ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್. ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna Released) ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ರೇವಣ್ಣ, ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ. ದೇವರಲ್ಲಿ ಅದನ್ನೇ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನಾನು ಹೆಚ್ಚಿಗೆ ಏನು ಮಾತನಾಡಲ್ಲ. ಕಳೆದ 11 ದಿನಗಳಿಂದ ನ್ಯಾಯಾಲಯದ ಕಾನೂನನ್ನು ಪಾಲಿಸಿದೇನೆ. ಈ ಆಪಾದನೆಯಿಂದ ಹೊರಗೆ ಬರುತ್ತೇನೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ತಬ್ಬಿಕೊಂಡ ಎಚ್‌ಡಿಕೆ; ಕುಟುಂಬಸ್ಥರ ಕಂಡು ಕಣ್ಣೀರಿಟ್ಟ ರೇವಣ್ಣ, ಇಷ್ಟಾದರೂ ಬಾರದ ಭವಾನಿ!
ರೇವಣ್ಣ ಅವರು ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (HD Devegowda) ನಿವಾಸಕ್ಕೆ ತೆರಳಿದ್ದು, ಅವರನ್ನು ಕಂಡ ಕೂಡಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಬ್ಬಿಕೊಂಡು ಸ್ವಾಗತಿಸಿದರು. ಇನ್ನು ಕುಟುಂಬಸ್ಥರನ್ನು ಕಂಡಕೂಡಲೇ ರೇವಣ್ಣ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಹನ್ನೊಂದು ದಿನಗಳ ಹಿಂದೆ ಇದೇ ದೇವೇಗೌಡರ ಮನೆಯಲ್ಲಿ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಸೀದಾ ಅಲ್ಲಿಗೇ ಎಚ್.ಡಿ. ರೇವಣ್ಣ ಬಂದಿದ್ದಾರೆ. ಇದಕ್ಕಿಂತ ಮುಂಚಿತವಾಗಿ ಎಚ್.ಡಿ. ದೇವೇಗೌಡರು ಮನೆಯಲ್ಲಿ ವಿಶೇಷ ಪೂಜೆಯನ್ನು ಮಾಡಿಸಿದ್ದರು. ರೇವಣ್ಣ ಮನೆಗೆ ಎಂಟ್ರಿ ಆದ ತಕ್ಷಣ ಅವರನ್ನು ತಬ್ಬಿಕೊಂಡ ಕುಮಾರಸ್ವಾಮಿ ಸಂತೈಸಿದರು. ಅಲ್ಲಿಂದ ಸೀದಾ ಒಳಗೆ ಹೋದ ರೇವಣ್ಣ ಅವರು ಎಚ್.ಡಿ. ದೇವೇಗೌಡರ ಕೋಣೆಗೆ ಎಂಟ್ರಿ ಕೊಟ್ಟರು.
ದೇವೇಗೌಡರನ್ನು ನೋಡಿ ಕಾಲಿಗೆ ಬಿದ್ದು ಕಣ್ಣೀರು ಹಾಕಿದರು ಎನ್ನಲಾಗಿದೆ. ಜತೆಗೆ ತಾಯಿ ಚನ್ನಮ್ಮ ಅವರ ಆಶೀರ್ವಾದವನ್ನೂ ಈ ವೇಳೆ ರೇವಣ್ಣ ಪಡೆದುಕೊಂಡರು.
ಭವಾನಿ ರೇವಣ್ಣ ನೆಗ್ಲೆಟ್?
ಎಚ್.ಡಿ. ರೇವಣ್ಣ ಅವರಿಗೆ ಸೋಮವಾರ ಸಂಜೆಯೇ ಬೇಲ್ ಸಿಕ್ಕರೂ ಭವಾನಿ ರೇವಣ್ಣ ಅವರ ಸುದ್ದಿಯೇ ಇಲ್ಲವಾಘಿದೆ. ಇನ್ನು ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೂ ಅವರು ಆಗಮಿಸಲಿಲ್ಲ. ರೇವಣ್ಣ ಜೈಲಿಗೆ ಹೋದಾಗಲೂ ನೋಡಲು ಹೋಗಲಿಲ್ಲ. ರೇವಣ್ಣ ಎಸ್ಐಟಿ ಕಸ್ಟಡಿಯಲ್ಲಿ ಇದ್ದಾಗಲೂ ಬರಲಿಲ್ಲ. ಬಿಡುಗಡೆ ಆಗಿ ದೇವೇಗೌಡರ ನಿವಾಸಕ್ಕೆ ರೇವಣ್ಣ ಬಂದರೂ ಅತ್ತ ಕಡೆ ಸುಳಿಯದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಂತರ ಕಾಯ್ದುಕೊಂಡರಾ ಭವಾನಿ ಹಾಗೂ ಸೂರಜ್ ರೇವಣ್ಣ?
