ಬೆಂಗಳೂರು: ಇಡೀ ರಾಮ ನಗರ ಜಿಲ್ಲೆಯೇ ಬೆಂಗಳೂರಿನದ್ದು. ನಾನು ಬೆಂಗಳೂರಿಗ- ಎಂದು ಹೇಳುವ ಮೂಲಕ ಕನಕಪುರವವನ್ನು (Kanakapura row) ಬೆಂಗಳೂರಿಗೆ ಸೇರಿಸುವ ತಮ್ಮ ಪ್ರಸ್ತಾವನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ತಮ್ಮ ಹೇಳಿಕೆಯನ್ನು ಪರಿಶೀಲಿಸದೆ ವಿರೋಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕಾಮನ್‌ಸೆನ್ಸ್ ಇಲ್ಲ ಎಂದರು.
ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿ.ಕೆ. ಶಿವಕುಮಾರ್ ಅವರ ಚಿಂತನೆ ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಇದು ಕನಕಪುರದಲ್ಲಿರುವ ತಮ್ಮ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳುವ ಡಿ.ಕೆ. ಶಿವಕುಮಾರ್ ಹುನ್ನಾರ, ರಾಮನಗರಕ್ಕೆ ಮಾಡುವ ದ್ರೋಹ ಎಂದಿದ್ದರು.
ʻʻಈ ದೇಶಕ್ಕೆ ವಿದ್ಯಾವಂತರು ಇಲ್ಲದಿದ್ದರೂ, ಬುದ್ದಿವಂತರು, ಪ್ರಜ್ಞಾವಂತರು ಬೇಕು. ನಾನು ಕುಮಾರಸ್ವಾಮಿ ಅವರು ಸಿಎಂ ಆದವರು ಪ್ರಜ್ಞಾವಂತರು ಅಂದುಕೊಂಡಿದ್ದೆ. ಅವರು ಅವರ ತಂದೆಯವರನ್ನು ಕೇಳಿದರೆ ಗೊತ್ತಾಗುತ್ತದೆ. ಅವರ ತಂದೆಯವರನ್ನು ಕೇಳಿ ತಿಳಿದುಕೊಳ್ಳಬೇಕು. ಇಡೀ ರಾಮನಗರ ಜಿಲ್ಲೆ ಬೆಂಗಳೂರಿನದ್ದು. ನಾವೆಲ್ಲ ಬೆಂಗಳೂರಿನವರುʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ʻʻಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ತಲೆಯಲ್ಲಿ ಏನೋ ಯೋಚನೆ ಇದೆ. ಅದನ್ನು ಏನು ಮಾಡುತ್ತೀನಿ ಅನ್ನುವುದೇ ಮುಖ್ಯʼʼ ಎಂದು ಹೇಳಿದ ಡಿ.ಕೆ. ಶಿವಕುಮಾರ್ ಅವರು, ಕೆಂಗಲ್ ಹನುಮಂತಯ್ಯ, ಕೆಂಪೇಗೌಡರು, ಶಿವಕುಮಾರ ಸ್ವಾಮೀಜಿ ರಾಮನಗರದವರು. ಅಂದರೆ ಅವರು ಬೆಂಗಳೂರಿನವರು, ಇದನ್ನು ಅರ್ಥ ಮಾಡಿಕೊಳ್ಳಬೇಕುʼʼ ಎಂದರು.
ಭೂಮಿ ಮಾರಿಕೊಳ್ಳಬೇಡಿ ಎಂದು ಹೇಳಿದ್ದೇನೆ ಅಷ್ಟೆ
ʻʻಬೆಂಗಳೂರಿನ ಕಸ ಬಂದು ನಮ್ಮ ಊರನ್ನು ಸೇರುತ್ತಿದೆ. ಕೋವಿಡ್ ನಂತರ ನಮ್ಮ ಜನ ಭೂಮಿ ಮಾರಿಕೊಳ್ಳುತ್ತಿದ್ದಾರೆ. ಇದೆಲ್ಲ ತಪ್ಪಬೇಕುʼʼ ಎಂದು ಹೇಳಿದ ಡಿ.ಕೆ. ಶಿವಕುಮಾರ್ ಅವರು, ರಾಮನಗರ ಜಿಲ್ಲೆ ಮಾಡಿದ ಕ್ರೆಡಿಟ್ ಕುಮಾರಸ್ವಾಮಿ ಅವರೇ ಇಟ್ಟುಕೊಳ್ಳಲಿ ಎಂದರು.
ಬೆಂಗಳೂರು ಅಂತ ಹೇಳಿಕೊಳ್ಳುವುದು ಹೆಮ್ಮೆ ಎಂದ ಡಿ.ಕೆ. ಶಿವಕುಮಾರ್
ʻʻಮಂಡ್ಯ ಯೂನಿವರ್ಸಿಟಿಯಾದರೂ ಹುಡುಗರು ಮೈಸೂರು ಯೂನಿವರ್ಸಿಟಿ ಅಂತ ಹೇಳಿಕೊಳ್ಳಬೇಕು ಅನ್ನುತ್ತಾರೆ. ಇದು ಅದೇ ರೀತಿಯಾಗಿದೆ. ರಾಮನಗರದ ಜನ ತಾವು ಬೆಂಗಳೂರಿಗರು ಎಂದು ಹೇಳಿಕೊಳ್ಳುತ್ತಾರೆʼʼ ಎಂದ ಡಿ.ಕೆ. ಶಿವಕುಮಾರ್ ಇದೊಂದು ಐಡೆಂಟಿಟಿ ವಿಚಾರ ಎಂದರು.
ಮಾಗಡಿ, ರಾಮನಗರ, ಚನ್ನಪಟ್ಟಣದ ಜನ ಆಸ್ತಿ ಮಾರುತ್ತಿದ್ದಾರೆ. ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿಕೊಳ್ಳಿ ಅಂತಾ ಹೇಳಿದ್ದೇನೆ. ನಾನು ಕನಕಪುರಕ್ಕೆ ಎಂಟ್ರಿಯಾದ ಮೇಲೆ ಭೂಮಿ ಬೆಲೆ ಏನಾಯಿತು ಅಂತ ಜನರಿಗೆ ಗೊತ್ತಿದೆ. ಇನ್ನೂ ಬದಲಾವಣೆ ಆಗಲಿದೆ. ಈ ವಿಚಾರದಲ್ಲಿ ಏನೂ ಅರ್ಜೆಂಟ್ ಇಲ್ಲ. ಇಲ್ಲಿ ಯಾರೂ ಯಾರದ್ದನ್ನೂ ಕಿತ್ತುಕೊಂಡು ಹೋಗುತ್ತಿಲ್ಲ ಎಂದು ಹೇಳಿದ ಅವರು, ವಿಜಯದಶಮಿ ದಿನ ನಾನು ಶುಭ ಮೂರ್ಹತದಲ್ಲಿ, ಶುಭ ಗಳಿಗೆಯಲ್ಲಿ ಈ ಮಾತು ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡರು.