Site icon Vistara News

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಚರ್ಚೆ ಇನ್ನೂ ಜೀವಂತ: ಬಿ.ಎಲ್‌. ಸಂತೋಷ್‌ ಭಾಷಣವೇ ಮೂಲ

issue of replacing state bjp president doing rounds again in party

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾದಂತೆಲ್ಲ ತಂತ್ರಗಾರಿಕೆ ದಾಳಗಳನ್ನು ಉರುಳಿಸಲು ರಾಜಕೀಯ ಪಕ್ಷಗಳು ಮುಂದಾಗಿವೆ. ಈ ಹಿಂದೆ ಅನೇಕ ಬಾರಿ ಚರ್ಚೆಯಾಗಿ ಹಿನ್ನೆಲೆಗೆ ಸರಿದಿದ್ದ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ಪ್ರಸ್ತುತ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಾಕಷ್ಟು ಪ್ರವಾಸ ಮಾಡಿದ್ದಾರೆ. ಅವರಷ್ಟು ಇಡೀ ರಾಜ್ಯವನ್ನು ಸುತ್ತಿದ ಮತ್ತೊಬ್ಬ ರಾಜ್ಯ ಅಧ್ಯಕ್ಷ ಇಲ್ಲ ಎನ್ನುವುದು ಅನೇಕ ಬಿಜೆಪಿಗೆ ಮಾತು. ಆದರೂ ಚುನಾವಣೆಗೂ ಮುನ್ನ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಚರ್ಚೆ ಬಿಜೆಪಿಯಲ್ಲಿ ನಡೆದೇ ಇದೆ.

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪ್ರಕೋಷ್ಠಗಳ ಸಮಾವೇಶದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಭಾಷಣ ಪ್ರಧಾನವಾಗಿತ್ತು. ರಾಜ್ಯದಲ್ಲಿ ಅನೇಕ ನಾಯಕರಿದ್ದಾರೆ, ಸ್ವತಃ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಇದ್ದರೂ ಸಿ.ಟಿ. ರವಿ ಅವರಿಗೆ ಪ್ರಧಾನ ಭಾಷಣ ಮಾಡಲು ತಿಳಿಸಲಾಗಿತ್ತು.

ನಂತರ ಮಾತನಾಡಿದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶೀ ಬಿ.ಎಲ್‌. ಸಂತೋಷ್‌ ಇಡೀ ಭಾಷಣದಲ್ಲಿ ಇಬ್ಬರ ಬಗ್ಗೆ ಹೆಚ್ಚಾಗಿ ಸ್ಮರಿಸಿದರು. ಮೊದಲನೆಯದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಎರಡನೆಯದು ಸಿ.ಟಿ. ರವಿ ಹೆಸರು.

ಇದನ್ನೂ ಓದಿ | ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಹವಾ ಶಕ್ತಿ ಸಂಗಮದಲ್ಲಿ ಮತ್ತೆ ಸಾಬೀತು: ಸಿ.ಟಿ. ರವಿ ಪರ ಬಿ.ಎಲ್‌. ಸಂತೋಷ್‌ ದನಿ

ಸಿ.ಟಿ. ರವಿ ಭಾಷಣದ ಶೈಲಿ, ಶಾಲನ್ನು ತಿರುಗಿಸಿ ಉತ್ಸಾಹ ಮೂಡಿಸಿದ್ದು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಪರಿ ಸೇರಿ ಭಾಷಣದುದ್ದಕ್ಕೂ ಅನೇಕ ಬಾರಿ ಸಿ.ಟಿ. ರವಿ ಅವರನ್ನು ಉಲ್ಲೇಖಿಸಿದರು. ನಮ್ಮ ಭಾಷಣವನ್ನು ಕೇಳಿ. ಆದರೆ ಸಿ.ಟಿ. ರವಿ ಅವರ ಭಾಷಣದ ಉತ್ಸಾಹದೊಂದಿಗೆ ಇಲ್ಲಿಂದ ತೆರಳಿ ಎಂದರು. ಬಿ.ಎಲ್‌. ಸಂತೋಷ್‌ ಅವರ ಮಾತನಲ್ಲಿ ಅನೇಕ ಅರ್ಥಗಳಿರುತ್ತವೆ ಎನ್ನುವುದು ಎಲ್ಲರೂ ಬಲ್ಲರು.

ಇಷ್ಟು ಬಾರಿ ಕೇವಲ ಸಿ.ಟಿ. ರವಿ. ಅವರ ಹೆಸರನ್ನು ಉಲ್ಲೇಖ ಮಾಡಿರುವುದರ ಹಿಂದೆ, ರಾಜ್ಯ ಅಧ್ಯಕ್ಷರ ಬದಲಾವಣೆ ಉದ್ದೇಶವೇ ಇದೆ ಎನ್ನುವುದು ಇದೀಗ ಪಕ್ಷದಲ್ಲಿ ನಡೆಯುತ್ತಿರುವ ಚರ್ಚೆ.

ಕಟೀಲ್‌ ಅವರನ್ನು ಬದಲಾವಣೆ ಮಾಡಿ ಆ ಸ್ಥಾನಕ್ಕೆ ಒಕ್ಕಲಿಗ ಸಮುದಾಯದವರಾದ ಸಮುದಾಯದವರನ್ನು ನೇಮಿಸಲಾಗುತ್ತದೆ ಎಂಬ ಮಾತು ಈ ಹಿಂದಿನಿಂದಲೂ ಇದೆ. ರಾಜ್ಯದ ಎಲ್ಲ ಭಾಗಗಳಲ್ಲೂ ಅಸ್ತಿತ್ವ ಹೊಂದಿರುವ ಬಿಜೆಪಿ, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಅತ್ಯಂತ ದುರ್ಬಲವಾಗಿದೆ. 89 ವಿಧಾನಸಭಾ ಕ್ಷೇತ್ರಗಳಿರುವ 11 ಜಿಲ್ಲೆಗಳಲ್ಲಿ ಗರಿಷ್ಠ 22 ಶಾಸಕರುಗಳನ್ನಷ್ಟೆ ಪಡೆಯಲು ಸಾಧ್ಯವಾಗುತ್ತಿದೆ. ಈ ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ ಒಕ್ಕಲಿಗ ಸಮುದಾಯದ ಮತಗಳನ್ನು ಪಡೆಯದೇ ಹೋದರೆ 150 ಗಳಿಸಲು ಆಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಪಕ್ಷ ಬಂದಿದೆ.

ಈ ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವುದು ಜೆಡಿಎಸ್‌ ಪಕ್ಷ. ಈಗಾಗಲೆ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಜೆಡಿಎಸ್‌, 93 ಅಭ್ಯರ್ಥಿಗಳನ್ನೂ ಘೋಷಣೆ ಮಾಡಿದೆ. ಜೆಡಿಎಸ್‌ ಮತಗಳನ್ನು ಕಸಿದುಕೊಳ್ಳದೇ ಹಳೆ ಮೈಸೂರಿನಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ, ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಜೆಡಿಎಸ್‌ ವಿರುದ್ಧ ಬಿ.ಎಲ್‌. ಸಂತೋಷ್‌ ತೀವ್ರವಾಗಿ ಹರಿಹಾಯ್ದರು ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಯಾರೋ ಒಬ್ಬರು ಕಣ್ಣೀರು ಹಾಕುತ್ತಿದ್ದಾರೆ ಎಂದರೆ ಚುನಾವಣೆ ಹತ್ತಿರಕ್ಕೆ ಬಂದಿದೆ ಎಂದರ್ಥ. ಪತಿ, ಪತ್ನಿಗಾಗಿ ತ್ಯಾಗ ಮಾಡುತ್ತಾರೆ, ಆಕೆ ಮಗನಿಗಾಗಿ ತ್ಯಾಗ ಮಾಡುತ್ತಾರೆ ಎನ್ನುತ್ತ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನೂ ತೀವ್ರವಾಗಿ ಟೀಕೆ ಮಾಡಿದ್ದರು ಬಿ.ಎಲ್‌. ಸಂತೋಷ್‌. ಈ ಮಾತಿನಿಂದ ವ್ಯಘ್ರವಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಲ್‌. ಸಂತೋಷ್‌ ವಿರುದ್ಧ ಮಂಗಳವಾದ ತೀವ್ರ ವಾಗ್ದಾಳಿ ನಡೆಸಿದ್ದರು. ನಿಮಗೂ ಕರ್ನಾಟಕಕ್ಕೂ ಏನು ಸಂಬಂಧ? ಜೋಳಿಗೆ ಹಾಕಿಕೊಂಡು ಓಡಾಡುತ್ತೀರ ಎಂದೆಲ್ಲ ಟೀಕೆ ಮಾಡಿದ್ದರು.

