ರಾಮನಗರ: ಜಾತಿ ಗಣತಿ (Caste Census) ಹೆಸರಿನಲ್ಲಿ ಬರೀ ನಾಟಕ ನಡೆಯುತ್ತಿದೆ. ಈ ಸರ್ಕಾರ ಲೋಕಸಭೆ ಚುನಾವಣೆವರೆಗೂ (Parliament Elections 2023) ಜಾತಿ ಗಣತಿ ನಾಟಕ ಆಡುತ್ತದೆ, ವರದಿಯನ್ನಂತೂ ಸ್ವೀಕಾರ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಹೇಳಿದ್ದಾರೆ. ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಜಾತಿ ಗಣತಿ ವರದಿಯನ್ನು ಸರಕಾರ ಇನ್ನೂ ನಾಲ್ಕು ತಿಂಗಳು ಅಧ್ಯಯನ ಮಾಡಲಾಗುವುದು ಎಂದು ಹೇಳುತ್ತಿದೆ. ನನ್ನ ಪ್ರಕಾರ ಲೋಕಸಭೆ ಚುನಾವಣೆ ತನಕ ಇದು ಏನೂ ಆಗಲ್ಲ. ಯಾರೂ ಗಾಬರಿ ಆಗಬೇಕಾದ ಅವಶ್ಯಕತೆ ಇಲ್ಲ. ಈ ಸರಕಾರದ ಕೈಯಲ್ಲಿ ಏನೂ ಆಗಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇದೇ ಸಿದ್ದರಾಮಯ್ಯ ಅವರು 2018ರಲ್ಲಿ ಕಾಂತರಾಜು ವರದಿ ಕೊಡಲು ಬಂದಾಗ ಆ ವರದಿಯನ್ನು ಕುಮಾರಸ್ವಾಮಿ ಸ್ವೀಕರಿಸಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಆಗಲೇ ವರದಿ ಸಿದ್ಧವಾಗಿತ್ತಲ್ವಾ? ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ, ಇನ್ನೂ ಯಾಕೆ ವರದಿ ಸ್ವೀಕಾರ ಮಾಡಿಲ್ಲ ಎಂದು ಅವರು ನೇರವಾಗಿ ಸಿದ್ದರಾಮಯ್ಯ ಅವರನ್ನೇ ಪ್ರಶ್ನೆ ಮಾಡಿದರು.
ಕನಕಪುರಕ್ಕೆ ಎಸಿ ಕೋರ್ಟ್ ಸ್ಥಳಾಂತರಕ್ಕೆ ಎಚ್‌ಡಿಕೆ ಆಕ್ರೋಶ
ಜಿಲ್ಲಾ ಕೇಂದ್ರದಲ್ಲಿಯೇ ಸಿವಿಲ್ ಪ್ರಕರಣಗಳನ್ನು ವಿಚಾರಣೆ ನಡೆಸುವ ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ವರ್ಗಾವಣೆ ಮಾಡುವುದಕ್ಕೆ ಎಚ್.ಡಿ. ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮಕ್ಕಳಾಟವೇ ಎಂದು ಕಿಡಿಕಾರಿದ್ದಾರೆ. ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ, ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದರು.
ಎಸಿ ಕೋರ್ಟ್ ಅನ್ನು ವಾರದಲ್ಲಿ ಒಂದು ದಿನ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಇದನ್ನು ಇಡೀ ರಾಜ್ಯದ ಪ್ರತಿ ತಾಲೂಕಿನಲ್ಲೂ ಮಾಡಿ, ಪ್ರತಿ ತಾಲೂಕಿಗೆ ಒಂದೊಂದು ಎಸಿ ಕೋರ್ಟ್ ಮಾಡಿ ಎಂದ ಅವರು; ಇದು ಸರ್ವಾಧಿಕಾರಿ ಧೋರಣೆ. ಕೋರ್ಟ್ ಸ್ಥಳಾಂತರಕ್ಕೆ ಅಂತಹ ತರಾತುರಿ ಏನಿದೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೆದರಿಸಿ, ಬೆದರಿಸಿ ಅಕ್ರಮವಾಗಿ ಬೇಲಿ ಹಾಕಿಕೊಂಡಿರುವ ಎಲ್ಲಾ ಭೂಮಿಗಳ ಪೋಡಿ ಮಾಡಿಸುವುದಕ್ಕೆ, ಲೂಟಿ ಮಾಡುವುದಕ್ಕೆ ಹೀಗೆ ಮಾಡ್ತಿದ್ದಾರೆ. ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಯಾರ ಹೆಸರನ್ನೂ ಹೇಳದೆ ಅವರು ಕಟುವಾಗಿ ಟೀಕಿಸಿದರು.
ಅಕ್ಕಿ ಕಳವು; ಕ್ರಮಕ್ಕೆ ಆಗ್ರಹ
ಚನ್ನಪಟ್ಟಣದಲ್ಲಿ ಅನ್ನಭಾಗ್ಯದ ಅಕ್ಕಿ ಕಳವು ವಿಚಾರದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಮೊದಲು ಈ ಬಗ್ಗೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಇದು ಕೇವಲ ಚನ್ನಪಟ್ಟಣದಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ನಡೆಯುತ್ತಿದೆ. ಸರಕಾರ ಜವಾಬ್ದಾರಿಯಿಂದ ಕ್ರಮ ವಹಿಸಲಿ ಎಂದು ಅವರು ಕಿವಿಮಾತು ಹೇಳಿದರು.