ಬೆಂಗಳೂರು: ಭರ್ಜರಿ ಬಹುಮತದೊಂದಿಗೆ (Karnataka Election 2023) ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಅಪಾರ ಬೆಂಬಲಿಗರನ್ನು ಹೊಂದಿರುವ ಇವರಿಬ್ಬರಲ್ಲಿ ಯಾರೊಬ್ಬರನ್ನು ಆಯ್ಕೆ ಮಾಡಿದರೂ ಮತ್ತೊಬ್ಬರ ಬೆಂಬಲಿಗರನ್ನು, ಅವರ ಪರವಾಗಿ ನಿಂತಿರುವ ಶಾಸಕರನ್ನು ಸಮಾಧಾನಿಸುವುದು ಕಷ್ಟ. ಹೀಗಾಗಿ ʻಇಬ್ಬರ ಜಗಳ ಮೂರನೇಯವರಿಗೆ ಲಾಭʼ ತಂದು ಕೊಟ್ಟಿತೇ ಎಂಬ ಚರ್ಚೆ ಈಗ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪಕ್ಷದ ಯುವ ನಾಯಕ ಸಚಿನ್ ಪೈಲೆಟ್ ನಡುವೆ ಹೀಗೆಯೇ ಮುಖ್ಯಮಂತ್ರಿ ಹುದ್ದೆಗಾಗಿ ಜಿದ್ದಾಜಿದ್ದಿ ನಡೆದುಕೊಂಡು ಬಂದಿದೆ. ಮತ್ತೊಂದು ಚುನಾವಣೆಯ ಸಮಯ ಬಂದಿದ್ದರೂ ಈ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಇದು ಪಕ್ಷದ ಸಂಘಟನೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಕೂಡ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಪಕ್ಷದ ಹೈಕಮಾಂಡ್ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಯೋಚಿಸುತ್ತಿದ್ದು, ಇವರಿಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಖರ್ಗೆ ಮೇಲೆ ಹೈಕಮಾಂಡ್ ಕಣ್ಣು
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಿಟ್ಟು ಮೂರನೇ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕಾದರೆ ಈ ಇಬ್ಬರು ನಾಯಕರ ಬಣವೂ ಸಂಪೂರ್ಣವಾಗಿ ಒಪ್ಪಿಕೊಳ್ಳುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (mallikarjun kharge) ಸೂಕ್ತ ವ್ಯಕ್ತಿ ಎಂದು ಹೈಕಮಾಂಡ್ ನಿರ್ದರಿಸಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವುದಾದರೆ ತಾವು ಬೆಂಬಲ ನೀಡುವುದಾಗಿ ಪ್ರಕಟಿಸಿದ್ದಾರೆ. 2013ರಲ್ಲಿಯೇ ಮುಖ್ಯಮಂತ್ರಿಯಾಗಬೇಕಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದಾಗ ಬೆಂಬಲ ನೀಡಿದ್ದರು. ಹೀಗಾಗಿ ಅವರನ್ನು ಈಗ ಮುಖ್ಯಮಂತ್ರಿಯಾಗಿ ನೇಮಿಸಿದರೆ ಸಿದ್ದರಾಮಯ್ಯ ಕೂಡ ಬೆಂಬಲ ನೀಡಬಹುದು ಎಂಬುದು ಹೈಕಮಾಂಡ್‌ನ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: Karnataka Elections : ಸಿಎಂ ಸ್ಥಾನದ ಅವಕಾಶ ಖರ್ಗೆಗೆ ಬಿಟ್ಟು ಕೊಡಲು ರೆಡಿ ಎಂದ ಡಿಕೆಶಿ; ಏನಿದು ಹೊಸ ವರಸೆ
ಆದರೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ತಮ್ಮ ಹೆಸರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಕೇಳಿ ಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿದ್ದ ಮಲ್ಲಿಕಾರ್ಜುನ ಖರ್ಗೆ, “ನಾನೇ ಹಲವು ಮುಖ್ಯಮಂತ್ರಿಗಳನ್ನು ನೇಮಿಸುವ ಸಾಮರ್ಥ್ಯ ಹೊಂದಿದ್ದೇನೆ. ಹೀಗಿರುವ ನಾನೇಕೆ ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಲಿ” ಎಂದು ಪ್ರಶ್ನಿಸಿದ್ದರು.
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿದ್ದ ಅವರನ್ನು, ʻಕರ್ನಾಟಕದಲ್ಲಿ ಯಾರು ಸಿಎಂ ಆಗುತ್ತಾರೆʼ ಎಂದು ಪ್ರಶ್ನಿಸಿದ್ದಾಗ “ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಯಾವ ಶಾಸಕರು ಯಾರಿಗೆ ಹೆಚ್ಚಿನ ಬೆಂಬಲ ನೀಡುತ್ತಾರೋ ಅವರು ಮುಖ್ಯಮಂತ್ರಿಯಾಗುತ್ತಾರೆ. ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತಾರೆ” ಎಂದಿದ್ದರು. ʻನೀವೂ ಸ್ಪರ್ಧೆಯಲ್ಲಿದ್ದೀರಿʼ ಎಂಬ ಮಾತಿದೆ ಎಂಬುದಕ್ಕೆ ಉತ್ತರಿಸಿದ್ದ ಅವರು, “ನಾನು ಬೇರೆ ರಾಜ್ಯಗಳಿಗೆ ಸಿಎಂಗಳನ್ನು ನೇಮಿಸುವ ಸಾಮರ್ಥ್ಯ ಹೊಂದಿದ್ದೇನೆ. ಹೀಗಿರುವಾಗ, ನಾನು ಸಿಎಂ ಆಗಬೇಕು ಎಂದು ಬಯಸಿ, ನೀವು ನನ್ನ ಸಾಮರ್ಥ್ಯವನ್ನು ಕುಗ್ಗಿಸುತ್ತಿದ್ದೀರಿ” ಎಂದು ಉತ್ತರಿಸಿದ್ದರು.
