ಬೆಂಗಳೂರು: ಹುಬ್ಬಳ್ಳಿಯಲ್ಲಿ ಸೋಮವಾರ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ ಸಿದ್ದರಾಮಯ್ಯ (CM Siddaramaiah) ಐಸಿಸ್ ಸಂಘಟನೆ (ISIS Terror) ಜತೆ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagouda Patil Yatnal) ಈಗ ಈ ಸಂಬಂಧ ಎನ್‌ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಬುಧವಾರ ಬೆಳಗ್ಗೆಯಷ್ಟೇ ಸಿಎಂ ವಿರುದ್ಧ ಐಸಿಸಿ ಉಗ್ರ ಚಟುವಟಿಕೆಯನ್ನು ಬೆಂಬಲಿಸುವ ವ್ಯಕ್ತಿ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರಿಗೆ ಅರಿವು ಇರಲಿಲ್ಲವೇ ಎಂದು ಆರೋಪವನ್ನು ಮಾಡಿದ್ದರು. ಅಲ್ಲದೆ, ಕೆಲವೇ ಗಂಟೆಗಳಲ್ಲಿ ಸರಣಿ ಫೋಟೊಗಳನ್ನು ಬಿಡುಗಡೆ ಮಾಡಿದ್ದರು. ಇಂಥ ಭಯೋತ್ಪಾದನೆ ಪರ ಇರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ? ತನ್ವೀರ್ ಪೀರಾ ಅವರ ಸೌದಿ ಮತ್ತು ಮಧ್ಯಪ್ರಾಚ್ಯ ಭೇಟಿ ಸೇರಿ ಎಲ್ಲವನ್ನೂ ನಾನು ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದರು. ಈಗ ಎನ್ಐಎ ತನಿಖೆ ನಡೆಸುವಂತೆ ಅಮಿತ್ ಶಾಗೆ ಶಾಸಕ ಯತ್ನಾಳ್ ಪತ್ರ ಬರೆದು ಕೋರಿದ್ದಾರೆ.
ಇದನ್ನೂ ಓದಿ: Belagavi Winter Session: ವಿಧೇಯಕ ಮಂಡನೆ; ಆನ್‌ಲೈನ್ ಗೇಮಿಂಗ್ ಆಡ್ತೀರಾ? ಇನ್ಮುಂದೆ ತೆರಿಗೆ ಕಟ್ಟಿ!
ತನ್ವೀರ್ ಪೀರಾ ಅನ್ನೋ ಐಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಹೀಗಾಗಿ ಈ ಪ್ರಕರಣವನ್ನು ಎನ್‌ಐಗೆ ವಹಿಸುವುದು ಸೂಕ್ತ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಕಾರ್ಯಕ್ರಮದ ಭಾಗಿಯಾಗಿದ್ದ ತನ್ವೀರ್ ಪೀರಾಗೆ ಸಂಬಂಧಪಟ್ಟಂತೆ ಹಲವು ಫೋಟೊಗಳನ್ನು ಬಸನಗೌಡ ಪಾಟೀಲ್ ಯತ್ನಾಳ್ ಬಿಡುಗಡೆ ಮಾಡಿದ್ದರು. ಈ ಎಲ್ಲದರ ಆಧಾರದ ಮೇಲೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ತನ್ವೀರ್ ಪೀರಾ ಎಂಬ ವ್ಯಕ್ತಿ ಐಸಿಸ್ ನಾಯಕರನ್ನು ಭೇಟಿ ಮಾಡಿದ ಉದ್ದೇಶವನ್ನು ಕಂಡುಹಿಡಿಯಲು, ಅವರ ಪ್ರಯಾಣದ ಖರ್ಚು ವೆಚ್ಚಗಳ ಮೂಲಗಳನ್ನು ಕಂಡುಕೊಳ್ಳಲು, ಹಣಕಾಸು ನಿರ್ವಹಣೆಯಲ್ಲಿ ಆ ವ್ಯಕ್ತಿಯ ಪಾತ್ರ ಏನು ಎಂಬ ಬಗ್ಗೆ ತಿಳಿತಬೇಕಿದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವಾರು ಸಭೆಗಳಲ್ಲಿ ಪೀರಾ ಕಾಣಿಸಿಕೊಂಡಿದ್ದು, ಎಲ್ಲ ವಿಷಯಗಳ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಎನ್ಐಎಗೆ ವಹಿಸಬೇಕು. ಈ ವಿಷಯವನ್ನು ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.
ಮನವಿ ಪತ್ರದಲ್ಲೇನಿದೆ?
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಯೋತ್ಪಾದಕ ಸಂಘಟನೆ ಐಸಿಸ್ ಪರ ಇರುವ ತನ್ವೀರ್ ಪೀರಾ ಎಂಬ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡ ಘಟನೆಯನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಪೀರಾ ಈ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಿನ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯ ನಾಯಕರನ್ನು ಭೇಟಿಯಾಗಿರುವ ಬಗ್ಗೆ ನನಗೆ ತಿಳಿದಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಪೀರಾ ಸಿಎಂ ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ; ಅವರು ಈ ಹಿಂದೆ ಅನೇಕ ಭಾರಿ ಭೇಟಿಯಾಗಿದ್ದಾರೆ.
ನಮ್ಮ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಪೀರಾ ಮುಸ್ಲಿಂ ದೇಶಗಳಿಂದ ಹಣವನ್ನು ತರುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯೊಂದು ನನಗೆ ಸಿಕ್ಕಿದೆ. ಸಿಎಂ ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಇಲ್ಲವೇ, ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪೀರಾ ಅವರನ್ನು ಉದ್ದೇಶಪೂರ್ವಕವಾಗಿ ಭೇಟಿ ಮಾಡಲು ಅನುವು ಮಾಡಿಕೊಡುತ್ತಿರುವುದು ನಿಜವಾಗಿಯೂ ದುರದೃಷ್ಟಕರ.
ಇದನ್ನೂ ಓದಿ: Health Card: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗೆ ಹೊಸ ರೂಪ; ಸಿಎಂ ಚಾಲನೆ
ದೇಶದ ಹಿತಾಸಕ್ತಿಯಿಂದ ಎನ್‌ಐಎ ತನಿಖೆ ಆಗಲಿ
ಭಯೋತ್ಪಾದನೆಯ ಪರವಾಗಿ ಇರುವ ವ್ಯಕ್ತಿಗಳು ಉನ್ನತ ಮಟ್ಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಈ ಭೇಟಿಗಳು ನಡೆಯುತ್ತವೆ. ಪೀರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ಸ್ಥಳೀಯ ಪೊಲೀಸರು ಮುಂದಾಗುವುದಿಲ್ಲ. ಕಾರಣ, ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬುದು ನನ್ನ ಅನುಮಾನವಾಗಿದೆ. ಹೀಗಾಗಿ ಪೀರಾ ಅವರನ್ನು ಕೇಂದ್ರ ಸಂಸ್ಥೆಗಳಿಂದ ಕೂಲಂಕಷವಾಗಿ ತನಿಖೆ ನಡೆಸುವುದು ನಮ್ಮ ದೇಶದ ಹಿತಾಸಕ್ತಿ ದೃಷ್ಟಿಯಿಂದ ಉತ್ತಮ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.