ಇದನ್ನೂ ಓದಿ | ಜೋಳಿಗೆ ಹಿಡಿದ ಮಹಾನುಭಾವ ಎಂದ HDK, ಏ ಪಂಚೆ ಎಂದ ಇಬ್ರಾಹಿಂ: ಬಿ.ಎಲ್‌. ಸಂತೋಷ್‌ ವಿರುದ್ಧ ದಳಪತಿಗಳು ಗರಂ

ಹಳೆ ಮೈಸೂರು ಭಾಗದಲ್ಲಿ ಇಲ್ಲಿವರೆಗೆ ಜೆಡಿಎಸ್‌ನೊಂದಿಗೆ ಹೊಂದಿದ್ದ ಹೊಂದಾಣಿಗೆ ರಾಜಕೀಯಕ್ಕೆ ಗುಡ್‌ಬೈ ಹೇಳಿ ಆ ಸಮುದಾಯದ ನಾಯಕನಿಗೆ ಪಟ್ಟ ಕಟ್ಟಲು ಪಕ್ಷ ಮುಂದಾಗಿದೆ ಎಂಬ ಮಾತುಗಳಿವೆ. ಸಿ.ಟಿ. ರವಿ ಅಥವಾ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದರೆ ಒಂದು ಕಡೆ ಒಕ್ಕಲಿಗ ಮತಗಳನ್ನು ಪಡೆಯಬಹುದು. ಇನ್ನೊಂದು ಕಡೆ, ಇಬ್ಬರೂ ಫೈರ್‌ ಬ್ರ್ಯಾಂಡ್‌ ಹಿಂದುತ್ವವಾದಿಗಳು ಎಂಬ ಇಮೇಜ್‌ ಸಹ ಪಕ್ಷಕ್ಕೆ ಲಾಭವಾಗುತ್ತದೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಬಹುತೇಕ ತಣ್ಣಗಾಗಿದ್ದ ರಾಜ್ಯ ಅಧ್ಯಕ್ಷರ ಬದಲಾವಣೆ ವಿಚಾರ ಇದೀಗ ಶಕ್ತಿ ಸಂಗಮ ಸಮಾವೇಶದ ನಂತರ ಪಕ್ಷದಲ್ಲಿ ಮತ್ತೆ ಚರ್ಚೆಗೆ ಒಳಗಾಗಿದೆ. ಜನವರಿ ಮೊದಲ ವಾರದೊಳಗೆ ಈ ಕುರಿತು ನಿರ್ಧಾರವಾಗುತ್ತದೆ ಎಂದು ಕೆಲ ನಾಯಕರು ಹೇಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ | Karnataka Election | ದೇಶ ವಿರೋಧಿ ಇಟಲಿ ನಾಯಿಯನ್ನು ಈಗಿನ ಕಾಂಗ್ರೆಸ್ ಸಾಕುತ್ತಿದೆ: ಸಿ.ಟಿ. ರವಿ

Exit mobile version