Site icon Vistara News

Karnataka Election 2023 : ಫಲಿತಾಂಶದ ನಂತರ ಮುಂದೇನು?; ಪಕ್ಷದ ಅಭ್ಯರ್ಥಿಗಳೊಂದಿಗೆ ಕಾಂಗ್ರೆಸ್‌ ನಾಯಕರ ಮೀಟಿಂಗ್‌

Karnataka Election 2023 congress calls virtual meeting of all candidates

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ (Karnataka Election 2023) ರಚನೆ ಯಾಗಬಹುದು ಎಂದು ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್‌ ಪೋಲ್‌) ಅಭಿಪ್ರಾಯ ಪಟ್ಟಿರುವುದರಿಂದ ಕಾಂಗ್ರೆಸ್‌ ನಾಯಕರು ಅಲರ್ಟ್‌ ಆಗಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಎಲ್ಲ ಅಭ್ಯರ್ಥಿಗಳೊಂದಿಗೆ ಗುರುವಾರ ತಡ ರಾತ್ರಿ ಸಭೆ ನಡೆಸಲಿದ್ದಾರೆ.

ವರ್ಚ್ಯುಲ್‌ ಆಗಿ (ಆನ್‌ಲೈನ್‌ನಲ್ಲಿ) ಈ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಕೂಡ ಉಪಸ್ಥಿತರಿರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಗೆಲುವಿಗಾಗಿ ಶ್ರಮಿಸಿದ ಅಭ್ಯರ್ಥಿಗಳಿಗೆ ಈ ಮೂವರೂ ನಾಯಕರು ಮದೊಲಿಗೆ ಕೃತಜ್ಞತೆ ಸಲ್ಲಿಸಲಿದ್ದು, ನಂತರ ಚುನಾವಣೆ ಹೇಗೆ ನಡೆಯಿತು ಎಂಬ ಬಗ್ಗೆ ಕೆಲ ಅಭ್ಯರ್ಥಿಗಳಿಂದ ಅಭಿಪ್ರಾಯ ಕೂಡ ಸಂಗ್ರಹಿಸಲಿದ್ದಾರೆ. ಒಂದುವೇಳೆ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಮುಂದೇನು ಮಾಡಬಹುದು ಎಂಬ ಕುರಿತು ಅಭ್ಯರ್ಥಿಗಳಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಯಾವುದೇ ಮಾರ್ಗವನ್ನಾದರೂ ಅನುಸರಿಸಬಹುದು ಎಂಬ ಭೀತಿ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದ್ದು, ʻಆಪರೇಷನ್‌ ಕಮಲʼದ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಸರ್ಕಾರ ರಚಿಸಲು ಬಿಜೆಪಿ ಮುಂದಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಿ, ಆಮೀಷಕ್ಕೆ ಒಳಗಾಗದಂತೆ ತಿಳಿಹೇಳುವ ಕೆಲಸವನ್ನು ಈ ಸಭೆಯಲ್ಲಿ ಮುಖ್ಯವಾಗಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ʻʻಫಲಿತಾಂಶ ಪ್ರಕಟವಾದ ನಂತರ ಒಂದು ವೇಳೆ ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗದೇ ಇದ್ದರೂ ನಾವೆಲ್ಲರೂ ಒಂದಾಗಿ ಪರಿಸ್ಥಿತಿಯನ್ನು ಎದುರಿಸೋಣ. ಹಿಂಬಾಗಿಲ ಮೂಲಕ ಬಿಜೆಪಿಗೆ ಅಧಿಕಾರ ಹಿಡಿಯಲು ಅವಕಾಶ ಮಾಡಿಕೊಡದಿರೋಣʼʼ ಎಂದು ಅಭ್ಯರ್ಥಿಗಳ ಮನವೊಲಿಸುವ ಕೆಲಸವನ್ನು ಈ ನಾಯಕರು ಸಭೆಯಲ್ಲಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ವಿವರಿಸಿವೆ.

ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಲ್ಲ 223 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್‌ ಬೆಂಬಲ ಪಡೆದಿರುವ ಮೇಲುಕೋಟೆಯ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ

ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಹೇಳಿರುವುದರಿಂದ ಪಕ್ಷದಲ್ಲಿ ಗುರುವಾರ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಜ್ವರದಿಂದ ಬಳಲುತ್ತಿದ್ದರೂ ಪಕ್ಷದ ಇತರ ನಾಯಕರೊಂದಿಗೆ ದೂರವಾಣಿಯಲ್ಲಿಯೇ ಚರ್ಚೆ ನಡೆಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುಮಾರು ಮೂರು ತಾಸು ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆ ಎಷ್ಟು ಸ್ಥಾನ ದೊರೆಯಬಹುದು, ಹೊಂದಾಣಿಕೆ ಅನಿವಾರ್ಯವಾದರೆ ಮುಂದಿನ ದಾರಿ ಏನು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಸಿದ್ದರಾಮಯ್ಯರೊಂದಿಗಿನ ಮ್ಯಾರಥಾನ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ, ʻʻಕಾಂಗ್ರೆಸ್‌ ಸರ್ಕಾರ ರಚನೆ ಮಾಡಲಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆʼʼ ಎಂದಷ್ಟೇ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಎಐಸಿಸಿ ಅಧ್ಯಕ್ಷರಾಗಿರುವ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಕೂಡ ರಾಜ್ಯದ ಇತರ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದು, ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಯ್ಕೆಯ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Karnataka Election 2023 : ಅತಂತ್ರ ಫಲಿತಾಂಶ ಬಂದರೆ ಏನಿರಲಿದೆ ಮೂರೂ ಪಕ್ಷಗಳ ತಂತ್ರ?

Exit mobile version