Site icon Vistara News

Karnataka Assembly Session: ವಿಧಾನ ಮಂಡಲ ಮಳೆಗಾಲದ ಅಧಿವೇಶನ ಇಂದು ಪುನರಾರಂಭ; ಕ್ಷಣಕ್ಷಣದ Live ಇಲ್ಲಿದೆ

Karnataka Assembly Session

Karnataka Assembly Session

ಬೆಂಗಳೂರು: ಎರಡು ದಿನಗಳ ಬಿಡುವಿನ ಬಳಿಕ ವಿಧಾನ ಮಂಡಲದ ಉಭಯ ಸದನಗಳ ಕಲಾಪ (Karnataka Assembly Session) ಇಂದು ಪುನರಾರಂಭವಾಗಲಿದೆ. ಆಡಳಿತ ಪಕ್ಷದ ವಿರುದ್ಧ ಎರಡನೇ ಸುತ್ತಿನ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಮುಡಾ ಹಗರಣ (MUDA Scam), ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam), ಬೆಲೆ ಏರಿಕೆ (Price Hike) ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾವಿಸಿ ಕಳೆದ ವಾರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಈ ವಾರ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಅದನ್ನು ಮುಂದುವರಿಸಲು ಸಜ್ಜಾಗಿವೆ.

ಮೂಡಾ ಪ್ರಕರಣ ಮುಖ್ಯ ಅಸ್ತ್ರ

ಎರಡನೇ ವಾರದ ಇನ್ನಿಂಗ್ಸ್‌ನಲ್ಲಿ ಪ್ರತಿಪಕ್ಷಗಳು ಮುಖ್ಯವಾಗಿ ಮೂಡಾ ಹಗರಣ ಪ್ರಸ್ತಾವಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ವಾಲ್ಮೀಕಿ ನಿಗಮದ ಹಗರಣ ರ್ಯಾಕರ್ ಬಳಿಸಿ ಈಗಾಗಲೇ ಸರ್ಕಾರಕ್ಕೆ ಮುಜುಗರ ತಂದಿಟ್ಟ ಪ್ರತಿಪಕ್ಷಗಳು ಈ ಬಾರಿ ಇನ್ನಷ್ಟು ಪ್ರಬಲವಾಗಿ ವಾಗ್ದಾಳಿ ನಡೆಸಲಿವೆ.

ಮೊದಲ ವಾರದ ಇನ್ನಿಂಗ್ಸ್‌ನಲ್ಲಿ ಯಾಮಾರಿದ್ದ ಸಿಎಂ ಸಿದ್ದರಾಮಯ್ಯ ಆ್ಯಂಡ್ ಟೀಮ್ ಈ ಬಾರಿ ಫುಲ್ ಅಲರ್ಟ್ ಆಗಿದೆ. ಮೊದಲು ಚರ್ಚೆಗೆ ಅವಕಾಶ ಕೊಡಿ ಉತ್ತರ ಕೊಡುವಾಗ ಕೇಳಿಸಿಕೊಳ್ಳುತ್ತೇವೆ ಎಂದಿದ್ದ ಪ್ರತಿಪಕ್ಷಗಳು ಸಿಎಂ ಉತ್ತರ ಕೊಡುವಾಗ ಅಡ್ಡಿ ಪಡಿಸಿದ್ದವು. ಹಾಗಾಗಿ ಎರಡನೇ ವಾರದ ಇನ್ನಿಂಗ್ಸ್‌ನಲ್ಲಿ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಲಿದೆ.

ದಾಳಿ ನಡೆಸಲು ಸಿದ್ಧತೆ

ಎರಡನೇ ವಾರದ ಇನ್ನಿಂಗ್ಸ್‌ನಲ್ಲಿ ಸರ್ಕಾರವೂ ಪ್ರತಿಪಕ್ಷಗಳ ವಿರುದ್ಧ ತಿರುಗಿ ಬೀಳಲು ಸಜ್ಜಾಗಿದೆ. ಪ್ರತಿಪಕ್ಷಗಳ ವಿರುದ್ಧ ಪ್ರಬಲವಾಗ್ಯೇ ಧ್ವನಿ ಎತ್ತಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಸಜ್ಜಾಗಿದ್ದಾರೆ.

ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಮೂರು ಬ್ರಹ್ಮಾಸ್ತ್ರಗಳನ್ನು ಸಿದ್ದಮಾಡಿಕೊಂಡಿದೆ. ಶೇ. 40 ಕಮಿಷನ್, ಕೋವಿಡ್ ಸಮಯದಲ್ಲಿನ ಭ್ರಷ್ಟಾಚಾರ, ಪಿಎಸ್‌ಐ ನೇಮಕಾತಿ ಹಗರಣವನ್ನು ಮುಂದಿಟ್ಟುಕೊಂಡು ಸರ್ಕಾರ ಪ್ರತಿಪಕ್ಷಗಳ ವಿರುದ್ಧ ತಿರುಗಿ ಬೀಳಲಿದೆ. ಈಗಾಗಲೇ ಹಗರಣಗಳ ತನಿಖೆ ಪ್ರಗತಿಯ ಹಂತದಲ್ಲಿರುವುದರಿಂದ ಬಿಜೆಪಿಯನ್ನು ಸದನದಲ್ಲಿ ಕಟ್ಟಿಹಾಕಲು ವರದಿಗಳೇ ಪ್ರಮುಖ ಅಸ್ತ್ರವಾಗಲಿದೆ.

ಮಧ್ಯಂತರ ವರದಿ ತರಿಸಿಕೊಳ್ಳಲು ಚಿಂತನೆ

ಶೇ. 40ರಷ್ಟು ಕಮಿಷನ್, ಕೋವಿಡ್ ಕಾಲದ ಭ್ರಷ್ಟಾಚಾರದ ತನಿಖೆಯ ಮಧ್ಯಂತರ ವರದಿ ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಪಿಎಐಸ್‌ ನೇಮಕಾತಿ ಹಗರಣಗಳ ಕುರಿತಾದ ವರದಿ ಈಗಾಗಲೇ ಸರ್ಕಾರದ ಕೈ ಸೇರಿದೆ. ಹೀಗಾಗಿ ಸದನದಲ್ಲಿ ಕಾವೇರಿದ ಚರ್ಚೆ ನಡೆಯುವ ಎಲ್ಲ ಸಾಧ್ಯತೆ ದಟ್ಟವಾಗಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ “ನಾವು ಇಡಿಗೆ, ಬಿಜೆಪಿಗೆ ಹೆದರುವುದಿಲ್ಲ. ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ. ನಿಮ್ಮನ್ನು ಬಲಿ ಹಾಕಿಯೇ ಸಿದ್ಧ” ಎಂದು ಬಿಜೆಪಿ ಸದಸ್ಯರ ವಿರುದ್ಧ ಗುಡುಗಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ನಡೆದ ಚರ್ಚೆಗೆ ಅವರು ಕಲಾಪದಲ್ಲಿ ಈ ರೀತಿ ಉತ್ತರ ನೀಡಿದ್ದರು. ಇಂದು ಮತ್ತೆ ಯಾವ ರೀತಿ ತಿರುಗಿ ಬೀಳುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: Karnataka Assembly Live: ಇಡಿಗೆ ಹೆದರುವುದಿಲ್ಲ, ನಿಮ್ಮನ್ನು ಬಲಿ ಹಾಕಿಯೇ ಸಿದ್ಧ: ವಾಲ್ಮೀಕಿ ಹಗರಣ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ

Exit mobile version