ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಕಲಾಪ (Karnataka Assembly Session)ದಲ್ಲಿ ಇಂದು ಮತ್ತೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಮಧ್ಯೆ ಇಂದು ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಪಾಲಿಕೆ ವಿಧೇಯಕ ಮಂಡನೆಯಾಗಲಿದೆ.
ಗ್ರೇಟರ್ ಬೆಂಗಳೂರು ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಪ್ರದೇಶಗಳು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿವೆ. ಬಿಬಿಎಂಪಿ, ಬಿಎಂಆಡ್‌ಡಿಎ ವ್ಯಾಪ್ತಿಯ ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಲಿವೆ.
ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಆನೇಕಲ್ ಸೇರಿ ಎರಡೂ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶ ಸೇರಿಸಿ ಗ್ರೇಟರ್ ಬೆಂಗಳೂರು ರಚಿಸಲು ತೀರ್ಮಾನಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕ-2024ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಸರ್ಕಾರ ಮಂಡಿಸಲಿದೆ.
ಪಾಲಿಕೆ ಹೋಳು
ರಾಜಧಾನಿಯ ಗಾತ್ರ ಹಿಗ್ಗುವುದರಿಂದ 10 ಪಾಲಿಕೆ ರಚನೆ ಮಾಡಲು ಗ್ರೇಟರ್ ಬೆಂಗಳೂರಿನಲ್ಲಿ ಅವಕಾಶ ದೊರೆಯಲಿದೆ. ಮೇಯರ್ ಹಾಗೂ ಉಪ ಮೇಯರ್ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಲೂ ನಿರ್ಧರಿಸಲಾಗಿದೆ. ಗ್ರೇಟರ್ ಬೆಂಗಳೂರಿನ ಪ್ರತಿ ಪಾಲಿಕೆಗೆ ಗರಿಷ್ಠ 200 ವಾರ್ಡ್, ಕನಿಷ್ಠ ಹತ್ತು ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಒಂದೊಂದು ನಗರ ಪಾಲಿಕೆ ರಚನೆಗೆ ಅವಕಾಶ ಸಿಗಲಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿ ಸುಮಾರು 1400 ಚ.ಕಿ.ಮೀ. ಇರಲಿದೆ. ಇನ್ನು ಪ್ರತಿಯೊಂದು ಪಾಲಿಕೆಯು ಸರಾಸರಿ 200 ಚ.ಕಿ.ಮೀ. ವಿಸ್ತೀರ್ಣ ಹೊಂದಿರಲಿದೆ.
ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೊರವಲಯದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿರುವ ಪ್ರದೇಶಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಗೆ ತರಲು ಶಿಫಾರಸು ಮಾಡಲಾಗಿದೆ. ಪ್ರತಿ ಪಾಲಿಕೆಗೆ 10 ಜನ ಸದಸ್ಯರ ಸಂಪುಟ ರಚಿಸಿ ಬಿಬಿಎಂಪಿ ಸ್ಥಾಯಿ ಸಮಿತಿಗಳು ರದ್ದು ಪಡಿಸಲು ನಿರ್ಧರಿಸಲಾಗಿದ್ದು, ಪ್ರತಿ ನಗರ ಪಾಲಿಕೆಗೆ ತಲಾ ಒಬ್ಬರು ಮೇಯರ್, ಉಪ ಮೇಯರ್ ಇರಲಿದ್ದಾರೆ. ಮಾತ್ರವಲ್ಲ ಪ್ರತಿ ಪಾಲಿಕೆಗೂ ಸರ್ಕಾರದಿಂದ ನೇಮಿಸಲ್ಪಟ್ಟ ಒಬ್ಬ ಆಯುಕ್ತರು ಇರಲಿದ್ದಾರೆ.
ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಬರಲಿವೆ. ಮೇಯರ್, ಆಯುಕ್ತರು, ಜಂಟಿ ಆಯುಕ್ತರು, ಸ್ಥಾಯಿ ಸಮಿತಿ, ವಲಯ ಸಮಿತಿ, ವಾರ್ಡ್ ಸಮಿತಿ ಹಾಗೂ ಏರಿಯಾ ಸಭೆ ಕಾರ್ಯನಿರ್ವಹಿಸಲಿವೆ. ಗ್ರೇಟರ್ ಬೆಂಗಳೂರಿಗೆ ಮುಖ್ಯಮಂತ್ರಿ ಅಧ್ಯಕ್ಷ, ಉಸ್ತುವಾರಿ ಸಚಿವ ಉಪಾಧ್ಯಕ್ಷರಾಗಲಿದ್ದಾರೆ. ಜತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕಾಗಿ ಪ್ರತ್ಯೇಕ ಭದ್ರತಾ ಪಡೆ ರಚನೆ ಬಗ್ಗೆ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ನಗರ ಪಾಲಿಕೆಗಳ ಆಸ್ತಿ ರಕ್ಷಣೆ, ಆದಾಯ ಸೋರಿಕೆ ತಡೆ, ಬೈಲಾಗಳ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕ್ಕೆ ಪ್ರತ್ಯೇಕ ಪಡೆ ಇರಲಿದೆ.
ಶೇ. 50ರಷ್ಟು ಸ್ಥಾನ ಎಸ್‌ಸಿ, ಎಸ್‌ಟಿ, ಒಬಿಸಿಗೆ
ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರಚಿಸಲಾಗುವ ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಯಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ / ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗುತ್ತದೆ. ಪ್ರತಿ ನಗರ ಪಾಲಿಕೆಗಳು 50ರಿಂದ 200 ವಾರ್ಡ್‌ಗಳನ್ನು ಹೊಂದಿರುವುದು ಕಡ್ಡಾಯ.
ಸ್ಥಾಯಿ ಸಮಿತಿ
ಪ್ರತಿ ನಗರ ಪಾಲಿಕೆಯಲ್ಲಿ 6 ಸ್ಥಾಯಿ ಸಮಿತಿ ರಚನೆಯಾಗಲಿದೆ. ಆಡಳಿತ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಕಂದಾಯ, ಆದಾಯ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿ, ಸಾರ್ವಜನಿಕ ಕಾಮಗಾರಿ ಮತ್ತು ಎಂಜಿನಿಯರಿಂಗ್ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಮತ್ತು ನೈಸರ್ಗಿಕ ವಿಕೋಪ ನಿರ್ವಹಣಾ ಸ್ಥಾಯಿ ಸಮಿತಿ, ಅರಣ್ಯ, ಪರಿಸರ, ಕೆರೆ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಮೂಲಸೌಕರ್ಯ ಸ್ಥಾಯಿ ಸಮಿತಿಗಳ ರಚನೆಗೆ ಅವಕಾಶವಿದೆ. ಸದ್ಯ ಬೆಂಗಳೂರನ್ನು ಐದು ವಿಭಾಗಗಳಾಗಿ ವಿಂಗಡಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ವಿಧಾನಸಭೆಯಲ್ಲಿ ಮಂಡನೆಯಾಗಲಿದೆ. ಹೀಗಾಗಿ ಇಂದಿನ ಕಲಾಪ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: NEET: ನೀಟ್ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