ಆರ್. ವೆಂಕಟಾಚಲಪತಿ ವಿಸ್ತಾರ ನ್ಯೂಸ್, ಚಿತ್ರದುರ್ಗ
ಕೋಟೆ ನಾಡಿನ ಆರು ಕ್ಷೇತ್ರಗಳಲ್ಲಿ ಕಳೆದ ಬಾರಿ (Karnataka Election 2023) ಮೋದಿ ಅಲೆಯಿಂದ ಬಿಜೆಪಿ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಪತ್ಯ ಸಾಧಿಸಿತ್ತು. ಆದರೆ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸೇ ಪ್ರಾಮುಖ್ಯತೆ ಪಡೆಯುತ್ತಾ ಬಂದಿರುವುದರಿಂದ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಲಿಂಗ ಮೂರ್ತಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಗೂಳಿಹಟ್ಟಿ ಶೇಖರ್ ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರೆ, ಇತ್ತ ಚಿತ್ರದುರ್ಗದಲ್ಲಿ ಕಾಂಗ್ರೆಸ್ ವೀರೇಂದ್ರ ಪಪ್ಪಿಗೆ ಟಿಕೆಟ್ ನೀಡಿದ್ದರಿಂದ ಮಾಜಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಬಂಡಾಯ ಸಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅಲ್ಲದೆ ಜಿಲ್ಲೆಯಲ್ಲಿಯೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಓಡಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನ ಇನ್ನೋರ್ವ ಟಿಕೆಟ್ ಆಕಾಂಕ್ಷಿ ಎಸ್ ಕೆ ಬಸವರಾಜನ್ ತನ್ನ ಪತ್ನಿ ಸೌಭಾಗ್ಯಮ್ಮ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿಯ ನಿರೀಕ್ಷೆ ಇತ್ತಾದರೂ ಜೆಡಿಎಸ್ ಕೂಡ ಈ ಬಾರಿ ಮತ್ತೆ ಜಿಗಿದು ನಿಂತಿದೆ.
ಚಿತ್ರದುರ್ಗ: ಕೈ- ಕಮಲದ
ನಡುವೆ ಜಿದ್ದಾಜಿದ್ದಿ
ಜಿಲ್ಲಾ ಕೇಂದ್ರ ಚಿತ್ರದುರ್ಗ ಕ್ಷೇತ್ರದಲ್ಲಿ ಶಾಸಕ ತಿಪ್ಪಾರೆಡ್ಡಿ ಆರು ಬಾರಿ ಗೆಲುವು ಸಾಧಿಸುವ ಮೂಲಕ ತಮ್ಮದೇ ಆದ ಮತ ಬ್ಯಾಂಕ್ ಹೊಂದಿದ್ದು, ಏಳನೇ ಬಾರಿಗೆ ಗೆಲ್ಲುವ ಹುಮ್ಮಸ್ಸಿನಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಕೆ ಸಿ ವೀರೇಂದ್ರ ಪಪ್ಪಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.
ತಿಪ್ಪಾರೆಡ್ಡಿ ತಮ್ಮದೇ ಆದ ಸಾಂಪ್ರದಾಯಿಕ ಮತ ಬ್ಯಾಂಕ್ ಹೊಂದಿದ್ದರೆ, ವೀರೇಂದ್ರ ಪಪ್ಪಿ ತಳಮಟ್ಟದಿಂದ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚಾಗಿ ಲಿಂಗಾಯಿತ ಸಮುದಾಯದ ಮತಗಳ ಕಡೆಗೆ ಅವರು ಗಮನ ಕೇಂದ್ರೀಕರಿಸಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಬಂಡಾಯದ ಬಿಸಿ ಅವರಿಗೆ ತಟ್ಟುತ್ತಿದೆ. ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್ ಕೆ ಬಸವರಾಜನ್ ತಮ್ಮ ಪತ್ನಿ ಸೌಭಾಗ್ಯಮ್ಮ ಅವರನ್ನು ಕಣಕ್ಕಿಳಿಸಿದ್ದು ಲಿಂಗಾಯಿತ ಮತಗಳನ್ನು ಸೆಳೆಯುತ್ತಿದ್ದಾರೆ. ಲಿಂಗಾಯಿತ ಮತಗಳು ಹಂಚಿ ಹೋದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ದಾರಿ ಸುಗಮವಾಗಲಿದೆ.
