Site icon Vistara News

Inside Story : ಕಿಚ್ಚ ಸುದೀಪ್ ಅವರನ್ನ ರಾಜಕೀಯಕ್ಕೆ ಎಳೆ ತಂದರೇ ಅಮಿತ್ ಶಾ ಮಗ ಜಯ್ ಶಾ?

actor Sudeep backs CM Bommai as BJP gets star power why kichcha entered politics

sudeep shha

ರಾಮಸ್ವಾಮಿ ಹುಲಕೋಡು
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೇಷರತ್ ಬೆಂಬಲಿಸಿರುವ ನಟ ಕಿಚ್ಚ ಸುದೀಪ್, ಬೊಮ್ಮಾಯಿ ಅವರ ಕಾರಣಕ್ಕೆ ಬಿಜೆಪಿ ಪರವಾಗಿ ಪ್ರಚಾರ ನಡೆಸುವುದಾಗಿಯೂ ಪರೋಕ್ಷವಾಗಿ ಪ್ರಕಟಿಸಿದ್ದಾರೆ.

ಸದಾ ರಾಜಕೀಯ ವಿಷಯಗಳಿಂದ ದೂರ ಇರುತ್ತಿದ್ದ ಸುದೀಪ್ ಹೀಗೆ ಇದ್ದಕ್ಕಿದ್ದ ಹಾಗೆ ರಾಜಕೀಯ ʻತೀರ್ಮಾನʼ ತೆಗೆದುಕೊಳ್ಳಲು ಕಾರಣವೇನು ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಮುಖ್ಯವಾಗಿ, ಸುದೀಪ್ ಹೀಗೆ ಬಿಜೆಪಿ ಪರ ಬ್ಯಾಟಿಂಗ್ ನಡೆಸಲು ಕಾರಣರಾ ದವರು ಕೇಂದ್ರ ಗೃಹ ಸಚಿವ, ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ ಅವರ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ.

ಹೌದು, ಕರ್ನಾಟಕದಲ್ಲಿ ರಾಜಕೀಯ ಐಪಿಎಲ್ ನಡೆಯುತ್ತಿರುವ ಈ ಹೊತ್ತಲ್ಲಿ ಜಯ್ ಶಾ ಮಾಡಿದ ಬೌಲಿಂಗ್‌ಗೆ ಬೋಲ್ಡ್ ಆದ ಕನ್ನಡದ ʻರನ್ನʼ ಕಿಚ್ಚ ಸುದೀಪ್‌ ಈಗ ಬಿಜೆಪಿ ಪರವಾಗಿ ಕಣಕ್ಕಿಳಿದಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿರುವ ಕಿಚ್ಚ ಸುದೀಪ್, ಕ್ರಿಕೇಟ್ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಪ್ರಖ್ಯಾತ ನಟ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಕರ್ನಾಟಕ ಬುಲ್ಡೋಜರ್ ನ ನಾಯಕನಾಗಿ ಮಿಂಚಿ, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಹೀಗಾಗಿಯೇ ಜಯ್ ಶಾ ಮತ್ತು ಸುದೀಪ್ ನಡುವೆ ಸಂಪರ್ಕ ಬೆಳೆದಿದ್ದು, ಇಬ್ಬರೂ ದೇಶ-ವಿದೇಶ ಸುತ್ತಿದ್ದಾರೆ.

ಇತ್ತೀಚೆಗೆ ಜಯ್ ಶಾ ಪರವಾಗಿ ಸುದೀಪ್ ಐಪಿಎಲ್ ಆಡುವ ತಂಡವೊಂದನ್ನು ಪರ್ಚೇಸ್ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಭೇಟಿಯಾದಾಗಲೆಲ್ಲಾ ಜಾಯ್ ಶಾ ಮತು ಸುದೀಪ್ ಕ್ರಿಕೆಟ್ ಮತ್ತು ರಾಜಕೀಯದ ಕುರಿತು ಚರ್ಚೆ ನಡೆಸುತ್ತಿದ್ದರು. ಅವರ ಸೂಚನೆಯಂತೆಯೇ ಈಗ ಬಿಜೆಪಿ ಬೆಂಬಲಿಸಲಿದ್ದಾರೆ. ಇದು ಸುದೀಪ್‌ಗೆ ಸೆಮಿಫೈನಲ್, ಫೈನಲ್ ಮ್ಯಾಚ್‌ನಲ್ಲಿ ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯೂ ಇದೆ!

ಎಂಪಿ ಆಗುತ್ತಾರಾ ಸುದೀಪ್?

ಸುದೀಪ್ ಅವರ ತಂದೆ ಸಂಜೀವ್ ಸರೋವರ್ ಸೂಚನೆಯಂತೆಯೇ ಸುದೀಪ್ ಈಗ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಒಪ್ಪಿಕೊಂಡಿದ್ದಾರೆ. ತಮ್ಮ ಮಗನನ್ನು ಸಂಸತ್ ಸದಸ್ಯರನ್ನಾಗಿ ಮಾಡಬೇಕೆಂಬುದು ಸಂಜೀವ್ ಅವರ ಹಳೆಯ ಕನಸಂತೆ! ಇದನ್ನು ಅವರು ತಮ್ಮ ಆತ್ಮೀಯರ ಬಳಿ ಹೇಳಿಕೊಂಡೇ ಬಂದಿದ್ದಾರೆ ಕೂಡ. ತಂದೆಯ ಈ ಕನಸನ್ನು ಈಡೇರಿಸಲು ಸುದೀಪ್ ಕೂಡ ಮುಂದಾಗಿದ್ದಾರೆ ಎನ್ನಲಾಗಿದ್ದು, ಇದರ ಮೊದಲ ಹಂತವಾಗಿ ಈಗ ಚುನಾವಣಾ ರಾಜಕಾರಣಕ್ಕೆ ದುಮುಕಿದ್ದಾರೆ.

ನಟ ಸುದೀಪ್‌ಗೆ ಸಿಹಿ ತಿನಿಸುತ್ತಿರುವ ಅವರ ತಂದೆ ಸಂಜೀವ್‌

ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿ ಸೇರಿ, ಮೀಸಲು ಕ್ಷೇತ್ರವೊಂದರಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ. ಅಪ್ಪನ ಸೂಚನೆಯಂತೆ ಕಳೆದ ವರ್ಷದ ಜುಲೈನಲ್ಲಿ ದೆಹಲಿಗೆ ಹೋಗಿದ್ದ ಸುದೀಪ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಾತುಕತೆಯಾಡಿ ಬಂದಿದ್ದರು. ರಾಜಕೀಯಕ್ಕೆ ಬರಲು ಒಳಗೊಳಗೇ ಸಿದ್ಧತೆ ನಡೆಸಿದ್ದರು ಕೂಡ.

ಇದು ಖಚಿತವಾಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಳೆದ ಫೆಬ್ರವರಿಯಲ್ಲಿ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ ಅದಾಗಲೇ ಸುದೀಪ್ ತಂದೆ ಸಂಜೀವ್ ತಮ್ಮ ಮಗನ ರಾಜಕೀಯದ ದಾರಿಯನ್ನು ಸ್ಪಷ್ಟವಾಗಿ ತೀರ್ಮಾನಿಸಿಯಾಗಿತ್ತು!

ಸಂಸದರಿಗೆ ದೇಶ-ವಿದೇಶಗಳಲ್ಲಿ ದೊರೆಯುವ ಗೌರವವನ್ನು ನೋಡಿರುವ ಸಂಜೀವ್ ಸರೋವರ್ ಒಮ್ಮೆಯಾದರೂ ನನ್ನ ಮಗ ಈ ರೀತಿಯ ಗೌರವಕ್ಕೆ ಪಾತ್ರರಾಗಬೇಕೆಂದು ಆಸೆ ಪಟ್ಟಿದ್ದಾರೆ. ತಮ್ಮ ಆಸೆಯಂತೆಯೇ ಮಗನನ್ನು ಸೂಪರ್ ಸ್ಟಾರ್ ಮಾಡಿರುವ ಅವರು ಈಗ ರಾಜಕಾರಣಿಯಾಗಿಸುವ ಕನಸು ಕಾಣುತ್ತಿದ್ದಾರೆ ಎಂದು ಸಂಜೀವರ್ ಅವರ ಆತ್ಮೀಯರು ʻವಿಸ್ತಾರ ನ್ಯೂಸ್ʼಗೆ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅಷ್ಟು ಸುಲಭವಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಪ್ರಧಾನಿ ಮೋದಿಯವರನ್ನು ಬೆಂಬಲಿಸುವುದರಿಂದ ಗೆಲುವು ಕಷ್ಟವಲ್ಲ. ಹೀಗಾಗಿ ಈಗ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿ, ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವುದು ಸುದೀಪ್ ಪ್ಲಾನ್. ಹೀಗಾಗಿಯೇ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.

