Site icon Vistara News

ವಿಜಯದಶಮಿ ಹೊತ್ತಿಗೆ BJPಗೆ ಪರ್ಯಾಯ ಶಕ್ತಿ: ದೇವೇಗೌಡರ ಜತೆ ತೆಲಂಗಾಣ ಸಿಎಂ ಮಾತುಕತೆ

Telengana CM Meeds HD Devegowda

ಬೆಂಗಳೂರು: ಮುಂಬರುವ ದಸರಾ-ವಿಜಯದಶಮಿ ಹೊತ್ತಿಗೆ ದೇಶದಲ್ಲಿ ಬಿಜೆಪಿಗೆ ಪರ್ಯಾಯವಾದ ರಾಜಕೀಯ ಶಕ್ತಿಯನ್ನು ರೂಪಿಸುವ ಬಗ್ಗೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡರ ಜತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್‌ ಗುರುವಾರ ಮಹತ್ವದ ಸಮಾಲೋಚನೆ ನಡೆಸಿದರು.

ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಕೆಸಿಆರ್, ಸುಮಾರು ಮೂರೂವರೆ ಗಂಟೆಗೂ ಹೆಚ್ಚುಕಾಲ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿದರು. ಸಭೆಯಲ್ಲಿ ದೇವೇಗೌಡರು, ಕೆಸಿಎಆರ್‌ ಅರೊಂದಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭಾಗಿಯಾಗಿದ್ದರು.

ಇದನ್ನೂ ಓದಿ | ಮತ್ತೆ ತೃತೀಯ ರಂಗ ಚರ್ಚೆ: ಇಂದು ದೇವೇಗೌಡರನ್ನು ಭೇಟಿಯಾಗಲಿರುವ KCR

ಕರ್ನಾಟಕದ ರಾಜಕೀಯದ ಜತೆಗೆ ರಾಷ್ಟ್ರ ರಾಜಕಾರಣದ ಸಮಗ್ರವಾಗಿ ಇಬ್ಬರೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ದೇವೇಗೌಡರ ಜತೆ ತೆಲಂಗಾಣ ಸಿಎಂ ಸುದೀರ್ಘ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

5 ಟ್ರಿಲಿಯನ್‌ ಡಾಲರ್‌ ಕನಿಷ್ಠ ಗುರಿ

ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವಶಕ್ತಿ ಇದ್ದರೂ, ದೇಶದಲ್ಲಿ ಹಲವು‌ ಸಂಪನ್ಮೂಲಗಳಿದ್ದರೂ ಇವತ್ತಿಗೂ ಹಲವು‌ ಸಮಸ್ಯೆಗಳ ಬಗ್ಗೆ ಚರ್ಚೆ, ಪರಿಹಾರ ದೊರಕುತ್ತಿಲ್ಲ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿ ಇದ್ದಾರೆ. ಭರವಸೆಗಳನ್ನು ಸಾಕಷ್ಟು ಕೊಡಬಹುದು. ಈ ದೇಶದಲ್ಲಿ ಅನೇಕ ಸರ್ಕಾರಗಳು ಬಂದುಹೋಗಿವೆ. ಆದರೆ ದೇಶ ಈ ಹಿಂದೆ ಎಲ್ಲಿತ್ತೋ ಅಲ್ಲಿಯೇ ಇದೆ. ನಮಗಿಂತ ಕೆಟ್ಟ ಸ್ಥಿತಿಯಲ್ಲಿದ್ದ ಚೀನಾ ಇಂದು 16 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಬೆಳೆದಿದೆ. ಆದರೆ ನಮಗೆ ಇಲ್ಲಿ ಕೇವಲ 5 ಟ್ರಿಲಿಯನ್‌ ಡಾಲರ್‌ ಕನಸನ್ನು ತೋರಿಸಲಾಗುತ್ತಿದೆ. ನಮ್ಮ ದೇಶದ ಸಾಮರ್ಥ್ಯ, ಮಾನವ ಸಂಪನ್ಮೂಲವನ್ನು ಪರಿಗಣಿಸಿದರೆ ಈ ಗುರಿ ಏನೇನೂ ಅಲ್ಲ. ಆದರೆ ಈ ಗುರಿ ಸಾಧಿಸಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ಎಲ್ಲಿ ಯುವಕರಿಗೆ ಉದ್ಯೋಗ ಕೊಟ್ಟಿದ್ದಾರೆ? ದೇಶದಲ್ಲಿ ಎಲ್ಲವೂ ಸಮಸ್ಯೆಗಳೇ ಆಗಿವೆ ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಚಂದ್ರಶೇಖರ ರಾವ್‌ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | BJPಗೆ ಹೊರಟ್ಟಿ ಅಧಿಕೃತ ಸೇರ್ಪಡೆ: ದೇವೇಗೌಡರಿಗೆ ಮುಖ ತೋರಿಸೋ ಧೈರ್ಯವಿಲ್ಲವೆಂದ ನಾಯಕ