ಈ ನಡುವೆ ಕಾಂಗ್ರೆಸ್ ಟಿಕೆಟ್ ನೀಡದೇ ಇದ್ದುದ್ದರಿಂದ ಜೆಡಿಎಸ್ ಸೇರಿರುವ ಮಾಜಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಕೂಡ ಕಣದಲ್ಲಿದ್ದು, ಜೆಡಿಎಸ್ ಮತಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದುಕೊಂಡಿತ್ತು. ಇವರ ಸ್ಪರ್ಧೆ ಕೂಡ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯುಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಜಿ. ಹೆಚ್.ತಿಪ್ಪಾರೆಡ್ಡಿ (ಬಿಜೆಪಿ): 82,896 – ಕೆ ಸಿ ವೀರೇಂದ್ರ ಪಪ್ಪಿ (ಜೆಡಿಎಸ್) : 49,911- ಹನುಮಲಿ ಶಣ್ಮುಖಪ್ಪ (ಕಾಂಗ್ರೆಸ್) : 49,014 – ಗೆಲುವಿನ ಅಂತರ: 32,985
ಚಳ್ಳಕೆರೆ : ಹ್ಯಾಟ್ರಿಕ್
ಗೆಲುವಿಗೆ ಹಲವರ ಸವಾಲು
ಕಾಂಗ್ರೆಸ್ ನ ಭದ್ರಕೋಟೆಯಾಗಿರುವ, ಕಡ್ಲೆಕಾಯಿ (ಶೇಂಗಾ) ಎಣ್ಣೆಯ ಗಿರಣಿಗಳ ಚಳ್ಳಕೆರೆಯಲ್ಲಿ ಕಾಂಗ್ರೆಸ್‌ನ ಟಿ. ರಘು ಮೂರ್ತಿ ಎರಡು ಬಾರಿ ಗೆದ್ದಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನ ಪ್ರಬಲ ಅಭ್ಯರ್ಥಿಗಳು ಇದುರೆಗೂ ಕಣದಲ್ಲಿಲ್ಲದೇ ಇಲ್ಲದೆ ಇದ್ದಿದ್ದು ಅವರ ಗೆಲುವಿಗೆ ಕಾರಣವಾಗುತ್ತಿತ್ತು. ಆದರೆ ಈ ಬಾರಿ ಹಲವು ಅಭ್ಯರ್ಥಿಗಳು ಸವಾಲೊಡ್ಡುತ್ತಿದ್ದಾರೆ.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ರವೀಶ್ ಕುಮಾರ್ 57 ಸಾವಿರ ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿ ಮತ್ತೆ ಸ್ಪರ್ಧೆಗೆ ಇಳಿದಿದ್ದು. ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಳೆದ ಬಾರಿ ತುರುವನೂರು ಹೋಬಳಿಯಲ್ಲಿ ಕಳೆದುಕೊಂಡಿದ್ದ ಮತಗಳನ್ನು ಈ ಬಾರಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲದಲ್ಲಿ ಹೋರಾಟ ನಡೆಯುತ್ತಿದೆ.
ಈ ನಡುವೆ ಬಿಜೆಪಿ ಅಭ್ಯರ್ಥಿ ಆರ್. ಅನಿಲ್ ಕುಮಾರ್ ಕೂಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾ ನಡೆಸಿದ್ದಾರೆ. ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಟಿ. ಕುಮಾರಸ್ವಾಮಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ. ಕುಮಾರಸ್ವಾಮಿ ಕೂಡ ಗಮನ ಸೆಳೆಯುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಟಿ.ರಘು ಮೂರ್ತಿ (ಕಾಂಗ್ರೆಸ್) 72,874 -ರವೀಶ್ ಕುಮಾರ್ (ಜೆಡಿಎಸ್) : 59,339- ಕೆ.ಟಿ.ಕುಮಾರಸ್ವಾಮಿ (ಬಿಜೆಪಿ) : 33,471 -ಗೆಲುವಿನ ಅಂತರ: 13,530
ಮೊಳಕಾಲ್ಮೂರು : ಹಿರಿಯ
ರಾಜಕಾರಣಿಗಳ ಗುದ್ದಾಟ
ಮೊಳಕಾಲ್ಮೂರು ಕ್ಷೇತ್ರದಲ್ಲಿ ಈ ಬಾರಿ ಹಿರಿಯ ರಾಜಕಾರಣಿಗಳ ಗುದ್ದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಮಾಜಿ ಉಪಮುಖ್ಯಮಂತ್ರಿ ಬಿ. ಶ್ರೀರಾಮುಲು ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಅವರು ಕ್ಷೇತ್ರ ಬದಲಾಯಿಸಿದ್ದಾರೆ. ಶ್ರೀರಾಮುಲು ಕಳೆದ ಬಾರಿ ಗೆಲ್ಲುವವರೆಗೂ ಈ ಕ್ಷೇತ್ರ ಕಾಂಗ್ರೆಸ್‌ನ ಕೋಟೆಯಾಗಿತ್ತು.
ಈ ಬಾರಿ ಬಿಜೆಪಿ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಿದೆ. ಕಳೆದ ಬಾರಿ ಅವರು ಬಿಜೆಪಿ ಟಿಕೆಟ್ ಸಿಗದೇ ಇದ್ದುದ್ದರಿಂದ ಬಂಡಾಯವಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಇತ್ತ ಕಾಂಗ್ರೆಸ್ ಆರು ಬಾರಿ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ ಬಾಬು ಸ್ಪರ್ಧೆ ಮಾಡಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.
ಈ ಬಾರಿ ಶ್ರೀರಾಮುಲು ಮತ್ತು ತಿಪ್ಪೇಸ್ವಾಮಿ ಹಳೆ ಮುನಿಸು ಮರೆತು ಒಂದಾಗಿ ಈ ಬಾರಿ ಕೆಲಸ ಮಾಡುತ್ತಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ಸಿಗದೇ ಇದ್ದುದ್ದರಿಂದ ಬಂಡಾಯದ ಬಾವುಟ ಹಾರಿಸಿದ್ದ ಯೋಗೇಶ್ ಬಾಬು ಎನ್. ಅವರನ್ನು ಪಕ್ಷದ ನಾಯಕರು ಸಮಾಧಾನ ಪಡಿಸಿದ್ದು, ಅವರೂ ವೈ.ಗೋಪಾಲಕೃಷ್ಣ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಮುತ್ಸದ್ದಿ ರಾಜಕಾರಣಿಗಳ ನಡುವೆ ಜಿದ್ದಾಜಿದ್ದಿ ಹೋರಾಟ ನಡೆಯುತ್ತಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಬಿ. ಶ್ರೀರಾಮುಲು (ಬಿಜೆಪಿ) : 84,018- ಯೋಗೇಶ್ ಬಾಬು (ಕಾಂಗ್ರೆಸ್): 41,973 – ತಿಪ್ಪೇಸ್ವಾಮಿ (ಪಕ್ಷೇತರ): 41,152- ಗೆಲುವಿನ ಅಂತರ: 42,045
ಹಿರಿಯೂರು : ತ್ರಿಕೋನ ಸ್ಪರ್ಧೆ
ಗೊಲ್ಲ ಸಮುದಾಯದ ಮತಗಳೇ ಹೆಚ್ಚಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಗೊಲ್ಲ ಸಮುದಾಯದವರೇ ಆಗಿದ್ದ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಪಕ್ಷ ಈ ಬಾರಿ ಕೂಡ ಅವರಿಗೇ ಟಿಕೆಟ್ ನೀಡಿದೆ. ಸಂಘಪರಿವಾರದ ಕಾರ್ಯಕರ್ತರ ಆಕ್ಷೇಪಣೆಗಳನ್ನೂ ಬದಿಗಿಟ್ಟು ಪಕ್ಷ ಅವರ ಮೇಲೆ ವಿಶ್ವಾಸವಿಟ್ಟಿದೆ.
ಇತ್ತ ಕಾಂಗ್ರೆಸ್ ಕಳೆದ ಬಾರಿ ಕೂಡ ಸ್ಪರ್ಧಿಸಿದ್ದ ಮಾಜಿ ಸಚಿವ ಡಿ.ಸುಧಾಕರ್ ಮತ್ತೆ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಬಿಜೆಪಿಯತ್ತ ಒಲವು ತೋರಿದ್ದ ಕಾಡುಗೊಲ್ಲ ಸಮುದಾಯದ ಮತಗಳನ್ನು ಮತ್ತೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರಿಸಿರುವುದಕ್ಕೆ ಹಾಗೂ ಕಾಡುಗೊಲ್ಲ ನಿಗಮದ ಹೆಸರು ಬದಲಾವಣೆ ಮಾಡಿದ್ದಕ್ಕೆ ಕಾಡುಗೊಲ್ಲರು ಬಿಜೆಪಿಯ ಬಗ್ಗೆ ಮುನಿಸಿಕೊಂಡಿದ್ದಾರೆ.
