Site icon Vistara News

Divided Nation: ಲೂಟಿ ಮಾಡಿದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ; ಡಿಕೆಸು ವಿರುದ್ಧ ಎಚ್‌ಡಿಕೆ ಕೆಂಡ

DK Suresh and hd kumaraswamy

ರಾಮನಗರ/ಬೆಂಗಳೂರು: ಭಾರತ ಒಂದಾಗಿರಬೇಕು ಎಂದು ಭಾರತ್ ಜೋಡೋ ಯಾತ್ರೆ ಮಾಡಿದವರೇ ಇವತ್ತು ಭಾರತ್ ತೋಡೋ ಎನ್ನುತ್ತಾರೆ. ದೇಶ ಇಬ್ಭಾಗ (Divided Nation) ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿ ಕಲ್ಲು ಹೊಡೆಕೊಂಡು ಲೂಟಿ ಮಾಡಿಕೊಂಡು ಇದ್ದೋರನ್ನು ಲೋಕಸಭೆಗೆ (Lok Sabha) ಕಳುಹಿಸಿದರೆ ಇನ್ನೇನಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಂಸದ ಡಿ.ಕೆ. ಸುರೇಶ್‌ (DK Suresh) ಅವರ “ದೇಶ ವಿಭಜನೆ” ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ.

ಬಿಡದಿಯ ತೋಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಇಲ್ಲಿ ಕಲ್ಲು ಹೊಡೆದುಕೊಂಡು ಲೂಟಿ ಮಾಡಿಕೊಂಡು ಇದ್ದೋರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ. ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂಥವರನ್ನು ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದರೆ ಕಟ್ಟುತ್ತಾರೆಯೇ? ಅವರ ಸಾಮ್ರಾಜ್ಯವನ್ನು ಕಟ್ಟಿಕೊಳ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಅವರು ಟಾಂಗ್ ನೀಡಿದರು.

ಬಾಲಿಶ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ

ಕೇಂದ್ರ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಸಂಘರ್ಷದಿಂದ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ವಾಸ್ತವವನ್ನು ಅವರಿಗೆ ಮನವರಿಕೆ ಮಾಡಬೇಕು. ಅವರನ್ನು ಒಪ್ಪಿಸಿ, ಮನವರಿಕೆ ಮಾಡಿಕೊಟ್ಟು ಹಣ ಪಡೆಯಬೇಕು‌. ಅದನ್ನು ಬಿಟ್ಟು ಇವರ ಬಾಲಿಶ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ ಎಂದು ಸಂಸದ ಸುರೇಶ್ ಅವರಿಗೆ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ?

ಡಿ.ಕೆ.ಸುರೇಶ್ ಅವರು ದೇಶ ವಿಭಜನೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಕಾರಣ ಕೊಟ್ಟಿದ್ದಾರೆ. ಇದು ಅಪ್ರಬುದ್ಧತೆಯ ಹೇಳಿಕೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೋ ಯಾತ್ರೆ ಮಾಡಿದರು. ಈಗ ವಿಭಜನೆಯ ಮಾತನ್ನು ಆಡುತ್ತಿದ್ದಾರೆ. ಒಂದು ವೇಳೆ ವಿಭಜನೆ ಆಯ್ತು ಅಂತ ತಿಳಿದುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ? ಇವರು ನ್ಯಾಯ ದೊರಕಿಸಿಕೊಡುತ್ತಾರೆಯೇ? ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಮೋದಿ ಇದನ್ನು ಪ್ರಾರಂಭ ಮಾಡಿದ್ದಲ್ಲ

ದೇಶದ ಮೊದಲನೇ ಬಜೆಟ್ ಗಾತ್ರ 174 ಕೋಟಿ ರೂಪಾಯಿ. ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ಕಾಲಕ್ರಮೇಣ ನಾವು ಹಣಕಾಸು ಆಯೋಗಗಳನ್ನು ರಚನೆ ಮಾಡಿಕೊಂಡಿದ್ದೇವೆ. ಅವರು ಎಲ್ಲ ರಾಜ್ಯಕ್ಕೂ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣಬೇಕು ಎಂದು ವರದಿ ಕೊಡುತ್ತಾರೆ. ಯಾವ ರಾಜ್ಯ ಅಭಿವೃದ್ಧಿ ಆಗಿಲ್ಲ, ಯಾವ ರಾಜ್ಯ ಅಭಿವೃದ್ಧಿ ಆಗಿದೆ ಎಂಬ ಮಾನದಂಡದ ಅಡಿಯಲ್ಲಿ ಹಣ ಹಂಚಿಕೆ ಆಗುತ್ತದೆ. ಈ ಪದ್ಧತಿಯನ್ನು ಕಾಂಗ್ರೆಸ್ ಸರ್ಕಾರದ ಕಾಲದಲ್ಲಿಯೇ ಆರಂಭ ಮಾಡಲಾಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಬಂದು ಪ್ರಾರಂಭ ಮಾಡಿದ್ದಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಶೋಷಿತರ ಹೆಸರಿನಲ್ಲಿ ಸಿಎಂ ಮಜಾ