ದೇಶದಲ್ಲಿ ಅತೀ ಶೀಘ್ರದಲ್ಲೇ ಬದಲಾವಣೆಯಾಗಲಿದೆ ಹಾಗೂ ದೇಶವೂ ಬದಲಾಗಲಿದೆ. ಎರಡು-ಮೂರು ತಿಂಗಳು ಕಾಯಿರಿ ಎಂದು ಕೆಸಿಆರ್‌ ಸೂಚ್ಯವಾಗಿ ಹೇಳಿದರು. ಕರ್ನಾಟಕದ ರಾಜಕೀಯ ಕೂಡ ನನಗೆ ಗೊತ್ತಿದೆ. ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಹೆಚ್.ಡಿ. ಕುಮಾರಸ್ಚಾಮಿ ಅವರು ಮುಖ್ಯಮಂತ್ರಿ ಆಗಿದ್ದವರು. ಭಾರತ ಬದಲಿಸುವ ಕೆಲಸ ನಮ್ಮಿಂದ ಆಗಲಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸುತ್ತಿದ್ದೇವೆ ಎಂದರು. ದೇಶದ ಸರ್ಕಾರ, ಸಮಸ್ಯೆಗಳ ಬಗ್ಗೆ ದೇವೇಗೌಡರ ಜತೆ ಸುದೀರ್ಘ ಚರ್ಚೆ ಮಾಡಿದ್ದೇನೆ. ದೇಶದಲ್ಲಿ ಬದಲಾವಣೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪರ್ಯಾಯ ಶಕ್ತಿ ಅನಿವಾರ್ಯ: ಹೆಚ್‌ಡಿಕೆ

ದೇಶಕ್ಕೆ ಪರ್ಯಾಯ ರಾಜಕೀಯ ವ್ಯವಸ್ಥೆ ಅನಿವಾರ್ಯವಾಗಿದೆ. ಮೂರನೇ ಶಕ್ತಿ ಇಂದು ಅತ್ಯಗತ್ಯವಾಗಿದ್ದು, ಎರಡ್ಮೂರು ತಿಂಗಳಲ್ಲಿ ಸ್ಪಷ್ಟತೆ ಸಿಗಲಿದೆ. ಒಂದು ಉತ್ತಮ ನಿರ್ಧಾರ ಹೊರಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ಈ ಪಕ್ಷಗಳ ಮುಖಂಡರ ಜತೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರು ಚರ್ಚೆ ಮಾಡುತ್ತಿದ್ದಾರೆ. ಹಿಂದಿನ ಪ್ರಯತ್ನಕ್ಕಿಂತ ಹೊಸ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಸಂಪತ್ತು ಕಡುಬಡವರಿಗೆ ತಲುಪಬೇಕು. ಸಂಪತ್ತು ದೇಶದ ಬೆಳವಣಿಗೆಗೆ ಸಹಕಾರವಾಗಬೇಕು. ಆ ನಿಟ್ಟಿನಲ್ಲಿ ಚಂದ್ರಶೇಖರ್ ರಾವ್ ಅವರು ಚರ್ಚಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ದಸರಾ ವೇಳೆ ಉತ್ತಮ ನಿರ್ಧಾರ

