ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60ರಷ್ಟು ಕನ್ನಡ (Kannada signboard rules) ಅಳವಡಿಕೆಗೆ ಬಿಬಿಎಂಪಿ ನೀಡಿದ್ದ ಗಡುವು ಮುಕ್ತಾಯಗೊಂಡಿತ್ತು. ಆದರೆ, ಬಿಬಿಎಂಪಿ (BBMP) ಇಂದು (ಗುರುವಾರ- ಫೆ. 29) ಸಂಜೆವರೆಗೆ ಅವಕಾಶವನ್ನು ಕಲ್ಪಿಸಿತ್ತು. ಈಗ ಡಿಸಿಎಂ, ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ವ್ಯಾಪಾರಸ್ಥರಿಗೆ ಬಿಗ್ ರಿಲೀಫ್ ನೀಡಿದ್ದು, ಎರಡು ವಾರಗಳ ಕಾಲ ಅವಧಿಯನ್ನು ವಿಸ್ತರಣೆ ಮಾಡಿದ್ದಾಗಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, ಮುಂದಿನ 2 ವಾರದವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2 ವಾರಗಳ ನಂತರ ಇದನ್ನು ಎಲ್ಲರೂ ಪಾಲಿಸುತ್ತಾರೆ ಎಂಬುದು ತಮ್ಮ ನಿರೀಕ್ಷೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್ ಪೋಸ್ಟ್‌ನಲ್ಲೇನಿದೆ?
“ಬೆಂಗಳೂರಿನ ಎಲ್ಲ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದ ಕಡೆ ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ ಕಾಲ ವಿಸ್ತರಿಸಲಾಗಿದೆ.
ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿಹಿಡಿಯುವುದು ಅತಿ ಮುಖ್ಯ. 2 ವಾರಗಳ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೇನೆ” ಎಂದು ಡಿ.ಕೆ. ಶಿವಕುಮಾರ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಮಾ. 5ರ ಗಡುವು ನೀಡಿರುವ ಕರವೇ
ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಲೇಬೇಕು. ಬೆಂಗಳೂರು ಮಾತ್ರವಲ್ಲ, ರಾಜ್ಯದ 31 ಜಿಲ್ಲೆಗಳಲ್ಲೂ ಈ ಕಾನೂನು ಜಾರಿಗೆ ಬರಬೇಕು. ಬಿಬಿಎಂಪಿ ನೀಡಿದ ಗಡುವು ಬುಧವಾರಕ್ಕೆ ಮುಗಿದಿದೆ. ಮಾರ್ಚ್ 1ರವರೆಗೆ ನಾವು ಕಾದು ನೋಡುತ್ತೇವೆ. ಮಾರ್ಚ್ 5ರಂದು ಮತ್ತೆ ಬೀದಿಗಿಳಿದು, ಬಿಬಿಎಂಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಬುಧವಾರ (ಫೆ.28) ಎಚ್ಚರಿಕೆ ನೀಡಿದ್ದರು.
ರಾಜ್ಯಾದ್ಯಂತ ಅನುಷ್ಠಾನ ಆಗಲೇಬೇಕೆಂದಿರುವ ಕರವೇ
46,600 ಉದ್ದಿಮೆದಾರರು ಕನ್ನಡ ನಾಮಫಲಕ ಅಳವಡಿಕೆ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ 3,616 ಉದ್ದಿಮೆದಾರರು ಅಳವಡಿಕೆ ಮಾಡಬೇಕು, ಅದನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದಾರೆ. ಆದರೆ ಇದು ಕೇವಲ ಬೆಂಗಳೂರಿಗೆ ಅಷ್ಟೇ ಅಲ್ಲ, ರಾಜ್ಯದ 31 ಜಿಲ್ಲೆಗಳಿಗೂ ಅನ್ವಯ ಆಗಬೇಕು. ಮಾರ್ಚ್ 1ರವರೆಗೆ ಕಾದುನೋಡುತ್ತೇವೆ, ಮಾರ್ಚ್ 5ರಂದು ಮತ್ತೆ ಬೀದಿಗೆ ಇಳಿದು ಬಿಬಿಎಂಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕರವೇ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: Nigama Mandali : 44 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಅಧಿಕಾರ ಭಾಗ್ಯ; ಚಲನಚಿತ್ರ ಅಕಾಡೆಮಿಗೆ ಸಾಧುಕೋಕಿಲ
ಲೈಸೆನ್ಸ್ ರದ್ದು ಮಾಡಲು ಮುಂದಾಗಿದ್ದ ಬಿಬಿಎಂಪಿ
ಫೆ.29 ರಿಂದ ಅನ್ವಯವಾಗುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳಿಗೆ ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಗಿಯನ್ನು ಅಮಾನತು ಮಾಡಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳಿಗೆ ಬೀಗಮುದ್ರೆ (Sealdown) ಮಾಡಲು ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.