Site icon Vistara News

HD Devegowda : ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಕೆಟ್ಟ ರಾಜಕೀಯ ಆಟ ನಡೆಯಲ್ಲ; ಗುಡುಗಿದ ಎಚ್.ಡಿ. ದೇವೇಗೌಡ

JDS Conclave at bidadi

ರಾಮನಗರ/ಬೆಂಗಳೂರು: ಜೆಡಿಎಸ್ ಪಕ್ಷವನ್ನು (JDS Party) ಶೂನ್ಯ ಮಾಡಿಬಿಡುತ್ತೇನೆ. ಅಲ್ಲಿ ಒಬ್ಬ ಸಮರ್ಥ ನಾಯಕನನ್ನು ಇರಲು ಬಿಡಲ್ಲ ಎಂದು ಹೇಳಿರುವ ಮಿಸ್ಟರ್ ಡಿ.ಕೆ. ಶಿವಕುಮಾರ್ (DK Shivakumar), ನಿಮ್ಮ ಕನಸು ಈಡೇರುವುದಿಲ್ಲ. ಡಿಕೆ ಶಿವಕುಮಾರ್‌ ಅವರೇ, ನಿಮ್ಮ ಕೆಟ್ಟ ರಾಜಕೀಯ ಆಟ (Political Game) ನನ್ನ ಬಳಿ ನಡೆಯಲ್ಲ. ಅದು ನಿಮಗೆ ಗೊತ್ತಿರಲಿ, ನಮ್ಮ ಪಕ್ಷವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ (HD Devegowda) ಗುಡುಗಿದ್ದಾರೆ.

ಬಿಡದಿಯ ಕೇತಿಗಾನಹಳ್ಳಿಯ ಎಚ್.ಡಿ. ಕುಮಾರಸ್ವಾಮಿ ಅವರ ತೋಟದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಡಿ. ದೇವೇಗೌಡ, ತಮ್ಮ ಮಾತಿನುದ್ದಕ್ಕೂ ಪಕ್ಷವನ್ನು ದುರ್ಬಲಗೊಳಿಸಲು ಕುತಂತ್ರ ರೂಪಿಸಿದ್ದಾಗಿ ಡಿ.ಕೆ. ಶಿವಕುಮಾರ್‌ ವಿರುದ್ಧ ಹರಿಹಾಯ್ದರು. ಆ ವ್ಯಕ್ತಿಗೆ ಉತ್ತರ ಕೊಡಬೇಕು, ಕೊಡುವ ಕೆಲಸ ಮಾಡುತ್ತೇವೆ. ಇವತ್ತು ಕುಮಾರಸ್ವಾಮಿ ಅವರು ಗಟ್ಟಿಯಾದ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಹಾಗೆ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ ಎಂದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಭಾವುಕರಾದ ಎಚ್.ಡಿ. ದೇವೇಗೌಡ

ಈ ಸಭೆ ಬಹಳ ಚೆನ್ನಾಗಿ ನಡೆದಿದೆ. ಕುಮಾರಸ್ವಾಮಿ ಅವರಿಗೆ ಇವತ್ತು ಒಳ್ಳೆಯ ಸಂದೇಶ ನೀಡಿದ್ದಾರೆ. ಪಕ್ಷದ ಶಕ್ತಿ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ಸಭೆಗೆ ಬಂದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಭಾವುಕರಾಗಿ ಎಚ್.ಡಿ. ದೇವೇಗೌಡ ನುಡಿದರು.

ನಿಮ್ಮನ್ನು (ಕಾರ್ಯಕರ್ತರು) ನಂಬಿದ್ದೇನೆ. ಪಕ್ಷದ ಬೆಳೆವಣಿಗೆಗೆ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ರಾಜಕೀಯ ಬೆಳವಣಿಗೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದೆ. ಸುದೀರ್ಘ ಚರ್ಚೆ ನಡೆಸಿದ್ದೇನೆ. ಅವರ ಜತೆ ಮೈತ್ರಿ ಬಗ್ಗೆ ಚರ್ಚೆ ಮಾಡಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಕಾಂಗ್ರೆಸ್‌ನಿಂದ ಕೆಳಮಟ್ಟದ ರಾಜಕೀಯ

ಈ ರಾಜಕಾರಣ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಆದರೆ, ನಾನೆಂದೂ ಅದನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ. ಆದರೆ, ಕಾಂಗ್ರೆಸ್‌ನವರು ರಾಜಕೀಯವನ್ನು (Congress Politics) ಅದೆಷ್ಟು ಕನಿಷ್ಠ ಮಟ್ಟಕ್ಕೆ ಇಳಿಸಬೇಕೋ ಅಷ್ಟು ಮಾಡಿದ್ದಾರೆ. ಸಿದ್ಧಾಂತ ಎನ್ನುವುದು ಆ ಪಕ್ಷದಲ್ಲಿ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಮುಗಿದು ಹೋಯಿತು ಎಂದು ಎಚ್.ಡಿ. ದೇವೇಗೌಡ ಟೀಕಾಪ್ರಹಾರ ನಡೆಸಿದರು.

ರಾಜಕೀಯವಾಗಿ ನನ್ನ ಜತೆ ಇದ್ದ ಅನೇಕರು ಐಶ್ವರ್ಯ ಹುಡುಕಿಕೊಂಡು ಎಲ್ಲೆಲ್ಲೋ ಹೋದರು. ಬೇರೆ ಬೇರೆ ಪಕ್ಷಗಳಿಗೆ ಹೊರಟು ಹೋದರು. ನಾನು ಇಲ್ಲಿಯೇ ಇದ್ದೇನೆ. ನನಗೇನೂ ಬೇಸರ ಇಲ್ಲ. ಈ ಇಳಿ ವಯಸ್ಸಿನಲ್ಲಿಯೂ ಪಕ್ಷವನ್ನು ಕಟ್ಟುತ್ತಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ದೇಶ ಉಳಿಸುವ ನಾಯಕತ್ವ ಬೇಕು

ಈ ದೇಶ ಮುಂದೆ ಏನಾಗುತ್ತದೆಯೋ ಊಹೆ ಮಾಡಲಾಗಲ್ಲ. ಪಕ್ಕದಲ್ಲಿ ಪಾಕಿಸ್ತಾನ, ಚೀನಾ ಇದೆ. ದೂರದಲ್ಲಿ ಅಮೆರಿಕ, ರಷ್ಯಾ ಇದೆ. ಈ ದೇಶವನ್ನು ಉಳಿಸುವ ನಾಯಕತ್ವ ಬೇಕು ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಜೀವ ಲೆಕ್ಕಿಸದೆ ಕಾಶ್ಮೀರಕ್ಕೆ ಹೋದೆ

ದೆಹಲಿಯಲ್ಲಿ ಕಾಂಗ್ರೆಸ್‌ನವರು ಅನೇಕ ವರ್ಷ ಆಡಳಿತ ನಡೆಸಿದರು. ಒಮ್ಮೆಯೂ ಯಾವ ಪ್ರಧಾನಿಯೂ ಕಾಶ್ಮೀರದ ಕಡೆ ತಲೆ ಹಾಕಿ ಮಲಗಲಿಲ್ಲ. ಕೊನೆಗೆ ನಾನು ಹೋದೆ. ಅಧಿಕಾರಿಗಳು ಬೇಡವೇ ಬೇಡ ಎಂದರು. ಭಯೋತ್ಪಾದಕರು ಹೊಡೆದು ಹಾಕುತ್ತಾರೆ ಎಂದು ಎಷ್ಟೋ ಹೇಳಲು ಪ್ರಯತ್ನ ಮಾಡಿದರು. ಆದರೂ ನಾನು ಜೀವ ಲೆಕ್ಕಿಸದೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದೆ. ದೇಶದ ಹಿತಾಸಕ್ತಿ ನನಗೆ ಮುಖ್ಯವಾಗಿತ್ತು. ಆ ರಾಜ್ಯದಲ್ಲಿ ಚುನಾವಣೆ ನಡೆಸಿದೆ. 12 ವರ್ಷಗಳ ನಂತರ ಅಲ್ಲಿ ಚುನಾವಣೆ ನಡೆದು ಸರ್ಕಾರ ಅಧಿಕಾರಕ್ಕೆ ಬಂತು. ಲಂಡನ್‌ನಲ್ಲಿ ಇದ್ದ ಫಾರೂಖ್ ಅಬ್ದುಲ್ಲಾ ಅವರು ಬಂದು ಚುನಾವಣೆ ಗೆದ್ದು ಸಿಎಂ ಆದರು. ಇದು ನಾನು ಮಾಡಿದ ತಪ್ಪೇ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಶ್ನೆ ಮಾಡಿದರು.

