ಬೆಂಗಳೂರು: ರಾಜಧಾನಿಯಲ್ಲಿ ನಡೆದ ಐಟಿ ದಾಳಿ (IT Raid in Bangalore) ವೇಳೆ ಗುತ್ತಿಗೆದಾರರ ಸಂಘದ (Contractors Organizations) ಉಪಾಧ್ಯಕ್ಷ ಅಂಬಿಕಾಪತಿ ಅವರ ಮಗ ಪ್ರದೀಪ್ ಅವರ ಆರ್.ಟಿ ನಗರದ ಮನೆಯಲ್ಲಿ ಸಿಕ್ಕಿದ 42 ಕೋಟಿ ರೂ. ಹಣ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಸೇರಿದ್ದು ಎಂದು ಬಿಜೆಪಿ (BJP Allegation) ನೇರ ಆರೋಪ ಮಾಡಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಎಂಎಲ್‌ಸಿ ರವಿಕುಮಾರ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಈ ಆರೋಪ ಮಾಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಸಿಕ್ಕ ಹಣ ತೆಲಂಗಾಣ ಎಲೆಕ್ಷನ್ ಕಳಿಸುವ ಹಣ ಎಂದು ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಹಣ ನಮಗೆ ಸೇರಿದ್ದಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಆದರೆ ನಾವು ಹೇಳ್ತೀವಿ. ಇವತ್ತು ಸಿಕ್ಕ ಹಣ ಸಿದ್ದರಾಮಯ್ಯ ಮತ್ತು ಡಿಕೆಶಿಯರದ್ದೇ ಎಂದು ಆರೋಪಿಸಿದರು ರವಿಕುಮಾರ್.
ಅಂಬಿಕಾಪತಿ ಡಿ.ಕೆ. ಶಿವಕುಮಾರ್ ಆಪ್ತ ಎನ್ನುವುದು ಎಲ್ಲರಿಗೂ ಗೊತ್ತು. ಹೇಮಂತ್, ಪ್ರದೀಪ್, ಪ್ರಮೋದ್ ಈ ಮೂವರು ಅರೆಸ್ಟ್ ಆಗಿದ್ದಾರೆ. ಈ ಮೂವರೂ ಡಿಕೆಶಿ ಅವರನ್ನು ಭೇಟಿ ಮಾಡಿದ್ದರು. ಇದಕ್ಕಿಂತ ಹೆಚ್ಚು ಸಾಕ್ಷಿ ಇನ್ನೇನು ಬೇಕು ಎಂದು ಕೇಳಿದ್ದಾರೆ ರವಿಕುಮಾರ್.
650 ಕೋಟಿ ಬಿಡುಗಡೆ, 15% ಕಮಿಷನ್, 42 ಕೋಟಿ ಪತ್ತೆ!
ಡಿ.ಕೆ. ಶಿವಕುಮಾರ್ ಅವರು ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು ಎಂದರೆ 15% ಕಮಿಷನ್ ಕೇಳಿದ್ದಾರೆ ಎಂದು ಹಿಂದೆಯೇ ಆರೋಪಿಸಲಾಗಿತ್ತು. ಈ ಮಾತುಕತೆ, ಒಪ್ಪಂದದ ಬಳಿಕ 650 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಸರಿಯಾಗಿ ಲೆಕ್ಕ ಹಾಕಿದರೆ 42 ಕೋಟಿ ರೂ. ಆಗುತ್ತದೆ. ಹೀಗಾಗಿ ಇದು ಕಮಿಷನ್ ಹಣ ಎನ್ನುವುದಕ್ಕೆ ಬೇರೆ ಯಾವ ಪುರಾವೆ ಬೇಕು ಎಂದು ರವಿಕುಮಾರ್ ಕೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಹೈಕಮಾಂಡ್‌ನ ಎಟಿಎಂ ಸರ್ಕಾರ ಆಗುತ್ತದೆ ಎಂದು ಮೊದಲೇ ನಾವು ಹೇಳಿದ್ದೆವು. ಅದೀಗ ನಿಜವಾಗಿದೆ. ರಾಜ್ಯದಿಂದ ಬೇರೆ ರಾಜ್ಯಕ್ಕೆ, ಹೈಕಮಾಂಡ್‌ಗೆ ಹಣ ವರ್ಗಾವಣೆ ಆಗುತ್ತಿದೆ. ಇದ್ರ ಬಗ್ಗೆ ಸಂಪೂರ್ಣ ತೆನಿಖೆ ಆಗಬೇಕು. ರಾಜ್ಯದಲ್ಲಿ ಸಾವಿರಾರು ವರ್ಗಾವಣೆ ಆಗುತ್ತಿದೆ. ಹಣ ಇಲ್ಲದೆ ಯಾವ ವರ್ಗಾವಣೆಯೂ ನಡೆಯುತ್ತಿಲ್ಲ. ಇದು ಲೂಟಿಕೋರರ ಸರ್ಕಾರ ಎಂದು ರವಿಕುಮಾರ್ ಆರೋಪಿಸಿದರು.