ಮಾಮ ಮಾಮ ಸುಮ್ನೆನಾ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸುದೀಪ್‌ ʻʻಮಾಮ …… ಮಾಮ…ʼʼ ಎಂದು ಕರೆಯುತ್ತಾರೆ. ʻʻಬೊಮ್ಮಾಯಿ ಮಾಮನ ಮೇಲಿನ ಪ್ರೀತಿಗಾಗಿ ಅವರಿಗಾಗಿ ಪ್ರಚಾರ ಮಾಡುವೆ… ಅವರು ಹೇಳಿದಲ್ಲಿ ಪ್ರಚಾರ ನಡೆಸುವೆ… ʼʼಎಂದು ಹೇಳಿದ್ದಾರೆ. ಸುದೀಪ್‌ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬದ ನಡುವೆ ಆತ್ಮೀಯ ಸಂಬಂಧವಿದೆ. ಹೀಗಾಗಿಯೇ ಸುದೀಪ್‌ ಚಿಕ್ಕವರಿದ್ದಾಗಿನಿಂದಲೂ ಬೊಮ್ಮಾಯಿ ಅವರನ್ನು ಮಾಮ ಎಂದೇ ಕರೆಯುತ್ತಿದ್ದು, ಈಗಲೂ ಮುಂದುವರಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಟ ಸುದೀಪ್‌

ಸುದೀಪ್‌ ತಂದೆ ಸಂಜೀವ್‌ ಈಗ ದೊಡ್ಡ ಹೊಟೇಲ್‌ ಉದ್ಯಮಿ. ಶಿವಮೊಗ್ಗ ಮೂಲದ ಅವರು ಬೆಂಗಳೂರಿಗೆ ಬಂದು ಸರೋವರ್‌ ಹೊಟೇಲ್‌ ವಹಿಸಿಕೊಂಡ ನಂತರ ವಿಜಯ್‌ಮಲ್ಯಾ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಿಗಳೊಂದಿಗೆ, ಅಂಬರೀಶ್‌ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖರೊಂದಿಗೆ, ಅಂತೆಯೇ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಸೇರಿದಂತೆ ಅನೇಕ ರಾಜಕಾರಣಿಗಳೊಂದಿಗೆ ಅತ್ಮೀಯ ಗೆಳೆತನ ಸಾಧಿಸಿದ್ದರು.

ಸಂಜೀವ್ ಅವರ ಹೊಟೇಲ್ ಉದ್ಯಮಕ್ಕೆ ಹಾಗೂ ಅವರು ನಡೆಸಿದ ಎಚ್ಎಂಟಿ ಕಂಪನಿಗೆ ವಾಚ್‌ನ ಡಯಲ್ ಸರಬರಾಜು ಮಾಡುವ ವ್ಯವಹಾರಕ್ಕೆ ಆಗಲೇ ಅಧಿಕಾರದಲ್ಲಿದ್ದ ಎಸ್.ಆರ್. ಬೊಮ್ಮಾಯಿ ನೆರವಾಗಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಇವರಿಬ್ಬರ ಕುಟುಂಬದ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ನಟ ಸುದೀಪ್ ಚಿಕ್ಕವರಿರುವಾಗಲೇ ಬಸವರಾಜ ಬೊಮ್ಮಾಯಿ ಜತೆ ಒಡನಾಟವಿದ್ದು, ಅವರನ್ನು ಮಾಮ ಎಂದೇ ಕರೆಯುತ್ತಿದ್ದರು. ಈಗ ಅವರಿಗೆ ಬೆಂಬಲವಾಗಿ ನಿಲ್ಲುವ ನೆಪದಲ್ಲಿಯೇ ರಾಜಕಾರಣಕ್ಕೆ ಕಾಲಿಡುತ್ತಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Inside Story: ವಿಜಯೇಂದ್ರ ವಿಷಯದಲ್ಲಿ ಯಡಿಯೂರಪ್ಪ ಹೈಅಲರ್ಟ್: ಮೂರನೇ ಬಾರಿಗೆ ಮುಗ್ಗರಿಸೋದು ಬೇಡವೆಂಬ ಮುನ್ನೆಚ್ಚರಿಕೆ

Exit mobile version