Site icon Vistara News

Karnataka Cabinet : ದಿಲ್ಲಿಯಲ್ಲಿ ಸಂಪುಟ ರಚನೆಗೆ ಕಸರತ್ತು; ಈ ಬಾರಿ ಅವಕಾಶ ಪಡೆಯುವ ಹೊಸಬರೆಷ್ಟು?

Vidhansoudha

ಬೆಂಗಳೂರು: ನೂತನ ಸಚಿವ ಸಂಪುಟ ರಚನೆಯ (Karnataka Cabinet) ಕಸರತ್ತು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಅಂಗಳದಲ್ಲಿ ತೀವ್ರಗೊಳ್ಳುತ್ತಿದ್ದಂತೆಯೇ, ಈ ಬಾರಿ ಹೊಸಬರಿಗೇನಾದರೂ ಅವಕಾಶ ದೊರೆಯುತ್ತದೆಯೇ ಅಥವಾ ಈ ಹಿಂದೆ ಅಧಿಕಾರ ಅನುಭವಿಸದವರೇ ಸಂಪುಟದಲ್ಲಿ ಇರಲಿದ್ದಾರೆಯೇ ಎಂಬ ಕುತೂಹಲ ಎಲ್ಲೆಡೆಯಿದೆ.

ಈ ಬಾರಿಯಾದರೂ ಪಕ್ಷ ಯುವ ನಾಯಕರಿಗೆ ಹೆಚ್ಚಿನ ನಾಯಕರಿಗೆ ಅವಕಾಶ ನೀಡಬಹುದು ಎಂದು ಕಾಂಗ್ರೆಸ್‌ ಪಕ್ಷದ ಯುವ ಕಾರ್ಯಕರ್ತರು ನಿರೀಕ್ಷಿಸುತ್ತಿದ್ದಾರೆ. ಆದರೆ ಸಚಿವ ಸ್ಥಾನಕ್ಕಾಗಿ ಈ ಹಿಂದೆ ಸಚಿವರಾಗಿರುವ ಹಿರಿಯ ನಾಯಕರೇ ಹೆಚ್ಚು ಲಾಬಿ ನಡೆಸುತ್ತಿದ್ದು, ಸಂಭವನೀಯ ಸಚಿವರುಗಳ ಪಟ್ಟಿಯಲ್ಲಿ ಅವರುಗಳ ಹೆಸರೇ ತುಂಬಿಹೋಗಿದೆ.

ಹೀಗಾಗಿ ಎಷ್ಟು ಮಂದಿ ಹೊಸಬರು ಸಚಿವರಾಗಬಹುದು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಒಟ್ಟು 28 ಮಂದಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಲು ಪಕ್ಷದ ಹೈಕಮಾಂಡ್‌ ತೀರ್ಮಾನಿಸಿದೆ ಎನ್ನಲಾಗುತ್ತಿದ್ದು, ಸಚಿವರ ನೇಮಕಕ್ಕೆ ತ್ರಿಸೂತ್ರ ರಚಿಸಿದೆ ಎಂಬ ವರದಿಗಳಿವೆ. ಇದರ ಪ್ರಕಾರ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ ತಲಾ ಹತ್ತು ಮಂದಿಗೆ ಸಚಿವ ಸ್ಥಾನ ನೀಡಿ, ಉಳಿದ ಎಂಟು ಮಂದಿಯನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸುವುದಾಗಿ ತೀರ್ಮಾನಿಸಿದೆ.

ಆದರೆ ಈ ಇಬ್ಬರು ಸಚಿವರ ಪಟ್ಟಿಯಲ್ಲಿಯೂ ಪಕ್ಷದ ಹಿರಿಯ ನಾಯಕರ ಹೆಸರೇ ಹೆಚ್ಚಿದೆ. ಹೈಕಮಾಂಡ್‌ ಕೂಡ ಇವರಿಬ್ಬರು ಬಿಟ್ಟ ಪಕ್ಷದ ಹಿರಿಯ ನಾಯಕರಿಗೆ ಅವಕಾಶ ನೀಡಲು ಮುಂದಾದಲ್ಲಿ ಸಚಿವ ಸಂಪುಟ ಹಿರಿಯ ನಾಯಕರಿಂದಲೇ ತುಂಬಿ ಹೋಗಲಿದೆ.

