Site icon Vistara News

Karnataka CM Race : ಮುಖ್ಯಮಂತ್ರಿ ಆಯ್ಕೆ; ಹೈಕಮಾಂಡ್‌ ಮುಂದಿರುವುದು ಸದ್ಯ ಎರಡೇ ದಾರಿ

rahul gandhi

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯ ಆಯ್ಕೆ (Karnataka CM Race) ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೆ ಬಗೆಹರಿಸಲಾಗದ ಬಿಕ್ಕಟ್ಟಾಗಿ ಪರಿಣಮಿಸಿದೆ. ಸಮಬಲದ ಇಬ್ಬರು ನಾಯಕರು ಈ ಹುದ್ದೆಗಾಗಿ ಪೈಪೋಟಿ ನಡೆಸುತ್ತಿರುವುದರಿಂದ ಯಾರನ್ನು ಆಯ್ಕೆ ಮಾಡುವುದು?, ಇನ್ನೊಬ್ಬರನ್ನು ಸಮಾಧಾನ ಪಡಿಸುವುದು ಹೇಗೆ? ಸಂಧಾನ ಸೂತ್ರ ಯಾವುದು ಎಂದು ಗೊತ್ತಾಗದೆ ಪಕ್ಷದ ವರಿಷ್ಠರು ಕಕ್ಕಾಬಿಕ್ಕಿಯಾಗಿ ಕುಳಿತಿದ್ದಾರೆ.

ಸದ್ಯ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇಬ್ಬರೊಂದಿಗೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಭೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.

ಇಬ್ಬರು ನಾಯಕರ ನಡುವೆ ಒಮ್ಮತ ಮಾಡಿಸುವ, ಸಂಧಾನ ಸೂತ್ರ ರೂಪಿಸುವ ಎಲ್ಲ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿರುವುದರಿಂದ ಪಕ್ಷದ ವರಿಷ್ಠರ ಮುಂದೆ ಸದ್ಯ ಇರುವುದು ಈಗ ಎರಡೇ ದಾರಿ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ;
1. ಉನ್ನತ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ಯಾವುದಾದರೂ ಒಂದು ಕಠಿಣ ತೀರ್ಮಾನ ತೆಗೆದುಕೊಳ್ಳುವುದು.
2. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಯಾರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೋ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವುದು.

ಇದರಲ್ಲಿ ಎರಡನೇ ಆಯ್ಕೆ ಸುಲಭ. ಪ್ರಜಾತಾಂತ್ರಿಕವಾಗಿಯೂ ಸರಿಯಾದದ್ದು. ಆದರೆ ಈ ಮಾರ್ಗಕ್ಕೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒಪ್ಪುತ್ತಿಲ್ಲ. ಅವರ ಒಪ್ಪಿಗೆ ಇಲ್ಲದೆ ಇದನ್ನು ಜಾರಿಗೆ ತರುವ ಪರಿಸ್ಥಿತಿಯಲ್ಲಿ ಹೈಕಮಾಂಡ್‌ ಕೂಡ ಇಲ್ಲ.

ಹೀಗಾಗಿ ಮೊದಲ ಆಯ್ಕೆಯ ಕಡೆಗೇ ಹೈಕಮಾಂಡ್‌ ಹೆಚ್ಚಿನ ಗಮನ ನೀಡುತ್ತಿದೆ. ಆದರೆ ಕಠಿಣ ನಿರ್ಧಾರಕ್ಕೆ ಬರುವುದು ಸಾಧ್ಯವಾಗುತ್ತಿಲ್ಲ. ಪಕ್ಷದ ಉನ್ನತ ನಾಯಕರಲ್ಲಿ ಕೂಡ ಭಿನ್ನಾಭಿಪ್ರಾಯಗಳಿವೆ. ಪಕ್ಷದ ಹಿತದೃಷ್ಟಿಯಿಂದ ಅಳೆದು-ತೂಗಿ ತೀರ್ಮಾನಕ್ಕೆ ಬರಬೇಕಾಗಿದೆ.