ಭವಾನಿ ರೇವಣ್ಣ ಹಾಗೂ ಸೂರಜ್ ರೇವಣ್ಣ ಅಂತರ ಕಾಯ್ದುಕೊಂಡರಾ ಎಂಬ ಪ್ರಶ್ನೆ ಮೂಡುತ್ತಿದೆ. ಈ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಗ್ಗೆ ಅಸಹನೆಯಾ? ಇಲ್ಲವೇ ಪ್ರಜ್ವಲ್ ಕೇಸ್ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೀಗೆ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.
ದೇವೇಗೌಡರ ಜತೆ ಊಟಕ್ಕೆ ಕುಳಿತ ಮಕ್ಕಳು; ಕಂಪ್ಲೇಂಟ್ ಹೇಳಿದರಾ ರೇವಣ್ಣ?
ಮನೆಗೆ ಧಾವಿಸಿದ ಹಿರಿಯ ಪುತ್ರ ಎಚ್.ಡಿ. ರೇವಣ್ಣ ಅವರಿಗೆ ಮೊದಲಿಗೆ ಬೆಳಗ್ಗೆ ಮನೆಯಲ್ಲಿ ಮಾಡಿಸಲಾಗಿದ್ದ ದೇವರ ಪೂಜೆಯ ಪ್ರಸಾದವನ್ನು ಕೊಡಲಾಯಿತು. ಬಳಿಕ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತರು. ಊಟದ ಸಮಯದಲ್ಲಿ ರೇವಣ್ಣ ಅವರು ಎಸ್‌ಐಟಿ ವಶ ಹಾಗೂ ಜೈಲಿನಲ್ಲಿ ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆನ್ನಲಾಗಿದೆ.
ಎಸ್ಐಟಿ ಅಧಿಕಾರಿಗಳು ತನಿಖೆ ನೆಪದಲ್ಲಿ ಏನೆಲ್ಲ ಪ್ರಶ್ನೆಗಳನ್ನು ಕೇಳಿದರು? ಯಾವ ಮಾದರಿಯ ಪ್ರಶ್ನೆಗಳು ಇದ್ದವು? ಯಾವೆಲ್ಲ ಒತ್ತಡವನ್ನು ನೀಡಿದರು? ಎಂಬಿತ್ಯಾದಿ ವಿಷಯಗಳ ಬಗ್ಗೆ ಎಚ್.ಡಿ. ರೇವಣ್ಣ ಅವರು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯ ಷಡ್ಯಂತ್ರದ ಬಗ್ಗೆ ಚರ್ಚೆ?
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ನಿಷ್ಪಕ್ಷಪಾತ ತನಿಖೆಯನ್ನು ನಡೆಸಲಾಗುತ್ತಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶ ಮಾಡಿದ್ದಾರೆ. ರಾಜಕೀಯವಾಗಿ ಏನೆಲ್ಲ ಷಡ್ಯಂತ್ರ ನಡೆಯುತ್ತಿದೆ ಎಂಬ ಬಗ್ಗೆ ಈಗಾಗಲೇ ಆರೋಪ ಮಾಡಿರುವ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಷಯವನ್ನು ರೇವಣ್ಣ ಮುಂದೆ ಪ್ರಸ್ತಾಪ ಮಾಡಿದ್ದಾರೆನ್ನಲಾಗಿದೆ. ಅಲ್ಲದೆ, ರಾಜಕೀಯ ಷಡ್ಯಂತ್ರದ ಜತೆಗೆ ಮುಂದಿನ ನಡೆ ಏನು ಎಂಬ ಬಗ್ಗೆಯೂ ತಂದೆ ಮತ್ತು ಮಕ್ಕಳು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: HD Revanna Released: ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು
ಜೆಡಿಎಸ್ ಶಾಸಕರು, ಮುಖಂಡರ ಜತೆ ರೇವಣ್ಣ ಚರ್ಚೆ
ಈ ವೇಳೆ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಜೆಡಿಎಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭೇಟಿ ನೀಡುತ್ತಿದ್ದಾರೆ. ಕೆ ಆರ್ ಪೇಟೆ ಶಾಸಕ ಎಚ್.ಡಿ. ಮಂಜುನಾಥ್, ಮಾಗಡಿ ಮಾಜಿ ಶಾಸಕ ಮಂಜುನಾಥ್ ಸೇರಿದಂತೆ ಹಲವರು ಆಗಮಿಸಿದ್ದಾರೆ. ಇನ್ನು ಎಚ್.ಡಿ. ರೇವಣ್ಣ ಸಹ ಕೆಲವು ಪ್ರಮುಖರ ಜತೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.