ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ದಲಿತ ಸಿಎಂ (Dalit CM) ಕೂಗೆದ್ದಿದೆ. ಮತ ನಾವು ಹಾಕಬೇಕು, ನಾಯಕರಾಗೋರು ಇನ್ಯಾರೋ ಎಂದು ಆಕ್ರೋಶ ಹೊರಹಾಕುವ ಮೂಲಕ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ. ಮಹದೇವಪ್ಪ (Dr HC Mahadevappa) ಅವರು ಹಕ್ಕೊತ್ತಾಯ ಮಂಡನೆ ಮಾಡಿದ್ದಾರೆ. ಇದು ನಿಜವಾಗಿಯೂ ಅವರ ಬೇಡಿಕೆಯೋ ರಾಜ್ಯ ರಾಜಕಾರಣದಲ್ಲಿ (Congress Politics) ನಡೆಬಹುದಾದ ಸಿಎಂ ಬದಲಾವಣೆ (CM Change Discussion) ಚರ್ಚೆಗೆ ತಿರುವು ನೀಡಲು ಮಾಡಿದ ಪ್ರಯತ್ನವೇ ಎನ್ನುವ ಸಂಶಯವೂ ಇದೆ.
ಹಾಗಿದ್ದರೆ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದೇನು?
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಎಸ್‌ಸಿ,ಎಸ್ಟಿ ಸಮಾವೇಶದಲ್ಲಿ ಮಾತನಾಡಿದ ಎಚ್.ಸಿ. ಮಹದೇವಪ್ಪ ಅವರು ಇದುವರೆಗೂ ರಾಜ್ಯ ದಲಿತ ಮುಖ್ಯಮಂತ್ರಿಯನ್ನು ಕಂಡಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ದಲಿತರು ಒಗ್ಗಟಾಗಿ ಒಂದು ಪಕ್ಷಕ್ಕೆ ಮತ ನೀಡಿದ ಬಳಿಕವೂ ಪುನಃ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿ ನಮ್ಮದಾಗಿದೆ. ಮತ ನಮ್ಮದಿದೆ. ಲೀಡರ್‌ಷಿಪ್ ಇನ್ಯಾರ ಬಳಿಯೋ ಇದೆ ಎಂದು ಹೇಳಿದ ಅವರು, ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ ಎಂದು ಹೇಳಿಕೊಂಡರು.
ಡಾ.ಜಿ ಪರಮೇಶ್ವರ್, ಖರ್ಗೆ ಅವರಾಗಲಿ, ನಾನಾಗಲಿ ನೀತಿ ರೂಪಿಸುವ ಜಾಗದಲ್ಲಿಲ್ಲ. ನಾವು ಸಿಎಂ ಆಗಲಿಲ್ಲ, ಅಂಬೇಡ್ಕರ್ ಬಳಿಕ ಮತ್ತೊಬ್ಬ ದಲಿತ ನಾಯಕ ಸಿಗಲೇ ಇಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ ಎಂದು ಕೊರಗು ತೋಡಿಕೊಂಡರು.
ಅಂಬೇಡ್ಕರ್ ಹೋದ ಮೇಲೆ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ದಲಿತ ನಾಯಕರಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರು ಇದ್ದರೂ ಸಿಎಂ ಆಗುವ ಅವಕಾಶ ಸಿಗಲಿಲ್ಲ. ಇದು ಇವತ್ತಿನ ರಾಜ್ಯದ ದೇಶದ ರಾಜಕೀಯ ಸನ್ನಿವೇಶ ಎಂದು ಎಚ್. ಸಿ ಮಹಾದೇವಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ರಾಚಯ್ಯ ಸಿಎಂ ಆಗಲಿ ಎಂದು ಯಾರೂ ಹೇಳಲಿಲ್ಲ
1985ರಲ್ಲಿ ಜನತಾ ಪಕ್ಷದಲ್ಲಿ 27 ಜನ ದಲಿತ ಶಾಸಕರು ಇದ್ದರು. ಬಿ ರಾಚಯ್ಯನವರು ಮುಖ್ಯಮಂತ್ರಿ ಆಗಬೇಕು ಅಂತ ಎದ್ದು ಹೇಳಿದವನು ನಾನೊಬ್ಬನೇ ಶಾಸಕ. ಉಳಿದ 26 ಜನ ದಲಿತ ಶಾಸಕರು ತಲೆ ಮೇಲೆ ಸೆರಗು ಹಾಕಿಕೊಂಡು ಕೂತಿದ್ರು. ಕೊನೇ ಪಕ್ಷ 26 ಜನಾನೂ ಎದ್ದಿದ್ದರೆ ನಾಯಕತ್ವ ರಕ್ಷಣೆ ಮಾಡಬಹುದಿತ್ತು. ಆಗ ದೇವೇಗೌಡರು, ನಾನೇನಪ್ಪ ಮಾಡಲಿ, ಮಹದೇವಪ್ಪ ಬಿಟ್ಟರೆ ಯಾರೂ ಮತ್ತೊಬ್ಬರು ಹೇಳಲೇ ಇಲ್ಲ ಅಂದ್ರು. ಇದು ನಮ್ಮ ಹಣೆಬರಹ ಎಂದು ಅಸಮಾಧಾನ ಹೊರಹಾಕಿದರು ಸಚಿವ ಮಹದೇವಪ್ಪ.
