Site icon Vistara News

Hindu Temples : ದೇಗುಲದ ಹುಂಡಿ ಹಣ ಮಸೀದಿಗೆ ಹೋಗುತ್ತಾ?; ಸರ್ಕಾರ ಕೊಟ್ಟಿರುವ ಲೆಕ್ಕ ಏನು?

Hindu Temple1Hindu Temple1

ಬೆಂಗಳೂರು: ಹಿಂದೂ ದೇವಾಲಯಗಳಲ್ಲಿ (Hindu Temples) ಹುಂಡಿ ಹಾಗೂ ಇತರೆ ಮೂಲಗಳಿಂದ ಬರುವ ಆದಾಯವನ್ನು (Temple Income) ಸರ್ಕಾರವು ಬೇರೆ ಉದ್ದೇಶಗಳಿಗೆ, ಬೇರೆ ಧರ್ಮಗಳಿಗೆ ಬಳಸುತ್ತದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಿವೆ. ಅದರಲ್ಲೂ ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದಾಗ ಈ ಚರ್ಚೆ ಜೋರಾಗುತ್ತದೆ. ದೇವಸ್ಥಾನದಲ್ಲಿ ಸಂಗ್ರಹವಾದ ಹಣವನ್ನು ಬೇರೆ ಧರ್ಮಗಳ ಕ್ಷೇತ್ರಗಳಿಗೆ ನೀಡಲಾಗುತ್ತದೆ ಎಂದು ದೂರಲಾಗುತ್ತದೆ. ನಿಜವೆಂದರೆ, ಕೋಟ ಶ್ರೀನಿವಾಸ ಪೂಜಾರಿ ಅವರು ಮುಜರಾಯಿ ಮಂತ್ರಿಗಳಾಗಿದ್ದಾಗ ವಿಧಾನಸಭೆಯಲ್ಲೇ ದೇಗುಲದ ಹುಂಡಿ ಹಣದ ಬಳಕೆಯ ವಿವರ ನೀಡಿದ್ದರು. ಇದೀಗ ಕಾಂಗ್ರೆಸ್‌ ಸರ್ಕಾರ ಬಂದಾಗ ಮತ್ತದೇ ಚರ್ಚೆ ಎದ್ದಿದೆ. ಹೀಗಾಗಿ ರಾಜ್ಯ ಸರ್ಕಾರ (Karnataka Government) ಈ ಬಗ್ಗೆ ‌ಸ್ಪಷ್ಟನೆಯನ್ನು ನೀಡಿದ್ದು ಹುಂಡಿ ಹಣ ಎಲ್ಲೆಲ್ಲಿ ಹೋಗುತ್ತದೆ ಎಂದು ಲೆಕ್ಕ ನೀಡಿದೆ.

ಹಿಂದೂ ದೇವಾಲಯಗಳಲ್ಲಿ ಹುಂಡಿ ಹಾಗೂ ಇತರೆ ಮೂಲಗಳಿಂದ ಬರುವ ಆದಾಯವನ್ನು ಸರ್ಕಾರವು ಬೇರೆ ಉದ್ದೇಶಗಳಿಗೆ, ಬೇರೆ ಧರ್ಮಗಳಿಗೆ ಬಳಸುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಈ ಆದಾಯವನ್ನು ಅದೇ ದೇವಾಲಯದ ಧಾರ್ಮಿಕ ಉದ್ದೇಶಗಳಿಗೆ, ದೇವಾಲಯದ ಅಭಿವೃದ್ಧಿಗೆ ಹಾಗೂ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮಾತ್ರ ಬಳಸಲಾಗುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ.

ಬೇರೆ ಧರ್ಮಗಳಿಗೆ ನೀಡಲು ಅವಕಾಶವೇ ಇಲ್ಲ

ದೇವಾಲಯದ ಹಣವನ್ನು ಇತರ ಯಾವುದೇ ಉದ್ದೇಶಗಳಿಗೆ ಹಾಗೂ ಇತರ ಧರ್ಮಗಳಿಗೆ ಈವರೆಗೂ ಉಪಯೋಗಿಸಲಾಗಿಲ್ಲ. ಮುಂದೆಯೂ ಉಪಯೋಗಿಸ ಲಾಗುವುದಿಲ್ಲ, ಇದಕ್ಕೆ ಕಾನೂನಿನಲ್ಲಿ ಅವಕಾಶವೂ ಇರುವುದಿಲ್ಲ.

ದೇವಾಲಯಗಳಲ್ಲಿ ಹುಂಡಿಯಿಂದ ಮತ್ತು ಇತರ ಮೂಲಗಳಿಂದ ಸಂದಾಯವಾಗುವ ಹಣವು ಆಯಾ ದೇವಾಲಯಗಳ ಖಾತೆಗೆ ಜಮಾ ಆಗಲಿದೆ. ಸರ್ಕಾರಕ್ಕೆ ಜಮಾ ಆಗುವುದಿಲ್ಲ.

ಆಯಾ ದೇವಾಲಯಗಳನ್ನು ವಾರ್ಷಿಕ ಆಯವ್ಯಯ ಅನುಮೋದನೆ ಪಡೆದು ಅದರಂತ ವೆಚ್ಚ ಮಾಡಲಾಗುತ್ತದೆ. ಉಳಿತಾಯವಾಗುವ ಹಣವನ್ನು ಆಯಾ ದೇವಾಲಯದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇರಿಸಲಾಗುತ್ತದೆ- ಎಂದಿದೆ ಇಲಾಖೆ.

ಸಾಮಾನ್ಯ ಸಂಗ್ರಹಣಾ ನಿಧಿ ಕಥೆ ಏನು?