ದಸರಾ ಅಂದರೆ ಯುದ್ಧಕ್ಕೆ‌ ಹೋಗುವ ಸಂದರ್ಭ. ಹಾಗಾಗಿ ದಸರಾ ವೇಳೆ ಉತ್ತಮ ನಿರ್ಧಾರ ಹೊರಬೀಳಲಿದೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಮೂರನೇ ಶಕ್ತಿ ಇಂದು ಅನಿವಾರ್ಯವಾಗಿದೆ. ಆಗ ತೆಗೆದುಕೊಂಡ ನಿರ್ಣಯ ಬೇರೆ, ಈಗ ತೆಗೆದುಕೊಳ್ಳುವ ನಿರ್ಣಯ ಬೇರೆ. ದೇಶದ ಇತಿಹಾಸಕ್ಕೆ ಇದು ಫೌಂಡೇಷನ್ ಹಾಕಲಿದೆ ಎಂದರು.

ದೇಶ ಹಲವು ಸಮಸ್ಯೆ ಎದುರಿಸುತ್ತಿದೆ. ಜನರ ಸಮಸ್ಯೆ ಮುಂದಿಟ್ಟುಕೊಂಡೇ ಹೋಗುತ್ತೇವೆ. ಎಲ್ಲರೂ ಸೇರಿಯೇ ಇದಕ್ಕೆ ಶಕ್ತಿ ಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಆತ್ಮೀಯ ವಾತಾವರಣ

ಹೈದರಾಬಾದ್‌ʼನಿಂದ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಳಿದ ಕೆಸಿಆರ್‌ ಅವರು ನೇರವಾಗಿ ದೇವೇಗೌಡರ ಮನೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ಅವರು ದ್ವಾರದಲ್ಲೆ ಕಾಯುತ್ತ ನಿಂತಿದ್ದು ತೆಲಂಗಾಣ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.

ಬಳಿಕ ತಮ್ಮ ನಿವಾಸಕ್ಕೆ ಆಗಮಿಸಿದ ಕೆಸಿಆರ್‌ ಅವರನ್ನು ದೇವೇಗೌಡರು ಆತ್ಮೀಯವಾಗಿ ಸ್ವಾಗತಿಸಿದರು. ಭೋಜನದ ನಂತರ ಇಬ್ಬರೂ ಮಾತುಕತೆಗೆ ತೆರಳಿದರು. ತೆಲಂಗಾಣ ರಾಷ್ಟ್ರ ಸಮಿತಿಯ ರಾಜ್ಯಸಭೆ ಸದಸ್ಯ ಸಂತೋಷ್‌ ಕುಮಾರ್‌, ಶಾಸಕರಾದ ಜೀವನ್‌ ರೆಡ್ಡಿ, ಜಾಜುಲ ಸುರೇಂದ್ರ, ಕೃಷ್ಣಮೋಹನ ರೆಡ್ಡಿ, ರಾಜೇಂದರ್‌ ರೆಡ್ಡಿ ಅವರು ಕೆಸಿಆರ್‌ ಜತೆಯಲ್ಲಿ ಗೌಡರ ನಿವಾಸಕ್ಕೆ ಆಗಮಿಸಿದ್ದರು.

ಇದನ್ನೂ ಓದಿ | ಮಳಲಿ ಮಸೀದಿ-ಮಂದಿರ ವಿವಾದ: ಕೇಶವ ಕೃಪಾದ ನಿರ್ಧಾರವೇ ಅಂತಿಮ ಎಂದು ಗೇಲಿ ಮಾಡಿದ ಕುಮಾರಸ್ವಾಮಿ

Exit mobile version