ಬೆಂಗಳೂರು: ಬಹುತೇಕ ಶಾಸಕರು ನನ್ನ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ನನ್ನ ಬಳಿ 135 ಶಾಸಕರಿದ್ದಾರೆ ಎಂದಿದ್ದಾರೆ. ಅಲ್ಲದೆ, ದೆಹಲಿಗೆ ತೆರಳುವುದಿಲ್ಲ ಎಂಬ ತಮ್ಮ ಪಟ್ಟು ಸಡಿಲಿಸಿ, ಹೈಕಮಾಂಡ್ ಭೇಟಿಗೆ ಹೊರಟಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯು (Karnataka Election 2023) ತೀವ್ರ ಕುತೂಹಲಕಾರಿ ತಿರುವು ಪಡೆದಿದೆ.
ಮುಖ್ಯಮಂತ್ರಿ ಆಯ್ಕೆಗಾಗಿ ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತ ಮೂಡದೇ ಇದ್ದುದ್ದರಿಂದ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ವೀಕ್ಷಕರು ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದರು. ಈ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಾಗಿದೆ. ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ಗೆ ಸೋಮವಾರ ದೆಹಲಿಗೆ ಬರುವಂತೆ ಸೂಚಿಸಿತ್ತು.
ದೆಹಲಿಗೆ ಹೊರಟಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿ, ʻʻಬಹುತೇಕ ಶಾಸಕರು ನನ್ನ ಪರವಾಗಿದ್ದಾರೆ. ನಾನೇ ಮುಖ್ಯಮಂತ್ರಿಯಾಗಬೇಕೆಂದು ಅಭಿಪ್ರಾಯ ಹೊಂದಿದ್ದಾರೆ. ಪಕ್ಷದ ಹೈಕಮಾಂಡ್ ನನಗೆ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಆಹ್ವಾನಿಸಿದೆ. ನಾನು ದೆಹಲಿಗೆ ಹೋಗುತ್ತಿದ್ದೇನೆ. ಮುಖ್ಯಮಂತ್ರಿಯಾಗುವ ವಿಶ್ವಾಸವಿದೆʼʼ ಎಂದು ಹೇಳಿದ್ದರು.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಸೂಚನೆ ನೀಡಿದ್ದರೂ ದೆಹಲಿಗೆ ಹೋಗುವುದಿಲ್ಲ ಎಂದು ಸೋಮವಾರ ಬೆಳಗ್ಗೆ ಪ್ರಕಟಿಸಿದ್ದ ಡಿ. ಕೆ. ಶಿವಕುಮಾರ್ ಬೆಂಗಳೂರು ಸಮೀಪದ ಬಾಗಲೂರಿನ ಗೆಳೆಯರ ತೋಟದ ಮನೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಮಧ್ಯಾಹ್ನ ಅಲ್ಲಿಂದ ಹೊರಟ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ತಾವು ದೆಹಲಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.
ʻʻಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಹೈಕಮಾಂಡ್‌ಗೆ ನೀಡುವ ಏಕೈಕ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಾನು ಕೆಪಿಸಿಸಿ ಅಧ್ಯಕ್ಷ. ಹೀಗಾಗಿ 135 ಶಾಸಕರೂ ನನ್ನೊಂದಿಗಿದ್ದಾರೆ. ಬೇರೆಯವರಲ್ಲಿ ಎಷ್ಟು ಮಂದಿ ಇದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಅವರರಿಗೆ 135 ಶಾಸಕರನ್ನು ಗೆಲ್ಲಿಸಿ, ಅರ್ಪಿಸಿದ್ದೇನೆ. ಅವರು ಏನು ತೀರ್ಮಾನ ತೆಗೆದುಕೊಳ್ತಾರೆ ಎಂದು ನೋಡೋಣʼʼ ಎಂದಿದ್ದಾರೆ.
ʻʻಯಾರು ಎಷ್ಟು ಜನರನ್ನಾದರೂ ಇಟ್ಟುಕೊಳ್ಳಲಿ. ನನ್ನದೇನೂ ತಕರಾರಿಲ್ಲ. ಕಾಂಗ್ರೆಸ್ ಪಕ್ಷದ ಬಳಿ 135 ಶಾಸಕರು ಇದ್ದಾರೆ ಎಂದಷ್ಟೇ ನನಗೆ ಗೊತ್ತುʼʼ ಎಂದಿರುವ ಡಿ.ಕೆ. ಶಿವಕುಮಾರ್ ಭಾನುವಾರದ ಸಭೆಯಲ್ಲಿ ಯಾರು ಏನು ಅಭಿಪ್ರಾಯ ತಿಳಿಸಿದ್ದಾರೆ ಎಂದು ತನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬಾಗಲೂರಿನಿಂದ ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಆಗಮಿಸಿರುವ ಡಿ.ಕೆ. ಶಿವಕುಮಾರ್ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯರೊಂದಿಗೆ ಇಂದು ರಾತ್ರಿಯೇ ಸಭೆ ನಡೆಸಲಿರುವ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ : Karnataka Election 2023 : ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟಿಗೆ ಏನು ಕಾರಣ? ಇಲ್ಲಿದೆ ಇನ್‌ಸೈಡ್ ಸ್ಟೋರಿ!