1.ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ 2011ನೇ ಸಾಲಿನಿಂದಲೇ, ಪ್ರವರ್ಗ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿ ವಾರ್ಷಿಕವಾಗಿ ಸಂಗ್ರಹವಾಗುವ ನಿವ್ವಳ ಆದಾಯದ ಶೇಕಡಾ 5 ಮತ್ತು 10ರಷ್ಟು ಹಣವನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ ಜಮಾ ಮಾಡಲಾಗುತ್ತಿದ್ದು, ಇದರಿಂದ ವಾರ್ಷಿಕ ರೂ.8.00 ಕೋಟಿ ಸಂಗ್ರಹವಾಗುತ್ತಿತ್ತು.

2. ‘ಸಿ’ ವರ್ಗದ ದೇವಾಲಯಗಳ ಅರ್ಚಕ ಹಾಗೂ ನೌಕರರ ಬಹು ದಿನಗಳ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಹೆಚ್ಚಿಸುವ ಸಲುವಾಗಿ ದೇವಾಲಯದಲ್ಲಿ ವಾರ್ಷಿಕವಾಗಿ ಸಂಗ್ರಹವಾಗುವ ಒಟ್ಟು ಆದಾಯದ ಶೇಕಡ 5 ಮತ್ತು 10ರಷ್ಟನ್ನು ಸಂಗ್ರಹಿಸಲು ಹಾಲಿ ಇರುವ ಅಧಿನಿಯಮಕ್ಕೆ ತಿದ್ದುಪಡಿಯನ್ನು ತರಲಾಗಿದ್ದು, ಇದರಿಂದ ವಾರ್ಷಿಕ ರೂ.60.00 ಕೋಟಿ ಸಾಮಾನ್ಯ ಸಂಗ್ರಹಣಾ ನಿಧಿ ಜಮಾ ಆಗಲಿದೆ.- ಎಂದು ವಿವರಿಸಲಾಗಿದೆ.

ಇದನ್ನೂ ಓದಿ : Hindu Temples : ದೇಗುಲದ ಹಣ ಚರ್ಚ್‌, ಮಸೀದಿಗೆ ಹೋಗ್ತಿದೆ ಎನ್ನೋದು ಸುಳ್ಳು; ಅರ್ಚಕರ ಸಂಘ

ಸಾಮಾನ್ಯ ಸಂಗ್ರಹಣಾ ನಿಧಿಯ ಹಣದ ಬಳಕೆ ಹೇಗೆ?

ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಆದಾಯ ಕಡಿಮೆ ಇರುವ ‘ಸಿ’ ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ಮಾತ್ರ ಬಳಸಲು ತೀರ್ಮಾನಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

  1. ಕಡಿಮೆ ಆದಾಯವಿರುವ ‘ಸಿ’ ವರ್ಗದ ದೇವಾಲಯಗಳ ಜೀರ್ಣೋದ್ಧಾರಕ್ಕೆ ರೂ.25.00 ಕೋಟಿ.
  2. ‘ಸಿ’ ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನಕ್ಕೆ 5 ಕೋಟಿ ರೂ.
  3. ‘ಸಿ’ ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್ಚಕರು ಮತ್ತು ನೌಕರರಿಗೆ ವಿಮಾ ಸೌಲಭ್ಯ ಕಲ್ಪಿಸಲು (ವಿಮಾ ಕಂತು ಪಾವತಿಸಲು) ರೂ. 7.00 ಕೋಟಿ.
  4. ‘ಸಿ’ ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರಿಗೆ ವಸತಿ ಸೌಲಭ್ಯ ಕಲ್ಪಿಸಲು (ವಂತಿಗೆ ಪಾವತಿಸಲು) 15 ಕೋಟಿ ರೂ.
  5. ಸಿ. ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರಿಗೆ ಸೇವಾಂತ ಸೌಲಭ್ಯ ಕಲ್ಪಿಸಲು (ತಲಾ 2 ಲಕ್ಷದಂತೆ) ಮೂರು ಕೋಟಿ ರೂ.
  6. ಸಿ ವರ್ಗದ ದೇವಾಲಯಗಳ ಇತರ ಧಾರ್ಮಿಕ ಕಾರ್ಯಗಳಿಗಾಗಿ 5 ಕೋಟಿ ರೂ.

ದೇವಾಲಯದಲ್ಲಿ ಸಂಗ್ರಹವಾಗುವ ಹಣ ದೇವಾಲಯಕ್ಕೆ ಮಾತ್ರ

ದೇವಾಲಯದಲ್ಲಿ ಎಲ್ಲಾ ಮೂಲಗಳಿಂದ ಸಂಗ್ರಹವಾಗುವ ಹಣವನ್ನು ದೇವಾಲಯದ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸ್ಪಷ್ಟಪಡಿಸಿದೆ

  1. ದೇವಾಲಯದ ದೈನಂದಿನ ಪೂಜಾ ಕಾರ್ಯಕ್ರಮಗಳು
  2. ದೇವಾಲಯದ ವಿಶೇಷ ಪೂಜೆ, ಹಬ್ಬಗಳ ವೆಚ್ಚ, ಜಾತ್ರೆ ಮುಂತಾದ ವೆಚ್ಚಗಳಿಗೆ ಬಳಕೆ
  3. ದೇವಾಲಯದ ನೌಕರರ ವೇತನ ಹಾಗೂ ದೇವಾಲಯದ ಮೂಲಭೂತ ಸೌಲಭ್ಯ ಕಲ್ಪಿಸಲು ಬಳಸಲಾಗುತ್ತದೆ.
Exit mobile version