ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ವಕೀಲ ದೇವರಾಜೇಗೌಡ ಸ್ಪಷ್ಟೀಕರಣ ನೀಡಿದ್ದಾರೆ. ವಿಡಿಯೊ ಲೀಕ್ ವಿಷಯವಾಗಿ ತಮ್ಮ ಮೇಲೆ ಬಂದ ಆರೋಪವನ್ನು ಅಲ್ಲಗಳೆದಿದ್ದಾರೆ. ಆದರೆ, ಅಶ್ಲೀಲ ವಿಡಿಯೊಗಳು ಕಾರ್ತಿಕ್ ಕೈಗೆ ಹೇಗೆ ಬಂತು? ಡೌನ್‌ಲೋಡ್ ಮಾಡಿದವರು ಯಾರು? ಪೆನ್ ಡ್ರೈವ್ ಎಲ್ಲಿಂದ ಬಂತು? ಎಂಬ ಪ್ರಶ್ನೆಯನ್ನಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲ ದೇವರಾಜೇಗೌಡ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ದೇಶಾದ್ಯಂತ ದೊಡ್ಡ ಸಂಚಲನ ಉಂಟು ಮಾಡುತ್ತಿದೆ. ಕಾರ್ತಿಕ್ 14-15 ವರ್ಷದಿಂದ ಪ್ರಜ್ವಲ್ ಹತ್ತಿರ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಅಶ್ಲೀಲ ವಿಡಿಯೊಗೆ ಸಂಬಂಧಿಸಿದಂತೆ ಸ್ಟೇ ಕೂಡ ತೆಗೆದುಕೊಂಡಿದ್ದಾರೆ. ತನ್ನ ಹೆಂಡತಿಯನ್ನು ಪ್ರಜ್ವಲ್ ಕಿಡ್ನಾಪ್ ಮಾಡಿ ಹಿಂಸೆ ಕೊಟ್ಟಿದ್ದ ಎಂದು ಸಹ ಕಾರ್ತಿಕ್ ಹೇಳಿಕೊಂಡಿದ್ದ. ಕಾಂಗ್ರೆಸ್‌ನವರ ಹತ್ತಿರ ಹೋಗಿದ್ದೆ. ನ್ಯಾಯ ಸಿಗಲಿಲ್ಲ ಅಂತಾ ಹೇಳಿದ್ದ. ನಾನು ವಕೀಲನಾಗಿ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಕ್ಕೆ ಪೆನ್ ಡ್ರೈವ್ ಕೊಟ್ಟಿದ್ದ. ನಾನು ಯಾರಿಗೂ ಇದನ್ನು ಕೊಡಲ್ಲ, ಕೋರ್ಟ್‌ನಲ್ಲಿ ಜಡ್ಜ್ ಮುಂದೆ ಕೊಡುತ್ತೇನೆ ಎಂದು ಹೇಳಿದ್ದೆ ಎಂದು ಸ್ಪಷ್ಟೀಕರಣ ನೀಡಿದರು.
ಆದರೆ, ಅಶ್ಲೀಲ ವಿಡಿಯೊ ಕಾರ್ತಿಕ್ ಕೈಗೆ ಹೇಗೆ ಬಂತು? ಡೌನ್‌ಲೋಡ್ ಮಾಡಿದವರು ಯಾರು? ಪೆನ್ ಡ್ರೈವ್ ಎಲ್ಲಿಂದ ಬಂತು? ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಇದ್ದ ವಿಡಿಯೊಗಳು ಕಾರ್ತಿಕ್‌ಗೆ ಸಿಕ್ಕಿದ್ದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ ದೇವರಾಜೇಗೌಡ, ದೃಶ್ಯ ಮತ್ತು ಪ್ರಿಂಟ್ ಮೀಡಿಯಾ ಮೇಲೆ ಇಂಜೆಕ್ಷನ್ ತಂದರು. ಆದರೆ, ಕಾರ್ತಿಕ್‌ನನ್ನು ಅಲ್ಲಿ ಪಾರ್ಟಿ ಮಾಡಿಲ್ಲ ಎಂದು ಹೇಳಿದರು.
ಕಾರ್ತಿಕ್ ಹೇಳಿದ್ದೆಲ್ಲವೂ ಸತ್ಯ, ಆದರೆ..!
ವಿಡಿಯೊವನ್ನು ಬಿಜೆಪಿಯವರು ಯಾಕೆ ಲೀಕ್ ಮಾಡುತ್ತಾರೆ? ಇನ್ನು ಜೆಡಿಎಸ್‌ನವರು ಅವರದ್ದನ್ನು ಲೀಕ್ ಮಾಡ್ತಾರಾ? ಇದರಿಂದ ಕಾಂಗ್ರೆಸ್‌ನವರಿಗೆ ಲಾಭ. ಕಾರ್ತಿಕ್ ಮೊದಲೇ ಹೇಳಿದ್ದ ಕಾಂಗ್ರೆಸ್‌ನಿಂದ ನ್ಯಾಯ ಸಿಕ್ಕಿಲ್ಲ ಅಂದಿದ್ದ. ಕಾರ್ತಿಕ್ ಹೇಳಿದ್ದು ಎಲ್ಲವೂ ಸತ್ಯ. ಆದರೆ, ನಾನು ಲೀಕ್ ಮಾಡಿರಬಹುದು ಎಂದು ಹೇಳಿದ್ದೊಂದು ಬಿಟ್ಟು ಎಂದು ದೇವರಾಜೇಗೌಡ ಹೇಳಿದರು.
