Site icon Vistara News

IT Raid : ಗುತ್ತಿಗೆದಾರರ ಸಂಘ ಸರ್ಕಾರದ ಕಮಿಷನ್ ಕಲೆಕ್ಷನ್‌ ಸೆಂಟರ್‌ ಎಂದ ಬೊಮ್ಮಾಯಿ

Basavaraja Bommai IT Raid

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರು ಜೊತೆಯಾಗಿ ಲೂಟಿ ಮಾಡುತ್ತಿದ್ದು, ಕಾಂಟ್ರಾಕ್ಟರ್ಸ್ ಅಸೋಸಿಯೇಷನ್‌ (Contractors Association) ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ (Commission Collection center) ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದಾರೆ. ಅದರ ಜತೆಗೆ ಐಟಿ ದಾಳಿಯ (IT raid) ವೇಳೆ ಗುತ್ತಿಗೆದಾರರ ಮನೆಯಲ್ಲಿ ಪತ್ತೆಯಾಗಿರುವ ಹಣದ ಬಗ್ಗೆ ಸಿಬಿಐ ಮತ್ತು ಇ.ಡಿ ತನಿಖೆಯಾಗಲಿ ಎಂದು ಹೇಳಿದ್ದಾರೆ.

ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಂದಾಗಿನಿಂದ ಟ್ರಾನ್ಸ್‌ಫರ್‌ನಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ. ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಇದು. ಗ್ರಾಮದಿಂದ ಹಿಡಿದು ವಿಧಾನಸೌಧದವರೆಗೂ ಭ್ರಷ್ಟಾಚಾರ ಇದೆ. ಬಹಿರಂಗವಾಗಿಯೇ ಕಮಿಷನ್ ದಂಧೆ ನಡೆಯುತ್ತಿದೆ. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾದ ತಕ್ಷಣವೇ ಗುತ್ತಿಗೆದಾರನ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿರುವುದು ಇದೇ ಮೊದಲು. ಸರ್ಕಾರ 10% ಕಮಿಷನ್ ಪಡೆದಿರುವದು ಸಾಬೀತಾಗಿದೆ. ಇನ್ನಷ್ಟು ಗುತ್ತಿಗೆದಾರರ ಮನೆಮೇಲೆ ದಾಳಿ ಮಾಡಿದರೆ ಇನಷ್ಟು ಕಮಿಷನ್ ಹಣ ಹೊರ ಬರಲಿದೆ ಎಂದು ಹೇಳಿದರು.

ಕಾಂಟ್ರಾಕ್ಟರ್ಸ್‌ ಅಸೋಷಿಯೇಷನ್ ಕಮಿಷನ್‌ ಕಲೆಕ್ಷನ್‌ ಸೆಂಟರ್‌

ಗುತ್ತಿಗೆದಾರರ ಸಂಘದವರು ನಮ್ಮ ಮೇಲೆ ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡಿದ್ದರು. ಈಗ ಕಾಂಟ್ರಾಕ್ಟರ್ಸ್‌ ಅಸೋಷಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಈ ಹಿಂದೆ ಇದೇ ವ್ಯಕ್ತಿ ಲಂಚ ಕೊಟ್ಟಿರುವ ಆರೋಪ ಬಂದಾಗ ಆತ ನಾನು ಕಾಂಟ್ರಾಕ್ಟ್ ಮಾಡಿಲ್ಲ ಅಂತ ಹೇಳಿದ್ದರು. ಕಾಂಟ್ರಾಕ್ಟರ್ಸ್‌ ಮತ್ತು ಸರ್ಕಾರ ಒಂದಾಗಿ ರಾಜ್ಯ ಲೂಟಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹದ ಹಿನ್ನೆಲೆಯಲ್ಲಿ ಮನಿ ಲ್ಯಾಂಡರಿಂಗ್ ಆಕ್ಟ್‌ನಲ್ಲಿ ಇ.ಡಿ ತನಿಖೆ ಆಗಬೇಕು. ಭ್ರಷ್ಟಾಚಾರ ಕಾಯ್ದೆಯಡಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಾಗಮೋಹನದಾಸ್‌ ಆಯೋಗವೇ ತನಿಖೆ ನಡೆಸಲಿ

