ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Election 2023) ಪ್ರಚಾರದ ವೇಳೆ ಬಿಜೆಪಿ ನಾಯಕರು ನೀಡಿರುವ ಪ್ರಚೋದನಾತ್ಮಕ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ. ಅಲ್ಲದೆ, ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರಿಗೆ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲು ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ನಗರದ ಹೈಗ್ರೌಂಡ್ ಪೋಲಿಸ್ ಠಾಣೆಗೆ ಆಗಮಿಸಿದ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈ ದೂರು ನೀಡಿದ್ದಾರೆ. ಏಪ್ರಿಲ್ 25 ರಂದು ಚುನಾವಣೆ ಭಾಷಣದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುಗಲಭೆಗಳು ಆಗುತ್ತವೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಬಹುದು ಎಂದು ದೂರಿನಲ್ಲಿ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ, ಅಮಿತ್ ಶಾ ರಾಜ್ಯದಲ್ಲಿ ಜನರನ್ನು ಎದುರಿಸಿ, ಮತ ಕೇಳುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಅವರು ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಬೇಕು. ಗೃಹ ಸಚಿವರೇ ಈ ರೀತಿ ನಡೆದುಕೊಳ್ಳುತ್ತಿರುವುದು ದುರಂತ. ಅವರ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪಿಎಫ್ ಐ ಬ್ಯಾನ್ ಗೆ ಕಾಂಗ್ರೆಸ್ ಒತ್ತಾಯ ಮಾಡಿತ್ತು. ಬೊಮ್ಮಾಯಿ ಸರ್ಕಾರವನ್ನು ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಒತ್ತಾಯ ಮಾಡಿದ್ದರು. ಆದರೂ ಬೊಮ್ಮಾಯಿ ಸರ್ಕಾರ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಬಿಜೆಪಿ ಸರ್ಕಾರ ಸೋಲಿನ ಭಯಕ್ಕೆ ಒಳಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಪರ ಜನಾಭಿಪ್ರಾಯಕ್ಕೆ ಬಿಜೆಪಿ ಹೆದರಿ ಈ ರೀತಿ ವರ್ತಿಸುತ್ತಿದೆ ಎಂದು ಹೇಳಿದ ಸುರ್ಜೇವಾಲಾ , ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಮೀತ್ ಶಾ, ಯೋಗಿ ಆದಿತ್ಯ ನಾಥ್ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದರು.
ಈ ರೀತಿಯ ಹೇಳಿಕೆಯನ್ನು ಬೇರೆ ಪಕ್ಷದ ನಾಯಕರು ನೀಡಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು ಎಂದಿರುವ ಅವರು, ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಚಿವ ವಿ ಸೋಮಣ್ಣ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಹಾಕಿರುವ ಮತ್ತು ಆಮಿಷವೊಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದೆ. ಇದು ಬಿಜೆಪಿ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇವರ ವಿರುದ್ಧವೂ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಮಿತ್ ಶಾ ನಿರ್ಬಂಧಿಸಿ
ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಆಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ರೀತಿಯಲ್ಲಿ ಮತದಾರರನ್ನು ಹೆದರಿಸುತ್ತಿದ್ದಾರೆ. ದೊಡ್ಡ ಸ್ಥಾನದಲ್ಲಿರುವವರು ಮತದಾರರನ್ನು ಹೆದರಿಸುತ್ತಿರುವುದು ದುರಂತ. ಚುನಾವಣಾ ಆಯೋಗ ಅಮಿತ್ ಶಾ ರನ್ನ ಬ್ಯಾನ್ ಮಾಡಬೇಕು. ಪೇ ಸಿಎಂ ಪೋಸ್ಟರ್ ಅಂಟಿಸಿದಾಗ ನಮ್ಮ ಮೇಲೆ ಕೇಸ್ ಹಾಕಿದ್ದರು. ಈಗ ಇವರು ಈ ರೀತಿ ಮಾತನಾಡಿರುವುದಕ್ಕೆ ಎಲ್ಲ ಸಾಕ್ಷಿಗಳು ಇವೆ, ಇವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗಕ್ಕೂ ದೂರು
ಇಂದು ಬಿಜೆಪಿ ನಾಯಕರ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಕಾಂಗ್ರೆಸ್ ನಾಯಕರು ನಾಳೆ ಚುನಾವಣಾ ಆಯೋಗವನ್ನೂ ಭೇಟಿ ಮಾಡಿ ಈ ಸಂಬಂಧ ದೂರು ನೀಡುವುದಾಗಿ ತಿಳಿಸಿದ್ದಾರೆ.
ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಐಪಿಸಿ 1860 ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951ರ ಅಡಿ ದೂರ ದಾಖಲಿಸಿಕೊಳ್ಳಬೇಕೆಂದು ದೂರಿನಲ್ಲಿ ಕಾಂಗ್ರೆಸ್ ಪಕ್ಷ ಮನವಿ ಮಾಡಿದ್ದಾರೆ.
ಕೈಲಾಗದವರು ಮೈ ಪರಿಚಿಕೊಂಡ್ರು!
ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ʻಕೈಲಾಗದವರು ಮೈ ಪರಿಚಿಕೊಂಡ್ರುʼ ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ದೇಶದಲ್ಲಿ ಅಧಿಕಾರದಲ್ಲಿದ್ದಾಗ ಇದೇ ರೀತಿ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡೇ ಬಂದಿತ್ತು. ನಮ್ಮ ಪಕ್ಷದ ಅನೇಕ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಅನೇಕರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಶೆಟ್ಟರ್ ನೂರಕ್ಕೆ ನೂರಷ್ಟು ಗೆಲ್ಲುತ್ತಾರೆ; ರಕ್ತದಲ್ಲಿ ಪತ್ರ ಬರೆದು ಯಡಿಯೂರಪ್ಪಗೆ ತಿರುಗೇಟು