Site icon Vistara News

Cauvery water dispute : ಕಾವೇರಿ ವಿಷಯದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಸಲಹೆ ಮಾಡಿದ್ದೆ: ಸರ್ಕಾರ ಕೇಳಲಿಲ್ಲವೆಂದ ಎಚ್‌ಡಿಕೆ

HD Kumaraswamy infront of KRS Dam

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ ದಿನವೇ ನಾನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ನಾನು ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಅವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಈಗಲೂ ಪ್ರಧಾನಮಂತ್ರಿಗಳಿಗೆ ಮಧ್ಯಪ್ರವೇಶ ಮಾಡುವಂತೆ ನಾನು ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Congress Politics : ಕೆ.ಎನ್‌. ರಾಜಣ್ಣಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಸುರ್ಜೇವಾಲ!

ನೀರು ಬಿಡಬೇಡಿ ಅಂತ ಮೊದಲ ದಿನವೇ ನಾನು ಹೇಳಿದ್ದೆ. ಸುಪ್ರೀಂ ಕೋರ್ಟಿಗೆ (Supreme Court) ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ. ನಮ್ಮ ರಾಜ್ಯದಿಂದ ಕೂಡ ಅರ್ಜಿ ಹಾಕಿ. ಅಲ್ಲಿವರೆಗೂ ನೀರು ಬಿಡಬೇಡಿ ಎಂದು ಹೇಳಿದ್ದೆ. ನನ್ನ ಒತ್ತಡಕ್ಕೆ ಸರ್ವಪಕ್ಷ ಸಭೆ (All party meeting) ಕೂಡ ಕರೆದಿದ್ದರು ಎಂದು ರಾಜ್ಯ ಸರ್ಕಾರದ ಮೇಲೆ ಕುಮಾರಸ್ವಾಮಿ ಆರೋಪ ಮಾಡಿದರು.

ಸಚಿವರು ಹೋಗಿ ಏನು ಮಾತನಾಡಿಕೊಂಡು ಬಂದರು?

ಕುಮಾರಸ್ವಾಮಿ ಅವರು ಅಮಿತ್ ಶಾ (Amit Shah) ಅವರ ಜತೆ ಮಾತಾಡಿಕೊಂಡು‌ ಬಂದಿದ್ದಾರೆ. ಅಲ್ಲೇ ಕಾವೇರಿ ವಿಚಾರವಾಗಿ ಮಾತಾಡಬೇಕಿತ್ತು ಎಂದು ಸಚಿವರೊಬ್ಬರ ಹೇಳಿಕೆಯ ಬಗ್ಗೆ ಕಿಡಿಕಾರಿದ ಅವರು, ಅವರು ಮೊದಲೇ ಹೇಳಿದ್ದರೆ ಮಾತಾಡಿಕೊಂಡು ಬರುತ್ತಿದ್ದೆ. ಅವರೂ ಹೋಗಿ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿಕೊಂಡು ಬಂದರಲ್ಲ, ಏನು ಮಾತಾಡಿಕೊಂಡು ಬಂದಿದ್ದಾರೆ ಎಂದು ತಿರುಗೇಟು ನೀಡಿದರು.

ಎಚ್‌.ಡಿ. ದೇವೇಗೌಡರ ಬದ್ಧತೆ ಇವರಿಗೆ ಇದೆಯಾ?

ಸುಪ್ರೀಂ ಕೋರ್ಟ್ ಮುಂದೆ ಈ ಸರ್ಕಾರ ಏನು ವಾಸ್ತವಾಂಶ ಇಟ್ಟಿದೆ ಎಂದು ಹೇಳಲಿ. ‌ಎಚ್‌.ಡಿ. ದೇವೇಗೌಡರ (HD DeveGowda) ಬದ್ಧತೆ ಇವರಿಗೆ ಇದೆಯಾ? ಇವರಿಂದ ಕಲೀಬೇಕಾ? ಎಂದು ಖಾರವಾಗಿ ಪ್ರಶ್ನಿಸಿದ ಎಚ್.ಡಿ. ಕುಮಾರಸ್ವಾಮಿ, ಹಿಂದೆ ಇದೇ ಸಿದ್ದರಾಮಯ್ಯ ಸರಕಾರ ಇದ್ದಾಗ ಕಾವೇರಿ ವಿಚಾರದಲ್ಲಿ ಇದೇ ಸ್ಥಿತಿ ಬಂದಾಗ ದೇವೇಗೌಡರ ಮನೆಗೆ ಓಡಿ ಬಂದಿದ್ದರಲ್ಲ. ಆಗ ದೇವೇಗೌಡರು ಗಾಂಧಿ ಪ್ರತಿಮೆ ಬಳಿ ಧರಣಿ ಕೂತರು. ಆಗ ಕೇಂದ್ರ ಸಚಿವರು ಓಡಿ ಬಂದರು. ಅದೆಲ್ಲಾ ಇವರಿಗೆ ಮರೆತುಹೋಗಿರಬೇಕು. ಇವರಿಂದ ನಾವು ಕಲೀಬೇಕಿಲ್ಲ ಎಂದು ಅವರು ಚಾಟಿ ಬೀಸಿದರು.

ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡು ಅರ್ಜಿ ಹಾಕಿಕೊಂಡಿದೆ. ನಾವೂ ಅರ್ಜಿ ಹಾಕಿಕೊಂಡಿದ್ದರೆ ಅಲ್ಲಿಯವರೆಗೂ ನೀರು ಉಳಿಯುತ್ತಿತ್ತು. ಅಷ್ಟು ಸಾಮಾನ್ಯ ತಿಳಿವಳಿಕೆಯೂ ಈ ಸರ್ಕಾರಕ್ಕೆ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಗೆ ತಮಿಳುನಾಡು ಅಧಿಕಾರಿಗಳು ಖುದ್ದು ಹಾಜರಾಗುತ್ತಾರೆ. ನಮ್ಮ ಅಧಿಕಾರಿಗಳು ವರ್ಚುವಲ್ ಮೂಲಕ ಭಾಗವಹಿಸುತ್ತಾರೆ. ಹೀಗಿದ್ದಾಗ ಪ್ರಾಧಿಕಾರದ ಮುಂದೆ ಇವರು ಏನು ವಾಸ್ತವಾಂಶ ಇಡಲು ಸಾಧ್ಯ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಸಂಸದ ಬಸವರಾಜ್, ರಾಜಣ್ಣ ವಿರುದ್ಧ ಎಚ್ಡಿಕೆ ಕಿಡಿ

ತುಮಕೂರು ಜಿಲ್ಲೆಯ ಜನರು ಎಚ್.ಡಿ. ದೇವೇಗೌಡರಿಗೆ ಮತ ಹಾಕಬಾರದು ಎಂದು ಹೇಳಿಕೆ ನೀಡಿರುವ ಸಂಸದ ಜಿ.ಎಸ್. ಬಸವರಾಜು ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.

ಅದ್ಯಾರೋ ಎಂಪಿ ಬಸವರಾಜ್ ಎಂಬ ವ್ಯಕ್ತಿಯ ಹೇಳಿಕೆ ಗಮನಿಸಿದೆ. ಆ ಜಿಲ್ಲೆಗೆ ಈ ವ್ಯಕ್ತಿಯ ಕೊಡುಗೆ ಏನು? ಈತನ ದರ್ಪದ ಹೇಳಿಕೆಯನ್ನು ಗಮನಿಸಿದ್ದೇನೆ. ಮತ್ತೆ ತುಮಕೂರಿನಲ್ಲಿ ದೇವೇಗೌಡರು ಸೋಲಿಸಬೇಕು ಅಂದಿದ್ದಾರೆ. ದೇವೇಗೌಡರು ಆ ಜಿಲ್ಲೆಗೆ ಏನೂ ಮಾಡಿಲ್ಲವಾದರೆ, ಈಗ ನೀನೇ ಎಂಪಿ ಆಗಿದೀಯಲ್ಲಪ್ಪಾ? ಏನು ಮಾಡಿದೀಯಪ್ಪಾ ಜಿಲ್ಲೆಗೆ ಎಂದು ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: CM Siddaramaiah : 2ನೇ ಅವಧಿಗೆ ಚಾಮರಾಜನಗರಕ್ಕೆ ಸಿಎಂ ಭೇಟಿ; ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ

ದೇವೇಗೌಡ ಹೆಸರು ಹೇಳಿ ರಾಜಕೀಯಕ್ಕೆ ಬಂದವರು

ಈ ಸರ್ಕಾರದ ಸಹಕಾರ ಸಚಿವ ಕೆ.ಎನ್.‌ ರಾಜಣ್ಣ, ದೇವೇಗೌಡರು ಚುನಾವಣೆಗೆ ನಿಲ್ಲಬೇಕು, ನಾವು ಋಣ ತೀರಿಸಬೇಕು ಅಂತ ವ್ಯಂಗ್ಯವಾಗಿ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ನೀವು ಋಣ ತೀರಿಸಿದ್ದು ನೋಡಿದ್ದೇವೆ. ಇವರೆಲ್ಲ ದೇವೇಗೌಡರ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದವರು. ಈ ಹಿಂದೆ ದೇವೇಗೌಡರು ಹುಷಾರಿಲ್ಲದಿದ್ದರೂ ಹೋಗಿ ಇವರ ಪರ ಪ್ರಚಾರ ಮಾಡಿದ್ದಕ್ಕೆ ಇವರು ಗೆದ್ದಿದ್ದು. ಆಗ ಕೇವಲ 700 ಮತಗಳ ಅಂತರದಿಂದ ಗೆದಿದ್ದನ್ನು ಮರೆತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

Exit mobile version