ಇದನ್ನೂ ಓದಿ: IT Raid : 42 ಕೋಟಿ ರೂ. ಒಡೆಯ ಅಂಬಿಕಾಪತಿ ಯಾರು? ದುಡ್ಡು ಎಲ್ಲಿಂದ ಬಂತು? ಎಲ್ಲಿಗೆ ಹೋಗ್ತಿತ್ತು?
ರಾಜ್ಯದಲ್ಲಿ ಎಟಿಎಂ ಸರ್ಕಾರ ಕಾರ್ಯಾಚರಣೆ
ಇತ್ತ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಅಧಿಕಾರದಲ್ಲಿದೆ. ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲವು ದಿನಗಳ ಹಿಂದೆ 600 ಕೋಟಿ ಬಾಕಿ ಹಣ ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಸಿಕ್ಕ ಹಣ ಅದರ ಕಮಿಷನ್ ಹಣ ಎಂಬ ಮಾಹಿತಿ ಸಿಕ್ಕಿದೆ. ತೆಲಂಗಾಣದ ಚುನಾವಣೆ ಗೆ ಸಂಗ್ರಹಿಸಲಾದ ಹಣ ಎನ್ನಲಾಗುತ್ತಿದೆ ಎಂದು ವಿವರಿಸಿದರು.
ʻʻಕೆಲವು ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು. ನಾವು ಚುನಾವಣೆ ಹೊತ್ತಲ್ಲೇ ಇದು ಎಟಿಎಂ ಸರ್ಕಾರ ಅಂದಿದ್ದೆವು. ಈಗ ಹಣವೂ ಸಿಕ್ಕಿರುವುದರಿಂದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಹಾಗೂ ಡಿಕೆಶಿ ರಾಜೀನಾಮೆ ಕೊಡಬೇಕುʼʼ ಎಂದು ಆಗ್ರಹಿಸಿದರು.
ʻʻಕರ್ನಾಟಕ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಡರೂ ರೈತರಿಗೆ ಕರೆಂಟ್ ಇಲ್ಲʼʼ ಎಂದು ಹೇಳಿದ ಅವರು, ಕಾಂಗ್ರೆಸ್ ದೇಶದಲ್ಲಿ ಬೌದ್ಧಿಕವಾಗಿಯೂ ದಿವಾಳಿಯಾಗಿದೆ. ಇಸ್ರೇಲ್ ಯುಧ್ದದ ವಿಚಾರದಲ್ಲಿ ಭಯೋತ್ಪಾದಕರಿಗೆ ಬೆಂಬಲ ಕೊಡ್ತಾ ಇದೆʼʼ ಎಂದು ಆಪಾದಿಸಿದರು.
ʻʻಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸಕ್ಕೆ ಹಿಂಜರಿಯಲ್ಲ. ಈಗಾಗಲೇ ಎರಡು ಗುತ್ತಿಗೆದಾರರು ಇವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆʼʼ ಎಂದು ಹೇಳಿದರು.
ತೆಲಂಗಾಣಕ್ಕೆ ಬರುತ್ತಿದ್ದ ಹಣ ಎಂದ ಅಲ್ಲಿನ ಸಚಿವ ಹರೀಶ್ ರಾವ್
ಈ ನಡುವೆ, ತೆಲಂಗಾಣದ ಹಣಕಾಸು ಸಚಿವ ಹಾಗೂ ಭಾರತ್ ರಾಷ್ಟ್ರ ಸಮಿತಿ (BRS) ನಾಯಕ ಹರೀಶ್ ರಾವ್ ಅವರು ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಸಿಕ್ಕಿದ 42 ಕೋಟಿ ರೂ. ಹಣ ತೆಲಂಗಾಣ ಚುನಾವಣೆಗೆ ನಿಗದಿಯಾಗಿದ್ದು ಎಂದು ಆರೋಪಿಸಿದ್ದಾರೆ. ಬೆಂಗಳೂರಿನಿಂದ ಚೆನ್ನೈ ಮೂಲಕ ತೆಲಂಗಾಣಕ್ಕೆ ಹಣವನ್ನು ಪೂರೈಕೆ ಮಾಡಲು ಪ್ಲ್ಯಾನ್ ಆಗಿತ್ತು ಎಂದು ಹೇಳಿದರು.