ಕಳೆದ ಬಾರಿಯ ಸೋಲಿನಿಂದ ಪಾಠ ಕಲಿತಿರುವ ಡಿ. ಸುಧಾಕರ್ ಪಕ್ಷದ ಹಿರಿಯ ಮತ್ತು ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಗೊಲ್ಲ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಕೂಡ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ಇತ್ತ ಜೆಡಿಎಸ್ ರವೀಂದ್ರ ಅವರನ್ನು ಕಣಕ್ಕಿಳಿಸಿದೆ. ಇವರ ಸ್ಪರ್ಧೆಗೆ ಸ್ಥಳೀಯ ಜೆಡಿಎಸ್ ಮುಖಂಡರು ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ದರೂ, ಅವರನ್ನು ಸಮಾಧಾನ ಪಡಿಸುವಲ್ಲಿ ರವೀಂದ್ರ ಯಶಸ್ವಿಯಾಗಿದ್ದು, ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಕ್ಕಲಿಗ ಮತಗಳ ಜತೆಗೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸುತ್ತಿರುವ ರವೀಂದ್ರ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಪೂರ್ಣಿಮಾ ಶ್ರೀನಿವಾಸ್ (ಬಿಜೆಪಿ) 77,733- ಡಿ.ಸುಧಾಕರ್ (ಕಾಂಗ್ರೆಸ್) : 64,858- ಡಿ.ಯಶೋಧರ (ಜೆಡಿಎಸ್) : 42,044- ಗೆಲುವಿನ ಅಂತರ: 12,875
ಹೊಸದುರ್ಗ : ಬಿಜೆಪಿಗೆ
ಬಂಡಾಯದ ಬಿಸಿ
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಸ್ಪರ್ಧಿಸುತ್ತಿದ್ದ ಹೊಸದುರ್ಗ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಬಿಜೆಪಿಯಲ್ಲಿನ ಬಂಡಾಯದಿಂದಾಗಿ ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಗೂಳಿಹಟ್ಟಿ ಶೇಖರ್‌ಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಹೀಗಾಗಿ 2008 ರಲ್ಲಿ ಪಕ್ಷೇತರರಾಗಿ ನಿಂತು ಗೆದ್ದಿದ್ದ ಅವರು ಈ ಬಾರಿ ಮತ್ತೆ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಈ ಬಾರಿ ಲಿಂಗಾಯಿತ ಸಮುದಾಯದ, ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗ ಮೂರ್ತಿಗೆ ಟಿಕೆಟ್ ನೀಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡು ಮೂರು ಬಾರಿ ಸೋತಿರುವ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷದಲ್ಲಿ ಆಕ್ಷೇಪಣೆ ಕೂಡ ಕೇಳಿ ಬಂದಿದೆ.
ಕಾಂಗ್ರೆಸ್ ಸತತವಾಗಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮೂರು ಬಾರಿ ಶಾಸಕರಾಗಿರುವ ಬಿ.ಜಿ. ಗೋವಿಂದಪ್ಪ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಅವರು ಇದು ನನ್ನ ಕೊನೆಯ ಚುನಾವಣೆ ಎಂದು ಪ್ರಚಾರ ನಡೆಸುತ್ತಿದ್ದಾರೆ. ಅನಿವಾರ್ಯ ಸಂದರ್ಭ ಸೃಷ್ಟಿಯಾದರೆ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸುವ ಸಾಧ್ಯತೆಗಳೂ ಇವೆ.
