ಬೆಂಗಳೂರು: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ (Karnataka CM) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ನೇಮಕಗೊಂಡಿರುವುದು ಅಧಿಕೃತವಾಗಿ ಖಚಿತ ಪಟ್ಟಿದೆ. ಇದರಿಂದ ಐದು ದಿನಗಳ ಕತೂಹಲಕ್ಕೆ ತೆರೆ ಬಿದ್ದಂತಾಗಿದೆ. 2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿ ಹಲವಾರು “ಭಾಗ್ಯʼʼ ಯೋಜನೆಗಳ ಮೂಲಕ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿದ್ದ ಸಿದ್ದರಾಮಯ್ಯಗೆ ಪಕ್ಷ ಈಗ ಮತ್ತೊಂದು ಅವಕಾಶ ನೀಡಿದೆ. ರಾಜ್ಯದ ಮಾಸ್ ಲೀಡರ್‌ಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಸಿದ್ದರಾಮಯ್ಯ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದ ಸರ್ಕಾರದ ಮುಖ್ಯಸ್ಥರಾಗಿ ಆಡಳಿತವನ್ನು ಮುನ್ನೆಡೆಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕಳೆದ ನಾಲ್ಕು ದಿನಗಳ ಸರಣಿ ಸಭೆ ನಡೆಸಿ, ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಮುಖಮಂತ್ರಿಯಾಗಿ ನೇಮಕ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಅವರೊಬ್ಬರೇ ಉಪಮುಖ್ಯಮಂತ್ರಿಯಾಗಿರುತ್ತಾರೆ.
ಈಗಾಗಲೇ ಮೂರು ಬಾರಿ ಸಚಿವರಾಗಿ, ಒಮ್ಮೆ ಉಪಮುಖ್ಯಮಂತ್ರಿಯಾಗಿ, ಮತ್ತೊಮ್ಮೆ ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ 75ರ ಹರೆಯದ ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿ ಎಂದು ಹೆಸರು ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಯನ್ನು ಬಲ್ಲ ಇವರು ಎಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಪಷ್ಟ ತೀರ್ಮಾನ, ಪಾರದರ್ಶಕ ಆಡಳಿತ, ಜನಪರವಾದ ದಿಟ್ಟ ಹೆಜ್ಜೆಗಳನ್ನಿಡುತ್ತಾ, ಶೋಷಿತರ, ದಮನಿತರ ಪರವಾಗಿ ಆಡಳಿತ ನಡೆಸುವ ರಾಜಕಾರಣಿ ಎಂದೇ ಖ್ಯಾತಿ ಹೊಂದಿದ್ದಾರೆ.
ಹೈರಾಣವಾಗಿದ್ದ ಹೈಕಮಾಂಡ್
ಭರ್ಜರಿ ಬಹುಮತದಿಂದ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಖುಷಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ನೂತನ ಮುಖ್ಯಮಂತ್ರಿ ಆಯ್ಕೆ ಭಾರಿ ಇಕ್ಕಟ್ಟು ಸೃಷ್ಟಿಸಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಜಿದ್ದಾಜಿದ್ದ ಪಕ್ಷದ ಉನ್ನತ ನಾಯಕರನ್ನು ಹೈರಾಣ ಮಾಡಿತ್ತು. ಕೊನೆಗೂ ಇವರಿಬ್ಬರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಪಕ್ಷದ ಹೈಕಮಾಂಡ್ ಯಶಸ್ವಿಯಾಗಿದೆ.
ಭಾನುವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯೊಂದಿಗೆ ಸಮಬಲದ ಇಬ್ಬರು ನಾಯಕರೂ ಸಿಎಂ ಹುದ್ದೆ ತಮಗೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದರಿಂದ ನಿರೀಕ್ಷೆಗೂ ಮೀರಿದ ಇಕ್ಕಟ್ಟು ಸೃಷ್ಟಿಯಾಗಿತ್ತು. ಇಬ್ಬರು ನಾಯಕರು ಒಪ್ಪುವ ಅಧಿಕಾರ ಹಂಚಿಕೆಯ ಸೂತ್ರವೊಂದು ರೂಪಗೊಳ್ಳದೇ, ಸರಣಿ ಸಭೆಗಳು, ಮಾತುಕತೆಗಳು ವಿಫಲವಾಗಿದ್ದವು. ಇವರಿಬ್ಬರ ನಡುವಿನ ಹಗ್ಗಜಗ್ಗಾಟ ಪಕ್ಷದ ಉನ್ನತ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ಮೂಡಿಸಿದ್ದರಿಂದ ಬಿಕ್ಕಟ್ಟು ಇನ್ನಿಷ್ಟು ತೀವ್ರವಾಗಿತ್ತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಇಬ್ಬರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರೂ ಇಬ್ಬರೂ ತಮ್ಮ ಪಟ್ಟು ಸಡಿಲಿಸಲಿಲ್ಲ. ಪಕ್ಷದ ಟ್ರಬಲ್ ಶೂಟರ್‌ಗಳೆನಿಸಿದ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದ ತಂಡ ಮುಂದಿಟ್ಟ ಹತ್ತಾರು ಸಂಧಾನ ಸೂತ್ರಗಳು, ರಾಜಕೀಯ ಭವಿಷ್ಯದ ಲೆಕ್ಕಾಚಾರಗಳ ಚಿತ್ರಣ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ ಒಂದಿಷ್ಟು ಷರತ್ತು, ತ್ಯಾಗಳಿಗೆ ಒಪ್ಪಿದರೂ ಡಿ.ಕೆ. ಶಿವಕುಮಾರ್ ಪಟ್ಟು ಬಿಡದೇ ಇದ್ದುದ್ದರಿಂದ ಪಕ್ಷದ ಹೈಕಮಾಂಡ್‌ಗೆ ದಿಕ್ಕೇ ತೋಚದ ಸ್ಥಿತಿ ನಿರ್ಮಾಣವಾಗಿತ್ತು.
ನಂಬರ್‌ನಿಂದಾಗಿ ಗೆದ್ದ ಸಿದ್ದು
ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಪಕ್ಷದ ಹೈಕಮಾಂಡ್‌ಗೆ ನೀಡುವ ತೀರ್ಮಾನಕ್ಕೆ ತೆಗೆದುಕೊಳ್ಳಲಾಗಿತ್ತಾದರೂ ಸಿದ್ದರಾಮಯ್ಯರ ಬಿಗಿ ಪಟ್ಟಿಗೆ ಮಣಿದಿದ್ದ ಪಕ್ಷದ ವೀಕ್ಷಕರು ಪಕ್ಷದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದರು. ಇದು ಅವರಿಗೆ ಗಾದಿಗಾಗಿನ ಈ ಜಿದ್ದಾಜಿದ್ದಿಯಲ್ಲಿ ಆನೆಬಲ ನೀಡಿತ್ತು. ಬಹುತೇಕ ಶಾಸಕರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಪಕ್ಷದ ಹೈಕಮಾಂಡ್‌ಗೆ ಸದ್ಯ ಅವರ ಪರವಾಗಿಯೇ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತು.
ಕೊನೆಗೆ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರು ಮಧ್ಯ ಪ್ರವೇಶಿಸಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಸೋನಿಯಾಗಾಂಧಿಯ ಬಗ್ಗೆ ಅಪಾರವಾದ ಗೌರವವನ್ನು ಸೂಚಿಸುತ್ತಲೇ ಬಂದಿರುವ ಡಿ.ಕೆ. ಶಿವಕುಮಾರ್ ಅವರ ಮಾತಿಗೆ ತಲೆಬಾಗಿ, ಪಕ್ಷದ ಉನ್ನತ ನಾಯಕರು ರೂಪಿಸಿದ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಹೊಂದಿರುವ ಸಿದ್ದರಾಮಯ್ಯ ಈ ಬಾರಿ ಕಾಂಗ್ರೆಸ್ ಪಕ್ಷ ನೀಡಿರುವ ಪ್ರಮುಖ ಐದು ಉಚಿತ ಯೋಜನೆಗಳ (ಗ್ಯಾರಂಟಿಗಳ) ಜಾರಿಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. ಇದು ತಮ್ಮ ಕೊನೆಯ ಚುನಾವಣೆ ಎಂದು ಅವರು ಪ್ರಚಾರದ ವೇಳೆ ಪ್ರಕಟಿಸಿದ್ದು, ಕೊನೆಯ ಅವಧಿಯಲ್ಲಿಯೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ. ಮೇ 20ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ : Karnataka CM : ಬ್ರೇಕ್ ಫಾಸ್ಟ್ ಮೀಟಿಂಗ್ ಯಶಸ್ವಿ, ಸಿದ್ದು-ಡಿಕೆಶಿ ಈಗ ಒಂದೇ ಕಾರಿನ ಪಯಣಿಗರು!