ಎಚ್.ಡಿ. ದೇವೇಗೌಡ ಸವಾಲು

ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಎಷ್ಟು ಮಾಡಿದೆ? ನಾನು ಏನು ಮಾಡಿದ್ದೇನೆ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಸಿಗುತ್ತದೆ ಎಂದು ಎಚ್.ಡಿ. ದೇವೇಗೌಡ ಸವಾಲು ಹಾಕಿದರು.

ಪಕ್ಷವನ್ನು ಕಟ್ಟುತ್ತೇನೆ, ಈ ಜೀವ ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ, ಎಲ್ಲ ಕಡೆ ಹೋರಾಟ ಮಾಡುತ್ತೇನೆ. ನನ್ನ ಆರೋಗ್ಯವನ್ನು ಲೆಕ್ಕ ಮಾಡುವುದಿಲ್ಲ. ಉತ್ತರ ಕರ್ನಾಟಕದ ಜನತೆಗೆ ಒಳ್ಳೆಯದು ಮಾಡಿದ್ದೇನೆ. ಶಿವಶರಣರ ಕೈಲಿ ಅನ್ನ ಉಂಡಿದ್ದೇನೆ. ಆ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಎಚ್.ಡಿ. ದೇವೇಗೌಡ ಗದ್ಗದಿತರಾದರು.

ಇಬ್ರಾಹಿಂ ಬಗ್ಗೆ ಲಘುವಾಗಿ ಮಾತನಾಡಲ್ಲ

ಸಿ.ಎಂ. ಇಬ್ರಾಹಿಂ ಬಗ್ಗೆ ನಾನು ಲಘುವಾಗಿ ಮಾತನಾಡಲಿಲ್ಲ ಎನ್ನುತ್ತಲೇ, ಭದ್ರಾವತಿ ದಿನಗಳನ್ನು ನೆನಪು ಮಾಡಿಕೊಂಡ ಎಚ್.ಡಿ. ದೇವೇಗೌಡ, ಒಂದು ಸನ್ಮಾನಕ್ಕೆ ಎಂದು ಅಲ್ಲಿಗೆ ಹೋದೆ, ಅಲ್ಲಿ ನನಗೆ ಸನ್ಮಾನದ ಜತೆ ಇಬ್ರಾಹಿಂ ಅವರು ಸಿಕ್ಕಿದರು, ಕರೆದುಕೊಂಡು ಬಂದು ಯುವ ಜನತಾದಳ ಅಧ್ಯಕ್ಷರನ್ನಾಗಿ ಮಾಡಿದೆ. ಈ ಸಭೆಗೆ ಅವರನ್ನು ಕರೆ ತರಲು ತಿಪ್ಪೇಸ್ವಾಮಿ ಅವರು ಬಹಳ ಪ್ರಯತ್ನಪಟ್ಟರು ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024 : ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅಳಿಯ ಅಭ್ಯರ್ಥಿ?

ಒಳ್ಳೆಯ ದಿನಗಳು ಬರುತ್ತವೆ

ಜೀವನ ಪರ್ಯಂತ ಒಳ್ಳೆಯ ಬದುಕಿಗೆ ಗ್ಯಾರಂಟಿ ಕೊಡುತ್ತೇನೆ ಎಂದು ಹೇಳಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸಿದ್ದು ಬಹಳ ನೋವುಂಟು ಮಾಡಿದೆ. ಈ ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳಿಂದ ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಉತ್ತಮ ಬದುಕಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ನಾವು ನಿರಾಶೆ ಪಡಬೇಕಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

Exit mobile version