ಹಿರಿಯರಿಂದಲೇ ತುಂಬಿರುವ ಸಂಭವನೀಯ ಸಚಿವರ ಪಟ್ಟಿ ನೋಡಿ; ಕೆ.ಜೆ ಜಾರ್ಜ್, ಜಮೀರ್ ಅಹಮದ್ ಖಾನ್, ಕೃಷ್ಣಬೈರೇಗೌಡ, ಆರ್.ವಿ ದೇಶಪಾಂಡೆ, ಎಂ.ಬಿ ಪಾಟೀಲ್, ಬೈರತಿ ಸುರೇಶ್, ಎಚ್.ಸಿ ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಪುಟ್ಟರಂಗಶೆಟ್ಟಿ, ಯು.ಟಿ ಖಾದರ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ರುದ್ರಪ್ಪ ಲಮಾಣಿ, ಡಾ.ಜಿ ಪರಮೇಶ್ವರ್, ಪ್ರಿಯಾಂಕ ಖರ್ಗೆ, ಶರಣ ಪ್ರಕಾಶ್ ಪಾಟೀಲ್, ಎಚ್.ಕೆ ಪಾಟೀಲ್, ರಹೀಮ್ ಖಾನ್, ಜಗದೀಶ್ ಶೆಟ್ಟರ್, ಟಿ.ಬಿ ಜಯಚಂದ್ರ, ಕೆ.ಎಚ್ ಮುನಿಯಪ್ಪ, ಬಿ.ಕೆ ಹರಿಪ್ರಸಾದ್, ರಾಮಲಿಂಗಾರೆಡ್ಡಿ, ಲಕ್ಷ್ಮಣ ಸವದಿ, ಸಲೀಂ ಅಹಮದ್, ತನ್ವೀರ್ ಸೇಠ್, ವಿನಯ್ ಕುಲಕರ್ಣಿ, ಚಲುವರಾಯಸ್ವಾಮಿ, ಸುಧಾಕರ್.

ಪಕ್ಷದಲ್ಲಿ ಏನಿಲ್ಲವೆಂದರೂ 40 ಕ್ಕೂ ಹೆಚ್ಚು ಹಿರಿಯ ನಾಯಕರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲಿ ಹಲವರು ಪಕ್ಷವನ್ನು ಕಟ್ಟಿ ಬೆಳೆಸಲು ದುಡಿಯುತ್ತಲೇ ಬಂದಿದ್ದಾರೆ. ಹೀಗಾಗಿ ಇವರನ್ನು ನಿರ್ಲಕ್ಷಿಸುವುದೂ ಕಷ್ಟ. ಆದರೆ ಭವಿಷ್ಯದ ದೃಷ್ಟಿಯಿಂದ ಯುವ ನಾಯಕರಿಗೂ ಅವಕಾಶ ನೀಡಬೇಕೆಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ. ಯಾರೆಲ್ಲಾ ಹಿರಿಯರನ್ನು ಒಪ್ಪಿಸಿ, ಎಷ್ಟು ಮಂದಿ ಹೊಸಬರಿಗೆ ಅವಕಾಶ ನೀಡುವಲ್ಲಿ ಪಕ್ಷದ ಉನ್ನತ ನಾಯಕರು ಸಫಲರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ನಡುವೆ ಯಾವುದೇ ಲಾಬಿಗೆ ಒಳಗಾಗದೆ, ಸರ್ವರಿಗೂ ಹಿತವಾಗುವ, ಎಲ್ಲರನ್ನೂ ಒಳಗೊಳ್ಳುವ, ಬೆಸ್ಟ್‌ ಸಂಪುಟ ರಚನೆಗೆ ಕಾಂಗ್ರೆಸ್‌ ಹೈಕಮಾಂಡ್‌ ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ ಎಂಬ ವರದಿಗಳಿದ್ದು, ಉತ್ತಮರು ಮತ್ತು ನಿಪುಣರ ಆಯ್ಕೆಗಾಗಿ ಹೈಕಮಾಂಡ್‌ 10 ಅಂಶಗಳ ಸೂತ್ರಗಳನ್ನು ಅಳವಡಿಸಿಕೊಂಡಿದೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಚುನಾವಣಾ ಕಾರ್ಯತಂತ್ರ ನಿಪುಣ ಸುನೀಲ್ ಕನುಗೋಲು ನೇತೃತ್ವದ ತಂಡ ಈ ಸೂತ್ರ ರೂಪಿಸಿದ್ದು, ಇದರಲ್ಲಿ 2013ರ ಸಂಪುಟದಲ್ಲಿ ಸಚಿವರಾಗಿ ಕಾರ್ಯದಕ್ಷತೆಯಿಂದ ಕೆಲಸ ನಿರ್ವಹಿಸದ ಮಾಜಿ ಸಚಿವರಿಗೆ ಈ ಬಾರಿ ಅವಕಾಶ ನೀಡಬಾರದು, ಹೊಸ ಯುವ ಶಾಸಕರಿಗೆ ಅವಕಾಶ ನೀಡಬೇಕು ಎಂದು ಹೇಳಲಾಗಿದೆ. ಹೀಗಾಗಿ ಕುತೂಹಲ ಇನ್ನಷ್ಟು ಹೆಚ್ಚಿದೆ.

ಇದನ್ನೂ ಓದಿ: Government Formation : ಸಿಎಂ ಆಯ್ಕೆ ಬೆನ್ನಲ್ಲೇ ನೂತನ ಸರ್ಕಾರದಲ್ಲಿ ಯಾರೆಲ್ಲಾ ಸಚಿವರು; ಚರ್ಚೆ ಜೋರು!

Exit mobile version