ಇದು ನಮ್ಮ ಜಿಲ್ಲೆ, ರಾಜ್ಯದ ಹೆಣ್ಣು ಮಕ್ಕಳ ಮಾನ ಗೌರವದ ಪ್ರಶ್ನೆ. ಅವರ ಗೌರವಕ್ಕೆ ನಾನು ಧಕ್ಕೆ ತರಲ್ಲ. ಎಸ್ಐಟಿ ನನಗೆ ನೋಟಿಸ್ ಕೊಡಲಿ ಅಂತಾ ಕಾಯ್ತಾ ಇದ್ದೇನೆ. ನನ್ನ ಬಳಿ ಕೆಲವು ದಾಖಲೆಗಳು ಇವೆ ಕೊಡುತ್ತೇನೆ. ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಲಿ. ಇಲ್ಲದೇ ಇದ್ದರೆ ಹೈಕೋರ್ಟ್‌ನಲ್ಲಿ ರಿಟ್ ಹಾಕುತ್ತೇನೆ. ಸಿಬಿಐಗೆ ವಹಿಸಬೇಕು ಅಂತಾ ಕೊರುತ್ತೇನೆ ಎಂದು ದೇವರಾಜೇಗೌಡ ಹೇಳಿದರು.
ಇದನ್ನೂ ಓದಿ: Hassan Pen Drive Case: ನಾನು ವಿಡಿಯೊ ಕೊಟ್ಟಿದ್ದು ದೇವರಾಜೇಗೌಡರಿಗೆ ಮಾತ್ರ; ಅವರೇ ಲೀಕ್ ಮಾಡಿರಬೇಕು ಎಂದ ಕಾರ್ತಿಕ್!
ಕಾರ್ತಿಕ್ ವಿಡಿಯೊವನ್ನು ಎಲ್‌ಇಡಿ ವಾಲ್‌ನಲ್ಲಿ ಹಾಕುತ್ತಿದ್ದನಂತೆ!
ಸ್ಟೇ ವೆಕೇಟ್ ಆದಲ್ಲಿ, ವಿಡಿಯೊದಲ್ಲಿರುವ ಹೆಣ್ಣು ಮಕ್ಕಳು ಅನುಮತಿ ಕೊಟ್ಟರೆ ಎಲ್ಇಡಿ ವಾಲ್ ಹಾಕಿ ವಿಡಿಯೊ ಪ್ಲೇ ಮಾಡುತ್ತೇನೆ ಎಂದು ಕಾರ್ತಿಕ್ ಹೇಳಿದ್ದ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೇಯಸ್ ಜತೆ ಇದೇ ಕಾರ್ತಿಕ್ ಇದ್ದ. ಹಲವು ಹಳ್ಳಿಗಳಲ್ಲಿ ಕಾರ್ಯಕ್ರಮ ಮಾಡಿದ್ದ. ಈ ವಿಡಿಯೊವನ್ನು ನಾನು ಚುನಾವಣೆ ವೇಳೆ ಬಿಡುಗಡೆ ಮಾಡಿದ್ದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ನಾನು ಗೆಲ್ಲುತ್ತಿದ್ದೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್.ಡಿ. ರೇವಣ್ಣ ಸೋಲುತ್ತಿದ್ದರು. ಆದರೆ, ನಾನು ಆ ನೀಚ ಕೆಲಸ ಮಾಡಲಿಲ್ಲ. ನನ್ನದು ನ್ಯಾಯಯುತ ಹೋರಾಟವಾಗಿದೆ. ಆದರೆ, ಲೋಕಸಭೆ ಚುನಾವಣೆ ಹೊತ್ತಲ್ಲಿ ರಿಲೀಸ್ ಆಗಿದೆ. ಅದನ್ನು ದೇವರಾಜೇಗೌಡ ಮಾಡಿದ್ದಾನೆ ಎಂದು ಹೇಳುತ್ತಾರೆ. ನಾನು ಲೀಕ್ ಮಾಡಿದ್ದಲ್ಲ, ಬೇರೆಯವರಿಗೆ ಈ ವಿಡಿಯೊವನ್ನು ನೋಡುವುದಕ್ಕೂ ನಾನು ಕೊಟ್ಟಿಲ್ಲ ಎಂದು ದೇವರಾಜೇಗೌಡ ಸ್ಪಷ್ಟನೆ ನೀಡಿದರು.