Site icon Vistara News

Karnataka Election 2023 : ಬೆಂಗಳೂರಿನಲ್ಲಿ ವರಿಷ್ಠರ ಟಾರ್ಗೆಟ್‌ ಮುಟ್ಟದ ಬಿಜೆಪಿ; ಅಮಿತ್‌ ಶಾ ಗರಂ

BJP sets target to win bangalore city assembly constituencies

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತಂತ್ರ-ಪ್ರತಿ ತಂತ್ರ ಹಣಿಯುವುದರಲ್ಲಿ ನಿರತರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಪಡೆಯಲಿವೆ ಎಂಬ ಲೆಕ್ಕಾಚಾರ ಜೋರಾಗಿದೆ. ಈ ನಡುವೆ ಬಿಜೆಪಿ ನಡೆಸಿದ ಸಮೀಕ್ಷೆಯೊಂದು ವರಿಷ್ಠರು ನಿಗದಿಪಡಿಸಿದ ಟಾರ್ಗೆಟ್‌ ಮುಟ್ಟುವಲ್ಲಿ ನಗರ ಬಿಜೆಪಿಯು ವಿಫಲವಾಗುತ್ತಿದೆ ಎಂದು ಹೇಳಿದೆ.

ರಾಜಧಾನಿಯ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕೆಂಬುದು ಪಕ್ಷದ ವರಿಷ್ಠರ ಟಾರ್ಗೆಟ್‌ ಆಗಿತ್ತು. ಇದಕ್ಕಾಗಿ ಅಗತ್ಯ ತಂತ್ರಗಳನ್ನು ರೂಪಿಸುವಂತೆ ರಾಜ್ಯ ನಾಯಕರಿಗೆ ಈ ಹಿಂದಿನಿಂದಲೂ ಸೂಚಿಸುತ್ತಲೇ ಬಂದಿದ್ದರು. ಈಗ ಚುನಾವಣೆಯ ಪ್ರಚಾರ ನಡೆಯುತ್ತಿರುವ ಈ ಹೊತ್ತಿನಲ್ಲಿ ನಡೆದ ಸಮೀಕ್ಷೆ ಪಕ್ಷ 11 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ. ಇದು ವರಿಷ್ಠರು ʻಗರಂʼ ಆಗುವಂತೆ ಮಾಡಿದೆ.

ಬಿಜೆಪಿ ವರಿಷ್ಠರ ಸೂಚನೆಯಂತೆ ಈ ಸಮೀಕ್ಷೆ ನಡೆದಿದೆ. ಇದರ ವರದಿಯನ್ನು ನೋಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಬಿಜೆಪಿ ನಗರ ನಾಯಕರಿಗೆ ಈ ಬಗ್ಗೆ ವಿವರಣೆ ನೀಡುವಂತೆ ಅವರಿಬ್ಬರೂ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಸಮೀಕ್ಷೆ ಪ್ರಕಾರ ಬೆಂಗಳೂರು ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಎರಡೂ ಪಕ್ಷಗಳು ಹೆಚ್ಚುಕಡಿಮೆ ಸಮಾನ ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

2018 ರ ಚುನಾವಣೆಯಲ್ಲಿ ಬಿಜೆಪಿ 15 (ಆಪರೇಷನ್‌ ಕಮಲಾದ ನಂತರ), ಕಾಂಗ್ರೆಸ್ 12 ಮತ್ತು ಜೆಡಿಎಸ್ 1 ಸ್ಥಾನಗಳನ್ನು ಗೆದ್ದಿದ್ದವು.

