ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬಗ್ಗೆ ತಮಗೆ ಯಾವುದೇ ರೀತಿಯ ಸಾಫ್ಟ್ ಕಾರ್ನರ್ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಅನೇಕ ದಿನಗಳಿಂದ ಅಶ್ವತ್ಥನಾರಾಯಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ವಾಗ್ದಾಳಿ ನಡೆಯುತ್ತಿದೆ. ನಾಲ್ಕು ತಿಂಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ರಾಮನಗರಕ್ಕೆ ಭೇಟಿ ನೀಡಿದಾಗ ಸಂಸದ ಹಾಗೂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ನಡುವೆ ವೇದಿಕೆಯಲ್ಲೆ ಜಗಳ ನಡೆದಿತ್ತು. ಇದೀಗ ಪಿಎಸ್‌ಐ ಆಯ್ಕೆ ಹಗರಣದಲ್ಲಿ ಅಶ್ವತ್ಥನಾರಾಯಣ ಅವರ ಸಂಬಂಧಿಕರ ಹೆಸರು ಕೇಳಿಬರುತ್ತಿದೆ ಎಂದು ಶಿವಕುಮಾರ್ ತಿಳಿಸಿದ್ದರು. ಇದರ ನಂತರ ಇಬ್ಬರ ನಡುವೆ ವಾಗ್ದಾಳಿಗಳು ನಡೆದಿದ್ದವು. ಆದರೆ ಈ ಎಲ್ಲ ಸಮಯದಲ್ಲೂ ಅಶ್ವತ್ಥನಾರಾಯಣ್ ಕುರಿತಾಗಿ ಎಚ್.ಡಿ. ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಿಜೆಪಿ ಕುರಿತು ಜೆಡಿಎಸ್ ಮೃದುಧೋರಣೆ ಹೊಂದಿದ್ದು, ಅದು ಬಿಜೆಪಿಯ ಬಿ ಟೀಂ ಎಂದು ಅನೇಕ ಬಾರಿ ಹೇಳಿತ್ತು. ಹೀಗಾಗಿ ಅಶ್ವತ್ಥನಾರಾಯಣ ಕುರಿತು ಕುಮಾರಸ್ವಾಮಿ ಮೃದು ಧೋರಣೆ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತ ಪ್ರಶ್ನೆಗೆ ಎಚ್‌ಡಿಕೆ ಉತ್ತರ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಚ್‌ಡಿಕೆ, ಅಶ್ವತ್ಥನಾರಾಯಣ ಬಗ್ಗೆ ನನಗೆ ಮೃದು ಧೋರಣೆ ಇದೆ ಕೆಲವರು ಹೇಳಿದ್ದಾರೆ. ಅಂತಹ ಯಾವ ಮೃದು ನಿಲುವು ನನಗೆ ಇಲ್ಲ. ಬದಲಿಗೆ, ದಾಖಲೆ ಇಟ್ಟು ಮಾತನಾಡಿ ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಬಳಸಿದ 11 ಕಟು ಶಬ್ದಗಳು: ಇದು ಮಾಜಿ CMಗಳ ಸಮರ
ಅಶ್ವತ್ಥನಾರಾಯಣ ಕುರಿತು ಮತ್ತಷ್ಟು ಮಾತನಾಡಿದ ಕುಮಾರಸ್ವಾಮಿ, ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥನಾರಾಯಣ ಅವರದ್ದು ಎತ್ತಿದ ಕೈ ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಿಂದೆ ಅವರು ನರ್ಸುಗಳಿಗೆ ಸರ್ಟಿಫಿಕೇಟ್ ಕೊಡಿಸಿ ಹೆಸರುವಾಸಿ ಆಗಿದ್ದರು. ಪರೀಕ್ಷೆ ಬರೆಯದೇ ಇದ್ದವರಿಗೂ ಕೊಟ್ಟಿದ್ದರು. ಕಾಂಗ್ರೆಸ್‌ನವರು ಅದನ್ನಾದರೂ ಹೇಳಲಿ. ಅದಕ್ಕೇ ದಾಖಲೆ ಇಟ್ಟುಕೊಂಡು ಮಾತನಾಡಲು ಎಂದು ನಾನು ಹೇಳಿದ್ದು ಎಂದು ಕುಮಾರಸ್ವಾಮಿ ಹೇಳಿದರು.
ಈ ಸರ್ಕಾರ ಎಲ್ಲಕ್ಕೂ ಮೌನವಾಗಿದೆ. ಪ್ರತಿ ಹಗರಣದ ಬಗ್ಗೆ ಕೂಡ ಮೌನವಾಗಿದೆ. ಕಳೆದ ಎರಡು ತಿಂಗಳಿಂದ ನಡೆದ ಗಲಾಟೆ, ಗಲಭೆಗಳು ನಡೆದಾಗಲೂ ಸರಕಾರ ಸುಮ್ಮನೆ ಇತ್ತು. ಎಲ್ಲಕ್ಕೂ ಮೌನಂ ಸಮ್ಮತಿ ಲಕ್ಷಣಂ ಅನ್ನುವಂತ ಪರಿಸ್ಥಿತಿ ಇದೆ. ಇದು ರಾಜ್ಯ ಹಣೆಬರಹ ಎಂದು ಅವರು ಕಿಡಿಕಾರಿದರು.
ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಜನ ನೋಡುತ್ತಾ ಇದ್ದಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಬೇಕು. ಎರಡೂ ಪಕ್ಷಗಳ ನಾಯಕರು ನಾಡಿನ ಜನತೆಯ ಜತೆ ಚೆಲ್ಲಾಟ ಆಡುತ್ತಾ ಇದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಕುರಿತು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಆಗಿದ್ದಾಗ ಇವರ ಆಟಕ್ಕೆ ಅವಕಾಶ ಇರಲಿಲ್ಲ. ತಮಗೆ ಬೇಕಾದವರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ನನ್ನ ಮೇಲೂ ಸಿದ್ದರಾಮಯ್ಯ ಒತ್ತಡ ಹಾಕಿದ್ದರು. ಆದರೆ, ಅವರು ಶಿಫಾರಸು ಮಾಡಿದ ವ್ಯಕ್ತಿಯ ಬಗ್ಗೆ ನನಗೆ ಮಾಹಿತಿ ಇದ್ದ ಕಾರಣಕ್ಕೆ ನಾನು ಆ ವ್ಯಕ್ತಿಯನ್ನು ಕೆಪಿಎಸ್ಸಿಗೆ ನೇಮಕ ಮಾಡಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಕಿಕೊಟ್ಟ ಭ್ರಷ್ಟಾಚಾರದ ಅಡಿಪಾಯ ಇಂದು ಬೃಹತ್ ಆಗಿ ಬೆಳೆದು ನಿಂತಿದ್ದು, ಅದನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
idnfnU Odi | PSI Scam | ಒಬ್ಬ ಮಂತ್ರಿ ಭ್ರಷ್ಟಾಚಾರ ಮಾಡಿದರೆ ಸರ್ಕಾರವನ್ನೇ ವಜಾ ಮಾಡ್ತೀರ?: ಮರುಪರೀಕ್ಷೆಗೆ ಅಭ್ಯರ್ಥಿಗಳ ವಿರೋಧ