Site icon Vistara News

Karnataka Election 2023 : ಬಿಜೆಪಿ ಮೂರನೇ ಪಟ್ಟಿ; ಶೆಟ್ಟರ್‌ ವಿರುದ್ಧ ಮಹೇಶ್‌ ಟೆಂಗಿನಕಾಯಿ ಕಣಕ್ಕೆ, ಉಳಿದ ಕ್ಷೇತ್ರಗಳಲ್ಲಿ ಯಾರು?

BJP releases third list of 10 candidates for Karnataka polls

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections 2023) ಸಂಬಂಧಿಸಿದಂತೆ ಮೂರನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ ವಿರುದ್ಧ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಲಾಗಿದೆ.

224 ಕ್ಷೇತ್ರಗಳ ಪೈಕಿ ಈಗಾಗಲೇ 212 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿಸಲಾಗಿತ್ತು. ಉಳಿದಿರುವ 12 ಕ್ಷೇತ್ರಗಳ ಪೈಕಿ ಈಗ 10 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿಯ ಹಿರಿಯ ನಾಯಕ ಕೆ ಎಸ್‌ ಈಶ್ವರಪ್ಪ ಸ್ಪರ್ಧಿಸುತ್ತಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಅಂತೆಯೇ ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಬಾಕಿ ಇದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಹೆಬ್ಬಾಳದಲ್ಲಿ ಕೂಡ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಕುಟುಂಬಕ್ಕೇ ಟಿಕೆಟ್‌ ನೀಡಲಾಗಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್ ಈ ಬಾರಿ ಕಣಕ್ಕಿಳಿಯಲಿದ್ದಾರೆ.

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಪಕ್ಷದ ಹಿರಿಯ ನಾಯಕ ರಾಮದಾಸ್‌ಗೆ ಬದಲಾಗಿ ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಶ್ರೀವತ್ಸ ಅವರಿಗೆ ಟಿಕೆಟ್‌ ನೀಡಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ;

1. ನಾಗಠಾಣ- ಸಂಜೀವ್‌ ಐಹೊಳೆ
2.ಸೇಡಂ- ರಾಜ್‌ ಕುಮಾರ್‌ ಪಾಟೀಲ್‌
3.ಕೊಪ್ಪಳ- ಮಂಜುಳಾ ಅಮರೇಶ್‌
4.ರೋಣ-ಕಲಕಪ್ಪ ಬಂಡಿ
5.ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌- ಮಹೇಶ್‌ ಟೆಂಗಿನಕಾಯಿ
6.ಹಗರಿಬೊಮ್ಮನಹಳ್ಳಿ-ಬಿ.ರಾಮಣ್ಣ
7.ಹೆಬ್ಬಾಳ- ಕಟ್ಟಾ ಜಗದೀಶ್‌
8.ಗೋವಿಂದರಾಜನಗರ- ಉಮೇಶ್‌ ಶೆಟ್ಟಿ
9.ಮಹದೇವಪುರ- ಮಂಜುಳಾ ಅರವಿಂದ ಲಿಂಬಾವಳಿ
10.ಕೃಷ್ಣರಾಜ- ಶ್ರೀವತ್ಸ

ಇದನ್ನೂ ಓದಿ : Karnataka Elections 2023 : ಚುನಾವಣೆ ನಂತರ ಬೊಮ್ಮಾಯಿಗೂ ಸವದಿ, ಶೆಟ್ಟರ್‌ ಪರಿಸ್ಥಿತಿಯೇ ಬರಲಿದೆ; ಎಂ.ಬಿ ಪಾಟೀಲ್‌ ಭವಿಷ್ಯ

Exit mobile version