Site icon Vistara News

Mari Thibbegowda : ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್‌ಗೆ ಹೊಡೆತ; ಎಂಎಲ್‌ಸಿ ಮರಿತಿಬ್ಬೇಗೌಡ ರಾಜೀನಾಮೆ

Mari thibbegowda 2

ಹುಬ್ಬಳ್ಳಿ: ಕಳೆದ ಹಲವು ವರ್ಷಗಳಿಂದಲೇ ಜೆಡಿಎಸ್‌ ಜತೆಗೆ ವಿರಸ ಭಾವ ಪ್ರದರ್ಶಿಸುತ್ತಿದ್ದ ವಿಧಾನ ಪರಿಷತ್‌ ಸದಸ್ಯ (Legislative Council Member) ಮರಿತಿಬ್ಬೇಗೌಡ (Mari Thibbegowda) ಕೊನೆಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ (Mari Thibbegowda Resigns from JDS) ನೀಡಿದ್ದಾರೆ. ಎಚ್‌.ಡಿ ದೇವೇಗೌಡರು (HD Devegowda) ಮತ್ತು ಎಚ್‌.ಡಿ ಕುಮಾರಸ್ವಾಮಿ (HD Kumaraswamy) ತನ್ನನ್ನು ಕಡೆಗಣಿಸಿದ್ದಾರೆ ಎಂಬ ಕಾರಣ ನೀಡಿರುವ ಅವರು ಮುಂದೆ ಕಾಂಗ್ರೆಸ್‌ ಸೇರುವ ಸಾಧ್ಯತೆಗಳಿವೆ. ಇದು ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗಿದೆ.

ಮರಿ ತಿಬ್ಬೇಗೌಡರ ಎಂಎಲ್‌ಸಿ ಅವಧಿ ಜೂನ್‌ ವರೆಗೆ ಇದೆ. ಇದೀಗ ಅವಧಿಪೂರ್ವವಾಗಿ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಗೃಹ ಕಚೇರಿಗೆ ಆಗಮಿಸಿ ಮರಿತಿಬ್ಬೇಗೌಡ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಸ್ವ ಇಚ್ಚೆಯಿಂದ, ಯಾರದೇ ಒತ್ತಡವಿಲ್ಲದೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಮರಿತಿಬ್ಬೇಗೌಡ ಹೇಳಿದ್ದಾರೆ. ಬಸವರಾಜ ಹೊರಟ್ಟಿ ಅವರು ರಾಜೀನಾಮೆ ಅಂಗೀಕರಿಸಿದ್ದಾರೆ.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮರಿತಿಬ್ಬೇಗೌಡರು, ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ. ನಾನು ಯಾವುದೇ ಪಕ್ಷ ಸೇರುವ ತೀರ್ಮಾನ ತೆಗೆದುಕೊಂಡಿಲ್ಲ. ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಎರಡು ಬಾರಿ ಜೆಡಿಎಸ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ. ವಿಧಾನ ಪರಿಷತ್‌ನಲ್ಲಿ ನನ್ನ ಮುಂದಿನ ಅವಧಿಗೆ ರಾಜಿನಾಮೆ ಸಲ್ಲಿಸಿದ್ದೇನೆ. ಸ್ವ ಇಚ್ಛೆಯಿಂದ ತೀರ್ಮಾನ ಮಾಡಿದ್ದೇನೆ, ರಾಜಿನಾಮೆ ಕೊಡಲು ವೈಯಕ್ತಿಕ ಕಾರಣಗಳಿವೆ. ಜೆಡಿಎಸ್ ವರಿಷ್ಠರಾದ ದೇವೇಗೌಡರು, ಕುಮಾರಸ್ವಾಮಿಯವರು ನಮ್ಮನ್ನು ಕಡೆಗಣಿಸಿದ್ದಾರೆ. ನಿಷ್ಠಾವಂತ‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಮ್ಮ ಸಲಹೆಗಳು ಜೆಡಿಎಸ್ ವರಿಷ್ಠರಿಗೆ ಹಿಡಿಸುತ್ತಿಲ್ಲ ಎಂದು ತಮ್ಮ ರಾಜೀನಾಮೆಗೆ ವಿವರಣೆ ನೀಡಿದರು.

