Site icon Vistara News

JDS ಮೇಲೆ ಇನ್ನೂ ಪ್ರೀತಿ ಇದೆ ಎಂದರು BJP ಸೇರ್ಪಡೆಯಾದ ಬಸವರಾಜ ಹೊರಟ್ಟಿ

ಬೆಂಗಳೂರು: ಜಾತ್ಯಾತೀತ ಜನತಾದಳದೊಂದಿಗೆ ದಶಕಗಳ ಕಾಲ ಗುರುತಿಸಿಕೊಂಡಿದ್ದ ಹಿರಿಯ ರಾಜಕೀಯ ಮುಖಂಡ ಬಸವರಾಜ ಹೊರಟ್ಟಿ ಅನೌಪಚಾರಿಕವಾಗಿ ಭಾರತೀಯ ಜನತಾ ಪಕ್ಷಕ್ಕೆ ಮಂಗಳವಾರ ಸೇರ್ಪಡೆಯಾದರು. ರಾಜಕಾರಣಕ್ಕಾಗಿ ಬಿಜೆಪಿಗೆ ಸೇರ್ಪಡೆಯಾದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದರು.

ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ಅಮಿತ್‌ ಷಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಕಂದಾಯ ಸಚಿವ ಆರ್‌. ಅಶೋಕ್‌ ಮುಂತಾದವರೊಂದಿಗೆ ಭೇಟಿಯಾದರು. ಹಿರಿಯ ನಾಯಕನನ್ನು ಹೂಗುಚ್ಚ ನೀಡಿ ಅಮಿತ್‌ ಷಾ ಪಕ್ಷಕ್ಕೆ ಬರಮಾಡಿಕೊಂಡರು.

ಬಸವಜಯಂತಿ ದಿನ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಹೊರಟ್ಟಿ ಮಾತನಾಡಿದರು. ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದೇನೆ. ಅಧಿಕೃತವಾಗಿ ಸೇರ್ಪಡೆ ಆಗಲು ಕೆಲವು ತೊಂದರೆಗಳಿವೆ. ಮೊದಲಿಗೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸದ್ಯ ಉಪಸಭಾಪತಿ ಯಾರೂ ಇಲ್ಲ. ಹಾಗಾಗಿ ರಾಜೀನಾಮೆಗೆ ಕೆಲವು ತಾಂತ್ರಿಕ ತೊಂದರೆ ಇವೆ. ಇವುಗಳನ್ನು ಬಗೆಹರಿಸಿಕೊಂಡು ರಾಜೀನಾಮೆ ನೀಡುತ್ತೇನೆ. ನಂತರ ಪಕ್ಷ ನಿಗದಿ ಮಾಡುವ ದಿನಾಂಕದಲ್ಲಿ ಸೇರ್ಪಡೆ ಆಗುತ್ತೇನೆ ಎಂದರು.

ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಮೂಲಕ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ ಹೊರಟ್ಟಿ, ಈ ಬಾರಿ ತಮಗೇ ಟಿಕೆಟ್‌ ಲಭಿಸುತ್ತದೆ ಎಂದು ತಿಳಿಸಿದ್ದ ಬಿಜೆಪಿ ಹಿರಿಯ ನಾಯಕ ಮೋಹನ್‌ ಲಿಂಬಿಕಾಯಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಸಾಮಾನ್ಯವಾಗಿ ಯಾವುದೇ ರಾಜಕೀಯ ಪಕ್ಷ ಸೇರ್ಪಡೆ ಆಗುವವರು ಸುಳ್ಳು ಹೇಳುತ್ತಾರೆ. ತಾವು ಈ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಬಂದಿದ್ದೇನೆ. ಈ ನಾಯಕರೇ ದೇಶದ ಭವಿಷ್ಯ ಹಾಗಾಗಿ ಬಂದೆ. ಯುವಕರೂ ಈ ಪಕ್ಷದ ಕಡೆ ನೋಡುತ್ತಿದ್ದಾರೆ ಹಾಗಾಗಿ ಬಂದೆ. ಆ ಪಕ್ಷದಲ್ಲಿ ಅನ್ಯಾಯ ಆಗಿತ್ತು ಅದಕ್ಕಾಗಿ ಸೇರ್ಪಡೆ ಆದೆ. ಜನರಿಗೆ ಮತ್ತಷ್ಟು ಉತ್ತಮ ಸೇವೆ ಸಲಿಸಲು ಬಂದೆ ಎಂದೆಲ್ಲ ಸುಳ್ಳು ಹೇಳುವುದು ಸಾಮಾನ್ಯ. ಆದರೆ ಐದು ದಶಕದ ರಾಜಕಾರಣದ ಅನುಭವ ಹೊಂದಿರುವ ಹೊರಟ್ಟಿ ಮಾತು ನೇರಾನೇರ.

ಇಷ್ಟು ವರ್ಷ ಜನತಾಪರಿವಾರದಲ್ಲಿದ್ದವರು ಬಿಜೆಪಿ ಸೇರ್ಪಡೆಗೆ ಏನು ಕಾರಣ ಎಂಬ ಪ್ರಶ್ನೆಗೆ ಉತ್ತರಿಸಿದ ಐದು ಬಾರಿ ವಿಧಾನ ಪರಿಷತ್‌ ಹಾಗೂ ಶಿಕ್ಷಣ ಸಚಿವರಾಗಿದ್ದ ಹೊರಟ್ಟಿ, “ರಾಜಕಾರಣ” ಎಂದ್ಷಟೇ ಹೇಳಿದರು. ಮತ್ತೂ ಪ್ರಶ್ನೆ ಮಾಡಿದ್ದಕ್ಕೆ ಉತ್ತರ ಮುಂದುವರಿಸಿ, ನನಗೆ ಜೆಡಿಎಸ್‌ ಮೇಲಿನ ಪ್ರೀತಿಯೇನು ಕಡಿಮೆ ಆಗಿಲ್ಲ. ಅಲ್ಲಿನ ವ್ಯವಸ್ಥೆ ಹಾಗೂ ಎಲ್ಲರ ಮೇಲೆ ಗೌರವ ಇದ್ದೇ ಇದೆ. ಆದರೆ ನಮ್ಮ ಮತದಾರರಲ್ಲಿ ಆದ ಬದಲಾವಣೆ, ವ್ಯವಸ್ಥೆಯಲ್ಲಾದ ಬದಲಾವಣೆಗಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದರು. ಯಾವ ಸಿದ್ಧಾಂತ ನೋಡಿ ಬಿಜೆಪಿ ಸೇರುತ್ತಿದ್ದೀರಿ? ಎಂಬ ಪ್ರಶನೆಗೆ ಉತ್ತರಿಸಿದ ಹೊರಟ್ಟಿ, ದಯಮಾಡಿ ರಾಜಕಾರಣದಲ್ಲಿ ಸಿದ್ಧಾಂತದ ಬಗ್ಗೆ ಕೇಳಬೇಡಿ ಎಂದು ಹೇಳಿ ಮುನ್ನಡೆದರು.

ಹೊರಟ್ಟಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ಏಳು ಬಾರಿ ಶಾಸಕರಾಗಿ, ಮಂತ್ರಿಯಾಗಿ, ಶಿಕ್ಷಣ ಸಚಿವರಾಗಿ, ಸಭಾಪತಿಯಾಗಿ ಕೆಲಸ ಮಾಡಿರುವ ಹೊರಟ್ಟಿ ಅವರು ಇಂದು ಪಕ್ಷ ಸೇರ್ಪಡೆಯಾಗಿದ್ದಾರೆ. ಸಜ್ಜನ ಸರಳಿಕೆ ಅವರ ಜತೆಗೆ ಬಿಜೆಪಿಗೆ ಬರುತ್ತಿದೆ. ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿ ಬಿಜೆಪಿಗೆ ವರ್ಚಸ್ಸು ಬರುತ್ತದೆ ಎಂದರು.

Exit mobile version