Site icon Vistara News

Hindu-Muslim : ರಾಜ್ಯದ ಈ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್ ; ಎಲ್ಲಿ?

Hindu Muslim Aland Raghava chaithanyaa

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದದ ಲಾಡ್ಲೇ ಮಶಾಕ್ ದರ್ಗಾದಲ್ಲಿ (Ladle Mashak Dargah) ಮುಂದಿನ ಮಾರ್ಚ್‌ 8ರಂದು ಶುಕ್ರವಾರದ ಪ್ರಾರ್ಥನೆ (Friday Prayer) ಮತ್ತು ರಾಘವ ಚೈತನ್ಯ ಶಿವಲಿಂಗದ (Raghava Chaithanya Shivalinga) ಪೂಜೆ ಎರಡೂ ನಡೆಯಲಿದೆ. ಎರಡಕ್ಕೂ ಪ್ರತ್ಯೇಕ ಸಮಯ ನಿಗದಿಪಡಿಸುವಂತೆ ಸೂಚಿಸಿ ಶಿವಲಿಂಗದ ಪೂಜೆಗೆ ಹೈಕೋರ್ಟ್‌ನ (Karnataka High Court) ಕಲಬುರಗಿ ಪೀಠ (Kalaburagi Bench) ಅನುಮತಿ ನೀಡಿದೆ. ಇದೀಗ ಪ್ರಾರ್ಥನೆ ಮತ್ತು ಪೂಜೆಯ (Hindu-Muslim) ನಿಟ್ಟಿನಲ್ಲಿ ಆಳಂದ ಪಟ್ಟಣದಲ್ಲಿ ಪೂರ್ವಭಾವಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಶಿವರಾತ್ರಿಯಂದು ನೂರು ಜನರಿಂದ ಶಿವಲಿಂಗದ ಪೂಜೆಗೆ ಅನುಮತಿ ನೀಡಬೇಕು ಎಂದು ಹಿಂದೂ ಸಂಘಟನೆಗಳು ಕಲಬುರಗಿ ಹೈಕೋರ್ಟ್​ ಪೀಠಕ್ಕೆ ಅರ್ಜಿ ಸಲ್ಲಿಸಿದ್ದವು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ 15 ಜನರಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಆಂದೋಲ ಸಿದ್ದಲಿಂಗ ಸ್ವಾಮೀಜಿ (Andola Siddalinga Swamiji) ನೇತೃತ್ವದಲ್ಲಿ ಪೂಜೆ ನಡೆಯಲಿದೆ.

Hindu Muslim Aland police

ಮಾರ್ಚ 8ರಂದು ಶಿವರಾತ್ರಿ ಆಚರಣೆ ಮತ್ತು ಅದೇ ದಿನ ಶುಕ್ರವಾರದ ಪ್ರಾರ್ಥನೆ ಎರಡೂ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಿಂದುಗಳ ಕಡೆಯಿಂದ ಎಷ್ಟು ಹೊತ್ತಿಗೆ ಪೂಜೆ ನಡೆಯಲಿದೆ ಎಂಬ ಮಾಹಿತಿಯನ್ನು ಕೋರ್ಟ್‌ಗೆ ಒಪ್ಪಿಸಬೇಕಾಗಿದೆ. ಮಾರ್ಚ್‌ 7ರಂದು ಇದಕ್ಕೆ ಅವಕಾಶ ನೀಡಲಾಗಿದೆ. ಅದರ ಜತೆಗೆ ಆಂದೋಲ ಸ್ವಾಮೀಜಿ ಜತೆಗೆ ತೆರಳುವ 15 ಮಂದಿಯ ಮಾಹಿತಿಯನ್ನು ಕೂಡಾ ಕೋರ್ಟ್‌ಗೆ ಒದಗಿಸಬೇಕಾಗಿದೆ.

ರಥಯಾತ್ರೆಗೂ ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್‌

ಈ ನಡುವೆ, ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಜೀರ್ಣೋದ್ಧಾರಕ್ಕಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ರಥಯಾತ್ರೆ ಹಮ್ಮಿಕೊಂಡಿವೆ. ಈ ರಥಯಾತ್ರೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ನ್ಯಾಯಾಲಯ ಷರತ್ತುಬದ್ಧ ಅನುಮತಿಯನ್ನು ನೀಡಿದೆ.

Hindu Muslim Aland police
  1. ರಥಯಾತ್ರೆ ವೇಳೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.
  2. ಅನ್ಯ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗುವಂತಿಲ್ಲ.
  3. ರಥಯಾತ್ರೆಯಲ್ಲಿ ಡಿಜೆ ಸೌಂಡ್ ಬಳಸುವಂತಿಲ್ಲ.
  4. ವಿವಾದಿತ ಸ್ಥಳದಲ್ಲಿ ರಥಯಾತ್ರೆ ಹೋಗುವಂತಿಲ್ಲ.
  5. ಸೂರ್ಯಾಸ್ತದ ನಂತರ ರಥಯಾತ್ರೆ ಮುಂದುವರಿಸುವಂತಿಲ್ಲ.

ಇದನ್ನೂ ಓದಿ : Maha Shivaratri 2024: ಶಿವರಾತ್ರಿಯಂದು ಶಿವಾರಾಧನೆಗೆ ಯಾವ ಸಮಯ ಸೂಕ್ತ? ಯಾವ ನೈವೇದ್ಯ ಮಾಡಬಹುದು?

2022ರಲ್ಲಿ ಸಂಘರ್ಷ: ಮಾರಕಾಸ್ತ್ರಗಳಿಂದ ಹಲ್ಲೆ

ಲಾಡ್ಲೇ ದರ್ಗಾದಲ್ಲಿ ಶಿವರಾತ್ರಿ ದಿನ ಪೂಜೆ ಮಾಡುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ. ಅದಕ್ಕೆ ಯಾರ ಆಕ್ಷೇಪವೂ ಇದಲಿಲ್ಲ. ಆದರೆ, 2022ರಲ್ಲಿ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಮೇಲೆ ಕಿಡಿಗೇಡಿಗಳು ಮೂತ್ರ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಮುಖಂಡರು ಶಿವಲಿಂಗದ ಶುದ್ಧೀಕರಣಕ್ಕಾಗಿ ದರ್ಗಾಗೆ ತೆರಳಿದ್ದರು. ಆಗ ಎರಡೂ ಸಮುದಾಯಗಳ ನಡುವೆ ದೊಡ್ಡಮಟ್ಟದಲ್ಲಿ ಗಲಾಟೆ ನಡೆದಿತ್ತು. ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು ಮತ್ತು ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದ ಪಟ್ಟಣದಲ್ಲೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಆದರೆ, 2023ರಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ನಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗಿತ್ತು. ಕಳೆದ ವರ್ಷ ದರ್ಗಾದಲ್ಲಿ ಉರುಸ್ ಮತ್ತು ಶಿವರಾತ್ರಿ ಒಂದೇ ದಿನ ಬಂದಿತ್ತು. ಆದರೆ, ಎಲ್ಲವೂ ಸಾಂಗವಾಗಿ ನಡೆದಿತ್ತು.

ಬುಧವಾರ ಆಳಂದ ಪಟ್ಟಣದಲ್ಲಿ ಪೊಲೀಸರ ಪಥಸಂಚಲನ ನಡೆಯಿತು.

ದೇವಾಲಯ ನಿರ್ಮಾಣಕ್ಕೆ ಯತ್ನ

ಈ ನಡುವೆ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಮುಕ್ತಿ ನೀಡಿ ಅಲ್ಲೇ ಮಂದಿರವೊಂದನ್ನು ಕಟ್ಟಬೇಕು ಎಂಬ ಹೋರಾಟವೂ ಜೋರಾಗುತ್ತಿದೆ. ಅದರ ಭಾಗವಾಗಿಯೇ ರಥಯಾತ್ರೆ ವ್ಯವಸ್ಥೆ ಮಾಡಲಾಗಿದೆ. ಕೆಲವರು ಇದನ್ನು ವಾರಾಣಸಿಯ ಜ್ಞಾನವಾಪಿ ಕಟ್ಟಡ ವಿವಾದಕ್ಕೆ ಸಮೀಕರಿಸುತ್ತಿದ್ದಾರೆ. ಇದು ಮುಂದೆ ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ನೋಡಬೇಕಾಗಿದೆ.

ಬುಧವಾರ ಆಳಂದ ಪಟ್ಟಣದಲ್ಲಿ ಪೊಲೀಸರ ಪಥಸಂಚಲನ ನಡೆಯಿತು.

ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್

ಆಳಂದ ಪಟ್ಟಣದಲ್ಲಿನ‌ ಲಾಡ್ಲೆಮಶಾಕ್ ದರ್ಗಾದಲ್ಲಿರುವ ರಾಘವಚೈತನ್ಯ ಶಿವಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಪೂಜೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಪಥಸಂಚಲನ ನಡೆಯಿತು. ಹೆಚ್ಚುವರಿ ಎಸ್.ಪಿ ಎನ್ ಶ್ರೀನಿಧಿ, ಡಿವೈಎಸ್ಪಿ ಮಹಮ್ಮದ್ ನೇತೃತ್ವದಲ್ಲಿ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Exit mobile version