Site icon Vistara News

Karnataka Budget 2023 : ಬಜೆಟ್‌ನಲ್ಲಿ ಪ್ರಸ್ತಾಪವಾಗದ 7ನೇ ವೇತನ ಆಯೋಗ; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

karnataka budget 2023 7th pay commission

karnataka budget 2023

ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ (Karnataka Budget 2023) 7ನೇ ವೇತನ ಆಯೋಗದ (7th Pay Commission) ಜಾರಿಗೆ ರಾಜ್ಯ ಸರ್ಕಾರವು ಬದ್ಧತೆ ವ್ಯಕ್ತಪಡಿಸಿ, ಅನುದಾನ ತೆಗೆದಿರಿಸಲಿದೆ ಎಂದು ನಿರೀಕ್ಷಿಸಿದ್ದ ರಾಜ್ಯ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ.

ಕಳೆದ ನವೆಂಬರ್‌ನಲ್ಲಿ ರಚನೆಗೊಂಡಿರುವ ಆಯೋಗವು ಇನ್ನೂ ಮಾಹಿತಿ ಕಲೆಹಾಕುವ ಕೆಲಸ ಮಾಡುತ್ತಿದೆ. ಆದರೆ ಈ ಆಯೋಗದ ಶಿಫಾರಸನ್ನು ಜಾರಿಗೆ ತರುವುದಾಗಿ ಪ್ರಕಟಿಸಿ, ಬಜೆಟ್‌ನಲ್ಲಿ 10 ಸಾವಿರ ಕೋಟಿ ತೆಗೆದಿರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿತ್ತು. ಗುರುವಾರ ʻವಿಸ್ತಾರ ನ್ಯೂಸ್‌ʼ ನೊಂದಿಗೆ ಮಾತನಾಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್‌ ಷಡಾಕ್ಷರಿ ಕೂಡ ಈ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಬಜೆಟ್‌ನಲ್ಲಿ, 7ನೇ ವೇತನ ಆಯೋಗದ ಪ್ರಸ್ತಾಪವನ್ನೇ ಮಾಡಿಲ್ಲ. ಅಲ್ಲದೆ ನೌಕರ ವರ್ಗಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ.

ಆರನೇ ವೇತನ ಆಯೋಗದ ಅವಧಿಯು ಕಳೆದ ಜನವರಿಗೇ ಅಂತ್ಯಗೊಂಡಿದೆ. ಹೀಗಾಗಿ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ಜಾರಿಯ ಕುರಿತು ಪ್ರಕಟಿಸಲಾಗುತ್ತದೆ. ಇಲ್ಲವಾದಲ್ಲಿ, ಮಧ್ಯಂತರ ಪರಿಹಾರವನ್ನಾದರೂ ಘೋಷಿಸಲಾಗುತ್ತದೆ ಎಂದು ಸರ್ಕಾರಿ ನೌಕರರು ನಿರೀಕ್ಷಿಸುತ್ತಿದ್ದರು. ಅವರಿಗೆಲ್ಲಾ ಈಗ ನಿರಾಸೆಯಾಗಿದೆ.