ʻʻನಮ್ಮ‌ ಪಕ್ಷದ ನಾಯಕರು ಮೊಸಳೆಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಇಲ್ಲಿ ಮೊಸಳೆ ಅಂದರೆ ಬಿಜೆಪಿ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರನ್ನು ಬಿಟ್ಟರೆ ಯಾರ ಮಾತನ್ನೂ ಕೇಳಲ್ಲ ಎಂದು ಹೇಳಿದ ಅವರು, ಪ್ರಧಾನಿಗಳೇ ದೇವೇಗೌಡರದ್ದು ಕುಟುಂಬ ರಾಜಕೀಯ ಅಂತ ಹೇಳಿದರು. ದೊಡ್ಡ ಪ್ರಮಾಣದಲ್ಲಿ ಟೀಕೆ ಮಾಡಿದರು. ಆದರೆ, ಈಗ ಅವರ ಜತೆಗೇ ಸೇರಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡದೆ ತಮಗೆ ಬೇಕಾದವರಿಗೆ ಕೊಟ್ಟರು. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಮಾಡುವುದು ಬೇಡ ಎಂದಿದ್ದೆ. ನಿಖಿಲ್ ಬೇಡ ಅಂದಿದ್ದಕ್ಕೆ ನನ್ನ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಮ್ಮ ಅಸಮಾಧಾನದ ಹಿನ್ನೆಲೆ ಬಿಚ್ಚಿಟ್ಟರು.

ಇದನ್ನೂ ಓದಿ: BN Bachegowda : ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಬಿಜೆಪಿಗೆ ರಾಜೀನಾಮೆ, ಕೈ ಸೇರ್ಪಡೆ?

2022ರಲ್ಲೇ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಮರಿತಿಬ್ಬೇಗೌಡ

ಮರಿತಿಬ್ಬೇಗೌಡರು 2022ರಲ್ಲೇ ಜೆಡಿಎಸ್‌ ತೊರೆಯುವ ಸುದ್ದಿ ಇತ್ತು. ಆಗಲೇ ಅವರು ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಬೆಂಬಲಿಗರಿಗೆ ಸೂಚನೆ ನೀಡಿದ್ದರು. ಜೆಡಿಎಸ್ ಅಭ್ಯರ್ಥಿ ಹೆಚ್ ಕೆ ರಾಮುಗೆ ಮತ ಹಾಕದಂತೆ ಮನವಿ ಮಾಡಿದ್ದ ಅವರು, ತಮ್ಮ ಬೆಂಬಲಿಗ ಜಯರಾಂಗೆ ಬಿಫಾರಂ ನೀಡಿಲ್ಲ ಎಂದು ಸಿಟ್ಟುಗೊಂಡಿದ್ದರು.

ಜೆಡಿಎಸ್​ನಲ್ಲಿ ದುಡ್ಡು ಇರುವವರಿಗೆ ಮಾತ್ರ ಬಿಫಾರಂ ನೀಡುತ್ತಾರೆ. ನಮ್ಮ ಪಕ್ಷದ ನಾಯಕರ ನಡೆ ಬಗ್ಗೆ ನನಗೆ ತೀವ್ರ ಬೇಸರವಾಗಿದೆ. ನಾಲ್ಕೈದು ವರ್ಷಗಳಿಂದ ನೋವು ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷ, ಕಾರ್ಯಕರ್ತರ ಬಗ್ಗೆ ನಾಯಕರಿಗೆ ಕಿಂಚಿತ್ತೂ ಕಳಕಳಿ ಇಲ್ಲ. ಜಯರಾಂ ಬಳಿ ಹಣ ಇಲ್ಲವೆಂದು ಟಿಕೆಟ್ ಕೊಡಲ್ಲ ಅಂದಿದ್ದಾರೆ ಎಂದು ಅಂದು ಮರಿತಿಬ್ಬೇಗೌಡ ಹೇಳಿದ್ದರು. ಇದೀಗ ಅವರು ಅಂತಿಮ ತೀರ್ಮಾನ ಮಾಡಿ ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದಾರೆ.

Exit mobile version