ಸಂಧಾನ ಮಾತುಕತೆಗಳಲ್ಲಿಯೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ತಾವೇ ಏಕೆ ಮುಖ್ಯಮಂತ್ರಿಯಾಗಬೇಕೆಂದು ವಾದ ಮಂಡಿಸಿ ಹಟ ಹಿಡಿದು ಕುಳಿತಿದ್ದಾರೆ.

ಡಿ. ಕೆ. ಶಿವಕುಮಾರ್ ಬೇಡಿಕೆ ಇಂತಿದೆ;
1. ನನಗೆ ಪೂರ್ಣಾವಧಿ ಅಧಿಕಾರ ಕೊಡಿ.
2. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಆದ್ದರಿಂದ ಶ್ರಮಕ್ಕೆ ಪ್ರತಿಫಲ ಕೇಳುತ್ತಿದ್ದೇನೆ.
3. ನನಗೆ ಕೊಡಲಿಲ್ಲ ಎಂದಾದರೆ ನೀವೆ ಸಿಎಂ ಆಗಿ ಎಂದು ಖರ್ಗೆಗೆ ಹೇಳಿರುವ ಡಿಕೆಶಿ.
4. ಸಿದ್ದರಾಮಯ್ಯ ಪಕ್ಷಕ್ಕೆ ಬಂದಾಗಿಂದಲೂ ಅಧಿಕಾರದಲ್ಲಿ ಇದ್ದಾರೆ. ಹೀಗಾಗಿ ನಮಗೆ ಅವಕಾಶ ನೀಡುವಂತೆ ಕೋರಿಕೆ.
5. ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಪಕ್ಷ ಸಂಕಷ್ಟದಲ್ಲಿದ್ದಾಗ ಟ್ರಬಲ್‌ ಶೂಟರ್‌ ಆಗಿ ಕೆಲಸ ಮಾಡಿದ್ದೇನೆ. ನನಗೆ ಅರ್ಹ ಗೌರವ ಕೊಡಬೇಕು.

ಸಿದ್ದರಾಮಯ್ಯ ಅವರ ವಾದ ಹೀಗಿದೆ;
1. ನನಗೆ ಹೆಚ್ಚಿನ ಶಾಸಕರ ಬೆಂಬಲವಿದೆ.
2. ಐದು ವರ್ಷ ಪೂರ್ಣಾವಧಿ ಅಧಿಕಾರ ಕೊಡಿ.
3. ಸ್ವಾತಂತ್ರ್ಯವಾಗಿ ಆಡಳಿತ ನಡೆಸಲು ಬಿಡಬೇಕು. ನಾನು ಹೇಳಿದವರು ಸಚಿವ ಸಂಪುಟದಲ್ಲಿರಬೇಕು.
4. ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ‌ಗೆ ತರಲು ಅವಕಾಶ ನೀಡಬೇಕು.
5. ಮುಂದಿನ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರುವ ಅವಕಾಶ ನೀಡಬೇಕು.

ಒಟ್ಟಾರೆ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ ಬಿಕ್ಕಟ್ಟು ಸೃಷ್ಟಿಸಿದ್ದು, ಸರಣಿ ಸಭೆಗಳು, ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಬುಧವಾರ ಸಂಜೆಯ ಒಳಗೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪಕ್ಷದ ಹೈಕಮಾಂಡ್‌ ಯಶಸ್ವಿಯಾಗಬಹುದೆಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: Karnataka Election 2023 : ಮುಖ್ಯಮಂತ್ರಿ ಆಯ್ಕೆ; ಕಾಂಗ್ರೆಸ್‌ ಉನ್ನತ ನಾಯಕರಲ್ಲಿಯೇ ಮೂಡದ ಒಮ್ಮತ!

Exit mobile version