ಮೈಸೂರು: ನಾನು ಜೀವ ಇರುವವರೆಗೂ ಮೋದಿ ಭಕ್ತ (I am Life time Modi Bhakta). ಪಕ್ಷ ಬಿಟ್ಟು ಎಲ್ಲಿಗೂ ಹೋಗಲ್ಲ. ನಾನು ಸಾಯುವವರೆಗೂ ಬಿಜೆಪಿ ಕಾರ್ಯಕರ್ತ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲ್ಲ. (Will not contest as Rebel): ಹೀಗೆ ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ (MP Pratap Simha).
ಲೋಕಸಭಾ ಚುನಾವಣೆಯಲ್ಲಿ (Parliament Election) ಮೈಸೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪುವ ಆತಂಕದಲ್ಲಿರುವ ಅವರು ಮಂಗಳವಾರ ಸ್ವಲ್ಪ ಮಟ್ಟಿಗೆ ಭಾವೋದ್ವೇಗದಿಂದ ಮಾತನಾಡಿದ್ದರೂ ಬುಧವಾರ ಸ್ವಲ್ಪ ಸೈರಣೆ ತಂದುಕೊಂಡಿದ್ದಾರೆ. ಬುಧವಾರ ಮೈಸೂರಿನ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಸಂಸದ ಪ್ರತಾಪ್ ಸಿಂಹ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಸೇರಿದಂತೆ ಹಿರಿಯ ಸಾಹಿತಿಗಳು, ಸಮಾಜ ಸೇವಕರು, ಕನ್ನಡ ಪರ ಹೋರಾಟಗಾರರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಮಾಧಾನದಿಂದಲೇ ಇದ್ದರು.
ನನಗಿನ್ನೂ ಟಿಕೆಟ್ ಕೈತಪ್ಪಿಲ್ಲ. ಯಾರಿಗೆ ಕೊಟ್ಟರೂ ಕೆಲಸ ಮಾಡುತ್ತೇನೆ
ಕಳೆದೊಂದು ವಾರದಿಂದ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ರಾಜಕಾರಣದಲ್ಲಿ ಹಣಬಲ, ತೋಳ್ಬಲ ಉಳ್ಳವರು ಇದ್ದಾರೆ. ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಮೊದಲ ಬಾರಿ ಪತ್ರಕರ್ತನಾಗಿ ಬಂದು ಚುನಾವಣೆಗೆ ಸ್ಪರ್ಧಿಸಿದ ನನ್ನನ್ನು ಮೋದಿಯವರ ಮುಖ ನೋಡಿಕೊಂಡು ಮೈಸೂರು ಕೊಡಗಿನ ಜನರು ಆಯ್ಕೆ ಮಾಡಿದರು. ಈ ಬಾರಿ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ ಎಂದು ಹೇಳಿದರು ಪ್ರತಾಪ್‌ಸಿಂಹ.
ನಾನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.
ಮೈಸೂರು ಕೊಡಗಿನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತಂದಿದ್ದೇನೆ ಎಂದು ಪ್ರತಿಪಾದಿಸಿದರು ಪ್ರತಾಪ್ ಸಿಂಹ.
ಮೈಸೂರು ಕ್ಷೇತ್ರದ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ಕೊಡದೇ ಇದ್ದರೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಅವರು ನನಗೆ ಇನ್ನೂ ಟಿಕೆಟ್ ಕೈ ತಪ್ಪಿಲ್ಲ ಎಂದರು.
ʻʻಯಡಿಯೂರಪ್ಪ ನಮ್ಮ ಪಕ್ಷಾತೀತ ನಾಯಕ. ಅವರು ಕಟ್ಟಿದ ಪಕ್ಷದಲ್ಲಿ ಸಂಸದ ಆಗಿದ್ದೇನೆ ಎಂಬ ಹೆಮ್ಮೆ ಇದೆʼʼ ಎಂದು ಹೇಳಿದರು. 1960ರಲ್ಲಿ ನಮ್ಮಪ್ಪ ಜನಸಂಘದಲ್ಲಿ ಇದ್ದರು. ಹಾಗಾಗಿ ನಾನು ಬೇರೆ ರಾಜಕಾರಣಿ ರೀತಿ ಅಲ್ಲ ಎಂದು ನೆನಪಿಸಿಕೊಂಡರು.
ಇದನ್ನೂ ಓದಿ : MP Pratap Simha : ಮಹಾರಾಜರ ಬಗ್ಗೆ ಲಘುವಾಗಿ ಮಾತಾಡ್ಬೇಡಿ; ಪ್ರತಾಪ್‌ಗೆ ವಿರೋಧಿ ಬಣದ ಎಚ್ಚರಿಕೆ
ಜನರು ನನ್ನ ಪರವಾಗಿ ಟಿಕೆಟ್ ಕೇಳಿದ್ರಲ್ಲ.. ಅಷ್ಟು ಸಾಕು!
ನನಗೆ ಟಿಕೆಟ್ ಕೈ ತಪ್ಪುತ್ತಿದೆ ಎಂದಾಗ ಜನರೇ ಪ್ರತಿಭಟನೆಗೆ ಇಳಿದದ್ದು ನನಗೆ ನಂಬಲಸಾಧ್ಯ ಸಂಗತಿ. ಕರ್ನಾಟಕದಲ್ಲಿ ಎಷ್ಟು ಸಂಸದರ ಪರವಾಗಿ ಹೋರಾಟ ನಡೆಯುತ್ತಿದೆ ? ನನಗೆ ಟಿಕೆಟ್ ಕೊಡಬೇಕು ಅಂತ ಜನ ಕೇಳುತ್ತಿದ್ದಾರೆ. ನನಗೆ ಅಷ್ಟು ಸಾಕುʼʼ ಎಂದು ಭಾವುಕರಾದರು.
ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಲು ಕೈ ಜೋಡಿಸುತ್ತೇನೆ
ಪಕ್ಷ ನನಗೆ ಟಿಕೆಟ್ ಕೊಡಬಹುದು, ಅಥವಾ ಕೊಡದೆಯೂ ಇರಬಹುದು. ಮತ್ತೊಂದು ಅವಕಾಶ ಕೊಟ್ಟರೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಒಂದು ವೇಳೆ ನನಗೆ ಟಿಕೆಟ್ ನೀಡದಿದ್ದರೂ ಸಹ ಟಿಕೆಟ್ ಸಿಗುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಮಹಾರಾಜರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಲು ಎಲ್ಲರೂ ಕೈಜೋಡಿಸಿ. ನಾನು ಕೂಡ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆಂದು ನುಡಿದರು ಹಾಲಿ ಸಂಸದ ಪ್ರತಾಪ್ ಸಿಂಹ.
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ, ಮೈಸೂರು ವತಿಯಿಂದ ನನ್ನನ್ನು ಅಭಿನಂದಿಸಿದರು.
— Pratap Simha (Modi Ka Parivar) (@mepratap) March 13, 2024
ಶ್ರೀ ಡಾ. ಕೆ.ಬಿ ಗಣಪತಿರವರು, ಶ್ರೀ ಪ್ರೊ. ಎಸ್ ಶಿವರಾಜಪ್ಪ, ಶ್ರೀ ಬನ್ನೂರು ರಾಜುರವರು, ಶ್ರೀ ಡಾ. ಕೆ. ರಘುರಾಮ್ ವಾಜಪೇಯಿ ರವರು ಮತ್ತು ಶ್ರೀ ಎ.ಪಿ ನಾಗೇಶ್ ರವರು ಉಪಸ್ಥಿತರಿದ್ದರು. pic.twitter.com/gtx086anrQ