ಆಯೋಗದ ಶಿಫಾರಸು ಜಾರಿಗೆ ಬದ್ಧ

ಆದರೆ ಬಜೆಟ್‌ ಮಂಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸರವಾರ ಬೊಮ್ಮಾಯಿ, 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದನ್ನು ನಮ್ಮ ಸರ್ಕಾರ 2023-24 ನೇ ಸಾಲಿನಲ್ಲಿಯೇ ಜಾರಿಗೆ ತರಲಿದೆ ಎಂದು ಘೋಷಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಆಯೋಗ ರಚಿಸಿದ್ದೇವೆ. ಇದರ ಶಿಫಾರಸುಗಳ ಜಾರಿಗೆ ಬದ್ಧವಾಗಿದ್ದೇವೆ. ಸರ್ಕಾರಕ್ಕೆ ಶಿಫಾರಸು ಸಲ್ಲಿಸುತ್ತಿದ್ದಂತೆಯೇ ಜಾರಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಅವಿವರಿಸಿದ್ದಾರೆ. ಬಜೆಟ್‌ನಲ್ಲಿ 6 ಸಾವಿರ ಕೋಟಿ ಹಣವನ್ನು ಇದಕ್ಕಾಗಿ ಮೀಸಲಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಎಲ್ಲವನ್ನೂ ಬಜೆಟ್‌ನಲ್ಲಿ ಹೇಳಲಾಗು. ಅಲೋಕೇಷನ್‌ನಲ್ಲಿ ಇದಕ್ಕಾಗಿ ಹಣ ತೆಗೆದಿರಿಸಿದ್ದೇವೆ. ಒಂದು ವೇಳೆ ಹೆಚ್ಚುವರಿ ಹಣ ಬೇಕಾದರೆ ಅದನ್ನು ಸಪ್ಲಿಮೆಂಟರಿ ಬಜೆಟ್‌ನಲ್ಲಿ ಒದಗಿಸುತ್ತೇವೆ. ಒಟ್ಟಾರೆ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ವೇತನ ಆಯೋಗವು ಮಧ್ಯಂತರ ವರದಿ ನೀಡಿದರೆ ಅದನ್ನು ಜಾರಿಗೆ ತರುತ್ತೇವೆ. ಪೂರ್ಣ ವರದಿ ನೀಡದರೆ ಅದನ್ನೇ ಜಾರಿಗೆ ತರುತ್ತೇವೆ. ಒಟ್ಟಾರೆ ಯಾವುದೇ ತೊಂದರೆಯಾಗದಂತೆ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಇದರ ಬಗ್ಗೆ ಅನುಮಾನವೇ ಬೇಡ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೋರಾಟ ಎಚ್ಚರಿಕೆ ನೀಡಿದ ಷಡಾಕ್ಷರಿ
7ನೇ ವೇತನ ಆಯೋಗದ ಶಿಫಾರಸುಗಳ ಜಾರಿಯ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್‌. ಷಡಾಕ್ಷರಿ, ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ ಭ್ರಮನಿರಸನ ಆಗಿದೆ ಎಂದು ಹೇಳಿದ್ದಾರೆ.
ಬಜೆಟ್‌ನಲ್ಲಿ 7 ನೇ ವೇತನ ಆಯೋಗದ ಶಿಫಾರಸುಗಳ ಜಾರಿಯನ್ನು ಘೋಷಿಸುವುದರ ಜತೆಗೆ ಅಗತ್ಯವಾಗಿರುವ 10 ಸಾವಿರ ಕೋಟಿ ಅನುದಾನವನ್ನೂ ಕಾಯ್ದಿರಿಸುವ ವಿಶ್ವಾಸವಿತ್ತು. ಆದರೆ ಸರ್ಕಾರದ ಈ ಕ್ರಮದಿಂದ ನಮಗೆ ಬಹಳ ನೋವಾಗಿದೆ ಎಂದಿರುವ ಅವರು ಇಂದು ರಾಜ್ಯ ಅಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಸರ್ಕಾರಿ ನೌಕರರು. ಇದನ್ನು ಸರ್ಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಜೆಟ್‌ನಲ್ಲಿ ಏಕೆ ಈ ವಿಷಯವನ್ನು ಸೇರಿಸಿಲ್ಲ ಎಂಬುದರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇವೆ ಎಂದಿರುವ ಷಡಾಕ್ಷರಿ, ಸರ್ಕಾರಿ ನೌಕರರು ಹೋರಾಟಕ್ಕೆ ಇಳಿದರೆ ಏನಾಗಲಿದೆ ಎಂಬುದು ಸರ್ಕಾರಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು (ಓಪಿಎಸ್‌) ಜಾರಿಗೆ ತರಬೇಕೆಂಬ ನಮ್ಮ ಬೇಡಿಕೆಯ ಕುರಿತೂ ಯಾವುದೇ ತೀರ್ಮಾನ ಪ್ರಕಟಿಸಲಾಗಿಲ್ಲ.
ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ನಮ್ಮ ಬೇಡಿಕೆಗಳ ಕುರಿತು ಸರ್ಕಾರ ಸಕರಾತ್ಮಕವಾಗಿ ಸ್ಪಂದನೆ ಮಾಡದೇ ಇದ್ದರೆ ಮುಂದೇನು ಮಾಡಬೇಕು ಎಂಬುದರ ಕುರಿತು ಮುಂದಿನ ಮಂಗಳವಾರ ಪದಾಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ಷಡಾಕ್ಷರಿ ಹೇಳಿದ್ದಾರೆ.

ಯಡಿಯೂರಪ್ಪ ಅಸಮಾಧಾನ

7ನೇ ವೇತನ ಆಯೋಗದ ಜಾರಿಗೆ ಬಜೆಟ್‌ನಲ್ಲಿ ಬದ್ಧತೆ ವ್ಯಕ್ತಪಡಿಸಿ, ಅನುದಾನ ತೆಗೆದಿರಿಸದೇ ಇರುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಕೂಡ ಅಸಮಧಾನ ವ್ಯಕ್ತಪಡಿಸಿದ್ದಾರೆ. ʻʻಈ ಬಗ್ಗೆ ಸರ್ಕಾರಿ ನೌಕರರಿಗೆ ನಾನು ಭರವಸೆ ನೀಡಿದ್ದೆ, ಅದರೆ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿಯವರು ತಮ್ಮ ಸಲಹೆಯನ್ನು ಪರಿಗಣಿಸಿಲ್ಲʼʼ ಎಂದು ಅವರು ಆಕ್ರೋಶ ತೋಡಿಕೊಂಡಿದ್ದಾರೆ.

ಬಜೆಟ್‌ ಮಂಡನೆಯಾಗುತ್ತಿದ್ದಂತೆಯೇ ಸರ್ಕಾರಿ ನೌಕರರ ಸಂಘ ಸರ್ಕಾರದ ಈ ಕ್ರಮಕ್ಕೆ ಅಸಮಧಾನ ವ್ಯಕ್ತಪಡಿಸಿದ್ದು, ಸಂಘದ ಅಧ್ಯಕ್ಷ ಸಿ ಎಸ್‌ ಷಡಾಕ್ಷರಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರನ್ನು ಭೇಟಿಯಾಗಿ ಈ ಬಗ್ಗೆ ದೂರಿದ್ದು, ಈ ಸಂದರ್ಭದಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.

ಬಜೆಟ್‌ ಮಂಡನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ಕುರಿತು ಪ್ರಸ್ತಾಪಿಸದೇ ಇರುವುದನ್ನು ಖಂಡಿಸಿದ್ದಾರೆ.

ಇದನ್ನೂ ಓದಿ : Karnataka Budget 2023 : ಒಂದು ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ; ಬಜೆಟ್‌ನಲ್ಲಿ ಬೊಮ್ಮಾಯಿ ಘೋಷಣೆ

Exit mobile version