ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ (Kannada signboard rules) ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.28 ಕೊನೆಯ ದಿನವಾಗಿದೆ. ಆದರೆ, ಈ ಗಡುವಿನ ಅವಧಿ ಸಮೀಪಿಸುತ್ತಿದೆ. ಹೀಗಂತ ಕನ್ನಡ ನಾಮಫಲಕ (Kannada Name Plate) ಅಳವಡಿಕೆಗೆ ಇರುವ ಅವಧಿಗೆ ಮೊದಲೇ ನಮ್ಮ ಮೇಲೆ ಬಲವಂತವಾಗಿ ಕ್ರಮ ಕೈಗೊಳ್ಳಬೇಡಿ. ಈ ಸಂದರ್ಭದಲ್ಲಿ ಯಾವುದೇ ರೀತಿಯ ದಬ್ಬಾಳಿಕೆಗೆ ಅವಕಾಶವನ್ನು ಕೊಡಬೇಡಿ ಎಂದು ಬಿಬಿಎಂಪಿ (BBMP) ಹಾಗೂ ರಾಜ್ಯ ಸರ್ಕಾರಕ್ಕೆ ವ್ಯಾಪಾರಿ ಸಂಘಟನೆಯವರು ಮನವಿ ಮಾಡಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಅನೇಕ ವ್ಯಾಪಾರಿಗಳು ತಮ್ಮ ಅಂಗಡಿ, ಮಳಿಗೆಗಳ ನಾಮಫಲಕಗಳನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕೆಲವು ಕಡೆ ಈಗಿರುವ ಇಂಗ್ಲಿಷ್ ನಾಮಫಲಕಕ್ಕೆ ಪರದೆಯಿಂದ ಮುಚ್ಚಿದ್ದು, ಬದಲಾವಣೆಯನ್ನು ಮಾಡಲಾಗುತ್ತಿದೆ ಎಂಬ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ. ಹೀಗಾಗಿ ಗಡುವು ಮುಗಿಯುವುದರೊಳಗೆ ಕನ್ನಡ ಪರ ಸಂಘಟನೆಗಳ ಗುಂಪುಗಳು ತಮ್ಮ ವಿರುದ್ಧ ಕಿರುಕುಳ ಅಥವಾ ವಿಧ್ವಂಸಕ ಕೃತ್ಯಗಳಲ್ಲಿ ತೊಡಗದಂತೆ ನೋಡಿಕೊಳ್ಳಬೇಕು ಎಂದು ವ್ಯಾಪಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಫ್‌ಕೆಸಿಸಿಐ ಸ್ಪಷ್ಟನೆ
ಈ ಬಗ್ಗೆ ಎಫ್‌ಕೆಸಿಸಿಐ ಪ್ರತಿಕ್ರಿಯೆ ನೀಡಿದ್ದು, ವರ್ತಕರು ಹೊಸ ನಾಮಫಲಕಗಳನ್ನು ಅಳವಡಿಸಲು ಒಪ್ಪಿಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅವರು ಕನ್ನಡ ನೆಲದ ಕಾನೂನು, ನಿಯಮಗಳನ್ನು ಪಾಲಿಸುತ್ತಾರೆ. ಫೆಬ್ರವರಿ 28ರವರೆಗೆ ಈಗಾಗಲೇ ಬಿಬಿಎಂಪಿ ಗುಡುವು ವಿಧಿಸಿದೆ. ಹೀಗಾಗಿ ಈ ಗಡುವಿನವರೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ನಾವು ಈ ಮೂಲಕ ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡುತ್ತೇವೆ. ಅಲ್ಲದೆ, ಯಾರೂ ಸಹ ಕಾನೂನನ್ನು ಕೈಗೆ ತೆಗೆದುಕೊಳ್ಳದ ರೀತಿಯಲ್ಲಿ ಎಲ್ಲ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದೆ.
ನಾಮಫಲಕ ಅಳವಡಿಕೆಗೆ ವೆಚ್ಚ ಅಧಿಕ
ನಾಮಫಲಕವನ್ನು ಕನ್ನಡದಲ್ಲಿ ಅಳವಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ. ಆದರೆ, ಹೊಸ ಬೋರ್ಡ್ ಅಳವಡಿಕೆಗೆ ಸುಮಾರು 30,000 ರೂಪಾಯಿಗಳವರೆಗೆ ವೆಚ್ಚ ತಗುಲುತ್ತದೆ. ಹೀಗಾಗಿ ಕೆಲವರಿಗೆ ಹಣ ಹೊಂದಿಸಲು ವಿಳಂಬವಾಗುತ್ತಿದೆ. ಹೀಗಾಗಿ ಗಡುವಿನ ಅವಧಿವರೆಗೆ ಸಮಯಾವಕಾಶ ನೀಡಬೇಕು ಎಂದು ಕೆಲವು ವ್ಯಾಪಾರಸ್ಥರು ಕೋರಿದ್ದಾರೆ.
ಜಯನಗರದಲ್ಲಿ ಕೆಲವು ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಅಳವಡಿಕೆ ಮಾಡಿರದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕನ್ನಡ ಪರ ಸಂಘಟನೆಗಳು ದಾಳಿ ನಡೆಸಿದ್ದವು. ಇದರಿಂದ ಸಾಕಷ್ಟು ನಷ್ಟವಾಗಿತ್ತು. ಈ ಕಾರಣದಿಂದ ರಕ್ಷಣೆ ಬೇಕು ಎಂದು ಬಿಬಿಎಂಪಿಗೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.