ಶೋಷಿತ ವರ್ಗಗಳ ಜನರ ಬಗ್ಗೆ ಕಾಂಗ್ರೆಸ್ ಅನುಕಂಪದ ಲೇವಡಿ ಮಾಡಿದ ಕುಮಾರಸ್ವಾಮಿ ಅವರು; ಶೋಷಿತ ವರ್ಗಗಳ ಹೆಸರಿನಲ್ಲಿ ಇವರು ಮಜಾ ಮಾಡ್ತಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಶೋಷಿತ ವರ್ಗಗಳ ಜನ ಬೀದಿಯಲ್ಲಿ ಇದ್ದಾರೆ. ಎಷ್ಟು ಜನರನ್ನು ಇವರು ಮೀಸಲಾತಿ ವ್ಯವಸ್ಥೆಯಲ್ಲಿ ಉಳಿಸಿಕೊಂಡಿದ್ದಾರೆ. ಎಷ್ಟು ಜನರಿಗೆ ಅನುಕೂಲ ಆಗಿದೆ? ಮೀಸಲಾತಿ ಪಡೆದುಕೊಂಡವರೇ ಮತ್ತೆ ಮತ್ತೆ ಮೀಸಲು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಏನು ಹೇಳುತ್ತಾರೆ ಇವರು? ಮೀಸಲು ಸೌಲಭ್ಯ ಪಡೆದವರೇ ಎಷ್ಟು ವರ್ಷ ಪಡೆಯುತ್ತಾರೆ? ಅದನ್ನು ಜನರಿಗೆ ತಿಳಿಸಿ. ಶೋಷಿತ ವರ್ಗಗಳ ಬದುಕು ಕಾಂಗ್ರೆಸ್ಸಿಗರಿಗೆ ಬೇಕಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷದಿಂದ ಇನ್ನೂ ಅವರ ಹೆಸರು ಹೇಳಿಕೊಂಡೇ ಜೀವನ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಹಿ ಹಾಕದ ವರದಿಯನ್ನು ನಾನು ಹೇಗೆ ಸ್ವೀಕರಿಸಲಿ?

ಕಾಂತರಾಜು ವರದಿ ಬಗ್ಗೆ ಬೀದಿ ಬೀದಿಯಲ್ಲಿ ಮಾತನಾಡಿದ್ದಾರೆ. ನಿಮ್ಮನ್ನು ವರದಿ ಸ್ವೀಕರಿಸಬೇಡಿ ಅಂತ ಹಿಡಿದುಕೊಂಡಿರುವವರು ಯಾರು? ನಾನು ಸಿಎಂ ಆಗಿದ್ದಾಗ ವರದಿ ತೆಗೆದುಕೊಂಡಿಲ್ಲ ಅಂದಿದ್ದಾರೆ. ಆ ವರದಿಯಲ್ಲಿ ಮೆಂಬರ್ ಸೆಕ್ರೆಟರಿ ಸಹಿ ಇತ್ತಾ? ಇವತ್ತಿನವರೆಗೂ ಆ ವರದಿಗೆ ಸಹಿ ಹಾಕಿಲ್ಲ. ಸಹಿ ಹಾಕದ ವರದಿಯನ್ನು ನಾನು ಹೇಗೆ ಸ್ವೀಕರಿಸಲಿ? ಸುಮ್ಮನೆ ನನ್ನ ಮೇಲೆ ಆರೋಪ ಮಾಡ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಇದನ್ನೂ ಓದಿ: 40 per cent commission: ಸಿದ್ದರಾಮಯ್ಯ ಸರ್ಕಾರ ಕಡು ಭ್ರಷ್ಟತೆಗೆ ಹೊಸ ಇತಿಹಾಸ ಬರೆಯುತ್ತಿದೆ: ಬಿ.ವೈ. ವಿಜಯೇಂದ್ರ

ಕಮಿಷನ್ ದಂಧೆ ಅವ್ಯಾಹತ

ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಕಾಂಗ್ರೆಸ್ ಮಾಜಿ ಸಚಿವ ಗಂಡಸಿ ಶಿವರಾಂ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ 50 ಪರ್ಸೆಂಟ್ ಇದೆ ಅಂತ ಅವರು ಹೇಳಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಮ್ಮ ಮಾರ್ಗದರ್ಶಕರು ಅಂತಿದ್ದರು. ಅವರೇ ಬಾಣಲಿಯಿಂದ ಬೆಂಕಿಗೆ ಬಿದ್ದ ಹಾಗಾಗಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಇದನ್ನೆಲ್ಲ ಕುಮಾರಸ್ವಾಮಿ ಪ್ರಶ್ನೆ ಮಾಡಿದರೆ ಅವರಿಗೆ ಅಸಹನೆ, ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ ಅಂತಾರೆ. ಪ್ರತಿನಿತ್ಯ ವರ್ಗಾವಣೆ ಮಾಡುವ ಕೆಲಸವೇ ಆಗಿದೆ. ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮೊದಲು ನಿಮ್ಮ ಸ್ಥಿತಿ ನೋಡಿಕೊಳ್ಳಿ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

Exit mobile version