ಬೆಂಗಳೂರು: ಮತಗಟ್ಟೆ ಸಮೀಕ್ಷೆಗಳ (ಎಕ್ಸಿಟ್ ಪೋಲ್) ಬಗ್ಗೆ ತಲೆಕೆಡಿಸಿಕೊಳ್ಳದೆ, ಪಕ್ಷ ನಡೆಸಿದ ಸಮೀಕ್ಷೆಯಂತೆಯೇ ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ನಂಬಿಕೊಂಡು ತಣ್ಣಗಿದ್ದ ಬಿಜೆಪಿ ನಾಯಕರು ಶುಕ್ರವಾರ ಎಚ್ಚೆತ್ತು ಸರ್ಕಾರ ರಚಿಸುವ ಕುರಿತು ಚರ್ಚೆ ಆರಂಭಿಸಿದ್ದಾರೆ.
ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸ ಈ ಚಟುವಟಿಕೆಯ ಕೇಂದ್ರ ಬಿಂದುವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ಲೆಹರ್ ಸಿಂಗ್ ಮತ್ತಿತರರು ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಆಪ್ತ ಸಚಿವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ.
ʻʻಸರ್ಕಾರ ರಚನೆಯ ಪ್ರಕ್ರಿಯೆ ಆರಂಭಿಸುವುದಕ್ಕೂ ಮೊದಲು ಪಕ್ಷ ಎಷ್ಟು ಸ್ಥಾನದಲ್ಲಿ ಗೆಲ್ಲಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ ಮುಂದಿನ ಕಾರ್ಯತಂತ್ರ ಆರಂಭಿಸಿ. ಕಾಂಗ್ರೆಸ್ ಜತೆಗೆ ಹೋಗದ ಪಕ್ಷೇತರ ಅಭ್ಯರ್ಥಿಗಳನ್ನು ಗುರುತಿಸಿ, ಅವರ ಬೆಂಬಲ ಪಡೆಯು ನಿಟ್ಟಿನಲ್ಲಿ ಮಾತುಕತೆ ನಡೆಸಿʼʼ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಯಡಿಯೂರಪ್ಪಗೆ ವಿವರಿಸಿದ್ದು, ಕಾಂಗ್ರೆಸ್ ನಾಯಕರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಪಕ್ಷಕ್ಕೆ ಸರಳ ಬಹುಮತ ಬಾರದೇ ಇದ್ದಲ್ಲಿ ಏನು ಮಾಡಬೇಕೆಂಬ ಕುರಿತು ಚರ್ಚಿಸಲಾಗಿದ್ದು, ಹೈಕಮಾಂಡ್ ಗಮನಕ್ಕೆ ಯಾವೆಲ್ಲಾ ವಿಷಯಗಳನ್ನು ತರಬೇಕೆಂಬ ಬಗ್ಗೆ ಯಡಿಯೂರಪ್ಪ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷ ಸೇರಬಹುದಾದ ಪಕ್ಷೇತರೊಂದಿಗೆ, ಸಣ್ಣ ಪುಟ್ಟ ಪಕ್ಷಗಳ ಮುಖ್ಯಸ್ಥರೊಂದಿಗೆ ಈಗಲೇ ಮಾತುಕತೆ ನಡೆಸಿ, ಅಗತ್ಯ ಬಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾರೊಂದಿಗೂ ಮಾತನಾಡಿಸಿ ಎಂದು ಯಡಿಯೂರಪ್ಪ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ತಮ್ಮ ಆಪ್ತಸಚಿವರೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಫಲಿತಾಂಶ ಪ್ರಕಟವಾದ ನಂತರ ʻಆಪರೇಷನ್ ಕಮಲʼ ನಡೆಸುವ ಸಂದರ್ಭ ಬಂದರೆ ಏನೆಲ್ಲಾ ಮಾಡಬೇಕೆಂದು ತಮ್ಮ ಆಪ್ತರಿಗೆ ಸೂಚನೆಗಳನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಸಿಎಂ ಬೊಮ್ಮಾಯಿ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಲಾಗುತ್ತಿರುವ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ, ಶಿರಹಟ್ಟಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮಣಿ ಹಾಗೂ ಪುಲಕೇಶಿ ನಗರದ ಬಿಎಸ್‌ಪಿ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಸಂಪಕ್ಷಿಸಿದ್ದಾರೆಂದು ಹೇಳಲಾಗುತ್ತಿದೆ.
ರಾಜ್ಯ ರಾಜಕಾರಣದ ಕುತೂಹಲಕಾರಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮತ್ತೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂ
ಎಲ್ಲ ಕ್ಷೇತ್ರಗಳ ಬೂತ್‌ಗಳಿಂದ ಗ್ರೌಂಡ್ ತರಿಸಿಕೊಂಡಿದ್ದೇವೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ನಾವು ಮ್ಯಾಜಿಕ್ ನಂಬರ್ ಮುಟ್ಟುತ್ತೇವೆ. ಮೈತ್ರಿ ಮಾಡಿಕೊಳ್ಳುವ ಸಂದರ್ಭ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಾಂಗ್ರೆಸ್‌ನವರು ಏನೇ ಸಭೆ ಮಾಡಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ ಅವರು, ರಾಜ್ಯದಲ್ಲಿ ಪಕ್ಷ ಸರಳ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಈಗಾಗಲೇ ಹೈಕಮಾಂಡ್‌ಗೆ ವರದಿ ನೀಡಿದ್ದೇವೆ. ಅವರು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ತರಸಿಕೊಂಡ ಬೂತ್ ಮಟ್ಟದ ವರದಿಗಳ ಪ್ರಕಾರ ಪಕ್ಷವು ಏನಿಲ್ಲವೆಂದರೂ 108 ಕ್ಷೇತ್ರಗಳಲ್ಲಿ ಗೆಲ್ಲಲಿದೆ. 30 ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಇವುಗಳಲ್ಲಿ ಯಾರು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ ಎಂಬುದರ ಮೇಲೆ ಯಾವ ಪಕ್ಷ ಅಧಿಕಾರ ಹಿಡಿಯಲಿದೆ ಎಂಬುದು ನಿರ್ಧಾರವಾಗಲಿದೆ. ಈ 30 ಕ್ಷೇತ್ರಗಳಲ್ಲಿ ಬಿಜೆಪಿಯೇ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಅಧಿಕವಿದೆ ಎಂದು ಬಿಜೆಪಿ ನಾಯಕರು ವಿಶ್ವಾಸ ಹೊಂದಿದ್ದಾರೆ.
ಇದನ್ನೂ ಓದಿ: Karnataka Election 2023 : ಮೈತ್ರಿ ನಿರ್ಧಾರ ಫೈನಲ್ ಆಗಿದೆ ಎಂದ ಜೆಡಿಎಸ್; ಆಯ್ಕೆ ಕಾಂಗ್ರೆಸ್ಸೋ, ಬಿಜೆಪಿಯೋ?