ಬೆಂಗಳೂರು: ಕಾಶಿ ವಿಶ್ವನಾಥ ದೇಗುಲದ (Kashi Vishwanath Temple) ಸನಿಹ ಇರುವ ಜ್ಞಾನವಾಪಿ ಮಸೀದಿ (Gyanvapi Mosque) ಆವರಣದಲ್ಲಿ ಹಿಂದುಗಳು ಕೂಡ ಪೂಜೆ ಮಾಡಬಹುದು ಎಂದು ವಾರಾಣಸಿ ಜಿಲ್ಲಾ ಕೋರ್ಟ್ (Varanasi District Court) ಆದೇಶ ನೀಡಿರುವುದನ್ನು ಬಿಜೆಪಿ ಸ್ವಾಗತಿಸಿದೆ. ಅಧರ್ಮದ ವಿರುದ್ಧ ನ್ಯಾಯ ಗೆಲ್ಲಲೇ ಬೇಕು. ಯಾವತ್ತಿದ್ದರೂ ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಈ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಮಾಜಿ ಸಚಿವರಾದ ಸಿ.ಟಿ. ರವಿ (CT Ravi) ಹಾಗೂ ಕೆ.ಎಸ್. ಈಶ್ವರಪ್ಪ (KS Eshwarappa) ಆಗ್ರಹಿಸಿದ್ದಾರೆ.
ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡಬಾರದು
ಈ ಬಗ್ಗೆ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಕಾಶಿ ವಿಶ್ವನಾಥ ದೇಗುಲಕ್ಕೆ ಸಂಬಂಧಪಟ್ಟಂತೆ ವಾರಾಣಸಿ ನ್ಯಾಯಾಲಯವು ತೀರ್ಪು ಕೊಟ್ಟಿದೆ. ಅಲ್ಲಿ ದೇವಸ್ಥಾನವನ್ನು ಒಡೆದು ಮಸೀದಿ ಕಟ್ಟಲಾಗಿತ್ತು. 800 ಪುಟಗಳ ವರದಿ ಮೇರೆಗೆ ತೀರ್ಪು ಕೊಟ್ಟಿದೆ. ನೆಲ ಮಾಳಿಗೆಯಲ್ಲಿ ಹಿಂದು ಧರ್ಮದ 10 ಮೂರ್ತಿ ಸಿಕ್ಕಿವೆ. ಅಲ್ಲಿ ಪೂಜೆಗಾಗಿ ಅವಕಾಶ ನೀಡಲಾಗಿದೆ. ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಯೋಧ್ಯೆಯನ್ನು ಬಿಜೆಪಿಯ ರಾಮ ಅಂತ ಕರೆಯುತ್ತಿದ್ದಾರೆ. ದಯವಿಟ್ಟು ಹೀಗೆ ಕರೆಯಬೇಡಿ. ಜೈ ಶ್ರೀರಾಮ ಘೋಷಣೆ ಜತೆ ಈಗ ಹರಹರ ಮಹದೇವ ಹೇಳುವಂತಹ ಅವಕಾಶ ಸಿಕ್ಕಿದೆ. ಇದು ಸಂತೋಷದ ವಿಷಯ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಪರ ವಕೀಲರಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ, ನೀವು ಹೈಕೋರ್ಟ್‌ಗಾದರೂ ಹೋಗಿ, ಸುಪ್ರೀಂ ಕೋರ್ಟ್‌ಗಾದರೂ ಹೋಗಿ. ಕಾನೂನು ಬದ್ಧ ಹೋರಾಟ ಮಾಡಿ. ಅಯೋಧ್ಯೆಯಲ್ಲೂ ಹೀಗೆ ಆಯ್ತು. ಅದರಲ್ಲೂ ನ್ಯಾಯ ಸಿಕ್ಕಿದೆ. ನೀವು ಈ ದಾಖಲೆಗಳನ್ನು ಒಪ್ಪಲೇಬೇಕು ಎಂದು ಹೇಳಿದರು.
ಕಾಶಿಯಲ್ಲಿ ದೇವಸ್ಥಾನ ಪುನರ್ನಿರ್ಮಾಣ ಆಗಬೇಕಿದೆ. ಇದರಲ್ಲಿ ರಾಜಕೀಯಕ್ಕೆ ಅವಕಾಶ ಕೊಡಬೇಡಿ. ಹಿಂದು ಸಮಾಜವನ್ನು ಒಡೆಯಬೇಡಿ. ಎಲ್ಲರೂ ಒಟ್ಟಾಗಿ ದೇವಸ್ಥಾನ ಕಟ್ಟೋಣ. ಮುಸಲ್ಮಾನರಿಗೂ ಕೂಡ ಏನು ಅವಕಾಶ ಸಿಗಬೇಕೋ ಸಿಗಲಿ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: Gyanvapi Mosque : ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೂ ಪೂಜೆಗೆ ಅವಕಾಶ ನೀಡಿದ ಕೋರ್ಟ್!
ಅಧರ್ಮದ ಪರ ಕಾಂಗ್ರೆಸ್ ಹೋಗಿದ್ದಕ್ಕೆ ಧೂಳಿಪಟವಾಗಿದೆ: ಸಿ.ಟಿ. ರವಿ
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿ, ಅಧರ್ಮದ ವಿರುದ್ಧ ನ್ಯಾಯ ಗೆಲ್ಲಲೇಬೇಕು. ಯಾವತ್ತಿದ್ದರೂ ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಅಧರ್ಮದ ಪರ ಕಾಂಗ್ರೆಸ್ ಹೋಗಿದ್ದಕ್ಕೆ ಧೂಳಿಪಟವಾಗಿದೆ. ಮತಾಂಧರು, ಪಾಪಿಗಳು ಹಿಂದು ದೇವಾಲಯಗಳನ್ನು ಒಡೆದಿದ್ದರು. ಕಾಂಗ್ರೆಸ್ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಈಗ ಸಿದ್ದರಾಮಯ್ಯನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲೇಬೇಕು. ಔರಂಗಜೇಬನ ಪರ ನಿಂತ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಈಗ ಔರಂಗಜೇಬನ ಪರ ನಿಲ್ಲುತ್ತದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿದರು.