Site icon Vistara News

Karnataka CM : ನೂತನ ಮುಖ್ಯಮಂತ್ರಿ ಆಯ್ಕೆಗೆ ಅರ್ಜೆಂಟೇನಿಲ್ಲ; ಹಾಗಾದರೆ ಡೆಡ್‌ಲೈನ್‌ ಯಾವಾಗ?

how much time congress have to select new cm of karnataka

#image_title

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯನ್ನು (Karnataka CM) ಆಯ್ಕೆ ಮಾಡಲು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಪರದಾಡುತ್ತಿದೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹಗ್ಗಜಗ್ಗಾಟ ರಾಜ್ಯದ ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಆದಷ್ಟು ಬೇಗ ಈ ಪ್ರಕ್ರಿಯೆಯನ್ನು ನಡೆಸಬೇಕೆಂದು ಪಕ್ಷದ ಉನ್ನತ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಮುಖ್ಯಮಂತ್ರಿಯನ್ನು ತುರ್ತಾಗಿ ಆಯ್ಕೆ ಮಾಡಬೇಕಾದ ಅನಿವಾರ್ಯತೆಯೇನೂ ಇಲ್ಲ. ಇನ್ನು ಒಂದು ವಾರಗಳ ಕಾಲಾವಕಾಶವಿದೆ ಎನ್ನುತ್ತಿದ್ದಾರೆ ಸಂವಿಧಾನ ತಜ್ಞರು.

ಹೌದು, ರಾಜ್ಯದ ರಾಜ್ಯಪಾಲರು ಏಪ್ರಿಲ್‌ 13 ರಂದು ಹೊರಡಿಸಿದ ವಿಶೇಷ ಅಧಿಸೂಚನೆಯ ಪ್ರಕಾರ ಹಾಲಿ ಅಸ್ತಿತ್ವದಲ್ಲಿರುವ ಸರ್ಕಾರದ ಅವಧಿಯು ಮೇ. 24ರ ವರೆಗೆ ಅಸ್ತಿತ್ವದಲ್ಲಿರಲಿದೆ. ಒಂದು ವೇಳೆ ಅದಕ್ಕಿಂತಲೂ ಮೊದಲೇ ಹೊಸ ಸರ್ಕಾರ ರಚನೆಯಾದರೆ, ಅದರ ಅವಧಿ ಹೊಸ ಸರ್ಕಾರ ರಚನೆಯಾದ ದಿನಕ್ಕೇ ಅಂತ್ಯಗೊಳ್ಳಲಿದೆ. ಹೀಗಾಗಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ಮೇ. 24 ರವರೆಗೆ ನೂತನ ಸರ್ಕಾರ ರಚಿಸಲು ಕಾಲಾವಕಾಶವಿದೆ.

ವಿಶೇಷ ರಾಜ್ಯ ಪತ್ರ

ಅಧಿಸೂಚನೆಯಲ್ಲಿ ಹೀಗೆಂದು ಹೇಳಲಾಗಿದೆ; the existing Legislative Assembly of the State of Karnataka, unless sooner dissolved, shall continue up to and including the 24th May, 2023, and shall, thereafter, stand dissolved on the expiration of its duration. ಒಂದು ವೇಳೆ ಈ ಅವಧಿಯ ಒಳಗೆ ಸರ್ಕಾರ ರಚನೆಗೆ ಕಾಂಗ್ರೆಸ್‌ ಪಕ್ಷ ಮುಂದಾಗದಿದ್ದಲ್ಲಿ, ರಾಜ್ಯಪಾಲರು ತಮ್ಮ ವಿವೇಚನೆಯಂತೆ ನಡೆದುಕೊಳ್ಳಬಹುದಾಗಿದೆ. ಆಗಲೂ ಹೆಚ್ಚೆಂದರೆ ಪಕ್ಷಕ್ಕೆ ಇನ್ನೆಷ್ಟು ಸಮಯಬೇಕೆಂದು ಕೇಳಿ, ಕಾಲಾವಕಾಶ ನೀಡಬಹುದು.

ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ನೇಮಕ ಮಾಡಲು ಬಿಜೆಪಿಯ ಹೈಕಮಾಂಡ್‌ ಸಾಕಷ್ಟ ಸಮಯ ತೆಗೆದುಕೊಂಡಿತ್ತು. 2017ರ ಮಾರ್ಚ್‌ 11 ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಆದರೆ ನೂತನ ಮುಖ್ಯಮಂತ್ರಿಯ ಆಯ್ಕೆಯಾಗಿದ್ದು, ಆರು ದಿನಗಳ ನಂತರ ಅಂದರೆ ಮಾ.17 ರಂದು. ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ್ದು ಮಾ.18 ರಂದು. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿಯು ಮುಖ್ಯಮಂತ್ರಿ ನೇಮಕ ತಡವಾದ ಉದಾಹರಣೆಗಳಿವೆ.

ಹೀಗಾಗಿ ಯಾವುದೇ ತರಾತುರಿಯಿಲ್ಲದೆ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೆ ಅಳೆದು- ತೂಗಿ ನೂತನ ಮುಖ್ಯಮಂತ್ರಿಯನ್ನು ನೇಮಕ ಮಾಡಲು ಅವಕಾಶ ದೊರೆತಂತಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ತಾವೇ ಮುಖ್ಯಮಂತ್ರಿಯಾಗಬೇಕೆಂದು ಪಟ್ಟು ಹಿಡಿದಿರುವುದರಿಂದ ಸಂಧಾನ ಸೂತ್ರವೊಂದನ್ನು ರೂಪಿಸಲು ಪಕ್ಷದ ಹೈಕಮಾಂಡ್‌ ಇನ್ನೂ ಒಂದು ವಾರಗಳ ಕಾಲಾವಕಾಶ ತೆಗೆದುಕೊಳ್ಳಬಹುದು.

ರಾಜ್ಯದಲ್ಲಿ ಫಲಿತಾಂಶ ಪ್ರಕಟವಾದ ಮಾರನೇ ದಿನ ಅಂದರೆ ಮೇ. 14 ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿತ್ತು. ಇಲ್ಲಿ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಇಬ್ಬರು ನಾಯಕರೂ ತಮಗೇ ಹುದ್ದೆ ಬೇಕೆಂದು ಪಟ್ಟು ಹಿಡಿದಿದ್ದರಿಂದ ಈ ಬಿಕ್ಕಟ್ಟು ಹೈಕಮಾಂಡ್‌ ಅಂಗಳ ತಲುಪಿತ್ತು. ಕಳೆದ ಮೂರು ದಿನಗಳಿಂದ ಪಕ್ಷದ ಉನ್ನತ ನಾಯಕರು ಸರಣಿ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪಕ್ಷದ ನಾಯಕರಲ್ಲಿ ಮುಂದೇನು ಎಂಬ ಆತಂಕ ಕಾಡಲಾರಂಭಿಸಿದೆ.

ಬುಧವಾರ ಒಂದು ಹಂತದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ ಬಹುತೇಕ ಖಚಿತ ಎಂದೇ ಹೇಳಲಾಗಿತ್ತು. ಪಕ್ಷದ ನಾಯಕರೇ ಈ ಬಗ್ಗೆ ಹೇಳಿಕೆ ನೀಡಿದ್ದರು. ಅಲ್ಲದೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಸಂಬಂಧ ಬೇರೆ ಬೇರೆ ಇಲಾಖೆಗಳಿಗೆ ಸೂಚನೆ ಕೂಡ ನೀಡಿತ್ತು. ನಂತರ ಈ ಸಿದ್ಧತಾಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಈಗ ಎಲ್ಲರ ಕಣ್ಣು ದಿಲ್ಲಿಯತ್ತ ನೆಟ್ಟಿದೆ. ಶುಕ್ರವಾರ ಅಮಾವಾಸ್ಯೆ ಬೇರೆ ಇರುವುದರಿಂದ ಎಂದು ನೂತನ ಮುಖ್ಯಮಂತ್ರಿ ನೇಮಕವಾಗಬಹುದು? ಯಾವಾಗ ಪ್ರಮಾಣವಚನ ಕಾರ್ಯಕ್ರಮ ನಡೆಯಬಹುದು ಎಂದು ಪಕ್ಷದ ಕಾರ್ಯಕರ್ತರು ಲೆಕ್ಕಾಚಾರ ಹಾಕುತ್ತಾ ಕುಳಿತಿದ್ದಾರೆ.

ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಸಿಎಂ‌ ಎಂದು ಘೋಷಿಸಿದ ಪುಷ್ಪಾ ಅಮರನಾಥ್‌, ಅಶೋಕ್‌ ಪಟ್ಟಣ್‌ಗೆ ನೋಟಿಸ್

Exit mobile version