ಬೆಂಗಳೂರು/ರಾಮನಗರ: ಬಿಜೆಪಿ ಜತೆ ಮೈತ್ರಿ(BJP JDS alliance) ಸಂಬಂಧಿಸಿದಂತೆ ಜೆಡಿಎಸ್ ಪಕ್ಷದ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಉಂಟಾಗಿದ್ದ ಕೆಲ ಗೊಂದಲಗಳನ್ನು (JDS Politics) ಜೆಡಿಎಸ್ ವರಿಷ್ಠ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ .ದೇವೇಗೌಡ (HD Devegowda) ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ನಿವಾರಿಸಿದ್ದಾರೆ. ಹಾಗೆಯೇ, ಪಕ್ಷದ ಹಿತಕ್ಕಾಗಿ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ. ಅವರ ನಿರ್ಧಾರಕ್ಕೆ ನಾವು ಬದ್ಧ ಇದ್ದೇವೆ ಎಂದು ಎಲ್ಲ ಮುಖಂಡರು, ಶಾಸಕರು ಸ್ಪಷ್ಟ ಮಾತುಗಳಲ್ಲಿ ಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಜೆಡಿಎಸ್ ಪಕ್ಷದೊಳಗೆ ಇದ್ದ ಆಂತರಿಕ ಭಿನ್ನಾಭಿಪ್ರಾಯಗಳು ಶಮನ ಆದಂತೆ ಆಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಮೈತ್ರಿ ವಿಚಾರದಲ್ಲಿ ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ, ಇಡುವ ಅಗತ್ಯವೂ ಇಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು. ಈ ಮೂಲಕ ಪಕ್ಷದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.
ಇದನ್ನೂ ಓದಿ: HD Devegowda : ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಕೆಟ್ಟ ರಾಜಕೀಯ ಆಟ ನಡೆಯಲ್ಲ; ಗುಡುಗಿದ ಎಚ್.ಡಿ. ದೇವೇಗೌಡ
ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಅನೇಕ ಆಹ್ವಾನಿತ ಮುಖಂಡರ ಸಭೆಯಲ್ಲಿ ಕೆಲವು ಸಂದೇಶಗಳನ್ನು ಉಭಯ ನಾಯಕರು ನೀಡಿದ್ದಾರೆ.
ಶಾಸಕರು, ನಾಯಕರ ಬೆಂಬಲ
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಶಾಸಕರಾದ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕರಾದ ಗುರು ಪಾಟೀಲ್, ರಾಜಾ ವೆಂಕಟಪ್ಪ ನಾಯಕ ಮುಂತಾದವರು, “ಪಕ್ಷ ಮತ್ತು ವರಿಷ್ಠರು ಕೈಗೊಂಡ ನಿರ್ಧಾರ ದೂರದೃಷ್ಟಿಯಿಂದ ಕೂಡಿದೆ. ಪಕ್ಷದ ಹಿತ ಅದರಲ್ಲಿ ಅಡಗಿದೆ. ನಾವೆಲ್ಲರೂ ಈ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಕಾಂಗ್ರೆಸ್ ಮಾಡುತ್ತಿರುವ ಅಪ ಪ್ರಚಾರಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷದ ಹಿತಕ್ಕಾಗಿ ವರಿಷ್ಠರು ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತೇವೆ. ಪಕ್ಷ ಉಳಿದರೆ ನಾವು ಉಳಿಯುತ್ತವೆ. ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಆಗಿದೆ ಎಂದು ಅವರೆಲ್ಲರೂ ಹೇಳಿದ್ದಾರೆ. ಇದೇ ವೇಳೆ ಜಿ.ಟಿ. ದೇವೇಗೌಡ ಅವರು ತಮ್ಮ ಭಾಷಣದ ನಡುವೆ ಮುಖಂಡರಿಂದ ಪಕ್ಷ ನಿಷ್ಠೆ ಬಗ್ಗೆ ಪ್ರಮಾಣ ಮಾಡಿಸಿದರು.
ಅಲ್ಪಸಂಖ್ಯಾತರಿಗೆ ಜೆಡಿಎಸ್ ಅನ್ಯಾಯ ಮಾಡಿಲ್ಲ: ಬಿ.ಎಂ.ಫಾರೂಕ್
ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿ, ಅಲ್ಪಸಂಖ್ಯಾತರಾದ ನಾವು ನಮ್ಮ ಆಚಾರ ವಿಚಾರ, ಆಹಾರ ಪದ್ಧತಿ ಇತ್ಯಾದಿಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆ ವಿಷಯದಲ್ಲಿ ಪಕ್ಷ ನಮ್ಮ ಜತೆ ನಿಂತಿದೆ ಎಂದರು.
ಯಾರೇ ಪಕ್ಷ ಬಿಟ್ಟರೂ ನಾನು ಪಕ್ಷ ಬಿಡಲ್ಲ. ಇಪ್ಪತ್ತು ತಿಂಗಳ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರದ ಕಾಲದಲ್ಲಿ ಅಲ್ಪಸಂಖ್ಯಾತರಿಗೆ ಏನಾದರೂ ತೊಂದರೆ ಆಯಿತಾ? ಎಚ್.ಡಿ. ಕುಮಾರಸ್ವಾಮಿ ಅವರು ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟರು. ಎಲ್ಲೂ ಕೂಡ ನಮಗೆ ಜೆಡಿಎಸ್ ಅಥವಾ ಕುಮಾರಸ್ವಾಮಿ ಅವರಿಂದ ಅನ್ಯಾಯ ಆಗಿಲ್ಲ. ನಮ್ಮ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ಬಿ.ಎಂ.ಫಾರೂಕ್ ಹೇಳಿದರು.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಮುಸ್ಲಿಮರ ನಡುವಿನ ಬಾಂಧವ್ಯ ಬಹಳ ಚೆನ್ನಾಗಿದೆ. ಅದನ್ನು ಕೆಡಿಸುವ ಶಕ್ತಿಗಳ ಬಗ್ಗೆ ಮುಸ್ಲಿಮರು ಆಲೋಚನೆ ಮಾಡುವುದು ಬೇಡ. ಮುಸ್ಲಿಮರಿಗೆ ಪಕ್ಷ ಸಾಕಷ್ಟು ನೀಡಿದೆ ಎಂದು ಫಾರೂಕ್ ಹೇಳಿದರು.
ಬಿಲ್ಡಪ್ ಕೊಡುವ ನಾಯಕರನ್ನು ಉಚ್ಚಾಟಿಸಿ
ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಇಮ್ತಿಯಾಜ್ ರಫೀಕ್ ಮಾತನಾಡಿ, ಪಕ್ಷಕ್ಕೆ ನಾವು ನಿಷ್ಠರಾಗಿದೇವೆ. ಅಲ್ಪಸಂಖ್ಯಾತರು ಯಾರು ಪಕ್ಷ ಬಿಟ್ಟು ಹೋಗಿಲ್ಲ, ಪಕ್ಷ ಮತ್ತು ವರಿಷ್ಠರು ಕೈಗೊಂಡ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ. ಅನಗತ್ಯವಾಗಿ ಪಕ್ಷದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್ ಸುಮ್ಮನೆ ಮುಸ್ಲಿಮರನ್ನು ಒಡೆದು ಆಳುವ ಬದಲು ಮುಸ್ಲಿಮರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಿ ಎಂದು ಒತ್ತಾಯ ಮಾಡಿದರು.
ಕಾಂಗ್ರೆಸ್ ಎಂದಿಗೂ ಮುಸ್ಲಿಂ ಪರವಾದ ಪಕ್ಷ. ಅದು ಯಾವಾಗಲೂ ಮುಸ್ಲಿಂ ವಿರೋಧಿ ನಿರ್ಧಾರಗಳನ್ನೇ ಕೈಗೊಂಡರು. ಇದನ್ನು ನಾವು ನೆನಪಿಟ್ಟುಕೊಳ್ಳಬೇಕು. ಇದು ಅಲ್ಪಸಂಖ್ಯಾತ ಸಮುದಾಯದವರು ಒಳ್ಳೊಳ್ಳೆ ಸರ್ಕಾರಿ ಕೆಲಸಗಳಲ್ಲಿ ಇದ್ದರೆ ಅದಕ್ಕೆ ದೇವೇಗೌಡರು ಕಾರಣ ಎಂದು ಹೇಳಿದರು.
ಮತ್ತೊಬ್ಬ ಮುಸ್ಲಿಮರ ನಾಯಕ ಸಿರಸಿಯ ರಜಾಕ್ ಅವರು ಮಾತನಾಡಿ, ಅಲ್ಪಸಂಖ್ಯಾತರು ಪಕ್ಷ ಬಿಟ್ಟು ಹೋಗಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಯಾರಿಂದ ಪಕ್ಷಕ್ಕೆ ಉಪಯೋಗ ಇಲ್ಲವೋ ಅಂತವರು ಪ್ರತ್ಯೇಕ ಸಭೆ ನಡೆಸಿದ್ದಾರೆಯೋ ಅವರು ಕೇವಲ ಬಿಲ್ಡಪ್ ವೀರರು ಮಾತ್ರ. ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯ ನಾಯಕ್, ಮಾಜಿ ಸಚಿವ ಎಚ್.ರೇವಣ್ಣ, ವೆಂಕಟರಾವ್ ನಾಡಗೌಡ, ಅಲ್ಕೋಡ್ ಹನುಮಂತಪ್ಪ, ಬಿ.ಎಂ.ಫಾರೂಕ್, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಶಾಸಕರಾದ ಕರೆಮ್ಮ ನಾಯಕ್, ನೇಮಿರಾಜ್ ನಾಯಕ್, ಎ.ಮಂಜು, ಸಮೃದ್ಧಿ ಮಂಜುನಾಥ್, ಜಿ.ಟಿ.ಹರೀಶ್ ಗೌಡ, ವೆಂಕಟ ಶಿವಾರೆಡ್ಡಿ, ಎಚ್.ಸಿ.ಬಾಲಕೃಷ್ಣ, ಟಿ.ಎ.ಶರವಣ, ಸೂರಜ್ ರೇವಣ್ಣ, ಸ್ವರೂಪ್ ಪ್ರಕಾಶ್, ರಾಜೂಗೌಡ ಪಾಟೀಲ, ಮೇಲೂರು ರವಿ, ಎಂ.ಟಿ.ಕೃಷ್ಣಪ್ಪ, ಕೆ ಆರ್ ಪೇಟೆ ಮಂಜುನಾಥ್ ಸೇರಿದಂತೆ ಎಲ್ಲ ಶಾಸಕರು ಮತ್ತು ಎಲ್ಲ ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.
ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಲೀಲಾದೇವಿ ಆರ್. ಪ್ರಸಾದ್, ಪಕ್ಷದ ಹಿರಿಯ ನಾಯಕ ಬಿ.ಸಿ.ಗೌರಿಶಂಕರ್, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪಕ್ಷದ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಸುರೇಶ್ ಬಾಬು, ಮಾಜಿ ಉಪ ಸ್ಪೀಕರ್ ಕೆ.ಎಂ.ಕೃಷ್ಣಾರೆಡ್ಡಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.