ಮೀಸಲಾತಿಗೆ ಸಂತೋಷಪಡಬೇಡಿ, ಪಾಲಿಸಿ ಮೇಕಿಂಗ್ ನಿಮ್ಮದಾಗಿರಬೇಕು
ಕೇವಲ ಮೀಸಲಾತಿಯಿಂದ ಸಂತೋಷಪಡಬೇಡಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ನನ್ನ ಜನರು ಅಧಿಕಾರದಲ್ಲಿ ಇರಬೇಕು, ಪಾಲಿಸಿ ಮೇಕಿಂಗ್ ಚೇರ್‌ನಲ್ಲಿ ಇರಬೇಕು ಅಂತ ಹೇಳಿದ್ದಾರೆ. ಅದಕ್ಕೆ ನಮ್ಮ ಜನರು ಒಗ್ಗಟ್ಟಾಗಬೇಕು ಅಂತ ಹೇಳಿದ್ದು ಎಂದು ಮಹದೇವಪ್ಪ ವಿವರಿಸಿದರು.
ಬೇರೆಯವರು ಮತ ಹಾಕ್ತಾರೆ. ಆಯಾ ಜಾತಿಯ ನಾಯಕನ ಹಿಂದೆ ಹೋಗ್ತಾರೆ. ನೀವು ಮತ ಹಾಕಿ ಸುಮ್ಮನಾಗಿ ಬಿಡ್ತೀರಾ.. ನಾವು ಮತ ಹಾಕಿ ಬೇರೆಯವರ ಮುಂದೆ ಕೈಜೊಡಿಸುತ್ತೇವೆ. ನಮ್ಮಿಂದ ಮತ ಪಡೆದವರು ನಮ್ಮ ಮೇಲೆ ಆಡಳಿತ ಮಾಡ್ತಾರೆ. ಅದಕ್ಕಾಗಿ ಒಗ್ಗಟ್ಟಾಗಿ ಅಂತ ಹೇಳಿದ್ದು ಎಂದು ಮಹದೇವಪ್ಪ ಹೇಳಿದರು.
ನಾನು ಕಾಂಗ್ರೆಸ್ ಬಗ್ಗೆ ಹೇಳಿದ್ದಲ್ಲ ಎಂದ ಮಹದೇವಪ್ಪ
ʻʻಬಹುಜನ ಸಮಾಜ ಒಂದಾಗಿದೆ. ನಿಮಗೆ ಕಣ್ಣು ಕಾಣಲ್ವಾ..? ಬಹುನರು ಒಂದಾಗಿದ್ದಕ್ಕೇ ಕಾಂಗ್ರೆಸ್ ಗೆಲ್ತಾ ಇರೋದುʼʼ ಎಂದು ಹೇಳಿದ ಅವರಿಗೆ ತಾವು ಮಾತನಾಡಿದ್ದು ವಿವಾದ ಆಗಬಹುದು ಎಂಬ ವಾಸನೆ ಬಡಿಯುತ್ತಿದ್ದಂತೆಯೇ ಬೇರೆ ಕಡೆಗೆ ತಿರುಗಿದರು.