ಐದು ಕ್ಷೇತ್ರಗಳಲ್ಲಿ 50-50 ಚಾನ್ಸ್

28 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 11 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಹೇಳಿದೆ. ಅಲ್ಲದೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯುತ್ತಿದ್ದು, ಗೆಲ್ಲುವ ಸಾಧ್ಯತೆ ಶೇ. 50-50 ರಷ್ಟು ಇದೆ ಎಂದು ವಿವರಿಸಲಾಗಿದೆ. ಒಂದು ಕ್ಷೇತ್ರದಲ್ಲಿ ಬಿಎಸ್‌ಪಿ-ಕಾಂಗ್ರೆಸ್ ನಡುವೆ ಪೈಪೋಟಿ ಇದ್ದರೆ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಮಬಲದ ಪೈಪೋಟಿ ನಡೆಯುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆ ಪ್ರಕಾರ ಬಿಜೆಪಿಯು ಯಲಹಂಕ, ಪದ್ಮನಾಭನಗರ, ಮಲ್ಲೇಶ್ವರಂ, ಕೆ.ಆರ್. ಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಬಸವನಗುಡಿ, ಸಿವಿ ರಮನ್ ನಗರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಗೆಲ್ಲಬಹುದು. ಕಾಂಗ್ರೆಸ್‌ ಗೆಲ್ಲಬಹುದಾದ ಕ್ಷೇತ್ರಗಳೆಂದರೆ ಬಿಟಿಎಂ ಲೇಔಟ್, ಗಾಂಧಿ ನಗರ, ಸರ್ವಜ್ಞ ನಗರ, ಹೆಬ್ಬಾಳ, ಶಿವಾಜಿನಗರ, ಚಾಮರಾಜಪೇಟೆ, ವಿಜಯನಗರ, ಗೋವಿಂದರಾಜು, ಬ್ಯಾಟರಾಯನಪುರ, ಶಾಂತಿನಗರ, ಅನೇಕಲ್‌ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಮಹಾದೇವಪುರ, ಯಶವಂತಪುರ, ದಾಸರಹಳ್ಳಿ, ಜಯನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆಯುತ್ತಿದೆ ಎಂದು ಸಮೀಕ್ಷೆ ಹೇಳಿದ್ದು, ಪಕ್ಷ ಈ ಕ್ಷೇತ್ರಗಳನ್ನು ನಿರ್ಲಕ್ಷಿಸುವಂತೆಯೇ ಇಲ್ಲ ಎಂದು ಸೂಚಿಸಿದೆ. ಪುಲಕೇಶಿ ನಗರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂತ್ತಿ ಕಾಂಗ್ರೆಸ್‌ ತೊರೆದು, ಬಿಎಸ್‌ಪಿ ಸೇರಿ, ಆ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಎಸ್‌ಪಿ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ಆಲರ್ಟ್ ಆಗಿರಿ, ಪ್ರಚಾರ ತೀವ್ರಗೊಳಿಸಿ!

ಈ ಸಮೀಕ್ಷೆಯ ವರದಿಯನ್ನು ನೋಡಿರುವ ಪಕ್ಷದ ವರಿಷ್ಠ ಅಮಿತ್‌ ನಗರದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದುವರೆಗಿನ ಕಾರ್ಯತಂತ್ರಗಳನ್ನು ಕಟುವಾಗಿ ವಿಮರ್ಶಿಸಿದ್ದಾರೆ ಎನ್ನಲಾಗಿದೆ. ಈ ಬಾರಿಯ ಚುನಾವಣೆಯಲ್ಲಿಯೇ ಕನಿಷ್ಠ 18 ಸ್ಥಾನ ಗೆಲ್ಲಬೇಕು ಎಂದು ಟಾರ್ಗೆಟ್‌ ನೀಡಿರುವ ಅವರು, ಕೂಡಲೇ ಪ್ರಚಾರವನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ.

ಸಮಬಲದ ಹೋರಾಟ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಚಾರವನ್ನು ತೀವ್ರಗೊಳಿಸಿ. ತಂತ್ರಗಾರಿಕೆ ಬದಲಾಯಿಸಿ ಎಂದು ಪಕ್ಷದ ವರಿಷ್ಠರು ಸೂಚಿಸಿದ್ದು, ಸೋಲುವ ಭೀತಿ ಇರುವ ಕ್ಷೇತ್ರಗಳತ್ತ ಎಲ್ಲ ನಾಯಕರೂ ಒಗ್ಗಟ್ಟಾಗಿ ಗಮನ ನೀಡಬೇಕು. ಪಕ್ಷದ ಎಲ್ಲ ಸಾಮರ್ಥ್ಯವನ್ನು ಬಳಸಿ, ಪಕ್ಷ ಗೆಲ್ಲುವಂತೆ ಮಾಡಬೇಕು ಎಂದು ಕೆಲ ಸೂಚನೆಗಳನ್ನು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಕಳೆದ ಗುರುವಾರ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ನೇತೃತ್ವದಲ್ಲಿ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿಯೂ ಈ ಕುರಿತು ಗಂಭೀರ ಚರ್ಚೆ ನಡೆದಿತ್ತು.

ಇದನ್ನೂ ಓದಿ : Pulse of Karnataka: ವಿಸ್ತಾರ-ಅಖಾಡಾ ಸಮೀಕ್ಷೆ: ಕಲ್ಯಾಣ ಕರ್ನಾಟಕ: ಗಣಿ ರೆಡ್ಡಿ ಪಕ್ಷದ ಭವಿಷ್ಯವೇನು? ಇದು ಬಿಜೆಪಿಗೆ ಹೆಚ್ಚು ನಷ್ಟ ತರುತ್ತದೆಯೇ?

Exit mobile version