ಹೀಗಾಗಿ ಮುಖ್ಯಮಂತ್ರಿಯ ರೇಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಕೈಬಿಡಲಾಗಿತ್ತು. ಈಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮತ್ತೆ ಪೈಪೋಟಿ ತೀವ್ರವಾಗಿರುವುದರಿಂದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ಪಕ್ಷದ ಹೈಕಮಾಂಡ್ ಅವರೇ ಬೆಸ್ಟ್ ಎಂದು ತೀರ್ಮಾನಿಸಿದಲ್ಲಿ, ಅವರನ್ನು ಒಪ್ಪಿಸುವುದು ಕಷ್ಟವಲ್ಲ ಎನ್ನಲಾಗುತ್ತಿದೆ. ದಲಿತರನ್ನೇಕೆ ಕಾಂಗ್ರೆಸ್ ಮುಖ್ಯಮಂತ್ರಿ ಮಾಡುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ. ಹಾಗಾಗಿ ಇಂಥ ಸಂದರ್ಭದ ಲಾಭ ಪಡೆದು ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಪಟ್ಟಕ್ಕೆ ಏರಿಸಿದರೂ ಅಚ್ಚರಿಪಡಬೇಕಿಲ್ಲ.
ಇನ್ನೂ ಹಲವರ ಹೆಸರಿದೆ!
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದಾದರೆ ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲದೆ, ಇನ್ನೂ ಅನೇಕ ಮುಖಂಡರ ಹೆಸರು ಹೈಕಮಾಂಡ್‌ನ ಮುಂದಿದೆ ಎನ್ನಲಾಗಿದೆ.
ಇದರಲ್ಲಿ ಮುಖ್ಯವಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ , ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಮಾಜಿ ಕೇಂದ್ರ ಸಚಿವ ಮುನಿಯಪ್ಪರ ಹೆಸರು ಕೇಳಿ ಬಂದಿದೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ಜೋರಾಗಿದೆ. ಹೀಗಾಗಿ ಪರಮೇಶ್ವರ್ ಹೆಸರನ್ನೂ ಹೈಕಮಾಂಡ್ ಪರಿಶೀಲಿಸಬಹುದು ಎನ್ನಲಾಗುತ್ತಿದೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಬಹುಮತ ಪಡೆಯಲು ಲಿಂಗಾಯತ ಸಮುದಾಯ ಬೆಂಬಲ ನೀಡಿರುವುದೇ ಕಾರಣ. ಈ ಬಾರಿ ಪಕ್ಷದಲ್ಲಿ 37 ಮಂದಿ ಲಿಂಗಾಯತ ಶಾಸಕರಿದ್ದು, ಪಕ್ಷದ ಭವಿಷ್ಯದ ದೃಷ್ಟಿಯಿಂದ ಈಗಿರುವ ಲಿಂಗಾಯತ ಮುಖ್ಯಮಂತ್ರಿ ಆಯ್ಕೆ ಮಾಡಬೇಕೆಂಬ ವಿಶ್ಲೇಷಣೆಯೂ ನಡೆಯುತ್ತಿದೆ. ಹೀಗಾಗಿ ಎಂ.ಬಿ. ಪಾಟೀಲ್ ಹೆಸರೂ ಮುಂಚುಣಿಗೆ ಬರುವ ಸಾಧ್ಯತೆಯಿದೆ. ಅಲ್ಲದೆ ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಮುನಿಯಪ್ಪ ಕೂಡ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ʻʻಮೂರನೇ ವ್ಯಕ್ತಿಯನ್ನು ಆಯ್ಕೆ ಮಾಡುವ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಂಡರೆ ಅದು ಕಠಿಣ ನಿರ್ಧಾರವೇ ಆಗಿರುತ್ತದೆ. ಅಳೆದು-ತೂಗಿ ಈ ಬಗ್ಗೆ ತೀರ್ಮಾನಿಸಬೇಕಾಗುತ್ತದೆʼʼ ಎಂದು ಪಕ್ಷದ ಉನ್ನತ ನಾಯಕರೊಬ್ಬರು ವಿಸ್ತಾರ ನ್ಯೂಸ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Election 2023 : ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟಿಗೆ ಏನು ಕಾರಣ? ಇಲ್ಲಿದೆ ಇನ್‌ಸೈಡ್ ಸ್ಟೋರಿ!