ನಾನು ಸಮುದಾಯಗಳ ಬಗ್ಗೆ ಮಾತನಾಡಿದ್ದೇನೆ. ಪಕ್ಷಗಳ ಬಗ್ಗೆ ಹೇಳಿಕೆ ನೀಡಿಲ್ಲ. ನೀವು ವಿಷಯವನ್ನು ಕಾಂಪ್ಲಿಕೇಟ್ ಮಾಡಬೇಡಿ ಎಂದು ಹೇಳಿದರು ಮಹದೇವಪ್ಪ. ಕಾಂಗ್ರೆಸ್ ಹಲವಾರು ದಲಿತ ನಾಯಕರಿಗೆ ಸಿಎಂ ಸ್ಥಾನ ನೀಡಿದೆ. ಬೇರೆ ಪಾರ್ಟಿ ಕೂಡಾ ಸಿಎಂ ಮಾಡಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಮಾತ್ರ ನಾಲ್ಕಾರು ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿರೋದು, ಬೇರೆ ಯಾರು ಮಾಡಿದ್ದಾರೆ ಅಂತ ತೋರಿಸಿ ಎಂದರು.
ಕಾಂಗ್ರೆಸ್ ಯಾವ ಸಮುದಾಯವನ್ನೂ ನಿರ್ಲಕ್ಷಿಸಿಲ್ಲ ಎಂದ ಖಂಡ್ರೆ
ಈ ನಡುವೆ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ದಲಿತ ಸಿಎಂ ಬೇಡಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ನಮ್ಮ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ಕರ್ನಾಟಕದ ಕಾಂಗ್ರೆಸ್ ಗೆ ಅವರೇ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡ್ತಿದ್ದೇವೆ. ಕಾಂಗ್ರೆಸ್ ಯಾವ ಸಮುದಾಯವನ್ನೂ ನಿರ್ಲಕ್ಷ್ಯ ಮಾಡಿಲ್ಲ. ಎಲ್ಲ ಸಮುದಾಯಗಳಿಗೂ ಅವಕಾಶ ನೀಡಿದೆ ಎಂದರು.
ನಿಜವಾಗಿ ನಡೆಯುತ್ತಿರುವುದೇನು?
ನಿಜವೆಂದರೆ ಎಚ್.ಸಿ. ಮಹದೇವಪ್ಪ ಅವರ ದಲಿತ ಸಿಎಂ ಪ್ರಸ್ತಾಪದ ಹಿಂದೆ ಕಾಂಗ್ರೆಸ್‌ನ ರಾಜಕಾರಣವಿದೆ ಎಂದು ಹೇಳಲಾಗಿದೆ.
ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳಿದ ಬೆನ್ನಲ್ಲೇ ಹಿರಿಯ ಸಚಿವ ಮಹಾದೇವಪ್ಪ ಅವರಿಂದ ದಲಿತ ಸಿಎಂ ಪ್ರಸ್ತಾಪ ಬಂದಿರುವುದು ಚರ್ಚೆಗೆ ಕಾರಣವಾಗಿದೆ.
ಉಪಮುಖ್ಯಮಂತ್ರಿಯಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಇ.ಡಿ ಕ್ಲಿನ್ ಚಿಟ್ ಕೊಟ್ಟ ಬೆನ್ನಲ್ಲೇ ದಲಿತ ಸಿಎಂ ಕೂಗು ಹುಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ನನ್ನ ರಾಜಕೀಯದ ಮತ್ತೊಂದು ಹಂತಕ್ಕೆ ಹೋಗಲು ಅನುಕೂಲ ಅಂದಿದ್ದರು ಡಿ.ಕೆ ಶಿವಕುಮಾರ್.
ಅತ್ತ ಡಿಕೆಶಿ ಬಣದಲ್ಲಿ ಎರಡುವರೆ ವರ್ಷಗಳ ಬಳಿಕ ಡಿಕೆ ಸಾಬ್ ಸಿಎಂ ಅಂತಿದ್ದಾರೆ. ಅದರ ನಡುವೆ ದಲಿತ ಸಿಎಂ ಕೂಗು ಎದ್ದಿರುವುದು ಡಿಕೆಶಿ ಅವರನ್ನು ಸಿಎಂ ಆಗದಂತೆ ತಡೆಯಲು ಸೃಷ್ಟಿಸಿರುವ ಗೊಂದಲ ಎಂಬ ಮಾತೂ ಇದೆ.