ದೇನೆ ಎಂದು ಸವಾಲು ಹಾಕಿದರು.
ಬೆಂಗಳೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾವು ನಮ್ಮ ಪೊಲಿಟಿಕಲ್ ಟೂರ್ ಬಗ್ಗೆ ಮೀಟಿಂಗ್ ಮಾಡಿದ್ದೇವೆ. ಯಾರು ಎಲ್ಲಿ ಪ್ರಚಾರ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಮತ್ತೊಮ್ಮೆ ಆಗಮಿಸಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಎಲ್ಲಿ ಭಾಗಿಯಾಗಬೇಕು, ನಾನು ಎಲ್ಲಿ ಭಾಗಿಯಾಗಬೇಕು ಎಂದು ಚರ್ಚೆ ಮಾಡಿದ್ದೇವೆಯೇ ವಿನಃ ಪೆನ್ ಡ್ರೈವ್ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ನೆನಸಿಕೊಳ್ಳದೆ ಸ್ಫೂರ್ತಿ ಇರಲ್ಲ. ಕುಮಾರಸ್ವಾಮಿ ಅವರ ಭಾಷಣ ಕೇಳಿದ್ದೇನೆ. ಪ್ರಜ್ವಲ್‌ನನ್ನು ನನ್ನ ಮಗ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಅವರ ಕುಟುಂಬದ ಕುಡಿ. ನೂಲಿನಂತೆ ಸೀರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಹಳೆ ವಿಡಿಯೋ ಎಂದು ಪ್ರಜ್ವಲ್ ತಂದೆ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಅಂದರೆ ಅವರು ಒಪ್ಪಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ಸಂಬಂಧ ದೇವರಾಜೇಗೌಡ ಅಮಿತ್ ಶಾಗೆ ಪತ್ರ ಬರೆದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
10 ದಿನದ ಮುಂಚೆ ದೂರು ಕೊಡಬೇಕಿತ್ತು
ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಉಡುಪಿಯಲ್ಲಿ ಪೋಟೊ ಹಿಡಿದು ಅಂತಾರಾಷ್ಟ್ರೀಯ ಮಹಿಳಾ ಆಯೋಗ ಕಳುಹಿಸಿದರು. ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಅವರ ಕುಟುಂಬದವರು ಹೌದೋ ಇಲ್ಲವೋ ನೀವು ಹೇಳಬೇಕು. ವಾರ ಹತ್ತು ದಿನದ ಮುಂಚೆ ದೂರು ಕೊಟ್ಟಿದ್ದರೆ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಬಳಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಮಿತ್ ಶಾ ಅವರು ಮೈಸೂರಿಗೆ ಬಂದಾಗ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಹೇಳಿದ್ದರು. ಆದರೆ, ಕೊನೆಗೆ ಏಕೆ ಕೊಟ್ಟರು? ಅಮಿತ್ ಶಾ ಬೇಡವನ್ನೆಲು ಏನು ಕಾರಣ? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ಎಚ್‌ಡಿಕೆ ವಿರುದ್ಧ ಏಕವಚನ ಪ್ರಯೋಗ
ಪಕ್ಷದಿಂದ ವಜಾ ಮಾಡಲಿ, ಒಳಗೆ ಇಟ್ಟುಕೊಳ್ಳಲಿ. ಅದೆಲ್ಲ ಕಣ್ಣು ಒರೆಸುವ ನಾಟಕ. ಈ ಅಮಾನತಿನ ಬಗ್ಗೆ ರಾಜಕಾರಣದಲ್ಲಿ ನನಗೂ ಗೊತ್ತಿದೆ. ನನ್ನ ವಿರುದ್ಧ ಮೊದಲು ಪ್ರತಿಭಟನೆ ಮಾಡಲಿ. ಕುಮಾರಸ್ವಾಮಿ ಯಾವ ಕರೆ ಕೊಡುತ್ತೀಯೋ ಕೊಡು. ಕರೆ ಕೊಡಬೇಕು ನೀನು. ನೀನು ಕೊಡಲಿ ಅಂತನೇ ಹೇಳುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಎಚ್.ಡಿ. ಎಂದರೆ ಏನು? ಕುಟಂಬ ಅಲ್ಲವೆಂದರೆ ಹೇಗೆ?
ಈಗ ಪ್ರಜ್ವಲ್ ರೇವಣ್ಣ ಅವರು ತಮ್ಮ ಕುಟುಂಬ ಅಲ್ಲ ಅಂತ ಹೇಳಿದರೆ ಹೇಗೆ ಒಪ್ಪಲು ಆಗುತ್ತದೆ? ಎಚ್.ಡಿ. ಎಂದರೆ ಏನು? ಎಚ್ ಡಿ ರೇವಣ್ಣ ಎಂದರೆ ಹೊಳೆನರಸೀಪುರ ದೇವೇಗೌಡರ ಮಗ ಎಂದಲ್ಲವೇ? ಎಚ್.ಡಿ. ಕುಮಾರಸ್ವಾಮಿ ಅಂದರೂ ಹಾಗೇ ಎಂದು ಡಿಕೆಶಿ ಹೇಳಿದರು.
ಭಗವಂತ ಇದನ್ನು ಕ್ಷಮಿಸಲ್ಲ
ಮಹಿಳೆಯರಿಗೆ ರಕ್ಷಣೆ ಕೊಡಬೇಕು. ಮರ್ಯಾದೆ ಹೋಗುತ್ತದೆ. ಇವರ ಚಟಕ್ಕೆ ವಿಡಿಯೊ ಮಾಡಿಕೊಂಡು ಪದೇ ಪದೆ ಬರಬೇಕು ಎಂದು ಪೀಡಿಸುತ್ತಾರೆ. ಭಗವಂತ ಇದನ್ನು ಕ್ಷಮಿಸಲ್ಲ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಯಾರು ಜತೆಗೆ ಇದ್ದರು? ಯಾರು ಯಾರಿಗೆ ಕರೆ ಮಾಡಿದರು ಎಂದು ಅವರನ್ನೇ ಕೇಳಿ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Hassan Pen Drive Case: ಲೈಂಗಿಕ ದೌರ್ಜನ್ಯ ಕೇಸ್; ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು
ಬಿಜೆಪಿಯವರ ಸ್ಟ್ಯಾಂಡ್ ಹೇಳಲಿ
ಈ ವಿಚಾರದಲ್ಲಿ ಬಿಜೆಪಿಯವರ ಸ್ಟ್ಯಾಂಡ್ ಹೇಳಬೇಕು. ಪ್ರಲ್ಹಾದ್ ಜೋಶಿ, ಸುನೀಲ್ ಕುಮಾರ್, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಯಾಕೆ ಮಾತನಾಡುತ್ತಿಲ್ಲ. ಅವರ ಪಾರ್ಟಿಯವರು ನೋಡಿಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳುತ್ತಾರೆ. ಅಶೋಕ್ ಬೆನ್ನು ಮೂಳೆ ಇಲ್ಲದ ನಾಯಕ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಬಿಜೆಪಿಯವರು ಸ್ವಲ್ಪ ಪ್ರಾಬ್ಲಮ್ ಇದೆ ಎಂದು ಹೇಳಿದ್ದರು ಬ್ರದರ್. ಐ ವಿಲ್ ಟೇಕ್ ಕೇರ್ ಎಂದು ದೊಡ್ಡವರು ಹೇಳಿದ್ದಾರೆ ಬ್ರದರ್ ಎಂಬುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಶೈಲಿಯಲ್ಲೇ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.