ಕಮಿಷನ್ ಆರೋಪದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರಾದರೂ ನೋಡಿದ್ದೀರಾ ಅಂತ ಕೇಳಿದ್ದಾರೆ‌. ನಮ್ಮ ಸರ್ಕಾರದ ವಿರುದ್ದ 40% ಆರೋಪ ಮಾಡಿದಾಗ ನೀವು ನೋಡಿದ್ದೀರಾ? ಈ ಪ್ರಕರಣದಲ್ಲಿ ಮುಖ್ಯಮಂತ್ರಿಯ ಯಾವುದೇ ಪಾತ್ರ ಇಲ್ಲದಿದ್ದರೆ, ನೀವೇ ನೇಮಿಸಿರುವ ನ್ಯಾಯಮೂರ್ತಿ ಮಾಗಮೋಹನದಾಸ್ ಆಯೋಗಕ್ಕೆ ಈ ಪ್ರಕರಣ ನೀಡಬೇಕು. ಇಲ್ಲವೇ ಲೋಕಾಯುಕ್ತಕ್ಕೆ ನೀಡಬೇಕು. ಈ ಪ್ರಕರಣದ ಮೂಲ ಪತ್ತೆ ಆಗಬೇಕಾದರೆ ತನಿಖೆ ಆಗಬೇಕು ಎಂದು ಹೇಳಿದರು.

ʻʻಐದು ರಾಜ್ಯದ ಚುನಾವಣೆಗೆ ಎಟಿಎಂ ಥರಾ ಕೆಲಸ ಮಾಡುತ್ತಿರುವ ನೀವು ಭ್ರಷ್ಟಾಚಾರದ ವಿರುದ್ದ ಮಾತನಾಡುವ ನೈತಿಕತೆ ಇಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು 42 ಕೋಟಿ ರೂ. ಸಿಕ್ಕಿದ ಬೆನ್ನಿಗೇ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಸೆಲೆಕ್ಟಿವ್ ಆಗಿ ಕೆಲವೇ ಗುತ್ತಿಗೆದಾರರಿಗೆ ಪೇಮೆಂಟ್ ಮಾಡಲಾಗಿದೆ ಎಂದು ಕೆಂಪಣ್ಣ ಅವರೇ ಹೇಳಿದ್ದಾರೆ. ಇದೇ ಭ್ರಷ್ಟಾಚಾರದ ಪುರಾವೆಯಾಗಿದೆ. ಲಂಚ ಕೊಟ್ಟವರಿಗೆ ಬಿಲ್ ಬಿಡುಗಡೆ ಮಾಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿಗಳು ಸರಿಪಡಿಸುವುದಾಗಿ ಹೇಳಿದ್ದಾರೆ. ಅಂದರೆ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಅವರು ಒಪ್ಪಿಕೊಂಡಂತಾಗಿದೆʼʼ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: IT Raid : ಕಂಟ್ರಾಕ್ಟರ್ ಮನೆಯಲ್ಲಿ 42 ಕೋಟಿ ರೂ. ಪತ್ತೆ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ಪ್ರೊ. ಭಗವಾನ್‌ ಅವರದ್ದು ಹೀನ ಮನಸ್ಥಿತಿ

ಪ್ರೊ. ಭಗವಾನ್ ಅವರು ಮೈಸೂರಿನಲ್ಲಿ ನಡೆದ ಮಹಿಷ ಉತ್ಸವದ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಯಾವುದೇ ಸಮುದಾಯದ ವಿರುದ್ಧ ಮಾತನಾಡುವ ವ್ಯಕ್ತಿಗಳು ಹೀನ ಮನಸ್ಥಿತಿಯವರು, ಅವರು ತಮಗೆ ಬೇಕಾದವರನ್ನು ಹೊಗಳಿಕೊಳ್ಳಲಿ. ಆದರೆ, ಬುದ್ಧಿ ಜೀವಿಗಳು ಅಂತ ಬಿಂಬಿಸಿಕೊಂಡು ಒಂದು ಸಮುದಾಯದ ವಿರುದ್ಧ ತುಚ್ಛವಾಗಿ ಮಾತನಾಡುವುದು ಸರಿಯಲ್ಲ. ಇಂತವರಿಗೆ ಸರ್ಕಾರ ಬೆಂಬಲ ಕೊಡುತ್ತಿರುವುದರಿಂದ ಅವರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.

Exit mobile version