ಸದ್ಯ ಮೂವರು ಅಭ್ಯರ್ಥಿಗಳೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಎಂ ತಿಪ್ಪೆಸ್ವಾಮಿ ಎಂಬುವರನ್ನು ಕಣಕ್ಕಿಳಿದಿದ್ದು, ಹಲವಾರು ಪಕ್ಷೇತರ ಅಭ್ಯರ್ಥಿಗಳೂ ಪ್ರಚಾರ ನಡೆಸಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಗೂಳಿಹಟ್ಟಿ ಶೇಖರ್ (ಬಿಜೆಪಿ) : 90,562 – ಗೋವಿಂದಪ್ಪ (ಕಾಂಗ್ರೆಸ್): 64,570 – ಶಶಿಕುಮಾರ್ (ಜೆಡಿಎಸ್) :1, 575- ಗೆಲುವಿನ ಅಂತರ: 25,992
ಹೊಳಲ್ಕೆರೆ: ಬಿಜೆಪಿ ಕಾಂಗ್ರೆಸ್
ನಡುವೆ ನೇರ ಸ್ಪರ್ಧೆ
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ನೇರ ಸ್ಪರ್ಧೆ ನಡೆಯುತ್ತಾ ಬಂದಿರುವ ಕ್ಷೇತ್ರ ಎಂದರೆ ಹೊಳಲ್ಕೆರೆ. ಈ ಕ್ಷೇತ್ರದ ವಿಶೇಷವೆಂದರೆ ಇದುವರೆಗೂ ಯಾರೂ ಸತತವಾಗಿ ಎರಡು ಬಾರಿ ಆಯ್ಕೆಯಾಗಿಲ್ಲ. ಈ ಬಾರಿ ಶಾಸಕ ಎಂ.ಚಂದ್ರಪ್ಪ ಎರಡನೇ ಬಾರಿಗೆ ಗೆಲ್ಲಲ್ಲಿದ್ದಾರೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯಿಂದ ಶಾಸಕ, ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಮಾಜಿ ಅಧ್ಯಕ್ಷ ಎಂ. ಚಂದ್ರಪ್ಪ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ನಿರೀಕ್ಷೆಯಂತೆ ಮಾಜಿ ಸಚಿವ ಎಚ್. ಆಂಜನೇಯ ಕಣಕ್ಕಿಳಿದಿದ್ದು, ಇವರಿಬ್ಬರ ನಡುವೆ ನೇರಾನೇರ ಸ್ಪರ್ಧೆ ನಡೆಯಲಿದೆ. 2008 ರಿಂದಲೂ ಇವರಿಬ್ಬರ ನಡುವೆ ಹೀಗೆ ಜಿದ್ದಾಜಿದ್ದಿ ನಡೆಯುತ್ತಲೇ ಬಂದಿದೆ.
ಈ ಕ್ಷೇತ್ರದಲ್ಲಿ ಲಿಂಗಾಯಿತರು ಹೆಚ್ಚಿದ್ದು, ಕಳೆದ ಬಾರಿ ಲಿಂಗಾಯಿತರ ಮತ ಸೆಳೆಯುವಲ್ಲಿ ಚಂದ್ರಪ್ಪ ಯಶಸ್ವಿ ಆಗಿದ್ದರು. 2008 ರಲ್ಲಿ ಗೆದ್ದಿದ್ದ ಅವರು 2018 ರಲ್ಲಿ ಗೆಲುವಿನ ಅಂತರವನ್ನೂ ದುಪ್ಪಟ್ಟು ಹೆಚ್ಚಿಸಿಕೊಂಡಿದ್ದರು. ಆದರೆ ಈ ಬಾರಿ ಆಡಳಿತ ವಿರೋಧಿ ಅಲೆಯನ್ನು ಅವರು ಎದುರಿಸುತ್ತಿದ್ದಾರೆ. ಅವರ ವರ್ತನೆಯಿಂದ ಬೇಸತ್ತ ಕೆಲ ಲಿಂಗಾಯಿತ ಸಮುದಾಯದ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ಲಿಂಗಾಯಿತರ ಅಸಮಧಾನದ ಸುಳಿವು ಪಡೆದ ಕಾಂಗ್ರೆಸ್ ಅಭ್ಯರ್ಥಿ ಆಂಜನೇಯ ಸಿರಿಗೆರೆ ಮಠಕ್ಕೆ ಎರಡು ಬಾರಿ ಭೇಟಿ ನೀಡಿ ಶ್ರೀಗಳ ಜೊತೆ ಮಾತುಕತೆ ನಡೆಸಿ ಲಿಂಗಾಯಿತ ಸಮುದಾಯದ ಮತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇವರಿಬ್ಬರ ನಡುವಿನ ತೀವ್ರ ಪೈಪೋಟಿ ಕುತೂಹಲ ಮೂಡಿಸಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಚಂದ್ರಪ್ಪ (ಬಿಜೆಪಿ) 1, 07,976- ಆಂಜನೇಯ (ಕಾಂಗ್ರೆಸ್) 63,036-ಗೆಲುವಿನ ಅಂತರ: 38, 940
ಇದನ್ನೂ ಓದಿ : ದಾವಣಗೆರೆ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಬಿಜೆಪಿಯ ಭದ್ರಕೋಟೆಯಲ್ಲಿ ಬದಲಾವಣೆಯ ಬಿರುಗಾಳಿ