ನವ ದೆಹಲಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು (Karnataka CM) ಆಯ್ಕೆ ಮಾಡುವ ವಿಷಯದಲ್ಲಿ ಉಂಟಾಗಿದ್ದ ಬಿಕ್ಕಟ್ಟು, ಬಗೆಹರಿಯುತ್ತಿದ್ದು, ಪರಿಸ್ಥಿತಿ ತಿಳಿಯಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ನಿವಾಸದಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಯಶಸ್ವಿಯಾಗಿದೆ.
ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ಪೈಪೋಟಿಗಿಳಿದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಸಭೆಯಲ್ಲಿ ಭಾಗವಹಿಸಿ ಮುಖಾಮುಖಿಯಾಗಿದ್ದರು. ಇಬ್ಬರೂ ನಾಯಕರು ಇಲ್ಲಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ನಿವಾಸಕ್ಕೆ ಒಂದೇ ಕಾರಿನಲ್ಲಿ ತೆರಳಿರುವುದರಿಂದ ಈ ಸಭೆ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷದ ಹೈಕಮಾಂಡ್(Congress High command) ರೂಪಿಸಿದ ಸಂಧಾನ ಸೂತ್ರಕ್ಕೆ (ಅಧಿಕಾರ ಹಂಚಿಕೆ ಸೂತ್ರ) ಇಬ್ಬರು ನಾಯಕರು ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವ ಸಭೆ ನಡೆಯುತ್ತಿದೆ. ಈ ಸಭೆಗೆ ಆಗಮಿಸಿದ ಇಬ್ಬರು ನಾಯಕರ ಕೈಯನ್ನು ಎತ್ತಿ ಹಿಡಿಯುವ ಮೂಲಕ ಮಲ್ಲಿಕಾರ್ಜು ಖರ್ಗೆ ಒಗ್ಗಟ್ಟು ಪ್ರದರ್ಶಿಸಿದರು.
ಈ ಸಭೆಯಲ್ಲಿ ಅಧಿಕಾರ ಹಂಚಿಕೆಯ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಹೇಳಲಾಗಿದೆ. ಯಾರೆಲ್ಲಾ ಸಚಿವರಾಗಬೇಕೆಂಬ ಕುರಿತೂ ಈ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಗಳಿವೆ. ಈ ಸಭೆಯಲ್ಲಿ ಪಕ್ಷದ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಇದ್ದಾರೆ.
ಕಳೆದ ಐದು ದಿನಗಳಿಂದ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಸೃಷ್ಟಿಯಾಗಿದ್ದ ಗೊಂದಲ ಬುಧವಾರ ರಾತ್ರಿ 2 ಗಂಟೆಯ ಹೊತ್ತಿಗೆ ಪರಿಹಾರವಾಗಿದೆ. ಹೈಕಮಾಂಡ್ ಮನವೊಲಿಕೆ ಬಳಿಕ ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಲು ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿತ್ತು. ಅದನ್ನು ಸ್ವತಃ ಡಿ.ಕೆ. ಶಿವಕುಮಾರ್ ಇದೀಗ ಒಪ್ಪಿಕೊಂಡಿದ್ದಾರೆ.
ʻʻಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿ ಕುಟುಂಬಕ್ಕೆ ಗೌರವ ನೀಡಿ ಅಧಿಕಾರ ಹಂಚಿಕೆಯ ಫಾರ್ಮುಲಾ ಒಪ್ಪಿಕೊಂಡಿದ್ದೇನೆ. ಅಂತಿಮವಾಗಿ ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ. ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Karnataka CM: ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಅಂತಿಮ, ಸಿದ್ದು ಹೆಸರು ಘೋಷಣೆಗೆ ಕ್ಷಣಗಣನೆ